ಮಧ್ಯಪ್ರಾಚ್ಯ ಯುದ್ಧ ಭಾರತ (India) ಸೇರಿದಂತೆ ಹಲವು ರಾಷ್ಟ್ರಗಳನ್ನು ಸಂಕಷ್ಟಕ್ಕೆ ದೂಡಿದೆ. ಈ ಹೊತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ದೇಶವಾಸಿಗಳಿಗೆ ಹಲವು ಸಲಹೆಗಳನ್ನು ನೀಡಿದ್ದಾರೆ. ವಿದೇಶಿ ವಿನಿಮಯ ಸಂಗ್ರಹವನ್ನು ಉಳಿಸುವ ಉದ್ದೇಶದಿಂದ ಮಿತವ್ಯಯದ ವಿವಿಧ ಕ್ರಮಗಳನ್ನು ಅನುಸರಿಸುವಂತೆ ಭಾರತೀಯರಿಗೆ ಕರೆ ನೀಡಿದ್ದಾರೆ. ಪೆಟ್ರೋಲ್, ಡೀಸೆಲ್ ಬಳಕೆ ಕಡಿಮೆ ಮಾಡುವಂತೆ ತಿಳಿಸಿದ್ದಾರೆ. ಅದರಲ್ಲೂ ಮುಖ್ಯವಾಗಿ ಭಾರತೀಯರ ಜೊತೆ ಸಾಂಸ್ಕೃತಿಕ, ಐತಿಹಾಸಿಕ ಮತ್ತು ಸಾಂಪ್ರದಾಯಿಕ ಮತ್ತು ಭಾವನಾತ್ಮಕ ನಂಟು ಹೊಂದಿರುವ ಚಿನ್ನ ಖರೀದಿಯನ್ನು ಒಂದು ವರ್ಷದವರೆಗೆ ತಾತ್ಕಾಲಿಕವಾಗಿ ನಿಲ್ಲಿಸುವಂತೆ ಮೋದಿ ಮನವಿ ಮಾಡಿಕೊಂಡಿದ್ದಾರೆ. ದೇಶವು ಅನಿವಾರ್ಯವಲ್ಲದ ಆಮದುಗಳನ್ನು ಕಡಿಮೆ ಮಾಡಬೇಕಿದೆ. ಸಂದಿಗ್ಧ ಸನ್ನಿವೇಶದಲ್ಲಿ ದೇಶದ ಆರ್ಥಿಕತೆಯನ್ನು ಬಲಪಡಿಸುವತ್ತ ಗಮನಹರಿಸಬೇಕು ಎಂದು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರ ಆ ಒಂದು ಹೇಳಿಕೆಯಿಂದ ಈಗ ಎಲ್ಲರ ಗಮನ ಚಿನ್ನದ (Gold) ಕಡೆ ನೆಟ್ಟಿದೆ. ಚಿನ್ನಕ್ಕೂ ಭಾರತಕ್ಕೂ ಇರುವ ನಂಟೇನು? ಒಂದು ವರ್ಷ ಯಾಕೆ ಚಿನ್ನ ಖರೀದಿಸಬಾರದು? ಬಂಗಾರಕ್ಕೆ ಭಾರತ ಎಷ್ಟು ಪ್ರಾಮುಖ್ಯತೆ ಕೊಡುತ್ತದೆ? ಹಳದಿ ಲೋಹ ಸಂಗ್ರಹಕ್ಕೆ ಮಿತಿ ಏನಾದರು ಇದೆಯೇ ಎಂಬಿತ್ಯಾದಿ ಪ್ರಶ್ನೆಗಳಿಗೆ ವಿವರ ಇಲ್ಲಿದೆ.
