ರಾಕಿಂಗ್ ಸ್ಟಾರ್ ಯಶ್ (Rocking Star Yash) ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಸಿನಿಮಾ ಆಗಸ್ಟ್ 26ರಂದು ತೆರೆಗೆ ಬರಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಕಥಾವಸ್ತು, ಸಂಬಂಧಗಳ ಚಿತ್ರಣ, ಮಹಿಳೆಯರ ಆಸೆಗಳು, ಭಾಷೆ, ಹಿಂಸಾತ್ಮಕ ದೃಶ್ಯಗಳು ಹಾಗೂ ಹಸಿಬಿಸಿ ದೃಶ್ಯಗಳ ಕುರಿತು ಚರ್ಚೆ ಜೋರಾಗಿದೆ.

ಈ ಮಧ್ಯೆ ʻಆಪ್ ಕಿ ಅದಾಲತ್’ (Aap Ki Adalat) ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯಶ್, ಚಿತ್ರದಲ್ಲಿ ಹಸಿಬಿಸಿ ದೃಶ್ಯಗಳ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ವಿಶೇಷವಾಗಿ ಕಿಯಾರಾ ಅಡ್ವಾಣಿ ಕಾಣಿಸಿಕೊಂಡಿರುವ ‘ತಬಾಹಿ’ ಸಾಂಗ್‌ನ ದೃಶ್ಯಗಳ ಕುರಿತೂ ಚರ್ಚೆ ನಡೆಯಿತು.

ಈ ಬಗ್ಗೆ ಮನಬಿಚ್ಚಿ ಮಾತನಾಡಿದ ಯಶ್, ನಾನು ಈ ಹಿಂದೆ ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸುವಾಗ ಸಾಕಷ್ಟು ನರ್ವಸ್ ಆಗುತ್ತಿದ್ದೆ. ಆದ್ರೆ ಈಗ ನನ್ನ ದೃಷ್ಟಿಕೋನ ಸಾಕಷ್ಟು ಬದಲಾಗಿದೆ. 100% ಬದಲಾಗಿದ್ದೇನೆ, ಮನುಷ್ಯ ಬದಲಾಗುತ್ತಾನೆ. 20 ವರ್ಷಗಳಿಂದ ನಾನು ಬದಲಾಗಿಲ್ಲ ಎಂದು ಯಾರಾದರೂ ಹೇಳಿದರೆ ಅದು ಸುಳ್ಳು. ಎವಲ್ಯೂಷನ್ (ಜೀವಿಕ ಬದಲಾವಣೆ) ಮನುಷ್ಯನ ಸಹಜ ಗುಣ. 10 ವರ್ಷಗಳ ಹಿಂದೆ ನೀವು ನಂಬಿದ್ದ ವಿಚಾರವೇ ಬೇರೆ, ಒಂದು ವಾರದ ಹಿಂದೆ ಯೋಚಿಸಿದ್ದ ವಿಚಾರವೇ ಬೇರೆ. ಅದೇ ಜೀವನ, ಅದು ನಿರಂತರವಾಗಿ ಬದಲಾಗುತ್ತಿರುತ್ತದೆ ಎಂದು ಹೇಳಿದ್ದಾರೆ.

‘ತಬಾಹಿ’ ದೃಶ್ಯದ ಬಗ್ಗೆ ಯಶ್ ಹೇಳಿದ್ದೇನು?
‘ತಬಾಹಿ’ ಹಾಡಿನಲ್ಲಿ ಕಿಯಾರಾ ಅಡ್ವಾಣಿ ಪಾತ್ರವು ಒಂದೊಂದಾಗಿ ಬಟ್ಟೆ ತೆಗೆಯುವಂತೆ ಕಾಣುವ ದೃಶ್ಯದ ಬಗ್ಗೆ ಉತ್ತರಿಸಿದ ಯಶ್, ಚಿತ್ರದಲ್ಲಿನ ರಾಯಾ ಮತ್ತು ನಾಡಿಯಾ ಪಾತ್ರಗಳು ಪರಸ್ಪರ ಪ್ರೀತಿಸುವ ರೀತಿಯನ್ನ ತೋರಿಸಲು ಆ ದೃಶ್ಯವನ್ನು ಬಳಸಲಾಗಿದೆ. ಈ ಪಾತ್ರಗಳು ಒಬ್ಬರನ್ನೊಬ್ಬರು ಪ್ರೀತಿಸುವಾಗ ಜಗತ್ತು ಏನು ಅಂದುಕೊಳ್ಳುತ್ತದೆ ಎಂಬುದರ ಬಗ್ಗೆ ಚಿಂತೆ ಮಾಡಲ್ಲ. ಅವರ ಸಂಬಂಧದ ಸ್ವಭಾವವನ್ನು ತೋರಿಸಲು ಆ ದೃಶ್ಯ ಅಗತ್ಯವಾಗಿತ್ತು. ನಂಬಿ, ಸರ್, ನಮಗೂ ಅಂತಹ ದೃಶ್ಯಗಳನ್ನ ಮಾಡುವಾಗ ನರ್ವಸ್ ಆಗುತ್ತಿತ್ತು ಎಂದಿದ್ದಾರೆ ಯಶ್.
ತೊಂದರೆ ಇರೋರು ನೋಡೋದು ಬೇಡ
‘ಟಾಕ್ಸಿಕ್’ ಚಿತ್ರದ ಕೆಲವು ದೃಶ್ಯಗಳನ್ನು ನೆಟ್ಟಿಗರು ಅಶ್ಲೀಲ ಎಂದು ಟೀಕಿಸುತ್ತಿರುವ ಬಗ್ಗೆ ಕೇಳಿದಾಗಲೂ ಯಶ್ ತಮ್ಮ ನಿಲುವನ್ನ ಸ್ಪಷ್ಟಪಡಿಸಿದ್ದಾರೆ.

