ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳನ್ನುತೆಗೆದುಕೊಂಡು ಹೋದಾಗ ಟೋಲ್ (Toll Roads) ಕಟ್ಟುವುದು ಸಾಮಾನ್ಯ. ಆದರೆ ಪ್ರತಿದಿನ ವಾಹನಗಳಿಂದ ಸಂಗ್ರಹವಾಗುವ ಈ ಹಣ ಎಷ್ಟು ದೊಡ್ಡ ಮೊತ್ತ? (Indian Highways) ಈ ಹಣ ಯಾರ ಖಾತೆಗೆ ಹೋಗುತ್ತದೆ? ರಸ್ತೆ ನಿರ್ಮಾಣದ ವೆಚ್ಚ ವಸೂಲಾಗಿದ್ದರೂ ಕೆಲವು ಕಡೆ ಟೋಲ್ ಮುಂದುವರಿಯುವುದೇಕೆ? ಭಾರತದಲ್ಲಿ ಕಳೆದ ಐದು ವರ್ಷಗಳಲ್ಲಿ ಟೋಲ್ ಮೂಲಕ 70,278 ಕೋಟಿ ರೂ. ಸಂಗ್ರಹವಾಗಿದೆ. ಇದರ ಹಿಂದೆ ಇರುವ ಸಂಪೂರ್ಣ ಆರ್ಥಿಕ ಲೆಕ್ಕವೇನು ಎಂಬುವುದರ ಸಂಪೂರ್ಣ ಮಾಹಿತಿ ಇಲ್ಲಿದೆ..

ಟೋಲ್ ಯಾಕೆ ವಸೂಲಿ ಮಾಡಲಾಗುತ್ತದೆ?
ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ, ಅಭಿವೃದ್ಧಿ, ನಿರ್ವಹಣೆ ಮತ್ತು ಕೆಲವು ಯೋಜನೆಗಳ ಹಣಕಾಸು ವ್ಯವಸ್ಥೆಗಾಗಿ ಟೋಲ್ ಪ್ರಮುಖ ಆದಾಯ ಮೂಲವಾಗಿದೆ. ರಸ್ತೆಯನ್ನು ಬಳಸುವ ವಾಹನಗಳಿಂದ ಶುಲ್ಕ ಪಡೆಯುವ ‘User Pays’ ಮಾದರಿ ಇದರ ಪ್ರಮುಖ ಆಧಾರವಾಗಿದೆ. ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಮತ್ತು ನಿರ್ವಹಣೆಯಲ್ಲಿ NHAI ಪ್ರಮುಖ ಪಾತ್ರ ವಹಿಸುತ್ತದೆ.
ಟೋಲ್ ಹಣ ಎಲ್ಲಿಗೆ ಹೋಗುತ್ತದೆ?
ಟೋಲ್ ಸಂಗ್ರಹದ ಹಣದ ಬಳಕೆ ರಸ್ತೆ ಯಾವ ಮಾದರಿಯಲ್ಲಿ ನಿರ್ಮಾಣವಾಗಿದೆ ಎಂಬುದರ ಮೇಲೆ ಬದಲಾಗುತ್ತದೆ. ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾ (NHAI )ನಿರ್ವಹಿಸುವ ಹಲವು ಯೋಜನೆಗಳಲ್ಲಿ ಟೋಲ್ ಆದಾಯವನ್ನು ಭಾರತದ ಏಕೀಕೃತ ನಿಧಿ (Consolidated Fund of India) ಗೆ ಜಮೆ ಮಾಡಲಾಗುತ್ತದೆ. ಅಲ್ಲಿಂದ ರಾಷ್ಟ್ರೀಯ ಹೆದ್ದಾರಿ ಸಂಬಂಧಿತ ವೆಚ್ಚಗಳಿಗೆ ಹಣಕಾಸು ವ್ಯವಸ್ಥೆ ಮಾಡಲಾಗುತ್ತದೆ.

ಭಾರತದಲ್ಲಿ ಟೋಲ್ ಆದಾಯ ಎಷ್ಟು ದೊಡ್ಡದು?
ದೇಶದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ನಿರಂತರವಾಗಿ ಹೆಚ್ಚುತ್ತಿದೆ. 2025-26ರಲ್ಲಿ ಟೋಲ್ ಆದಾಯವು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ವರದಿಗಳು ತಿಳಿಸಿವೆ. NHAIಯ ಹಣಕಾಸು ದಾಖಲೆಗಳಲ್ಲಿಯೂ ಟೋಲ್ ಆದಾಯವು ಸಾವಿರಾರು ಕೋಟಿ ರೂಪಾಯಿಗಳ ಮಟ್ಟದಲ್ಲಿರುವುದು ಕಾಣಿಸುತ್ತದೆ.
ಕರ್ನಾಟಕದ ಲೆಕ್ಕ ಇನ್ನೂ ಕುತೂಹಲಕಾರಿ
ಕರ್ನಾಟಕದಲ್ಲಿ ಕಳೆದ ಐದು ವರ್ಷಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಸಂಗ್ರಹವು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. 2025-26ರಲ್ಲಿ ರಾಜ್ಯದ 68 ಕಾರ್ಯನಿರ್ವಹಿಸುತ್ತಿರುವ ಟೋಲ್ ಪ್ಲಾಜಾಗಳಿಂದ 4,779 ಕೋಟಿ ರೂ. ಸಂಗ್ರಹವಾಗಿದೆ ಎಂದು ವರದಿಯಾಗಿದೆ. ಇದೇ ಅವಧಿಯಲ್ಲಿ ಕರ್ನಾಟಕದ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಕೇಂದ್ರ ಸರ್ಕಾರ 43,796 ಕೋಟಿ ರೂ. ಖರ್ಚು ಮಾಡಿದೆ. ಅಂದರೆ ಟೋಲ್ ಮೂಲಕ ಬರುತ್ತಿರುವ ಹಣವನ್ನು ಒಂದು ರಸ್ತೆಗೆ ಮಾತ್ರ ಖರ್ಚು ಮಾಡಲಾಗುತ್ತದೆ ಎಂದು ಅರ್ಥವಲ್ಲ. ರಾಷ್ಟ್ರೀಯ ಹೆದ್ದಾರಿ ವ್ಯವಸ್ಥೆಯ ವಿವಿಧ ಯೋಜನೆಗಳು, ನಿರ್ವಹಣೆ, ಹಣಕಾಸು ಬಾಧ್ಯತೆಗಳು ಮತ್ತು ಹೊಸ ಮೂಲಸೌಕರ್ಯ ಅಭಿವೃದ್ಧಿಯ ಒಟ್ಟಾರೆ ವ್ಯವಸ್ಥೆಯಲ್ಲಿ ಈ ಹಣದ ಪಾತ್ರವಿರುತ್ತದೆ.

ರಸ್ತೆ ನಿರ್ಮಾಣದ ವೆಚ್ಚ ವಸೂಲಾಗಿದ್ದರೂ ಟೋಲ್ ಯಾಕೆ ಮುಂದುವರಿಯುತ್ತದೆ?
ಇದು ವಾಹನ ಸವಾರರು ಹೆಚ್ಚಾಗಿ ಕೇಳುವ ಪ್ರಶ್ನೆ. ಒಂದು ರಸ್ತೆಯ ನಿರ್ಮಾಣ ವೆಚ್ಚ ವಸೂಲಾಗಿದೆ ಎಂದ ಮಾತ್ರಕ್ಕೆ ಎಲ್ಲ ಟೋಲ್ ಕೂಡಲೇ ನಿಲ್ಲಬೇಕು ಎಂಬ ನಿಯಮವಿಲ್ಲ. ಯೋಜನೆಯ ಒಪ್ಪಂದ, ರಸ್ತೆ ನಿರ್ವಹಣೆ, ಹಣಕಾಸು ವ್ಯವಸ್ಥೆ ಮತ್ತು ನಿರ್ಮಾಣ ಮಾದರಿಯನ್ನು ಅವಲಂಬಿಸಿ ಟೋಲ್ ಸಂಗ್ರಹದ ಅವಧಿ ಬದಲಾಗುತ್ತದೆ. BOT ಮತ್ತು ಇತರ PPP ಮಾದರಿಗಳಲ್ಲಿ ಹೂಡಿಕೆದಾರರ ಹಣ ವಾಪಸ್ ಪಡೆಯುವ ವ್ಯವಸ್ಥೆಯೂ ಇರುತ್ತದೆ.
