ವಾಷಿಂಗ್ಟನ್/ ನವದೆಹಲಿ: ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ(Gautam Adani) ಮೇಲಿನ ಕ್ರಿಮಿನಲ್ ಆರೋಪವನ್ನು ಅಮೆರಿಕ ನ್ಯಾಯಾಲಯ(US Court) ಕೈ ಬಿಟ್ಟಿದೆ.

ಅಮೆರಿಕದ ಈಸ್ಟರ್ನ್ ಡಿಸ್ಟ್ರಿಕ್ಟ್ ಆಫ್ ನ್ಯೂಯಾರ್ಕ್‌ನ ಜಿಲ್ಲಾ ನ್ಯಾಯಾಧೀಶ ನಿಕೋಲಸ್ ಗರೌಫಿಸ್ ಅವರು ಗೌತಮ್ ಅದಾನಿ ಮತ್ತು ಸಾಗರ್ ಅದಾನಿ ಮೇಲಿನ ಎಲ್ಲಾ ಕ್ರಿಮಿನಲ್ ಆರೋಪಗಳನ್ನು ವಜಾಗೊಳಿಸಿದ್ದಾರೆ. ಫೆಡರಲ್ ಪ್ರಾಸಿಕ್ಯೂಟರ್‌ಗಳ ವಿನಂತಿಯನ್ನು ಪರಿಶೀಲಿಸಿದ ಬಳಿಕ ನ್ಯಾಯಾಧೀಶರು ಈ ನಿರ್ಧಾರ ತಳೆದಿದ್ದಾರೆ.
ತಮ್ಮ ಮೇಲಿದ್ದ ಕ್ರಿಮಿನಲ್ ಆರೋಪಗಳನ್ನು ವಜಾಗೊಳಿಸಿದ ಅಮೆರಿಕ ನ್ಯಾಯಾಲಯದ ತೀರ್ಪನ್ನು ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಸ್ವಾಗತಿಸಿದ್ದಾರೆ. ಈ ಕುರಿತು X ಖಾತೆಯಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿರುವ ಅವರು, “ನ್ಯಾಯಾಂಗ ಪ್ರಕ್ರಿಯೆಗೆ ನನ್ನ ಗೌರವಪೂರ್ವಕ ನಮನಗಳು” ಎಂದು ತಿಳಿಸಿದ್ದಾರೆ.
ಅಮೆರಿಕ ನ್ಯಾಯಾಲಯದ ನಿರ್ಧಾರವನ್ನು ನಾನು ವಿನಮ್ರತೆಯಿಂದ ಮತ್ತು ನ್ಯಾಯಾಂಗ ಪ್ರಕ್ರಿಯೆಗೆ ಗೌರವ ಸಲ್ಲಿಸುತ್ತಾ ಸ್ವಾಗತಿಸುತ್ತೇನೆ. ಈ ಸವಾಲಿನ ಸಮಯದಲ್ಲಿ, ಸತ್ಯ, ನ್ಯಾಯ ಮತ್ತು ಕಾನೂನಿನ ಮೇಲಿದ್ದ ನಮ್ಮ ನಂಬಿಕೆ ಅಚಲವಾಗಿತ್ತು. ನಮ್ಮ ಮೇಲೆ, ವ್ಯವಸ್ಥೆಯ ಮೇಲೆ ಮತ್ತು ಭಾರತದ ನ್ಯಾಯ ಒದಗಿಸುವ ಸಾಮರ್ಥ್ಯದ ಮೇಲೆ ನಂಬಿಕೆ ಕಳೆದುಕೊಳ್ಳದ ಎಲ್ಲರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳು. ದೇಶ ನಿರ್ಮಾಣ, ಜಾಗತಿಕ ಮೌಲ್ಯ ವರ್ಧನೆ ಮತ್ತು ಮಹತ್ತರ ಉದ್ದೇಶಗಳಿಗಾಗಿ ನಮ್ಮ ಸೇವೆ ನಿರಂತರವಾಗಿ ಮುಂದುವರಿಯಲಿದೆ. ಇದು ನಮ್ಮ ಬದ್ಧತೆ. ಜೈ ಹಿಂದ್ ಎಂದು ಬರೆದಿದ್ದಾರೆ.
