– ಆ.18ರಂದು ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಹೋರಾಟ

ರಾಮನಗರ: ಪೊಲೀಸರಿಗೆ ಒತ್ತಡ ಹೇರಿ ಪಾದಯಾತ್ರೆಗೆ (JDS Padayatra) ಅಡ್ಡಿ ಮಾಡಲಾಗಿದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ್ಯ ನಿಖಿಲ್ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಬಿಡದಿ ಟೌನ್‌ಶಿಪ್ (Bidadi Township) ವಿರುದ್ಧ ಜೆಡಿಎಸ್ ಪಾದಯಾತ್ರೆಗೆ (JDS Padayatra) ಕಣಮಿಣಕಿ ಟೋಲ್ ಬಳಿ ಪೊಲೀಸರು ಬ್ಯಾರಿಕೇಡ್ ಹಾಕಿ ತಡೆದಿದ್ದಾರೆ. ಈ ವಿಚಾರಕ್ಕೆ ಅವರು ಪ್ರತಿಕ್ರಿಯಿಸಿ, ಪೊಲೀಸರಿಗೆ ಒತ್ತಡ ಹೇರಿ ಪಾದಯಾತ್ರೆಗೆ ಅಡ್ಡಿಪಡಿಸಲಾಗಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಇದೇ ವೇಳೆ ಪೊಲೀಸರ ಜೊತೆ ನಿಖಿಲ್ ಕುಮಾರಸ್ವಾಮಿ ವಾಗ್ವಾದ ಸಹ ನಡೆಸಿದ್ದಾರೆ.
ಕಳೆದ 515 ದಿನಗಳಿಂದ ರೈತರು ಹೋರಾಟ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ರೈತರ ಭೂಮಿ ಕಸಿಯಲು ಹಾತೊರೆಯುತ್ತಿದೆ. ಸಿಎಂ ಡಿ.ಕೆ ಶಿವಕುಮಾರ್ ಹಿಂದೆ ಇದೇ ಜಿಲ್ಲೆಯ ಜನರ ಬಳಿ ಪೆನ್ನು ಪೇಪರ್ ಕೇಳಿದ್ದರು. ಈ ರೈತರ ಭೂಮಿ ಕಿತ್ತುಕೊಳ್ಳೊದಕ್ಕೆ ಪೆನ್ನು, ಪೇಪರ್ ಬಳಸ್ತಿದ್ದಾರಾ? ಈ ಎಲ್ಲಾ ಘಟನೆಗೆ ಸ್ಥಳೀಯ ಶಾಸಕ ಹೆಚ್.ಸಿ.ಬಾಲಕೃಷ್ಣ ಕಾರಣ. ಡಿಕೆಶಿ ಸಿಎಂ ಆಗಿದ್ದಕ್ಕೆ ನಾವೇನು ಹೊಟ್ಟೆಕಿಚ್ಚು ಪಟ್ಟಿಲ್ಲ. ಒಳ್ಳೆಯ ಕೆಲಸ ಮಾಡಿ ಎಂದು ಹಾರೈಸಿದ್ದೇವೆ. ಆದರೆ ಸರ್ಕಾರ ಒಂದು ದಿನವೂ ಬಂದು ರೈತರ ಸಮಸ್ಯೆ ಆಲಿಸಿಲ್ಲ. ರೈತರ ಬಗ್ಗೆ ಸಚಿವ ಬಾಲಕೃಷ್ಣ ಸಂತೆ ಭಾಷಣ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಕೂಡಾ ಆಕ್ಟ್‌ನಲ್ಲಿ ಯಾಕೆ ಭೂಸ್ವಾಧೀನ ಮಾಡ್ತಿದ್ದೀರಿ? ಎಲ್ಲಾ ನಿಯಮಗಳ ಗಾಳಿಗೆ ತೂರಿ ಯೋಜನೆ ಮಾಡ್ತಿದ್ದೀರಿ. ದೇವೇಗೌಡರ ಕುಟುಂಬ ಯಾವಾಗಲೂ ರೈತರ ಪರವಾಗಿ ನಿಲ್ಲುತ್ತೆ. ಕಾನೂನು ಮೂಲಕವೂ ಟೌನ್‌ಶಿಪ್ ವಿರುದ್ಧ ಹೋರಾಟ ಮಾಡ್ತಿದ್ದೇವೆ. ಅನ್ನದಾತರ ರಕ್ಷಣೆಗೆ ಜೆಡಿಎಸ್ ಯಾವಾಗಲೂ ಸಿದ್ಧ. ನಾವೆಲ್ಲರೂ ರೈತರ ಮಕ್ಕಳು. ರೈತರಿಗೆ ಅನ್ಯಾಯ ಆಗ್ತಿರೋದಕ್ಕೆ ರಾಜ್ಯದ ಮೂಲೆಮೂಲೆಯಿಂದ ಜನ ಬಂದಿದ್ದಾರೆ. ಕಾಂಗ್ರೆಸ್‌ನವರೇ ಮಾಡಿದ್ದ ಸತ್ಯಶೋಧನಾ ಸಮಿತಿಯ ವರದಿಯನ್ನು ಕುಮಾರಸ್ವಾಮಿಯವರೇ ನಿನ್ನೆ (ಆ.9) ವಿಶ್ಲೇಷಣೆ ಮಾಡಿದ್ದಾರೆ. ಹಿಂದೆ ನೀವೆ ಆ ವರದಿಯಲ್ಲಿ ಏನು ಹೇಳಿದ್ದೀರಿ ಅವಲೋಕನ ಮಾಡಿಕೊಳ್ಳಿ ಎಂದಿದ್ದಾರೆ.