FASTag ಬಂದ ಮೇಲೆ ಏನು ಬದಲಾಯಿತು?
FASTagನಿಂದ ಟೋಲ್ ಪಾವತಿ ಡಿಜಿಟಲ್ ಆಗಿದ್ದು, ವಾಹನ ನಿಲ್ಲಿಸಿ ನಗದು ಪಾವತಿಸುವ ಅಗತ್ಯ ಬಹುತೇಕ ಕಡಿಮೆಯಾಗಿದೆ. ಈಗ NHAI FASTag Annual Pass ವ್ಯವಸ್ಥೆಯನ್ನೂ ಮುಂದುವರಿಸಿದೆ. 2026-27ಕ್ಕೆ ಇದರ ಶುಲ್ಕವನ್ನು 3,075 ರೂ. ದರ ನಿಗದಿಪಡಿಸಲಾಗಿದ್ದು, ಅರ್ಹ ವಾಹನಗಳಿಗೆ ಒಂದು ವರ್ಷ ಅಥವಾ 200 ಟೋಲ್ ಪ್ಲಾಜಾ ದಾಟುವಿಕೆಗಳವರೆಗೆ ಈ ವ್ಯವಸ್ಥೆ ಅನ್ವಯಿಸುತ್ತದೆ.
ಟೋಲ್ ವ್ಯವಸ್ಥೆಯ ಮುಂದಿನ ಬದಲಾವಣೆ ಏನು?
ಮುಂದಿನ ದಿನಗಳಲ್ಲಿ ಟೋಲ್ ಸಂಗ್ರಹ ಮತ್ತಷ್ಟು ತಂತ್ರಜ್ಞಾನ ಆಧಾರಿತವಾಗುವ ಸಾಧ್ಯತೆಯಿದೆ. FASTag ಜೊತೆಗೆ ವಾಹನದ ಪ್ರಯಾಣದ ದೂರವನ್ನು ಆಧರಿಸಿ ಶುಲ್ಕ ವಿಧಿಸುವ GNSS ಆಧಾರಿತ ಟೋಲ್ ವ್ಯವಸ್ಥೆ ಕುರಿತು ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ. ಇದರ ಉದ್ದೇಶ ಟೋಲ್ ಪ್ಲಾಜಾಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ವಾಹನ ನಿಜವಾಗಿ ಬಳಸಿದ ಹೆದ್ದಾರಿ ದೂರಕ್ಕೆ ಅನುಗುಣವಾಗಿ ಶುಲ್ಕ ವಿಧಿಸುವ ವ್ಯವಸ್ಥೆಯತ್ತ ಸಾಗುವುದಾಗಿದೆ.

ಟೋಲ್ ಹಣದ ಅಸಲಿ ಲೆಕ್ಕ ಏನು?
ಸರಳವಾಗಿ ಹೇಳುವುದಾದರೆ, ಟೋಲ್ ಕೇವಲ ರಸ್ತೆ ಬಳಸಲು ಕೊಡುವ ಶುಲ್ಕವಲ್ಲ. ಇದರ ಹಿಂದೆ ರಸ್ತೆ ನಿರ್ಮಾಣ, ಸಾಲ ಮತ್ತು ಹೂಡಿಕೆ ಮರುಪಾವತಿ, ನಿರ್ವಹಣೆ, ಹೊಸ ಹೆದ್ದಾರಿ ಅಭಿವೃದ್ಧಿ ಮತ್ತು ಸಾರ್ವಜನಿಕ ಮೂಲಸೌಕರ್ಯಕ್ಕೆ ಹಣಕಾಸು ಒದಗಿಸುವ ದೊಡ್ಡ ಆರ್ಥಿಕ ವ್ಯವಸ್ಥೆ ಇದೆ. ಕರ್ನಾಟಕದಲ್ಲೇ 4,779 ಕೋಟಿ ರೂ. ವಾರ್ಷಿಕ ಟೋಲ್ ಸಂಗ್ರಹವಾಗುತ್ತಿರುವುದು ಈ ವ್ಯವಸ್ಥೆಯ ಪ್ರಮಾಣ ಎಷ್ಟು ದೊಡ್ಡದು ಎಂಬುದನ್ನು ತೋರಿಸುತ್ತದೆ.