ಭಾರತ ಮತ್ತು ಚಿನ್ನ
ವಿಶೇಷವಾಗಿ ಮನೆಗಳಿಗೆ ಚಿನ್ನವು ಹೆಚ್ಚು ಆದ್ಯತೆಯ ಹೂಡಿಕೆ ಮತ್ತು ಉಳಿತಾಯ ಆಯ್ಕೆಗಳಲ್ಲಿ ಒಂದಾಗಿದೆ. ಹಳದಿ ಲೋಹ ಸುರಕ್ಷಿತ ಸ್ವರ್ಗದ ಆಸ್ತಿಯಾಗಿ ಮತ್ತು ಮಾರುಕಟ್ಟೆಯ ಏರಿಳಿತ, ಹಣದುಬ್ಬರ ಮತ್ತು ಆರ್ಥಿಕ ಅನಿಶ್ಚಿತತೆಯ ವಿರುದ್ಧ ರಕ್ಷಣೆಯಾಗಿ ಉಳಿದಿದೆ. ಹೀಗಾಗಿ, ಪ್ರಧಾನ ಮಂತ್ರಿಯವರ ಕರೆ ಮಹತ್ವದ್ದಾಗಿದೆ. ಮದುವೆ ಹಾಗೂ ಇನ್ನಿತರ ಶುಭಕಾರ್ಯಗಳಿಗೆ ಚಿನ್ನ ಬೇಕು. ಅಕ್ಷಯ ತೃತೀಯ, ದೀಪಾವಳಿಯಂತಹ ಸಂದರ್ಭಗಳಲ್ಲಿ ಜನರ ಆಸಕ್ತಿ ಬಂಗಾರದ ಕಡೆಗೆ ಇರುತ್ತದೆ. ಕಷ್ಟಕಾಲದಲ್ಲಿ ಅಡಮಾನವಿಟ್ಟು ಸಾಲಸೌಲಭ್ಯ ಪಡೆಯಲು ಸಹ ಚಿನ್ನ ಸಹಕಾರಿ. ಹೀಗಾಗಿ, ಭಾರತೀಯರಿಗೆ ಪ್ರಮುಖ ಆದ್ಯತೆಯ ವಸ್ತುವಾಗಿ ಚಿನ್ನ ಕಂಡುಬರುತ್ತದೆ. ಇದನ್ನೂ ಓದಿ: 1,000 ವರ್ಷ ಹಳೆಯ ಚೋಳರ ಕಾಲದ ತಾಮ್ರ ಫಲಕಗಳನ್ನು ಭಾರತಕ್ಕೆ ಹಿಂದಿರುಗಿಸಿದ ನೆದರ್ಲೆಂಡ್ಸ್

ಮೋದಿ ಚಿನ್ನ ಖರೀದಿಸಬೇಡಿ ಎಂದಿದ್ಯಾಕೆ?
ಭಾರತವು ವಿಶ್ವದ 2ನೇ ಅತಿದೊಡ್ಡ ಚಿನ್ನ ಆಮದು ಮಾಡಿಕೊಳ್ಳುವ ದೇಶ. ಜಾಗತಿಕ ಬೇಡಿಕೆಯ ಸುಮಾರು 20-25%ನಷ್ಟು ನಮ್ಮದೇ ಪಾಲು. ಚಿನ್ನವನ್ನು ಅಂತರರಾಷ್ಟ್ರೀಯ ಮಟ್ಟದಿಂದ ಖರೀದಿಸುವಾಗ ಅಮೆರಿಕನ್ ಡಾಲರ್ ಮೂಲಕ ವ್ಯವಹಾರ ಮಾಡಬೇಕು. ಇದರಿಂದ ಡಾಲರ್ ಹೊರಹರಿವು ಹೆಚ್ಚಾಗುತ್ತದೆ. ಅದರ ಜೊತೆಗೆ ಆ ಡಾಲರ್‌ಗಳನ್ನು ಪಡೆಯಲು ಭಾರತೀಯ ಆಮದುದಾರರು ರೂಪಾಯಿಗಳನ್ನು ಮಾರಾಟ ಮಾಡುತ್ತಾರೆ. ಲಕ್ಷಾಂತರ ಜನರು ಏಕಕಾಲದಲ್ಲಿ ಚಿನ್ನವನ್ನು ಖರೀದಿಸಿದಾಗ, ಡಾಲರ್‌ಗೆ ಬೇಡಿಕೆ ಹೆಚ್ಚಾಗುತ್ತದೆ. ಇದು ರೂಪಾಯಿಯ ಮೌಲ್ಯ ಕುಸಿಯಲು ಕಾರಣವಾಗುತ್ತದೆ. 2025-26ನೇ ಸಾಲಿನಲ್ಲಿ ದೇಶ ಚಿನ್ನ ಆಮದಿಗೆ 71.98 ಮಿಲಿಯನ್ ಡಾಲರ್ ವೆಚ್ಚ ಮಾಡಿದೆ. ಸುಮಾರು 721.03 ಟನ್‌ನಷ್ಟು ಬಂಗಾರವನ್ನು ಆಮದು ಮಾಡಿಕೊಂಡಿದೆ.