ನೂರು ಒಳ್ಳೆಯ ವಿಚಾರಗಳಿದ್ದರೂ ಕೆಲವರು ಅದರಲ್ಲಿ ಒಂದು ಅಥವಾ ಎರಡು ವಿಚಾರಗಳನ್ನ ಮಾತ್ರ ಹುಳುಕು ನೋಡುತ್ತಾರೆ, ಅದರ ಬಗ್ಗೆಯೇ ಮಾತನಾಡ್ತಾರೆ. ತೊಂದರೆ ಇರೋರು ಸಿನಿಮಾ ನೋಡೋದು ಬೇಡ ಅಂತ ಮುಕ್ತವಾಗಿ ಹೇಳಿದ್ದಾರೆ.
ಇದೇ ವೇಳೆ ನಿರೂಪಕರು ʻತಬಾಹಿ ಹಾಡು ಅದು ಹಾಡಾ ಅಥವಾ ಕಾಂಡೋಮ್ ಜಾಹೀರಾತಾ?ʼ ಎಂಬ ನೆಟ್ಟಿಗರ ಕಾಮೆಂಟ್ ಉಲ್ಲೇಖಿಸಿ ಪ್ರಶ್ನೆ ಕೇಳಿದರು. ಇದಕ್ಕೆ ಹಾಸ್ಯಭರಿತವಾಗಿಯೇ ಉತ್ತರಿಸಿದ ಯಶ್, ʻಕಾಂಡೋಮ್ ಜಾಹೀರಾತು ಮಾಡಬೇಕಾದ್ರೂ ಹಣ ತೆಗೆದುಕೊಂಡೇ ಮಾಡ್ತೇನೆ. ಉಚಿತವಾಗಿ ಮಾಡಲ್ಲʼ ಅಂತ ಹೇಳಿದ್ದಾರೆ.
‘ಟಾಕ್ಸಿಕ್’ಗೆ ‘A’ ಸರ್ಟಿಫಿಕೇಟ್
ಮುಂದುವರಿದು… ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್’ ಚಿತ್ರಕ್ಕೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ‘A’ ಸರ್ಟಿಫಿಕೇಟ್ ನೀಡಿದೆ. ಹೀಗಾಗಿ ಸಿನಿಮಾ ವಯಸ್ಕರಿಗಾಗಿ ಮಾತ್ರ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ. ಚಿತ್ರವು ಮಕ್ಕಳಿಗಾಗಿ ಮಾಡಿರುವ ಸಿನಿಮಾ ಅಲ್ಲ ಎಂದು ಯಶ್ ಹಲವು ಬಾರಿ ಸ್ಪಷ್ಟಪಡಿಸಿದ್ದಾರೆ. ಪ್ರೀತಿ, ಸಂಬಂಧಗಳು, ಮಹಿಳೆಯರ ಆಸೆಗಳು ಮತ್ತು ಇಂಟಿಮಸಿಯಂತಹ ಸೂಕ್ಷ್ಮ ವಿಷಯಗಳನ್ನ ವಯಸ್ಕರ ದೃಷ್ಟಿಕೋನದಿಂದ ಚಿತ್ರದಲ್ಲಿ ಪ್ರಸ್ತುತಪಡಿಸಲಾಗಿದೆ ಎಂಬುದು ಅವರ ನಿಲುವಾಗಿದೆ.
