ಬೆಂಗಳೂರು/ರಾಮನಗರ: ನಕಲಿ ಔಷಧ ದಂಧೆ ಪ್ರಕರಣದ ತನಿಖೆಯನ್ನ ಎಸ್‌ಐಟಿ (SIT) ಅಧಿಕಾರಿಗಳು ಚುರುಕುಗೊಳಿಸಿದ್ದು, ಆರೋಪಿಯಿಂದ ಔಷಧಿ ಪಡೆದಿದ್ದ ಮೆಡಿಕಲ್ ಶಾಪ್ ಮಾಲೀಕರಿಗೆ ನೋಟಿಸ್ ನೀಡಿದ್ದಾರೆ.
ಇತ್ತೀಚಿಗಷ್ಟೇ ರಾಮನಗರದ (Ramanagar) ಫಾರ್ಮ್‌ಹೌಸ್ ವೊಂದರಲ್ಲಿ ನಕಲಿ ಮೆಡಿಸಿನ್ ದಂಧೆ ಬಯಲಾಗಿತ್ತು. ಇದರ ಬೆನ್ನಲ್ಲೇ ಸರ್ಕಾರ ಎಸ್‌ಐಟಿ ರಚನೆ ಮಾಡಿದ್ದು, ಇಂದಿನಿಂದ ತನಿಖೆಯನ್ನ ಮತ್ತಷ್ಟು ತೀವ್ರಗೊಳಿಸಲು ಎಸ್‌ಐಟಿ ಅಧಿಕಾರಿಗಳು ಮುಂದಾಗಿದ್ದಾರೆ. ನಕಲಿ ಔಷದ ದಂಧೆ ನಡೆಸಿ ಜನರ ಜೀವನದ ಜೊತೆ ಚೆಲ್ಲಾಟ ಆಡುತ್ತಿದ್ದ ಆರೋಪಿಗಳಿಂದ ಔಷಧಿ ಖರೀದಿ ಮಾಡಿರುವ ಮೆಡಿಕಲ್‌ಗಳ ಮಾಲೀಕರನ್ನ ಪತ್ತೆ ಮಾಡಿ, ನೋಟಿಸ್ ಕೊಟ್ಟಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ರಸ್ತೆ ಅಪಘಾತ – ಬೆಳಗಾವಿ ಶಾಸಕ ಅಭಯ್ ಪಾಟೀಲ್ ಪ್ರಾಣಾಪಾಯದಿಂದ ಪಾರು
ನಗರದ ಕಮರ್ಷಿಯಲ್ ಸ್ಟ್ರೀಟ್, ಚಾಮರಾಜಪೇಟೆಯಲ್ಲಿರುವ ಸುಮಾರು ಐದರಿಂದ ಆರು ಮೆಡಿಕಲ್ ಶಾಪ್ ಮಾಲೀಕರಿಗೆ ನೋಟಿಸ್ ಕೊಟ್ಟು, ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ. ಅಲ್ಲದೇ ನಗರದ ಹಲವು ಕಡೆ ಆರೋಪಿಗಳಿಂದ ನಕಲಿ ಔಷಧ ಪಡೆದಿದ್ದ ಮೆಡಿಕಲ್‌ಗಳ ಮಾಹಿತಿ ಪಡೆದು ಪೊಲೀಸರು ದಾಳಿ ನಡೆಸಿದ್ದಾರೆ. ಚಾಮರಾಜಪೇಟೆ ಹಾಗೂ ಕಮರ್ಷಿಯಲ್ ಸ್ಟ್ರೀಟ್‌ನಲ್ಲಿರುವ ಕೆಲವೊಂದು ಮೆಡಿಕಲ್‌ಗಳಲ್ಲಿ ಎಸ್‌ಐಟಿ ಅಧಿಕಾರಿಗಳ ದಾಳಿ ವೇಳೆ ಕೆಲ ಔಷಧಿ ವಶಕ್ಕೆ ಪಡೆದುಕೊಂಡಿದ್ದಾರೆಂದು ತಿಳಿದುಬಂದಿದೆ.
ಸದ್ಯ ಮಾಲೀಕರ ವಿಚಾರಣೆಯಿಂದ ಎಷ್ಟು ವರ್ಷದಿಂದ ಆರೋಪಿಗಳ ಬಳಿ ನಕಲಿ ಔಷಧಿ ಖರೀದಿ ಮಾಡಿದ್ದರು? ಯಾವ ಯಾವ ಮಾದರಿಯ ಔಷಧಗಳನ್ನ ಖರೀದಿ ಮಾಡಿದ್ದರು? ಅನ್ನೋದರ ಮಾಹಿತಿ ಕಲೆ ಹಾಕಲು ಎಸ್‌ಐಟಿ ಮುಂದಾಗಿದೆ.ಇದನ್ನೂ ಓದಿ: ಮಕ್ಕಳ ಕೈಯಲ್ಲಿ ಲಿಪ್‌ಸ್ಟಿಕ್, ಮೊಗದಲ್ಲಿ ಮೇಕಪ್ – ಎಲ್ಲಿಗೆ ಸಾಗುತ್ತಿದೆ ಈ ಡಿಜಿಟಲ್ ಯುಗದ ಬಾಲ್ಯ?