I welcome the US court’s decision with humility and deep respect for the judicial process.
Throughout this challenging period, our faith in truth, fairness and the rule of law remained unwavering.
My deepest gratitude to those who never lost faith in us, in the system and in…
— Gautam Adani (@gautam_adani) August 10, 2026
ಪ್ರಕರಣ ದಾಖಲಿಸಬಾರದಿತ್ತು
ಅಮೆರಿಕದ ನ್ಯಾಯಾಂಗ ಇಲಾಖೆ (DOJ) ಕೋರ್ಟ್‌ಗೆ ಸಲ್ಲಿಸಿದ ವಿವರವಾದ ವರದಿಯಲ್ಲಿ, ಈ ಪ್ರಕರಣಕ್ಕೆ ಬಲವಾದ ಕಾನೂನು ಆಧಾರಗಳಿಲ್ಲ. ಭಾರತದಲ್ಲಿ ನಡೆದ ವಿಷಯಗಳಿಗೆ ಅಮೆರಿಕ ಜಾಗತಿಕ ಪೋಲಿಸ್‌ನಂತೆ ವರ್ತಿಸುವುದು ರಾಜತಾಂತ್ರಿಕ ಸಂಘರ್ಷಕ್ಕೆ ಕಾರಣವಾಗುತ್ತದೆ. ಭಾರತೀಯರು ಭಾರತದಲ್ಲೇ ಒಪ್ಪಂದ ಮಾಡಿಕೊಳ್ಳಲು ಲಂಚ ನೀಡಿದ್ದಾರೆ ಎಂಬ ಆರೋಪಗಳ ವಿಚಾರಣೆಯನ್ನು ಭಾರತ ಸರ್ಕಾರವೇ ಉತ್ತಮವಾಗಿ ನಿರ್ವಹಿಸಬಲ್ಲದು. ಹೀಗಾಗಿ ಈ ಪ್ರಕರಣವನ್ನು ಆರಂಭದಲ್ಲೇ ದಾಖಲಿಸಬಾರದಿತ್ತು ಎಂದು ಸ್ಪಷ್ಟವಾಗಿ ತಿಳಿಸಿತ್ತು. ಇದನ್ನೂ ಓದಿ: ಅದಾನಿ ಕಂಪನಿಗಳನ್ನು ಕಾಡಿದ್ದ ಹಿಂಡನ್‌ಬರ್ಗ್‌ಗೆ ಬೀಗ – ಬಂದ್ ಆಗಿದ್ದು ಯಾಕೆ?
ಹೂಡಿಕೆಗೂ ವಜಾಗೂ ಸಂಬಂಧವಿಲ್ಲ:
ಅದಾನಿ ಸಮೂಹ ಅಮೆರಿಕದಲ್ಲಿ ಹೂಡಿಕೆ ಮಾಡುವ ಭರವಸೆ ನೀಡಿದ್ದರಿಂದ ಆರೋಪ ಹಿಂಪಡೆಯಲಾಗಿದೆ ಎಂಬ ಮಾಧ್ಯಮ ವರದಿಗಳನ್ನು ಅಮೆರಿಕ ನ್ಯಾಯಾಂಗ ಇಲಾಖೆ ತಳ್ಳಿಹಾಕಿದೆ. ಯಾವುದೇ ಹೂಡಿಕೆಯ ಆಮಿಷಕ್ಕೂ ಪ್ರಕರಣ ಹಿಂಪಡೆಯುವುದಕ್ಕೂ ಸಂಬಂಧವಿಲ್ಲ, ಕಾನೂನಾತ್ಮಕವಾಗಿ ಈ ಪ್ರಕರಣ ನಿಲ್ಲುವುದಿಲ್ಲ ಎಂಬ ಕಾರಣಕ್ಕೇ ವಜಾಗೊಳಿಸಲಾಗಿದೆ ಎಂದು ಪ್ರಿನ್ಸಿಪಲ್ ಅಸೋಸಿಯೇಟ್ ಡೆಪ್ಯುಟಿ ಅಟಾರ್ನಿ ಜನರಲ್ ಸ್ಪಷ್ಟಪಡಿಸಿದ್ದಾರೆ.
