ಮಡಿಕೇರಿ: ಮೈಸೂರು ದಸರಾ (Mysuru Dasara) ಹಗಲಿನಲ್ಲಿ ವೈಭವದಿಂದ ನಡೆದರೆ, ಮಂಜಿನ ನಗರಿ ಮಡಿಕೇರಿಯಲ್ಲಿ ರಾತ್ರಿ ದಸರಾ ನಡೆಯುವುದು ಇಲ್ಲಿನ ವಿಶಿಷ್ಟ ಸಂಪ್ರದಾಯ. ನವರಾತ್ರಿ ದಿನಗಳಲ್ಲಿ ನಾಲ್ಕು ಶಕ್ತಿ ದೇವತೆಗಳ ಕರಗ (Karaga) ಸಂಚಾರದೊಂದಿಗೆ ಆರಂಭವಾಗುವ ಮಡಿಕೇರಿ ದಸರಾ, ವಿಜಯದಶಮಿಯಂದು ನಡೆಯುವ ದಶಮಂಟಪಗಳ ಭವ್ಯ ರಾತ್ರಿ ಮೆರವಣಿಗೆಯೊಂದಿಗೆ ಮತ್ತಷ್ಟು ಕಳೆಗಟ್ಟುತ್ತದೆ. ಆದರೆ ಈ ಬಾರಿ ದಸರಾ ಆಚರಣೆಯ ದಿನಾಂಕ ನಿಗದಿ ವಿಚಾರದಲ್ಲಿ ಮತ್ತೊಮ್ಮೆ ಗೊಂದಲ ಉಂಟಾಗಿದೆ.
ಕರಗ ಉತ್ಸವ ಯಾವ ದಿನ ನಡೆಯಬೇಕು ಎಂಬ ವಿಚಾರದಲ್ಲಿ ಕರಗ ಹೊರುವ ಅರ್ಚಕರಲ್ಲೇ ಭಿನ್ನಾಭಿಪ್ರಾಯ ಮೂಡಿದ್ದು, ಸಮಸ್ಯೆ ಬಗೆಹರಿಸಲು ದೈವಪ್ರಶ್ನೆ (Daiva) ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಪೂಜೆಯ ದಿನವೇ ಅಧಿಕ ಮಾಸ ಬಂದಿರುವ ಹಿನ್ನೆಲೆಯಲ್ಲಿ ವಿಜಯದಶಮಿ ಆಚರಣೆಯ ದಿನಾಂಕ ನಿಗದಿ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗಿದೆ. ಕರಗ ಉತ್ಸವದ ದಿನಾಂಕ ನಿಗದಿ ಮಾಡುವಾಗ ಕರಗ ಹೊರುವ ಅರ್ಚಕರ ಅಭಿಪ್ರಾಯ ಪಡೆಯದೆ ದಸರಾ ಸಮಿತಿ ನಿರ್ಧಾರ ಕೈಗೊಂಡಿದೆ ಎಂಬುದು ಕೆಲ ಅರ್ಚಕರ ಆರೋಪ.
ಸಾಮಾನ್ಯವಾಗಿ ಕಂಚಿಕಾಮಾಕ್ಷಿ ದೇವಾಲಯದ ಆವರಣದಲ್ಲಿ 4 ಕರಗಗಳ ಅರ್ಚಕರು, ಕುಟುಂಬಸ್ಥರು ಹಾಗೂ ದಸರಾ ಸಮಿತಿ ಸದಸ್ಯರು ಸಭೆ ಸೇರಿ ಪಂಚಾಂಗದ ಆಧಾರದ ಮೇಲೆ ದಸರಾ ದಿನಾಂಕ ನಿಗದಿ ಮಾಡುತ್ತಿದ್ದರು. ಆದರೆ ಈ ಬಾರಿ ಅಂತಹ ಚರ್ಚೆ ನಡೆದಿಲ್ಲ ಎಂದು ಅರ್ಚಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಾರಿ ಅಕ್ಟೋಬರ್ 10ರಂದು ಮಹಾಲಯ ಅಮಾವಾಸ್ಯೆ, ಅಕ್ಟೋಬರ್ 12 ರಿಂದ ಕರಗ ಉತ್ಸವ ಆರಂಭವಾಗಲಿದ್ದು, ಅಕ್ಟೋಬರ್ 20ರಂದು ವಿಜಯದಶಮಿ ಬರುತ್ತದೆ. ಹೀಗಾಗಿ ಸಂಪ್ರದಾಯದಂತೆ ಕರಗ ಉತ್ಸವವನ್ನ ಅಕ್ಟೋಬರ್ 20ರಂದೇ ನಡೆಸಬೇಕು ಎಂಬುದು ಕರಗ ಹೊರುವ ಅರ್ಚಕರ ವಾದವಾಗಿದೆ. ಸಂಪ್ರದಾಯದಲ್ಲಿ ಬದಲಾವಣೆ ಮಾಡಿದರೆ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಹಲವು ಸಮಸ್ಯೆಗಳು ಎದುರಾಗಬಹುದು. ಆದ್ದರಿಂದ ಧಾರ್ಮಿಕ ಸಂಪ್ರದಾಯ ಹಾಗೂ ಪಂಚಾಂಗದ ಆಧಾರದ ಮೇಲೆ ದೈವಪ್ರಶ್ನೆ ಇಟ್ಟು ದಸರಾ ಆಚರಣೆಯ ದಿನಾಂಕವನ್ನ ಅಂತಿಮಗೊಳಿಸಬೇಕು ಎಂದು ಅರ್ಚಕರು ಒತ್ತಾಯಿಸಿದ್ದಾರೆ.