ಒಬ್ಬ ವ್ಯಕ್ತಿ ಎಷ್ಟು ಚಿನ್ನ ಹೊಂದಬಹುದು?
ಒಬ್ಬ ವ್ಯಕ್ತಿಯು ಚಿನ್ನ ಅಥವಾ ಆಭರಣ ರೂಪದಲ್ಲಿ ಇಷ್ಟೇ ಚಿನ್ನವನ್ನು ಹೊಂದಬೇಕು ಎಂಬ ನಿರ್ದಿಷ್ಟ ಕಾನೂನು ಮಿತಿ ಇಲ್ಲ. ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ), 1994ರ ಮೇ 11 ರಂದು ಸುತ್ತೋಲೆ ಮೂಲಕ ತನ್ನ ಅಧಿಕಾರಿಗಳಿಗೆ ಮಾರ್ಗಸೂಚಿಗಳನ್ನು ಹೊರಡಿಸಿದೆ. ಆದಾಯ ತೆರಿಗೆ ದಾಳಿಯ ಸಮಯದಲ್ಲಿ ನಿರ್ದಿಷ್ಟ ಮಿತಿಯವರೆಗೆ ಚಿನ್ನಾಭರಣಗಳು ಮತ್ತು ಆಭರಣಗಳನ್ನು ವಶಪಡಿಸಿಕೊಳ್ಳದಂತೆ ಸೂಚನೆ ನೀಡಿದೆ. ಇದನ್ನೂ ಓದಿ: ಮದ್ಯ, ಬಿಯರ್ ದರ ಪರಿಷ್ಕರಣೆ – ಯಾವ ಬ್ರ್ಯಾಂಡ್ ಬೆಲೆ ಎಷ್ಟು?
ವಿವಾಹಿತ/ಅವಿವಾಹಿತ ಮಹಿಳೆಯರು ಮತ್ತು ಪುರುಷರು ಎಷ್ಟು ಚಿನ್ನ ಇಟ್ಟುಕೊಳ್ಳಬಹುದು?
ಸಿಬಿಡಿಟಿಯ ಮಾರ್ಗಸೂಚಿಗಳ ಅಡಿಯಲ್ಲಿ, ವಿವಾಹಿತ ಮತ್ತು ಅವಿವಾಹಿತ ಪುರುಷರು, ಮಹಿಳೆಯರು ಚಿನ್ನಾಭರಣಗಳನ್ನು ಹೊಂದಲು ಪ್ರತ್ಯೇಕ ಮಿತಿಗಳಿವೆ.
ವಿವಾಹಿತ ಮಹಿಳೆಯರು: 500 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಬಾರದು ಅಥವಾ ಮುಟ್ಟುಗೋಲು ಹಾಕಿಕೊಳ್ಳಬಾರದು ಎಂದು ಆದಾಯ ತೆರಿಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಅವಿವಾಹಿತ ಮಹಿಳೆಯರು: ಕುಟುಂಬದಲ್ಲಿ ಅವಿವಾಹಿತ ಮಹಿಳೆ 250 ಗ್ರಾಂ ಗಿಂತಲೂ ಕಡಿಮೆ ಚಿನ್ನಾಭರಣ ಹೊಂದಬಹುದು ಎಂಬ ಮಿತಿ ಇದೆ.
ಪುರುಷರು: ವಿವಾಹಿತರಾಗಿರಲಿ ಅಥವಾ ಅವಿವಾಹಿತರಾಗಿರಲಿ ಪ್ರತಿ ವ್ಯಕ್ತಿಗೆ 100 ಗ್ರಾಂ ಚಿನ್ನದ ಆಭರಣ ಹೊಂದಲು ಮಿತಿಯಿದೆ.
