ಮಣ್ಣಿನಲ್ಲಿ ಆಟವಾಡಿ ಮೈಗೆ ಧೂಳು ಮೆತ್ತಿಸಿಕೊಳ್ಳಬೇಕಿದ್ದ, ಕಾಗದದ ದೋಣಿ ಮಾಡಿ ಮಳೆ ನೀರಿನಲ್ಲಿ ತೇಲಿಬಿಡಬೇಕಿದ್ದ ಎಳೆಯ ವಯಸ್ಸಿಗೀಗ ರಂಗುರಂಗಿನ ಕೃತಕ ಲೋಕದ ಗೀಳು ಅಂಟಿಕೊಂಡಿದೆ. ಮಕ್ಕಳ ಕೈಯಲ್ಲಿ ಆಟಿಕೆಗಳ ಬದಲಿಗೆ ಲಿಪ್‌ಸ್ಟಿಕ್, ಮೊಗದಲ್ಲಿ ವಯಸ್ಸಿಗೆ ಮೀರಿದ ಮೇಕಪ್ ರಾರಾಜಿಸುತ್ತಿರುವುದು ಆಧುನಿಕತೆಯ ಹೆಸರಿನಲ್ಲಿ ಬಾಲ್ಯವನ್ನು ನಾವೇ ಕಸಿದುಕೊಳ್ಳುತ್ತಿದ್ದೇವೆಯೇ ಎಂಬ ಆತಂಕಕಾರಿ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಕ್ಯಾಮೆರಾದ ಮುಂದಿನ ಕ್ಷಣಿಕ ಮೆಚ್ಚುಗೆಗಾಗಿ ಮಕ್ಕಳ ನೈಸರ್ಗಿಕ ಬೆಳವಣಿಗೆ, ಅವರ ಮುಗ್ಧತೆ ಮತ್ತು ಮುಕ್ತ ಮನಸ್ಥಿತಿಯನ್ನು ಬಲಿಕೊಡಲಾಗುತ್ತಿದೆ. ಬಾಲ್ಯವೆಂಬುದು ಸಂಭ್ರಮಿಸಬೇಕಾದ ಸುಂದರ ಹಂತವೇ ಹೊರತು, ಪರದೆಯ ಮುಂದೆ ಪ್ರದರ್ಶನಕ್ಕಿಡುವ ವಸ್ತುವಲ್ಲ. ಈ ಡಿಜಿಟಲ್ ಯುಗದಲ್ಲಿ ಪೋಷಕರು ಮತ್ತು ಸಮಾಜ ಎಚ್ಚೆತ್ತುಕೊಳ್ಳದಿದ್ದರೆ, ಮಕ್ಕಳ ಕಣ್ಣಿಗೆ ಕಾಣುವ ಬಣ್ಣದ ಲೋಕವು ಅವರ ನೈಜ ಬಾಲ್ಯದ ಸುಖವನ್ನೇ ಕಸಿದುಬಿಡಬಹುದು ಎಂಬ ಗಂಭೀರ ಚಿಂತನೆಯನ್ನು ಇದು ನಮ್ಮ ಮುಂದೆ ತೆರೆದಿಡುತ್ತದೆ.

