ರಾಯ್ಪುರ: ಮರಳು ಗಣಿಗಾರಿಕೆ (Sand Mining Dispute) ವಿಚಾರವಾಗಿ ಬಿಜೆಪಿ ನಾಯಕ (BJP Leader), ಮಾಜಿ ಜನಪದ ಪಂಚಾಯತ್ ಅಧ್ಯಕ್ಷ ಸೇರಿದಂತೆ ಮೂವರನ್ನು ಪೆಟ್ರೋಲ್ ಸುರಿದು ಕಾರಿನೊಳಗೆ ಸುಟ್ಟು ಹತ್ಯೆ ಮಾಡಿರುವ ಘಟನೆ ಛತ್ತೀಸ್‌ಗಢದ (Chhattisgarh) ಕೊರಿಯಾ ( Koriya) ಜಿಲ್ಲೆಯಲ್ಲಿ ನಡೆದಿದೆ.
ಮಂಗಳವಾರ ತಡರಾತ್ರಿ ಸೋನ್ಹಾಟ್ ಪೊಲೀಸ್ ಠಾಣೆ ವ್ಯಾಪ್ತಿಯ ನೌಗೈನ್ (Naugain) ಗ್ರಾಮದಲ್ಲಿ ಈ ಭೀಕರ ಕೃತ್ಯ ನಡೆದಿದೆ. ಮರಳು ಗಣಿ ವ್ಯವಹಾರಕ್ಕೆ ಸಂಬಂಧಿಸಿದ ವಿವಾದ ಬಗೆಹರಿಸಲು ತೆರಳಿದ್ದ ಬಿಜೆಪಿ ಮುಖಂಡ, ಮಾಜಿ ಜನಪದ ಪಂಚಾಯತ್ ಅಧ್ಯಕ್ಷ ಭರತ್ ಸಿಂಗ್ ಅಲಿಯಾಸ್ ಲಲ್ಲಾ ಸಿಂಗ್ ಮತ್ತು ಅವರ ಸಹಚರರನ್ನು ಪೂರ್ವಯೋಜಿತವಾಗಿ ಸಂಚು ರೂಪಿಸಿ ಹತ್ಯೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಹೆಂಡತಿ ಮೇಲಿನ ಅನುಮಾನಕ್ಕೆ ಮನೆ ತುಂಬಾ ಸಿಸಿಟಿವಿ ಅಳವಡಿಸಿದ್ದ ಡಾಕ್ಟರ್ – ಕಿರುಕುಳ ತಾಳಲಾರದೇ ಪತ್ನಿ ಆತ್ಮಹತ್ಯೆ
ಭರತ್ ಸಿಂಗ್ ಪ್ರಯಾಣಿಸುತ್ತಿದ್ದ ಫಾರ್ಚುನರ್ ಕಾರನ್ನು ಟ್ರಕ್‌ಗಳ ಮೂಲಕ ಮುಂದೆ ಮತ್ತು ಹಿಂದೆ ಸುತ್ತುವರಿದು ದಾರಿಗಳನ್ನು ಬಂದ್ ಮಾಡಲಾಗಿತ್ತು. ಬಳಿಕ ವಾಹನದ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಕಿಯ ಕೆನ್ನಾಲಿಗೆಯಲ್ಲಿ ಸಿಲುಕಿ ಭರತ್ ಸಿಂಗ್ ಕಾರಿನೊಳಗೆ ಸಜೀವ ದಹನಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ವೀರೇಂದ್ರ ಸಿಂಗ್ ಚಿಕಿತ್ಸೆ ವೇಳೆ ಮೃತಪಟ್ಟರೆ, ಶಿಕ್ಷಕರಾಗಿದ್ದ ನಾಗೇಂದ್ರ ಸಿಂಗ್ ಕೂಡ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಗಾಯಗೊಂಡಿರುವ ಮಯಾಂಕ್ ಸಿಂಗ್ ಬಿಲಾಸ್ಪುರದ ಅಪೋಲೊ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ತಲೆ ಮತ್ತು ಮುಖಕ್ಕೆ ಗಂಭೀರ ಗಾಯಗಳಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಮರಳು ಗಣಿಗಾರಿಕೆ ಹಾಗೂ ಅಕ್ರಮ ವಸೂಲಾತಿ ವಿಚಾರವಾಗಿ ಭರತ್ ಸಿಂಗ್ ಬಣ ಮತ್ತು ಮನೋಜ್ ತ್ರಿಪಾಠಿ ಕುಟುಂಬದ ನಡುವೆ ಹಲವು ತಿಂಗಳುಗಳಿಂದ ತೀವ್ರ ವೈಮನಸ್ಸು ಇತ್ತು ಎಂಬುದು ಬೆಳಕಿಗೆ ಬಂದಿದೆ. ಇದೇ ವೈಷಮ್ಯ ಹತ್ಯೆಗೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ. ಇದನ್ನೂ ಓದಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ನೊಂದಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಷತ್ ತ್ರಿಪಾಠಿ, ವಿಶಾಲ್ ತ್ರಿಪಾಠಿ, ಸತ್ಯಪ್ರಕಾಶ್ ತ್ರಿಪಾಠಿ ಹಾಗೂ ಮನ್ನು ತ್ರಿಪಾಠಿ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೂ ಹಲವು ಆರೋಪಿಗಳು ತಲೆಮರೆಸಿಕೊಂಡಿದ್ದು, ಶೋಧ ಕಾರ್ಯ ಮುಂದುವರಿದಿದೆ.
ಒಟ್ಟು ಒಂಬತ್ತು ಮಂದಿಯ ವಿರುದ್ಧ ಕೊಲೆ, ಕೊಲೆ ಯತ್ನ ಸೇರಿದಂತೆ ವಿವಿಧ ಗಂಭೀರ ಆರೋಪಗಳಡಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಪತ್ತೆಹಚ್ಚಲು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ.
ಮೃತ ಭರತ್ ಸಿಂಗ್ ಅವರು ಸ್ಥಳೀಯವಾಗಿ ಪ್ರಭಾವಿ ರಾಜಕೀಯ ಮುಖಂಡರಾಗಿದ್ದರು. ಮರಳು ಗಣಿ ವ್ಯವಹಾರದಲ್ಲಿ ಪ್ರಭಾವ ಹೊಂದಿದ್ದ ಅವರು ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿದ್ದು, ಬಳಿಕ ಬಿಜೆಪಿ ಸೇರಿದ್ದರು. ಘಟನೆ ಬಳಿಕ ಕೊರಿಯಾ ಜಿಲ್ಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಭಾರೀ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.
ಮೃತರ ಕುಟುಂಬಸ್ಥರು ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿದ್ದು, ಇದು ಆಕಸ್ಮಿಕ ಘಟನೆ ಅಲ್ಲ, ಪೂರ್ವಯೋಜಿತ ಸಂಚು ಎಂದು ಆರೋಪಿಸಿದ್ದಾರೆ.
ಇತ್ತ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಘಟನೆ ಕುರಿತು ಪ್ರತಿಕ್ರಿಯಿಸಿ, ತಪ್ಪಿತಸ್ಥರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ. ಇದನ್ನೂ ಓದಿ: ಕಾಂಗ್ರೆಸ್ ಅಭ್ಯರ್ಥಿ ಪರ ನಾನು ಮತ ಹಾಕಿದ್ದೇನೆ: ಎಸ್.ಟಿ ಸೋಮಶೇಖರ್
