– ಶ್ರೇಯಸ್ ಅಯ್ಯರ್‌ಗೆ ಬಲೆ ಬೀಸಿದ್ಯಾ ಫ್ರಾಂಚೈಸಿ?
ಮುಂಬೈ: ಐಪಿಎಲ್ 2026ರಲ್ಲಿ ಕಳಪೆ ಪ್ರದರ್ಶನ ನೀಡಿದ ಮುಂಬೈ ಇಂಡಿಯನ್ಸ್ (Mumbai Indians) ತಂಡದಲ್ಲಿ ಇದೀಗ ದೊಡ್ಡ ಬದಲಾವಣೆಗಳ ಚರ್ಚೆ ಶುರುವಾಗಿದೆ. ತಂಡದ ನಾಯಕ ಹಾರ್ದಿಕ್ ಪಾಂಡ್ಯರನ್ನು (Hardik Pandya) ಕ್ಯಾಪ್ಟನ್ ಸ್ಥಾನದಿಂದ ಕೆಳಗಿಳಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಈ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವು 14 ಪಂದ್ಯಗಳಲ್ಲಿ ಕೇವಲ 4 ಗೆಲುವು ಮಾತ್ರ ದಾಖಲಿಸಿತ್ತು. ತಂಡದ ಈ ಹೀನಾಯ ಪ್ರದರ್ಶದ ಬಳಿಕ ಮ್ಯಾನೇಜ್‌ಮೆಂಟ್ ಹೊಸ ನಾಯಕನ ಹುಡುಕಾಟದಲ್ಲಿದೆ. ಅದರಲ್ಲೂ ನಂ.3 ಬ್ಯಾಟರ್ ನಾಯಕನಾಗಿ ಬಂದ್ರೆ ಬಲಿಷ್ಠ ಮುಂಬೈಗೆ ಹೆಚ್ಚು ಅನುಕೂಲ ಅನ್ನೂ ಚರ್ಚೆಯೂ ಆಡಳಿತ ಮಂಡಳಿಯಲ್ಲಿ ನಡೆದಿದೆ.

ತಂಡದ ಮುಂದಿನ ಕ್ಯಾಪ್ಟನ್ ಆಯ್ಕೆ ಮಾಡುವಲ್ಲಿ ರೋಹಿತ್ ಶರ್ಮಾ ಪ್ರಮುಖ ಪಾತ್ರ ವಹಿಸಲಿದ್ದಾರೆ. ಮುಂದಿನ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ (Rohit Sharma) ಅವರ ಬೆಂಬಲ ಪಡೆದವರೇ ಆಗಿರುತ್ತಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ರೋಹಿತ್ ಶರ್ಮಾ ಮತ್ತೆ ಕ್ಯಾಪ್ಟನ್ ಆಗುವುದಿಲ್ಲ ಎನ್ನುವುದು ಬಹುತೇಕ ಖಚಿತವಾಗಿದೆ. ಹಾರ್ದಿಕ್‌ರನ್ನು ನಾಯಕನನ್ನಾಗಿ ಮಾಡಿದ್ದ ನಿರ್ಧಾರದಿಂದ ಆಗಿದ್ದ ವಿವಾದ ಮತ್ತು ಅಭಿಮಾನಿಗಳ ಆಕ್ರೋಶವನ್ನು ಮ್ಯಾನೇಜ್‌ಮೆಂಟ್ ಈಗ ಅರ್ಥ ಮಾಡಿಕೊಂಡಿದೆ.
ಇನ್ನೊಂದೆಡೆ, ಹಾರ್ದಿಕ್ ಪಾಂಡ್ಯ ಕೂಡ ಮುಂಬೈ ಇಂಡಿಯನ್ಸ್ ತಂಡ ತೊರೆಯಲು ಯೋಚಿಸುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ತಂಡದ ಮ್ಯಾನೇಜ್‌ಮೆಂಟ್ ಜೊತೆಗಿನ ಸಂಬಂಧ ಹದಗೆಟ್ಟಿರುವುದರಿಂದ ಅವರು ಬದಲಾವಣೆ ಕೇಳುವ ಸಾಧ್ಯತೆ ಇದೆ. ಇದು ಕೇವಲ ನಾಯಕತ್ವ ಬದಲಾವಣೆ ವಿಚಾರಕ್ಕಷ್ಟೇ ಅಲ್ಲ. ಮ್ಯಾನೇಜ್‌ಮೆಂಟ್ ಜೊತೆ ಇದ್ದ ಉತ್ತಮ ಸಂಬಂಧವನ್ನು ಕಳೆದುಕೊಂಡಿರುವುದರಿಂದ ಹಾರ್ದಿಕ್ ಈ ನಿರ್ಧಾರ ತೆಗೆದುಕೊಳ್ಳಬಹುದು ಎಂಬ ಮಾತು ಕ್ರಿಕೆಟ್ ವಲಯದಲ್ಲಿ ಹರಿದಾಡುತ್ತಿದೆ.

ಅಯ್ಯರ್‌ಗೆ ಬಲೆ ಬೀಸಿದ ಮುಂಬೈ?
ಮತ್ತೊಂದು ಕಡೆ ನಾಯಕ ಶ್ರೇಯಸ್ ಅಯ್ಯರ್ ಕೂಡ ಪಂಜಾಬ್ ಕಿಂಗ್ಸ್ ತಂಡವನ್ನ ತೊರೆಯುವ ಯೋಜನೆಯಲ್ಲಿದ್ದಾರೆ ಎನ್ನಲಾಗಿದೆ. ಏಕೆಂದ್ರೆ 19ನೇ ಆವೃತ್ತಿಯ ಐಪಿಎಲ್‌ನಲ್ಲಿ ಆರಂಭಿಕ 6 ಪಂದ್ಯಗಳಲ್ಲಿ ಸತತ ಗೆಲುವು ಸಾಧಿಸಿದ್ರೂ, ಪ್ಲೇ ರೇಸ್‌ನಿಂದ ಹೊರಬಿದ್ದಿದ್ದು, ಮ್ಯಾನೇಜ್ಮೆಂಟ್ ವಯಲಯದಲ್ಲಿ ಭಾರೀ ಅಸಮಾಧಾನ ಮೂಡಿಸಿದೆ. ಹೀಗಾಗಿ ಫ್ರಾಂಚೈಸಿ ಅಯ್ಯರ್ ಅವರನ್ನ ಕೈಬಿಡುವ ನಿರೀಕ್ಷೆಯಲ್ಲಿದೆ. ಒಂದು ವೇಳೆ ಅಯ್ಯರ್ ಪಂಜಾಬ್‌ನಿಂದ ಹೊರಬಂದ್ರೆ ಮುಂಬೈಗೆ ಕರೆಸಿಕೊಳ್ಳಲು ಪ್ಲ್ಯಾನ್ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