ಇನ್ನು ದಶಮಂಟಪ ಸಮಿತಿಯಲ್ಲೂ ದಸರಾ ಆಚರಣೆಯ ದಿನಾಂಕದ ಕುರಿತು ಎರಡು ಅಭಿಪ್ರಾಯಗಳು ವ್ಯಕ್ತವಾಗಿವೆ. ದಸರಾ ಯಾವ ದಿನ ನಡೆಯಬೇಕು, ದಶಮಂಟಪಗಳ ಶೋಭಾಯಾತ್ರೆ ಹಾಗೂ ಬನ್ನಿ ಕಡಿಯುವ ಕಾರ್ಯಕ್ರಮವನ್ನ ಯಾವ ದಿನ ನಡೆಸಬೇಕು ಎಂಬುದರ ಬಗ್ಗೆ ಭಿನ್ನಾಭಿಪ್ರಾಯವಿದೆ. ಒಂದು ಬಣದ ಪ್ರಕಾರ ಅಕ್ಟೋಬರ್ 21ರ ರಾತ್ರಿ ಮಡಿಕೇರಿ ದಸರಾ ನಡೆಯಬೇಕು. ಮೈಸೂರು ದಸರಾ ಜಂಬೂಸವಾರಿ ಅಕ್ಟೋಬರ್ 21ರಂದು ನಡೆಯಲಿದ್ದು, ಅದರ ಬಳಿಕ ಮಡಿಕೇರಿಯಲ್ಲಿ ರಾತ್ರಿ ದಸರಾ ಉತ್ಸವ ನಡೆಯುವುದು ವಾಡಿಕೆ ಎಂಬುದು ಈ ವಾದದ ಹಿಂದಿರುವ ಕಾರಣ.

ಮತ್ತೊಂದೆಡೆ, ಅಕ್ಟೋಬರ್ 20ರಂದು ವಿಜಯದಶಮಿ ಇರುವುದರಿಂದ ಅಂದೇ ದಸರಾ ಆಚರಣೆ ಹಾಗೂ ಮುಕ್ತಾಯವಾಗಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಈ ಹಿನ್ನೆಲೆ ಗೊಂದಲ ನಿವಾರಣೆಗೆ ದೇವತಾ ಪ್ರಶ್ನೆ ಇಡಬೇಕು ಎಂದು ಕರಗ ಹೊರುವ ಅರ್ಚಕರು ಹಾಗೂ ನಿತ್ಯ ಪೂಜೆ ಸಲ್ಲಿಸುವವರು ಮನವಿ ಮಾಡಿದ್ದಾರೆ. ಮಡಿಕೇರಿ ಕರವಲೆ ಭಗವತಿ ದೇವಾಲಯದ ಆಡಳಿತ ಮಂಡಳಿಗೂ ಮನವಿ ಸಲ್ಲಿಸಲಾಗಿದ್ದು, ಪಂಚಾಂಗ ಹಾಗೂ ಧಾರ್ಮಿಕ ಸಂಪ್ರದಾಯದ ಆಧಾರದ ಮೇಲೆ ದೈವಪ್ರಶ್ನೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ. ಎರಡೂ ಬಣಗಳ ಮನವಿಗಳನ್ನು ಸ್ವೀಕರಿಸಲಾಗಿದ್ದು, ಈ ಕುರಿತು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ದಶಮಂಟಪ ಸಮಿತಿ ತಿಳಿಸಿದೆ.

ಒಟ್ಟಿನಲ್ಲಿ ಮಡಿಕೇರಿ ದಸರಾ ಯಾವ ದಿನ ನಡೆಯಲಿದೆ? ಕರಗ ಉತ್ಸವ ಯಾವ ದಿನ ನಡೆಯಲಿದೆ? ಬನ್ನಿ ಕಡಿಯುವ ಸಂಪ್ರದಾಯ ಯಾವ ದಿನ ನೆರವೇರಲಿದೆ? ಎಂಬ ಪ್ರಶ್ನೆಗಳು ಇದೀಗ ಎದುರಾಗಿವೆ. ದಸರಾ ಉತ್ಸವಕ್ಕೆ ಕೆಲವೇ ವಾರಗಳು ಬಾಕಿ ಇರುವ ಸಂದರ್ಭದಲ್ಲಿ ದಿನಾಂಕದ ಗೊಂದಲ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಕರಗ ಹೊರುವ ಅರ್ಚಕರ ಒತ್ತಾಯದಂತೆ ದೈವಪ್ರಶ್ನೆ ನಡೆಸಲಾಗುತ್ತದೆಯೇ? ಅಥವಾ ಅಕ್ಟೋಬರ್ 20 ಅಥವಾ 21ರಂದು ದಸರಾ ಆಚರಿಸುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

