ಬೆಂಗಳೂರು: ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿರುವ ಇಸ್ಕಾನ್‌ನ (ISKCON) ದೇವಸ್ಥಾನದಲ್ಲಿ ಇಂದಿನಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದು, ಸಾವಿರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಕೃಷ್ಣನ ದರ್ಶನ ಪಡೆಯುತ್ತಿದ್ದಾರೆ.

ಹಬ್ಬದ ದಿನಗಳಲ್ಲಿ ವಿಶೇಷ ಮಹಾ ಅಭಿಷೇಕ, ಮಹಾಮಂಗಳಾರತಿ, 56 ಬಗೆಯ ಖಾದ್ಯಗಳ ಚಪ್ಪನ್ ಭೋಗ್’ ಪ್ರಿಯವಾದ ಮಖನ್ ಮಿಶ್ರಿ (ಬೆಣ್ಣೆ-ಸಕ್ಕರೆ) ನೈವೇದ್ಯ, ಪುಷ್ಪಾಂಜಲಿ ಸೇವೆ, ಭವ್ಯ ಪಲ್ಲಕ್ಕಿ ಉತ್ಸವ ಹಾಗೂ ಜುಲನ್ ಸೇವೆ (ಜೋಕಾಲಿ ಸೇವೆ)ಗಳು ನೆರವೇರಲಿವೆ. ಇಂದಿನಿಂದ ಸೆ.5 ರವರೆಗೆ ಮೂರು ದಿನಗಳ ಕಾಲ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು(Shri Krishna Janmashtami) ಅತ್ಯಂತ ವೈಭವದಿಂದ ಆಚರಿಸಲಾಗುತ್ತದೆ.

ಗೋ ಪೂಜೆ, ಕೋಟಿ ಜಪ ಯಜ್ಞ, ಭಗವದ್ಗೀತಾ ಪಾರಾಯಣ, ಖ್ಯಾತ ಕಲಾವಿದರಿಂದ ನೃತ್ಯ-ಸಂಗೀತ ಕಾರ್ಯಕ್ರಮಗಳು ಹಾಗೂ ಮಕ್ಕಳಿಂದ ಶ್ಲೋಕ ಪಠಣಗಳು ಜರುಗಲಿವೆ. ಪೋಷಕರು ತಮ್ಮ ಪುಟ್ಟ ಮಕ್ಕಳಿಗೆ ರಾಧಾ-ಕೃಷ್ಣರ(Radha-Krishna) ವೇಷ ಧರಿಸಿ ಪಾಲ್ಗೊಳ್ಳಲು ಆನ್‌ಲೈನ್ ವೇಷಭೂಷಣ ಸ್ಪರ್ಧೆ ಆಯೋಜಿಸಲಾಗಿದೆ.

ಇಸ್ಕಾನ್ ಸಂಸ್ಥಾಪಕ-ಆಚಾರ್ಯ ಶ್ರೀಲ ಪ್ರಭುಪಾದರ ಜೀವನ ಮತ್ತು ಸಾಧನೆಗಳನ್ನು ಬಿಂಬಿಸುವ ವಿಶೇಷ ಪ್ರದರ್ಶನ ಇರಲಿದೆ. ಉತ್ಸವಕ್ಕೆ ಭೇಟಿ ನೀಡುವ ಲಕ್ಷಾಂತರ ಭಕ್ತರಿಗೆ ನಿರಂತರವಾಗಿ ಅನ್ನಪ್ರಸಾದ ವಿತರಣೆಯ ವ್ಯವಸ್ಥೆ ಮಾಡಲಾಗಿದೆ.

ಮನೆಯಲ್ಲೇ ಕುಳಿತು ಸಂಭ್ರಮಿಸುವ ಭಕ್ತರಿಗಾಗಿ ಸೆಪ್ಟೆಂಬರ್ 4ರಂದು ರಾತ್ರಿ 8:00 ಗಂಟೆಗೆ ʻಸ್ವಾಗತಂ ಕೃಷ್ಣʼ ಎಂಬ ಡಿಜಿಟಲ್ ಕಾರ್ಯಕ್ರಮ ನೇರಪ್ರಸಾರವಾಗಲಿದೆ. ಇದರಲ್ಲಿ ಭಕ್ತಿ ಸಂಗೀತ, ಪ್ರವಚನ, ವಿಶೇಷ ಅಭಿಷೇಕ ಮತ್ತು ಲೈವ್ ಕ್ವಿಜ್ ಸ್ಪರ್ಧೆಗಳಿರಲಿದ್ದು, ವೀಕ್ಷಕರು ಆಕರ್ಷಕ ಬಹುಮಾನಗಳನ್ನು ಗೆಲ್ಲಬಹುದಾಗಿದೆ.