ಆದಾಯ ತೆರಿಗೆ ದಾಳಿಯ ಸಮಯದಲ್ಲಿ ಉಂಟಾಗಬಹುದಾದ ವಿವಾದಗಳನ್ನು ತಪ್ಪಿಸುವುದು ಈ ಸುತ್ತೋಲೆಯ ಉದ್ದೇಶವಾಗಿದೆ. ಏಕೆಂದರೆ ತೆರಿಗೆ ಅಧಿಕಾರಿಗಳು ಆಭರಣ ಸೇರಿದಂತೆ ಯಾವುದೇ ಆಸ್ತಿಯನ್ನು ವಶಪಡಿಸಿಕೊಳ್ಳಲು ಅರ್ಹರಾಗಿರುತ್ತಾರೆ. ಆದಾಯ ತೆರಿಗೆ ಅಧಿಕಾರಿಗಳು ದಾಳಿಗೊಳಗಾದ ವ್ಯಕ್ತಿಯ ಜೀವನ ಮಟ್ಟ ಅಥವಾ ಸಮಾಜದಲ್ಲಿ ಅವರ ಸ್ಥಾನಮಾನವನ್ನು ಲೆಕ್ಕಿಸದೆ, ಸುತ್ತೋಲೆಯಲ್ಲಿ ನಿರ್ದಿಷ್ಟಪಡಿಸಿದ ಮಿತಿಯೊಳಗೆ ಯಾವುದೇ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಬಾರದು.

ಚಿನ್ನ ಮಾರಾಟ ಶೇ.35 ಕುಸಿತ
ಒಂದು ವರ್ಷ ಚಿನ್ನ ಖರೀದಿ ನಿಲ್ಲಿಸುವಂತೆ ಮೋದಿ ಕರೆ ಕೊಟ್ಟ ಬೆನ್ನಲ್ಲೇ ಅಹಮದಾಬಾದ್‌ನ ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆ ಒತ್ತಡಕ್ಕೆ ಸಿಲುಕಿದೆ. ಮಾರಾಟವು 30 ರಿಂದ 35%ನಷ್ಟು ಕುಸಿತ ಕಂಡಿದೆ. ಆಭರಣಗಳ ಪೆಂಡೆಂಟ್‌ಗಳು, ಕಿವಿಯೋಲೆಗಳು, ಚೈನ್ ಮತ್ತು ಉಂಗುರಗಳಲ್ಲಿ ತೀವ್ರ ಕುಸಿತ ಕಂಡುಬಂದಿದೆ. ಕಳೆದ ಎರಡು ಮೂರು ವರ್ಷಗಳಿಂದ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಿರುವುದು ಖರೀದಿಯನ್ನು ನಿರಂತರವಾಗಿ ಕುಂಠಿತಗೊಳಿಸಿದೆ. ಈಗ ಅಂಗಡಿಗಳಿಗೆ ಬರುವ ಹೆಚ್ಚಿನ ಗ್ರಾಹಕರು ಹಣವನ್ನು ಖರ್ಚು ಮಾಡುತ್ತಿಲ್ಲ. ಬದಲಾಗಿ, ಅವರು ಹಳೆಯ ಚಿನ್ನವನ್ನು ಹೊಸ ಚಿನ್ನಕ್ಕೆ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ.
ಕರ್ನಾಟಕದಲ್ಲಿ ಎಲ್ಲೆಲ್ಲಿ ಚಿನ್ನ ಖರೀದಿ ಇಳಿಕೆ?
ರಾಜ್ಯದ ಹುಬ್ಬಳ್ಳಿ, ಹಾಸನ, ಬೆಂಗಳೂರಿನಲ್ಲಿ ಚಿನ್ನ ಖರೀದಿ ಇಳಿಮುಖವಾಗಿದೆ. ಚಿನ್ನದ ಮಳಿಗೆಗಳು ಗ್ರಾಹಕರಿಲ್ಲದೇ ಖಾಲಿ ಹೊಡೆಯುತ್ತಿವೆ. ಜ್ಯುವೆಲರಿ ಶಾಪ್‌ಗಳಲ್ಲಿ ಶೇ.50 ರಷ್ಟು ವ್ಯಾಪಾರ ಕಡಿತವಾಗಿದೆ ಎನ್ನಲಾಗಿದೆ. ಇದಕ್ಕೆ ಪ್ರಧಾನಿ ಮೋದಿ ಅವರ ಕರೆ ಒಂದು ಕಾರಣವಾದರೆ, ಆಶಾಢ ಸಮೀಪಿಸಿರುವುದು ಮತ್ತೊಂದು ಕಾರಣ. ಸಾಂಪ್ರದಾಯಿಕವಾಗಿ ಈ ಮಾಸದಲ್ಲಿ ಮದುವೆ, ಗೃಹಪ್ರವೇಶ ಮುಂತಾದ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಇದು ಅಶುಭ ಮಾಸ ಎನ್ನುವ ಕಾರಣಕ್ಕೆ ಜನರು ಚಿನ್ನ, ಬೆಳ್ಳಿ ಖರೀದಿ ಮಾಡುವುದಿಲ್ಲ.
