ನವದೆಹಲಿ: ಕರ್ನಾಟಕದ 8 ಮಂದಿ ಸೇರಿ 66 ಸಾಧಕರಿಗೆ ರಾಷ್ಟ್ರಪತಿ ಭವನದಲ್ಲಿ 2026 ಸಾಲಿನ ಪದ್ಮ ಪ್ರಶಸ್ತಿಗಳನ್ನು (Padma Awards 2026) ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಪ್ರದಾನ ಮಾಡಿದರು.
ಮೊದಲ ಹಂತದಲ್ಲಿ ಇವತ್ತು 2 ಪದ್ಮವಿಭೂಷಣ, 6 ಪದ್ಮಭೂಷಣ ಹಾಗೂ 58 ಪದ್ಮಶ್ರೀ ಪ್ರಶಸ್ತಿ ನೀಡಲಾಯಿತು. ದಿವಂಗತ ನಟ ಧರ್ಮೇಂದ್ರಗೆ (Dharmendra) ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದ್ದು, ಪತ್ನಿ ಹೇಮಾ ಮಾಲಿನಿ (Hema Malini) ಸ್ವೀಕರಿಸಿದರು. ಕಲಾ ವಿಭಾಗದಲ್ಲಿ ಶತಾವಧಾನಿ ಆರ್. ಗಣೇಶ್ (R.Ganesh) ಅವರಿಗೆ ಪದ್ಮಭೂಷಣ ಪ್ರಶಸ್ತಿ ಕೊಡಲಾಯಿತು. ಮಂಡ್ಯದ ಪುಸ್ತಕ ಪ್ರೇಮಿ ಅಂಕೇಗೌಡ, ಸಮಾಜ ಸೇವೆಯಲ್ಲಿ ಎಸ್‌ಜಿ ಸುಶೀಲಮ್ಮ ಅವರಿಗೆ ಪದ್ಮಶ್ರೀ ಪ್ರದಾನ ಮಾಡಲಾಯಿತು. ಇದನ್ನೂ ಓದಿ: ನಟ ಧರ್ಮೇಂದ್ರಗೆ ಮರಣೋತ್ತರ ಪದ್ಮವಿಭೂಷಣ – ಪ್ರಶಸ್ತಿ ಸ್ವೀಕರಿಸಿದ ಪತ್ನಿ ಹೇಮಾ ಮಾಲಿನಿ
ಉಳಿದವರಿಗೆ 2ನೇ ಹಂತದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕರ್ನಾಟಕದ ಸಾಹಿತ್ಯ & ಶಿಕ್ಷಣದಲ್ಲಿ ಶಶಿಶೇಖರ್ ವೇಂಪತಿ, ವಿಜ್ಞಾನ & ಎಂಜಿನಿಯರಿಂಗ್‌ನಲ್ಲಿ ಶುಭಾ ವೆಂಕಟೇಶ್ ಐಯ್ಯಂಗಾರ್, ಮೆಡಿಸಿನ್ ಕ್ಷೇತ್ರದಲ್ಲಿ ಡಾ.ಸುರೇಶ್ ಹನಗವಾಡಿ ಸಿಕ್ಕಿದ್ದು, ವಾಣಿಜ್ಯ & ಕೈಗಾರಿಕೆಯಲ್ಲಿ ಟಿಟಿ ಜಗನ್ನಾಥನ್ ಅವರಿಗೆ ಮರಣೋತ್ತರವಾಗಿ ಗೌರವ ಕೊಡಲಾಗಿದೆ.
ಅಂಕೇಗೌಡ
ಮಂಡ್ಯದ ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದವರಾದ ಅಂಕೇಗೌಡ (Anke Gowda) ಅವರು ಒಬ್ಬ ಖ್ಯಾತ ಪುಸ್ತಕ ಪ್ರೇಮಿ, ಸಮಾಜ ಸೇವಕರು ಮತ್ತು ಜ್ಞಾನ ದಾಸೋಹಿ. ಲಕ್ಷಾಂತರ ಪುಸ್ತಕಗಳನ್ನು ಸಂಗ್ರಹಿಸಿ ‘ಪುಸ್ತಕ ಮನೆ’ಯನ್ನು ನಿರ್ಮಿಸಿರುವ ಇವರ ಸಾಧನೆಯನ್ನು ಗುರುತಿಸಿ ಭಾರತ ಸರ್ಕಾರವು 2026ರಲ್ಲಿ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಪದ್ಮಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಸುಶೀಲಮ್ಮ
ಡಾ. ಎಸ್.ಜಿ. ಸುಶೀಲಮ್ಮ (Susheelamma) ಅವರು ಬೆಂಗಳೂರಿನ ಪ್ರಸಿದ್ಧ ಸಮಾಜ ಸೇವಕಿ ಹಾಗೂ ‘ಸುಮಂಗಲಿ ಸೇವಾ ಆಶ್ರಮ’ದ ಸಂಸ್ಥಾಪಕರು. ನೊಂದ ಮಹಿಳೆಯರ ಸಬಲೀಕರಣ, ಶಿಶು ಸಂರಕ್ಷಣೆ ಮತ್ತು ಬಡವರಿಗೆ ಸ್ವಯಂ ಉದ್ಯೋಗ ತರಬೇತಿ ನೀಡುವ ಮೂಲಕ ಸಲ್ಲಿಸಿದ ಗಣನೀಯ ಸೇವೆಗಾಗಿ ಇವರನ್ನು ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ನೀಡಿ ಗೌರವಿಸಲಾಗಿದೆ. ಇದನ್ನೂ ಓದಿ: Padma Awards: 66 ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ಶತಾವಧಾನಿ ಆರ್.ಗಣೇಶ್
ಗಣೇಶ್ ಅವಧಾನ ಕಲೆಯ ಅಭ್ಯಸಕರು, ಬಹುಭಾಷಾ ಪಂಡಿತರು, ಸಂಸ್ಕೃತ ಮತ್ತು ಕನ್ನಡ ಲೇಖಕರು ಮತ್ತು ಬಹು ಭಾಷೆಗಳಲ್ಲಿ ಅಪೂರ್ವ ಕವಿ. ಅವರು ಕನ್ನಡ, ಸಂಸ್ಕೃತ, ತೆಲುಗು ಮತ್ತು ಪ್ರಾಕೃತ ಭಾಷೆಗಳಲ್ಲಿ 1300 ಕ್ಕೂ ಹೆಚ್ಚು ಅವಧಾನಗಳನ್ನು ಪ್ರದರ್ಶಿಸಿದ್ದಾರೆ. ಕಲಾ ವಿಭಾಗದಲ್ಲಿ ಅಪೂರ್ವ ಸಾಧನೆ ಸಲ್ಲಿಸಿರುವ ಶತಾವಧಾನಿ ಆರ್. ಗಣೇಶ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಲಭಿಸಿದೆ.
