– ಮ್ಯಾಗ್ನಸ್ ಕಾರ್ಲ್ಸನ್‌ಗೆ ಡಬಲ್ ಶಾಕ್
ನವದೆಹಲಿ: ಭಾರತದ ಯುವ ಚೆಸ್ ಗ್ರ್ಯಾಂಡ್‌ಮಾಸ್ಟರ್ ಪ್ರಜ್ಞಾನಂದ ನಾರ್ವೆ ಚೆಸ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ವಿಶ್ವದ ಪ್ರತಿಷ್ಠಿತ ಚೆಸ್ ಟೂರ್ನಿಗಳಲ್ಲಿ ಒಂದಾದ ಈ ಸ್ಪರ್ಧೆಯಲ್ಲಿ 18 ಅಂಕಗಳೊಂದಿಗೆ ಪ್ರಶಸ್ತಿ ಗೆದ್ದಿರುವ ಪ್ರಜ್ಞಾನಂದ, ವಿಶ್ವ ನಂ.1 ಆಟಗಾರ ಮ್ಯಾಗ್ನಸ್ ಕಾರ್ಲ್ಸನ್ ಅವರನ್ನು ಎರಡು ಬಾರಿ ಮಣಿಸಿ ಗಮನ ಸೆಳೆದಿದ್ದಾರೆ.
ತಮ್ಮ ಸಾಧನೆ ಕುರಿತು ಮಾತನಾಡಿರುವ ಪ್ರಜ್ಞಾನಂದ, ಮ್ಯಾಗ್ನಸ್ ಕಾರ್ಲ್ಸನ್ ಅವರನ್ನು ಸೋಲಿಸುವುದು ಯಾವಾಗಲೂ ವಿಶೇಷ. ಅವರು ಆಡುತ್ತಿರುವ ಟೂರ್ನಿಯನ್ನೇ ಗೆಲ್ಲಬೇಕು ಎಂಬುದು ನನ್ನ ಕನಸಾಗಿತ್ತು. ಈ ಗೆಲುವು ನನಗೆ ದೊಡ್ಡ ಆತ್ಮವಿಶ್ವಾಸ ನೀಡಿದೆ. ನಾರ್ವೆ ಚೆಸ್ ಪ್ರಶಸ್ತಿ ನನ್ನ ವೃತ್ತಿಜೀವನದ ಮಹತ್ವದ ಮೈಲಿಗಲ್ಲು ಎಂದು ಹೇಳಿದ್ದಾರೆ.
ಟೂರ್ನಿಗಾಗಿ ಯಾವುದೇ ವಿಶೇಷ ತಯಾರಿ ಮಾಡಿರಲಿಲ್ಲ ಎಂದು ಹೇಳಿರುವ ಅವರು, ತಮ್ಮ ಕೋಚ್‌ಗಳು ಮತ್ತು ತಂಡದ ಸದಸ್ಯರು ಎದುರಾಳಿಗಳ ಬಗ್ಗೆ ಸೂಕ್ಷ್ಮವಾಗಿ ಅಧ್ಯಯನ ನಡೆಸಿದ್ದರು ಎಂದು ತಿಳಿಸಿದ್ದಾರೆ.