ಹೌದು, ಶಾಲಾ ಮಕ್ಕಳ ಬ್ಯಾಗ್‌ಗಳಲ್ಲಿ ಪುಸ್ತಕ ಮತ್ತು ಊಟದ ಡಬ್ಬಿಯ ಜೊತೆಗೆ ಲಿಪ್‌ಸ್ಟಿಕ್, ಕಾಡಿಗೆ (ಕಾಜಲ್), ಮಸ್ಕರಾ ಮುಂತಾದ ಸೌಂದರ್ಯವರ್ಧಕಗಳು ಪತ್ತೆಯಾಗುತ್ತಿವೆ. ಕೇರಳದ ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳು ವಿರಾಮದ ಸಮಯದಲ್ಲಿ ಇವುಗಳನ್ನು ಬಳಸುತ್ತಿರುವುದು ಹಾಗೂ ಮನೆಯಲ್ಲಿ ವಿಸ್ತಾರವಾದ ತ್ವಚೆಯ ಆರೈಕೆಯ (ಸ್ಕಿನ್‌ಕೇರ್) ದಿನಚರಿಯನ್ನು ರೂಢಿಸಿಕೊಂಡಿರುವುದು ಬೆಳಕಿಗೆ ಬಂದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ‘ಗೆಟ್ ರೆಡಿ ವಿತ್ ಮಿ’ (GRWM) ವಿಡಿಯೋಗಳನ್ನು ನೋಡಿ 13 ವರ್ಷದ ಬಾಲಕಿಯೊಬ್ಬಳು ರೆಟಿನಾಲ್ ಕ್ರೀಮ್‌ಗಳು ಮತ್ತು ಸೀರಮ್‌ಗಳನ್ನು ಬಳಸುತ್ತಿರುವುದಾಗಿ ತಿಳಿಸಿದ್ದಾಳೆ. ಇನ್ನು ಕೆಲವರು 50 ರೂಪಾಯಿಗಿಂತ ಕಡಿಮೆ ಬೆಲೆಯ ಅಗ್ಗದ ಲಿಪ್‌ಸ್ಟಿಕ್‌ಗಳನ್ನು ಖರೀದಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೇರಳದ ಮಕ್ಕಳ ಕಲ್ಯಾಣ ಸಮಿತಿಯು (CWC) ಕೊಲ್ಲಂ ಮತ್ತು ಕೋಝಿಕ್ಕೋಡ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ “ಲಿಪ್‌ಸ್ಟಿಕ್-ಮುಕ್ತ ಕ್ಯಾಂಪಸ್” ಜಾಗೃತಿ ಅಭಿಯಾನವನ್ನು ಆರಂಭಿಸಿದೆ.

ಪೋಷಕರಿಂದಲೇ ಇಂತಹ ಬೆಳವಣಿಗೆ ಆರಂಭ:
ಸಾಮಾನ್ಯವಾಗಿ ಮಕ್ಕಳು ಹುಟ್ಟುತ್ತಲೇ ತಾಯಿ ತನ್ನ ತ್ವಚೆಗೆ ಹಾಗೂ ಇನ್ನಿತರದ ದಿನಬಳಕೆ ವಸ್ತುಗಳಾಗಿ ಕೆಲವು ಸ್ಕಿನ್ ಕೇರ್, ಹೇರ್ ಕೇರ್ ಇಂಥ ವಸ್ತುಗಳನ್ನು ಬಳಸುತ್ತಾರೆ. ಇದನ್ನೇ ಕಂಡು ಬೆಳೆಯುವ ಮಕ್ಕಳು ಮುಂದೆ ತಾಯಿ ಉಪಯೋಗಿಸಿದ್ದನ್ನ ತಾನು ಬಳಸಲು ಇಷ್ಟಪಡುತ್ತಾರೆ.
ಸ್ವತಃ ಪೋಷಕರು ಕೆಲವು ಸಮಾರಂಭಗಳಿಗೆ ಹೋಗುವಾಗ ಮಕ್ಕಳ ಅಂದವನ್ನು ಇನ್ನಷ್ಟು ಹೆಚ್ಚಿಸುವ ಉದ್ದೇಶದಿಂದ ಮೇಕಪ್ ಹಾಕುವುದು ಸಾಮಾನ್ಯ. ಹೀಗಿರುವಾಗ ಇದನ್ನು ತಪ್ಪೇನಲು ಸಾಧ್ಯವಿಲ್ಲ. ಇದೆಲ್ಲವೂ ಜನರೇಶನ್ ಹಾಗೂ ಟ್ರೆಂಡ್ ಗೆ ತಕ್ಕಂತೆ ಬದಲಾಗುವ ರೀತಿ. ಆದರೆ ಇದೆಲ್ಲದರ ನಡುವೆ ಪೋಷಕರು ಮಕ್ಕಳು ಬಳಸುವ ಸಾಮಾನುಗಳ ಬಗ್ಗೆ ಅವರಿಗೆ ಮಾಹಿತಿ ನೀಡುವುದು ಜೊತೆಗೆ ಅದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆಯೂ ಮಾಹಿತಿ ನೀಡುವುದು ಒಳ್ಳೆಯದು.

ಕಡಿಮೆ ಬೆಲೆಯ ಸೌಂದರ್ಯವರ್ಧಕಗಳ ಅಪಾಯ:
ಶಾಲೆಗಳಲ್ಲಿ ವಶಪಡಿಸಿಕೊಂಡ ಕೆಲವು ಲಿಪ್‌ಸ್ಟಿಕ್‌ಗಳಲ್ಲಿ ಪಾದರಸದ (mercury) ಪ್ರಮಾಣ ಹೆಚ್ಚಿರುವುದು ಈ ಹಿಂದಿನ ತಪಾಸಣೆಯಲ್ಲಿ ಕಂಡುಬಂದಿದೆ. ಕಡಿಮೆ ದರ್ಜೆಯ ಉತ್ಪನ್ನಗಳಲ್ಲಿ ಸೀಸ (lead) ಮತ್ತು ಕ್ಯಾಡ್ಮಿಯಂನಂತಹ ಭಾರ ಲೋಹಗಳಿರಬಹುದು.
ಮಕ್ಕಳ ಸೂಕ್ಷ್ಮ ಚರ್ಮವು ಅಲರ್ಜಿಕ್ ಕಾಂಟ್ಯಾಕ್ಟ್ ಡರ್ಮಟೈಟಿಸ್, ದದ್ದು, ತುರಿಕೆ ಹಾಗೂ ಕಣ್ಣಿನ ಸೋಂಕಿಗೆ ಒಳಗಾಗಬಹುದು. ಲಿಪ್‌ಸ್ಟಿಕ್ ತಿನ್ನುವ ಮೂಲಕ ದೇಹ ಸೇರುವುದು ಮತ್ತು ಕಣ್ಣಿನ ಬಳಿ ಹಚ್ಚುವುದರಿಂದ ಉರಿಯೂತ ಉಂಟಾಗುವ ಅಪಾಯವಿದೆ ಎಂದು ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ.
ಸಾಮಾಜಿಕ ಜಾಲತಾಣಗಳ ಪ್ರಭಾವ:
2026ರಲ್ಲಿ 13-17 ವರ್ಷದ 612 ಹದಿಹರೆಯದವರ ಮೇಲೆ ನಡೆಸಿದ ಅಧ್ಯಯನದಲ್ಲಿ, 82% ಮಕ್ಕಳಿಗೆ ಸಾಮಾಜಿಕ ಮಾಧ್ಯಮವೇ ಚರ್ಮದ ಆರೈಕೆಯ ಮುಖ್ಯ ಮೂಲವಾಗಿದ್ದು, ಕೇವಲ 34% ರಷ್ಟು ಜನರು ಮಾತ್ರ ಸಾಕ್ಷ್ಯಾಧಾರಿತ ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ಸುಮಾರು ಮೂರನೇ ಒಂದು ಭಾಗದಷ್ಟು ಮಕ್ಕಳು ಅಡ್ಡಪರಿಣಾಮಗಳನ್ನು ವರದಿ ಮಾಡಿದ್ದಾರೆ.