ಕೆಟಿಪಿಒದಲ್ಲಿ 5253 ಖಾದ್ಯಗಳ ನೈವೇದ್ಯ, ಸಂಗೀತ ರಸದೌತಣ:
ವೈಟ್‌ಫೀಲ್ಡ್‌ನ ಕೆಟಿಪಿಒ (KTPO) ಆವರಣದಲ್ಲಿ ನಡೆಯುವ ಜನ್ಮಾಷ್ಟಮಿ ಸಂಭ್ರಮದಲ್ಲಿ “ನಿಮ್ಮ ಅಡುಗೆಮನೆಯಿಂದ ಕೃಷ್ಣನಿಗೆ ಪ್ರೀತಿಯಿಂದ” ಅಭಿಯಾನದಡಿ ಭಕ್ತರಿಂದ ಸಂಗ್ರಹಿಸಿದ ಬರೋಬ್ಬರಿ 5253 ವೈವಿಧ್ಯಮಯ ಆಹಾರ ಪದಾರ್ಥಗಳನ್ನು ದೇವರಿಗೆ ಅರ್ಪಿಸಲಾಗುತ್ತದೆ.

ಯುವ ಸಮುದಾಯವನ್ನು ಆಕರ್ಷಿಸಲು ಯುವ ಬ್ಯಾಂಡ್‌ಗಳಿಂದ ಕೃಷ್ಣ ಜಾಮ್‌ಫೆಸ್ಟ್ – ಭಜನ್ ಜಾಮಿಂಗ್ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಪ್ರಶಸ್ತಿ ಪುರಸ್ಕೃತ ಕಲಾವಿದ ಅಬ್ಬಿ ವಿ (Abby V) ಅವರ ವಿಶೇಷ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದೆ.

ದರ್ಶನ ಸಮಯ
ಇಸ್ಕಾನ್ ಹರೇ ಕೃಷ್ಣ ಹಿಲ್(ಕಾರ್ಡ್ ರಸ್ತೆ, ರಾಜಾಜಿನಗರ)
ಸೆ.3: ಬೆಳಿಗ್ಗೆ 8 – ರಾತ್ರಿ 10,
ಸೆ.4: ಬೆಳಿಗ್ಗೆ 8 – ರಾತ್ರಿ 12
ಇಸ್ಕಾನ್ ವೈಕುಂಠ ಹಿಲ್(ಕನಕಪುರ ರಸ್ತೆ, ವಸಂತಪುರ)
ಸೆ.3: ಬೆಳಿಗ್ಗೆ 8 – ರಾತ್ರಿ 10
ಸೆ.4: ಬೆಳಿಗ್ಗೆ 8 – ರಾತ್ರಿ 12 (ಮಧ್ಯರಾತ್ರಿ)

ಇಸ್ಕಾನ್ ಹರೇ ಕೃಷ್ಣ ಫೀಲ್ಡ್ಸ್(ಕೆಟಿಪಿಒ, ವೈಟ್‌ಫೀಲ್ಡ್)
ಸೆ.4: ಬೆಳಿಗ್ಗೆ 8 – ರಾತ್ರಿ 12 (ಮಧ್ಯರಾತ್ರಿ)
ಸೆ.5: ಬೆಳಿಗ್ಗೆ 8 – ರಾತ್ರಿ 8
ಐವಿ ರೊಸ್ಸಾ ರೆಸಾರ್ಟ್ ಗ್ರೌಂಡ್, ಸರ್ಜಾಪುರ ರಸ್ತೆ
ಸೆ.4 ಬೆಳಿಗ್ಗೆ 7 – ರಾತ್ರಿ 12 (ಮಧ್ಯರಾತ್ರಿ)