ಏನಿದು ಕೇಸ್?
ಭಾರತದಲ್ಲಿ ಬೃಹತ್ ಸೌರಶಕ್ತಿ (Solar Power) ಒಪ್ಪಂದಗಳನ್ನು ಪಡೆಯಲು ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ ಸುಮಾರು 250 ಮಿಲಿಯನ್ (ಅಂದಾಜು 2,100 ಕೋಟಿ ರೂ.ಗೂ ಹೆಚ್ಚು) ಲಂಚ ನೀಡಲು ಪಿತೂರಿ ನಡೆಸಿದ್ದಾರೆ. ಈ ಪಿತೂರಿ ವಿಷಯವನ್ನು ಮರೆಮಾಚಿ ಅಮೆರಿಕದ ಹೂಡಿಕೆದಾರರಿಂದ ಸುಳ್ಳು ದಾಖಲೆಗಳ ಮೂಲಕ ಕೋಟ್ಯಂತರ ಡಾಲರ್ ಹಣವನ್ನು ಸಂಗ್ರಹಿಸಿ ವಂಚಿಸಿದ್ದಾರೆ ಎಂದು ಜೋ ಬೈಡನ್ ಸರ್ಕಾರದ ಅವಧಿಯ ಕೊನೆಯಲ್ಲಿ ಅಮೆರಿಕದ ನ್ಯಾಯಾಂಗ ಇಲಾಖೆ ಕೇಸ್ ದಾಖಲಿಸಿತ್ತು.
ಅದಾನಿ ಗ್ರೀನ್ ಎನರ್ಜಿ ಕಂಪನಿಗೆ ಲಾಭದಾಯಕ ಸೌರಶಕ್ತಿ ಯೋಜನೆಗಳ ಸರಬರಾಜು ಒಪ್ಪಂದಗಳನ್ನು ಪಡೆಯಲು ಭಾರತದ ಸರ್ಕಾರಿ ಅಧಿಕಾರಿಗಳಿಗೆ ಕೋಟ್ಯಂತರ ರೂಪಾಯಿ ಲಂಚದ ಭರವಸೆ ನೀಡಲಾಗಿತ್ತು ಅಥವಾ ಪಾವತಿಸಲಾಗಿತ್ತು ಎಂಬುದು ಪ್ರಮುಖ ಆರೋಪವಾಗಿತ್ತು.
ತಮ್ಮ ಕಂಪನಿಗಳು ಭ್ರಷ್ಟಾಚಾರ ಮುಕ್ತ ನೀತಿಯನ್ನು ಹೊಂದಿವೆ ಎಂದು ಸುಳ್ಳು ಹೇಳಿಕೆ ನೀಡಿ, ಅಮೆರಿಕದ ಮಾರುಕಟ್ಟೆಯಿಂದ ಸಾಲ ಮತ್ತು ಬಾಂಡ್‌ಗಳ ಮೂಲಕ 3 ಬಿಲಿಯನ್ ಡಾಲರ್‌ಗಿಂತಲೂ (25,000 ಕೋಟಿಗೂ ಹೆಚ್ಚು) ಹೆಚ್ಚು ಹಣವನ್ನು ಕ್ರೋಢೀಕರಿಸಿ ಹೂಡಿಕೆದಾರರನ್ನು ಹಾದಿ ತಪ್ಪಿಸಲಾಗಿದೆ ಎಂದು ಅಮೆರಿಕದ ಪ್ರಾಸಿಕ್ಯೂಟರ್‌ಗಳು ಆರೋಪಿಸಿದ್ದರು.