ಶಾಲೆಗಳ ನಿಷೇಧ ಮತ್ತು ಪೋಷಕರು ಗಮನಿಸಬೇಕಾದ ಅಂಶಗಳು:
ಕೇರಳ ಸರ್ಕಾರವು ಶಾಲೆಗಳಲ್ಲಿ ಮೇಕಪ್ ಮೇಲೆ ಸಂಪೂರ್ಣ ನಿಷೇಧ ಹೇರಿಲ್ಲ. ಬದಲಾಗಿ ಜಾಗೃತಿ ಮತ್ತು ಶಾಲಾ ಮಟ್ಟದ ನಿರ್ಬಂಧಗಳ ಮೂಲಕ ಮುನ್ನಡೆಯುತ್ತಿದೆ. ಶಾಲೆಗಳಲ್ಲಿ ಕೇವಲ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಆನ್‌ಲೈನ್‌ನಲ್ಲಿ ಜಾಹೀರಾತುಗಳು, ಫಿಲ್ಟರ್‌ಗಳು ಮತ್ತು ಇನ್‌ಫ್ಲುಯೆನ್ಸರ್ ಕಂಟೆಂಟ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಮಕ್ಕಳಿಗೆ ತಿಳಿಹೇಳುವ ಅಗತ್ಯವಿದೆ.
ಮೇಕಪ್ ಇಲ್ಲದೆ ತೀವ್ರ ಅಸಮಾಧಾನಗೊಳ್ಳುವುದು, ಸದಾ ಕನ್ನಡಿ ನೋಡುವುದು, ಖರೀದಿಯನ್ನು ಮುಚ್ಚಿಡುವುದು, ಅತಿಯಾದ ಹಣ ಖರ್ಚು ಮಾಡುವುದು ಮತ್ತು ರೂಪದ ಬಗ್ಗೆ ಕೀಳರಿಮೆ ಹೊಂದಿ ಕಾರ್ಯಕ್ರಮಗಳಿಂದ ದೂರ ಉಳಿಯುವುದು ಕಂಡುಬಂದರೆ ಪೋಷಕರು ಎಚ್ಚೆತ್ತುಕೊಳ್ಳಬೇಕು. ಕೇವಲ ಬಾಹ್ಯ ಸೌಂದರ್ಯಕ್ಕೆ ಮನ್ನಣೆ ನೀಡುವ ಬದಲು ಕಲಿಕೆ, ನಡತೆ ಮತ್ತು ಸಂಬಂಧಗಳ ಮೂಲಕ ವ್ಯಕ್ತಿತ್ವ ರೂಪಿಸಿಕೊಳ್ಳುವುದಕ್ಕೆ ಆದ್ಯತೆ ನೀಡಬೇಕಿದೆ.

ಆರೋಗ್ಯ ಮತ್ತು ಚರ್ಮದ ಮೇಲಾಗುವ ಪರಿಣಾಮಗಳು
ರಾಸಾಯನಿಕಗಳ ಹಾನಿ: ಮಕ್ಕಳ ಚರ್ಮವು ವಯಸ್ಕರಿಗಿಂತ ಸೂಕ್ಷ್ಮ ಹಾಗೂ ತೆಳುವಾಗಿರುತ್ತದೆ. ಮೇಕಪ್ ಉತ್ಪನ್ನಗಳಲ್ಲಿರುವ ಸೀಸ (Lead), ಪ್ಯಾರಾಬೆನ್, ಥಾಲೇಟ್‌ಗಳು ಹಾಗೂ ಕೃತಕ ಸುಗಂಧ ದ್ರವ್ಯಗಳು ಅಲರ್ಜಿ, ತುರಿಕೆ ಮತ್ತು ಚರ್ಮದ ಸೋಂಕಿಗೆ ಕಾರಣವಾಗಬಹುದು.
ನೈಸರ್ಗಿಕ ಹೊಳಪು ಕಳೆದುಕೊಳ್ಳುವುದು: ಚಿಕ್ಕ ವಯಸ್ಸಿನಲ್ಲೇ ರಾಸಾಯನಿಕಯುಕ್ತ ಉತ್ಪನ್ನಗಳನ್ನು ನಿರಂತರವಾಗಿ ಬಳಸುವುದರಿಂದ ಚರ್ಮದ ರಂಧ್ರಗಳು ಮುಚ್ಚಿಹೋಗಿ, ನೈಸರ್ಗಿಕ ಕಾಂತಿ ಮತ್ತು ಮೃದುತ್ವ ಬೇಗನೆ ಮಂಕಾಗಬಹುದು.