ಸಿಎಂ ರೈತರಿಗೆ ಈಗ ಮತ್ತೊಂದು ಆಫರ್ ಕೊಟ್ಟಿದ್ದಾರೆ. 2ಕೋಟಿ ಆಯ್ತು ಈಗ 3 ಕೋಟಿ ಕೊಡ್ತೀವಿ ಎನ್ನುತ್ತಿದ್ದಾರೆ. ನಿಮ್ಮ ಹಣಕ್ಕೆ ರೈತರು ಬಲಿಯಾಗಲ್ಲ, ಒಂದಿಂಚೂ ಭೂಮಿಯನ್ನೂ ನಿಮಗೆ ಕೊಡಲ್ಲ. ಸ್ವಾಭಿಮಾನಿ ರೈತರನ್ನ ಹಣದಲ್ಲಿ ಅಳೆಯ ಬೇಡಿ ಮುಖ್ಯಮಂತ್ರಿಗಳೇ ಎಂದಿದ್ದಾರೆ.
ಫ್ರೀಡಂ ಪಾರ್ಕ್‌ನಲ್ಲಿ ಆ.18 ರಂದು ಬೃಹತ್ ಸಮಾವೇಶ ಇದೆ. ವಿಧಾನಸಭೆ ಅಧಿವೇಶನದ ಸಂದರ್ಭದಲ್ಲಿ ವಿಧಾನಸೌದಕ್ಕೆ ಮುತ್ತಿಗೆ ಹಾಕಿ ಹೋರಾಟ ಮಾಡ್ತೀವಿ. ಕೂಡಲೇ ಯೋಜನೆ ಕೈಬಿಡಬೇಕು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕಿದೆ. ರೈತರ ಒಪ್ಪಿಗೆ ಪಡೆಯದೇ ಕದ್ದುಮುಚ್ಚಿ ಜೆಎಂಸಿ ಮಾಡಲು ಹೋಗಿದ್ದೀರಿ. ಇದನ್ನ ವಿರೋಧಿಸಿದ್ದಕ್ಕೆ ಮಹಿಳೆಯರ ಮೇಲೆ ಕೇಸ್ ಹಾಕಿದ್ದೀರಿ. ಈ ಬಗ್ಗೆ ದೊಡ್ಡಮಟ್ಟದ ಹೋರಾಟ ಮಾಡ್ತೀವಿ. ಆ.18 ರಂದು ದೇವೇಗೌಡರ ನೇತೃತ್ವದಲ್ಲಿ ಬೃಹತ್ ಹೋರಾಟ ನಡೆಯಲಿದೆ.
ನಾವು ಕಾನೂನನ್ನು ಕೈಗೆತ್ತಿಕೊಳ್ಳಲ್ಲ. ಶಾಂತಿಯುತವಾಗಿ ಇಲ್ಲಿ ಪ್ರತಿಭಟನೆ ಕೈಬಿಡಲಾಗಿದೆ. ಆ.18ರಂದು ಫ್ರೀಡಂ ಪಾರ್ಕ್‌ನಲ್ಲಿ ಹೋರಾಟ ಮುಂದುವರೆಯಲಿದೆ ಎಂದಿದ್ದಾರೆ.
