ಹಾಸನ: ಸಕಲೇಶಪುರದಲ್ಲಿ (Sakleshpura) ಮಳೆ (Rain) ಅಬ್ಬರಕ್ಕೆ ರೈಲು ಹಳಿ ಮೇಲೆ ಗುಡ್ಡ ಕುಸಿದಿದೆ. ಇದರಿಂದ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ. ರೈಲಿನಲ್ಲಿ ಕಾನ್ಸ್‌ಟೇಬಲ್ ಪರೀಕ್ಷೆಗೆ (Police Constable Exam) ತೆರಳುತ್ತಿದ್ದ ಪರೀಕ್ಷಾರ್ಥಿಗಳು ಪರದಾಡುತ್ತಿದ್ದಾರೆ. ಅಲ್ಲದೇ ನಡುರಾತ್ರಿ ಪ್ರಯಾಣಕ್ಕೆ ಪರ್ಯಾಯ ಮಾರ್ಗ ಹುಡುಕಲು ಪ್ರಯಾಣಿಕರು ಪರದಾಡಿದ್ದಾರೆ.
ಸಕಲೇಶಪುರದ ಯಡಕುಮಾರಿ – ಶಿರವಾಗಿಲು ಬಳಿ ರೈಲು ಹಳಿ ಮೇಲೆ ಗುಡ್ಡ ಕುಸಿದಿದೆ. ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ಎಲ್ಲಾ ರೈಲುಗಳ ಸಂಚಾರ ಬಂದ್ ಮಾಡಲಾಗಿದೆ. ಸುಬ್ರಮಣ್ಯ ರೈಲ್ವೆ ನಿಲ್ದಾಣದಲ್ಲಿ ರೈಲುಗಳನ್ನು ನಿಲ್ಲಿಸಲಾಗಿದೆ. ಘಟನಾ ಸ್ಥಳದಲ್ಲಿ ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದೆ. ಇದನ್ನೂ ಓದಿ: Karnataka Rain Live Updates |ಸಕಲೇಶಪುರದಲ್ಲಿ ಹಳಿ ಮೇಲೆ ಗುಡ್ಡ ಕುಸಿತ – ರೈಲು ಸಂಚಾರ ಸ್ಥಗಿತ

ರೈಲಿನಲ್ಲಿದ್ದ ಪರೀಕ್ಷಾರ್ಥಿಗಳು ಹಾಗೂ ಪ್ರಯಾಣಿಕರಿಗೆ ರೈಲ್ವೇ ಇಲಾಖೆ ಹಣ ಹಿಂದಿರುಗಿಸಿ ಬಸ್ ವ್ಯವಸ್ಥೆ ಕಲ್ಪಿಸುತ್ತಿದೆ. ರೈಲು ಬಂದ್‌ನಿಂದ ಬಸ್ ನಿಲ್ದಾಣ ಹಾಗೂ ರೈಲು ನಿಲ್ದಾಣದಲ್ಲಿ ನೂಕು ನುಗ್ಗಲು ಉಂಟಾಗಿದೆ.
ಯಾವೆಲ್ಲ ರೈಲುಗಳ ಸಂಚಾರ ಸ್ಥಗಿತ?
ಬೆಂಗಳೂರು-ಮುರಡೇಶ್ವರ, ಬೆಂಗಳೂರು-ಕೋಜಿಕೋಡ್, ವಿಜಯಪುರ-ಮಂಗಳೂರು ರೈಲುಗಳು ಹಾಸನದಲ್ಲಿ ನಿಲುಗಡೆ.
ಬೆಂಗಳೂರು-ಕಾರವಾರ ಎಕ್ಸ್‌ಪ್ರೆಸ್ ರೈಲು ಸಕಲೇಶಪುರದಲ್ಲಿ ನಿಲುಗಡೆ.
ಮುರಡೇಶ್ವರ-ಬೆಂಗಳೂರು, ಮಂಗಳೂರು-ವಿಜಯಪುರ ರೈಲುಗಳು ಸುಬ್ರಹ್ಮಣ್ಯದಲ್ಲಿ ನಿಲುಗಡೆ.
ಕೋಜಿಕೋಡ್ ಬೆಂಗಳೂರು ರೈಲು ಪುತ್ತೂರಿನಲ್ಲಿ ನಿಲುಗಡೆ. ಪ್ರಯಾಣಿಕರಿಗೆ ರೈಲು ರದ್ದತಿ ಬಗ್ಗೆ ಇಲಾಖೆಯಿಂದ ಮಾಹಿತಿ ನೀಡಲಾಗಿದೆ.
ಇಂದು (ಆ. 2) ಈ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ರೈಲುಗಳ ಸಂಚಾರ್ ಬಂದ್ ಮಾಡಲಾಗಿದೆ. ಇದನ್ನೂ ಓದಿ: ತೀರ್ಥಹಳ್ಳಿಯಲ್ಲಿ ಮನೆ ಮೇಲೆ ಗುಡ್ಡ ಕುಸಿತ – ಮಗು ಸೇರಿ ಒಂದೇ ಕುಟುಂಬದ ಮೂವರು ದುರ್ಮರಣ