ವಿಷಕಾರಿ ಅಂಶಗಳು ದೇಹ ಸೇರುವುದು: ಲಿಪ್‌ಸ್ಟಿಕ್ ಅಥವಾ ಲಿಪ್‌ಗ್ಲಾಸ್‌ಗಳನ್ನು ಮಕ್ಕಳು ಅರಿಯದೆ ನಾಲಿಗೆಯಿಂದ ನೆಕ್ಕುವುದರಿಂದ ಅದರಲ್ಲಿರುವ ಅಪಾಯಕಾರಿ ರಾಸಾಯನಿಕಗಳು ಸುಲಭವಾಗಿ ಜೀರ್ಣಾಂಗ ವ್ಯವಸ್ಥೆಯನ್ನು ಸೇರುತ್ತವೆ.

ಮಾನಸಿಕ ಹಾಗೂ ವ್ಯಕ್ತಿತ್ವದ ಮೇಲಾಗುವ ಪರಿಣಾಮಗಳು
ಕೀಳರಿಮೆ: ಬಾಹ್ಯ ಸೌಂದರ್ಯವೇ ಮುಖ್ಯ ಎಂಬ ತಪ್ಪು ಕಲ್ಪನೆ ಮನಸ್ಸಿನಲ್ಲಿ ಬೇರೂರುತ್ತದೆ. ಮೇಕಪ್ ಇಲ್ಲದೆ ತಾವು ಸುಂದರವಲ್ಲ ಎಂಬ ಕೀಳರಿಮೆ ಕಾಡಲಾರಂಭಿಸುತ್ತದೆ.
ಸಾಮಾಜಿಕ ಒತ್ತಡ: ಸಾಮಾಜಿಕ ಮಾಧ್ಯಮಗಳಲ್ಲಿ ಪರಿಪೂರ್ಣವಾಗಿ ಕಾಣಿಸಿಕೊಳ್ಳಬೇಕೆಂಬ ಹಂಬಲ ಮಕ್ಕಳಲ್ಲಿ ಅತಿಯಾದ ಒತ್ತಡ ಮತ್ತು ಆತಂಕವನ್ನು ಸೃಷ್ಟಿಸುತ್ತದೆ.
ಪೋಷಕರು ವಹಿಸಬೇಕಾದ ಮುನ್ನೆಚ್ಚರಿಕೆಗಳು
ಶಾಲಾ ವಾರ್ಷಿಕೋತ್ಸವ ಅಥವಾ ಸಾಂಸ್ಕೃತಿಕ ಕಾರ್ಯಕ್ರಮಗಳಂತಹ ವಿಶೇಷ ಸಂದರ್ಭಗಳಲ್ಲಿ ಮಾತ್ರ ರಾಸಾಯನಿಕ ರಹಿತ, ಮಕ್ಕಳಿಗೆಂದೇ ತಯಾರಿಸಲಾದ (Organic/Non-toxic) ಸುರಕ್ಷಿತ ಉತ್ಪನ್ನಗಳನ್ನು ಬಳಸುವುದು. ಕಾರ್ಯಕ್ರಮ ಮುಗಿದ ತಕ್ಷಣ ಚರ್ಮವನ್ನು ಸ್ವಚ್ಛವಾಗಿ ತೊಳೆದು, ಮಾಯಿಶ್ಚರೈಸರ್ ಹಚ್ಚುವುದು. ಮಕ್ಕಳಿಗೆ ಬಾಹ್ಯ ಲೇಪನಗಳಿಗಿಂತ ನೈಸರ್ಗಿಕ ಸೌಂದರ್ಯ, ಆತ್ಮವಿಶ್ವಾಸ, ಗುಣ ಮತ್ತು ಕಲಿಕೆ ಮುಖ್ಯ ಎಂಬುದನ್ನು ಪ್ರೀತಿಯಿಂದ ತಿಳಿಹೇಳುವುದು.


