ನವದೆಹಲಿ: ಮೇಘಾಲಯ ಹನಿಮೂನ್ ಹತ್ಯೆ ಪ್ರಕರಣದ (Honeymoon Murder Case) ಪ್ರಮುಖ ಆರೋಪಿ ಸೋನಮ್ ರಘುವಂಶಿ (Sonam Raghuvanshi) ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ.
ವಿಚಾರಣಾ ನ್ಯಾಯಾಲಯ ಆರೋಪಿಗೆ ನೀಡಿದ್ದ ಜಾಮೀನು ಆದೇಶವನ್ನು ಮೇಘಾಲಯ ಹೈಕೋರ್ಟ್ ಎತ್ತಿಹಿಡಿದಿತ್ತು. ಈ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಎಂ. ಸುಂದ್ರೇಶ್ ಮತ್ತು ನ್ಯಾಯಮೂರ್ತಿ ಪಿ.ಬಿ. ವರಾಲೆ ಅವರನ್ನೊಳಗೊಂಡ ಪೀಠ ಜಾಮೀನು ರದ್ದುಗೊಳಿಸಿದೆ. ಪೊಲೀಸರ ಮುಂದೆ ಶರಣಾಗಲು ಆರೋಪಿಗೆ ಮೂರು ವಾರಗಳ ಕಾಲಾವಕಾಶ ನೀಡಲಾಗಿದೆ.

ಜಾಮೀನು ರದ್ದುಗೊಳಿಸುವಾಗ, ಸೋನಮ್ ವಿರುದ್ಧದ ಆರೋಪಗಳು ಸಾಕಷ್ಟು ಗಂಭೀರ ಸ್ವರೂಪದ್ದಾಗಿವೆ. ವಿಚಾರಣಾ ಪ್ರಕ್ರಿಯೆಗಳು ಪೂರ್ಣಗೊಳ್ಳದಿದ್ದರೆ ಆರು ತಿಂಗಳ ನಂತರ ಮತ್ತೆ ಜಾಮೀನಿಗೆ ಅರ್ಜಿ ಸಲ್ಲಿಸಬಹುದು ಎಂದು ಪೀಠ ಹೇಳಿದೆ. ಇದನ್ನೂ ಓದಿ: ನೀವು ಶರಣಾಗುವುದು ಸೂಕ್ತ – ಹನಿಮೂನ್ ಹಂತಕಿ ಸೋನಮ್‌ಗೆ ಸುಪ್ರೀಂ ಸಲಹೆ
ಏನಿದು ಪ್ರಕರಣ?
ಮಧ್ಯಪ್ರದೇಶದ ಇಂದೋರ್ ನಿವಾಸಿಯಾದ ಸೋನಂ ರಘುವಂಶಿಯನ್ನು ತನ್ನ ಪತಿ ರಾಜಾ ರಘುವಂಶಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಜೂನ್‌ನಲ್ಲಿ ಬಂಧಿಸಲಾಗಿತ್ತು. 2025ರ ಮೇ 23ರಂದು ಮೇಘಾಲಯದ ಸೋಹ್ರಾ ಪ್ರದೇಶಕ್ಕೆ ಹನಿಮೂನ್‌ಗೆ ಹೋಗಿದ್ದ ಈ ದಂಪತಿ ನಾಪತ್ತೆಯಾಗಿದ್ದರು. ತದನಂತರ ಜೂನ್ 2ರಂದು ರಾಜಾ ರಘುವಂಶಿ ಅವರ ಮೃತದೇಹ ಆಳವಾದ ಕಂದಕದಲ್ಲಿ ಪತ್ತೆಯಾಗಿತ್ತು. ಆರ್ಥಿಕ ಲಾಭಕ್ಕಾಗಿ ಸೋನಂ ಬಾಡಿಗೆ ಹಂತಕರೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು ಎಂದು ಮೇಘಾಲಯ ಪೊಲೀಸರು ಆರೋಪಿಸಿದ್ದಾರೆ. ಇದನ್ನೂ ಓದಿ:ನನ್ನ ಮಗಳು 100% ಮುಗ್ಧೆ – CBI ತನಿಖೆಗಾಗಿ ಅಮಿತ್ ಶಾಗೆ ಮನವಿ ಮಾಡ್ತೇನೆ: ಸೋನಮ್ ತಂದೆ