ಸಂದರ್ಶನದ ವೇಳೆ ಕೋಚ್ ವೈಭವ್ ಸೂರಿ ಕುರಿತು ಮಾತನಾಡಿದ ಪ್ರಜ್ಞಾನಂದ, ಗೂಗಲ್‌ನಲ್ಲಿ ವೈಭವ್ ಸೂರಿ ಎಂದು ಹುಡುಕಿದರೆ ವೈಭವ್ ಸೂರ್ಯವಂಶಿ ಹೆಸರು ಕಾಣಿಸುತ್ತದೆ” ಎಂದು ನಗುತ್ತಾ ಹೇಳಿದರು. ಇದೇ ವೇಳೆ ಭಾರತೀಯ ಕ್ರಿಕೆಟಿಗ ವೈಭವ್ ಸೂರ್ಯವಂಶಿಯ ಆಟವನ್ನು ಮೆಚ್ಚಿದ ಅವರು, ಐಪಿಎಲ್‌ನಲ್ಲಿ ಅವರ ಮೊದಲ ಪಂದ್ಯ ನೋಡಿದ್ದೆ. ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿದ್ದು ಅದ್ಭುತವಾಗಿತ್ತು. ಅವರು ಆತ್ಮವಿಶ್ವಾಸದಿಂದ ಆಡುತ್ತಾರೆ ಎಂದು ಹೇಳುವ ಮೂಲಕ ಯುವ ಆಟಗಾರ ವೈಭವ್ ಸೂರ್ಯವಂಶಿಯನ್ನು ಹಾಡಿ ಹೊಗಳಿದ್ದಾರೆ. ಇದನ್ನೂ ಓದಿ:ಅವನಿನ್ನೂ ಬಾಲಕ – ಟೀಂ ಇಂಡಿಯಾಕ್ಕೆ ಆಯ್ಕೆಯಾದ ವೈಭವ್‌ಗೆ ವಿಶೇಷ ರಿಯಾಯ್ತಿ ಕೊಟ್ಟ ಬಿಸಿಸಿಐ
ತಮ್ಮ ಯಶಸ್ಸಿನ ಹಿಂದೆ ಕುಟುಂಬದ ಪಾತ್ರ ದೊಡ್ಡದಿದೆ ಎಂದು ಹೇಳಿದ ಪ್ರಜ್ಞಾನಂದ, ಪೋಷಕರು, ಸಹೋದರಿ ಹಾಗೂ ಗ್ರ್ಯಾಂಡ್‌ಮಾಸ್ಟರ್ ವೈಶಾಲಿ, ಕೋಚ್‌ಗಳು ಮತ್ತು ಸ್ನೇಹಿತರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಇದೇ ವೇಳೆ ಉದ್ಯಮಿ ಗೌತಮ್ ಅದಾನಿ ಅವರಿಗೂ ವಿಶೇಷ ಧನ್ಯವಾದ ತಿಳಿಸಿದ ಅವರು, ಅದಾನಿ ಕುಟುಂಬ ನನ್ನ ಕುಟುಂಬದಂತೆಯೇ ಬೆಂಬಲ ನೀಡಿದೆ. ಯಾವುದೇ ಒತ್ತಡವಿಲ್ಲದೆ ಸದಾ ನನ್ನ ಜೊತೆ ನಿಂತಿದೆ ಎಂದು ಹೇಳಿದ್ದಾರೆ.
ಭಾರತದ ಚೆಸ್ ಕ್ಷೇತ್ರದ ಬೆಳವಣಿಗೆ ಕುರಿತು ಮಾತನಾಡಿದ ಪ್ರಜ್ಞಾನಂದ, ಇದು ಭಾರತದ ಗೋಲ್ಡನ್ ಜನರೇಷನ್. ಡಿ. ಗುಕೇಶ್, ವೈಶಾಲಿ, ದಿವ್ಯಾ ದೇಶ್ಮುಖ್ ಸೇರಿದಂತೆ ಹಲವು ಭಾರತೀಯ ಆಟಗಾರರು ವಿಶ್ವಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇದು ಭಾರತೀಯ ಚೆಸ್‌ಗೆ ಹೆಮ್ಮೆಯ ವಿಷಯ ಎಂದು ಹೇಳಿದ್ದಾರೆ. ಇದನ್ನೂ ಓದಿ: ಶ್ರೇಯಸ್ ಅಯ್ಯರ್ ನಾಯಕನಾಗಿ ಅಯ್ಕೆಯಾಗಿರುವುದು ಸಂತಸ ತಂದಿದೆ – ಸೂರ್ಯಕುಮಾರ್ ಯಾದವ್
ಪ್ರಶಸ್ತಿ ಗೆದ್ದ ಬಳಿಕ ಸಂಭ್ರಮದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಇನ್ನೂ ಸರಿಯಾಗಿ ನಿದ್ರೆ ಮಾಡಿಲ್ಲ. ಅಭಿಮಾನಿಗಳ ನಡುವೆ ಬ್ಯುಸಿಯಾಗಿದ್ದೇನೆ. ಈಗ ಮನೆಗೆ ಹೋಗಿ ಚೆನ್ನಾಗಿ ನಿದ್ರೆ ಮಾಡಬೇಕು. ನಂತರ ಸಂಭ್ರಮಿಸುತ್ತೇನೆ ಎಂದು ಹಾಸ್ಯಮಿಶ್ರಿತವಾಗಿ ಪ್ರತಿಕ್ರಿಯಿಸಿದ್ದಾರೆ.
