– ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಏರುತ್ತಲೇ ಇದೆ ನದಿಗಳ ನೀರಿನ ಮಟ್ಟ
ಕಠ್ಮಂಡು: ನೇಪಾಳದಲ್ಲಿ ಭಾರೀ ಮಳೆ ಹಾಗೂ ಹಠಾತ್ ಪ್ರವಾಹದಿಂದ (Nepal Flash Flood) ಉಂಟಾದ ದುರಂತದಲ್ಲಿ ಸಾವಿನ ಸಂಖ್ಯೆ 734ಕ್ಕೆ ಏರಿಕೆಯಾಗಿದೆ. ಇನ್ನೂ ಸುಮಾರು 2,500 ಮಂದಿ ನಾಪತ್ತೆಯಾಗಿದ್ದು, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನದಿಗಳ (River) ನೀರಿನ ಮಟ್ಟ ಏರಿಕೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಪರಿಹಾರ ಕಾರ್ಯಾಚರಣೆಗಳು ಮುಂದುವರಿದಿದ್ದರೂ, ಹಾನಿಗೊಳಗಾದ ರಸ್ತೆಗಳು, ಸೇತುವೆಗಳು ಹಾಗೂ ನೀರು ಸರಬರಾಜು ವ್ಯವಸ್ಥೆಗಳಿಂದಾಗಿ ಸಂತ್ರಸ್ತರಿಗೆ ಅಗತ್ಯ ನೆರವು ತಲುಪಿಸುವುದು ಸವಾಲಾಗಿ ಪರಿಣಮಿಸಿದೆ. ಇದನ್ನೂ ಓದಿ: Public TV Explainer | ನೇಪಾಳ ಪ್ರವಾಹದಿಂದ ಭಾರತಕ್ಕೆ ಹೆಚ್ಚಿದ ಆತಂಕ – ಹಿಮಾಲಯದ 200 ಸರೋವರಗಳಿಗೆ ಅಪಾಯ!

ಮನೆಕಳೆದುಕೊಂಡವರಿಗೆ ಈಗ ಆಹಾರದ ಕೊರತೆ
ಮಣ್ಣಿನ ಕುಸಿತ, ಅವಶೇಷಗಳು ಹಾಗೂ ಪ್ರತಿಕೂಲ ಹವಾಮಾನದ ನಡುವೆಯೂ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪ್ರವಾಹದಿಂದ ಮನೆ-ಮಠ ಕಳೆದುಕೊಂಡವರು ಹಾಗೂ ಸ್ಥಳಾಂತರಗೊಂಡ ರೋಗಿಗಳು ಆಹಾರ, ನೀರು ಮತ್ತು ಇತರ ಅಗತ್ಯ ವಸ್ತುಗಳ ಕೊರತೆ ಎದುರಿಸುತ್ತಿದ್ದಾರೆ.
ಭಾರೀ ಮಳೆ ಮತ್ತು ದಟ್ಟ ಮಂಜಿನಿಂದಾಗಿ ಕೆಲಕಾಲ ಸ್ಥಗಿತಗೊಂಡಿದ್ದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ಇಂದು 5ನೇ ದಿನಕ್ಕೆ ಕಾಲಿಟ್ಟಿವೆ. ಇದೀಗ ಹೆಲಿಕಾಪ್ಟರ್ಗಳು ಮತ್ತೆ ಕಾರ್ಯಾಚರಣೆಗೆ ಇಳಿದಿದ್ದು, ಟಿಬೆಟ್ ಗಡಿ ಭಾಗದಲ್ಲಿರುವ ರಸುವಾ ಮತ್ತು ನುವಾಕೋಟ್ ಸೇರಿದಂತೆ ಅತ್ಯಂತ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ರಕ್ಷಣಾ ತಂಡಗಳು ಅವಶೇಷಗಳ ನಡುವೆ ನಾಪತ್ತೆಯಾದವರಿಗಾಗಿ ಶೋಧ ನಡೆಸುತ್ತಿವೆ. ಇದನ್ನೂ ಓದಿ: ವಿನಾಶಕಾರಿ ಪ್ರವಾಹ, ನೇಪಾಳದಲ್ಲಿ ಏರುತ್ತಲಿದೆ ಸಾವಿನ ಸಂಖ್ಯೆ – 626 ಮಂದಿ ಬಲಿ, 2,400ಕ್ಕೂ ಹೆಚ್ಚು ಜನ ನಾಪತ್ತೆ
ಇದರ ನಡುವೆ ಸುಂಕೋಶಿ ಮತ್ತು ಭೋಟೆ ಕೋಶಿ ನದಿಗಳ ನೀರಿನ ಮಟ್ಟ ಏರಿಕೆಯಾಗಿರುವುದರಿಂದ ಅಧಿಕಾರಿಗಳು ಸ್ಥಳೀಯರಿಗೆ ಹಾಗೂ ರಕ್ಷಣಾ ತಂಡಗಳಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದಾರೆ. ಸಿಂಧುಲಿ ಪ್ರದೇಶದಲ್ಲಿ ಸುಂಕೋಶಿ ನದಿ ಎಚ್ಚರಿಕೆ ಮಟ್ಟವನ್ನ ದಾಟಿದೆ. ರಸುವಾದಲ್ಲಿ ಭೋಟೆ ಕೋಶಿ ನದಿಯ ನೀರಿನ ಮಟ್ಟ ಮುಂಜಾನೆ ಸುಮಾರು 3 ಗಂಟೆ ವೇಳೆಗೆ ತೀವ್ರವಾಗಿ ಏರಿಕೆಯಾಗಿತ್ತು. ಬಳಿಕ ನೀರಿನ ಮಟ್ಟ ಇಳಿಕೆಯಾಗಲು ಆರಂಭಿಸಿದೆ.

ಕೆಳಹರಿವಿನ ಪ್ರದೇಶಗಳಲ್ಲಿ ಸದ್ಯಕ್ಕೆ ದೊಡ್ಡ ಪ್ರಮಾಣದ ಪ್ರವಾಹದ ತಕ್ಷಣದ ಅಪಾಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ನೇಪಾಳಕ್ಕೆ ಮತ್ತೊಂದು ಮಹಾ ಅಪಾಯ! – ಯಾವ್ದೇ ಕ್ಷಣದಲ್ಲಾದ್ರೂ ಸ್ಫೋಟಿಸಬಹುದು ಸರೋವರ: ಚೀನಾ ಮತ್ತೆ ಎಚ್ಚರಿಕೆ
ಹಿಮನದಿ ಕುಸಿತದಿಂದ ಭೀಕರ ಪ್ರವಾಹ
ಬುಧವಾರ ಸಂಭವಿಸಿದ ಹಿಮನದಿ ಕುಸಿತದಿಂದ ಪರ್ವತ ಪ್ರದೇಶಗಳ ನದಿ ವ್ಯವಸ್ಥೆಗಳಲ್ಲಿ ಭಾರೀ ಪ್ರಮಾಣದ ನೀರು, ಕಲ್ಲು, ಹಿಮ, ಮಣ್ಣು ಮತ್ತು ಅವಶೇಷಗಳು ರಭಸದಿಂದ ಹರಿದು ಬಂದಿದ್ದವು. ಇದರ ಪರಿಣಾಮವಾಗಿ ನೇಪಾಳದ ಹಲವು ಭಾಗಗಳಲ್ಲಿ ಕಟ್ಟಡಗಳು, ಸೇತುವೆಗಳು ಹಾಗೂ ವಿದ್ಯುತ್ ಸ್ಥಾವರಗಳು ಕೊಚ್ಚಿಹೋಗಿವೆ.
ಚೀನಾದ ಅಧಿಕಾರಿಗಳ ಪ್ರಕಾರ, ಟಿಬೆಟ್ನಲ್ಲಿ ಇದುವರೆಗೆ 16 ಮಂದಿ ಮೃತಪಟ್ಟಿದ್ದು, 546 ಮಂದಿ ನಾಪತ್ತೆಯಾಗಿದ್ದಾರೆ. ನೇಪಾಳ ಮತ್ತು ಟಿಬೆಟ್ ಎರಡನ್ನೂ ಸೇರಿಸಿದರೆ, ಇತ್ತೀಚಿನ ಅಂಕಿಅಂಶಗಳ ಪ್ರಕಾರ ಸುಮಾರು 3,000 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ.