ಮೋದಿ ಹೇಳಿಕೆ ಬಗ್ಗೆ ಡೇಟಾ ಹೇಳೋದೇನು?
ಪ್ರಧಾನಿ ಮೋದಿ ಹೇಳಿದ್ದು ತಪ್ಪಲ್ಲ ಎಂದು ದತ್ತಾಂಶಗಳು ತೋರಿಸುತ್ತವೆ. ಭಾರತವು ಲಕ್ಷಾಂತರ ಡಾಲರ್ ಮೌಲ್ಯದ ಚಿನ್ನವನ್ನು ಆಮದು ಮಾಡಿಕೊಳ್ಳುತ್ತದೆ. 2025-26ರಲ್ಲಿ ಚಿನ್ನದ ಆಮದು ಶೇ. 24 ರಷ್ಟು ಏರಿಕೆಯಾಗಿ ದಾಖಲೆಯ 71.98 ಬಿಲಿಯನ್ ಡಾಲರ್‌ಗೆ ತಲುಪಿದೆ ಎಂದು ದತ್ತಾಂಶಗಳು ಬಹಿರಂಗಪಡಿಸುತ್ತವೆ. ಎರಡು ವರ್ಷಗಳಲ್ಲಿ, ಚಿನ್ನದ ಆಮದು ಬಿಲ್ 2022-23ರಲ್ಲಿ 35 ಬಿಲಿಯನ್ ಡಾಲರ್‌ನಿಂದ ಬಹುತೇಕ ದ್ವಿಗುಣಗೊಂಡಿದೆ. 2023-24ರಲ್ಲಿ ಆಮದು ಬಿಲ್ 45.54 ಬಿಲಿಯನ್ ಡಾಲರ್‌ನಷ್ಟಿತ್ತು. ಇದು ಕಳೆದ ಎರಡು ವರ್ಷಗಳಲ್ಲಿ ಮೌಲ್ಯದ ದೃಷ್ಟಿಯಿಂದ ಸ್ಥಿರವಾದ ಏರಿಕೆಯ ಪ್ರವೃತ್ತಿಯನ್ನು ಸೂಚಿಸುತ್ತದೆ. 2025-2026ರಲ್ಲಿ ಭಾರತದ ಒಟ್ಟು ಆಮದು ಬಿಲ್ 775 ಬಿಲಿಯನ್ ಡಾಲರ್ ಆಗಿದ್ದು, ಇದರಲ್ಲಿ 71.98 ಬಿಲಿಯನ್ ಡಾಲರ್ ಚಿನ್ನದ ಖರೀದಿಯದ್ದು. 134.7 ಬಿಲಿಯನ್ ಡಾಲರ್ ಕಚ್ಚಾ ತೈಲ ಖರೀದಿಗೆ ವಿನಿಯೋಗಿಸಲಾಗಿದೆ. ಅಂದರೆ, ಒಟ್ಟು ಆಮದು ಬಿಲ್‌ನ ಸುಮಾರು 10% ಹಣವನ್ನು ಚಿನ್ನ ಆಮದಿಗೆ ಬಳಸಲಾಗುತ್ತಿದೆ.
ಪ್ರಧಾನಿ ಸಲಹೆಯಿಂದ ಭಾರತೀಯರಿಗೆ ಲಾಭ?
ಪ್ರಧಾನ ಮಂತ್ರಿಯವರ ಹಳದಿ ಲೋಹ ಖರೀದಿಯ ಮನವಿಯನ್ನು ಪಾಲಿಸಿದರೆ ಭಾರತೀಯರಿಗೆ ಹೆಚ್ಚಿನ ಪ್ರಯೋಜನವಾಗುತ್ತದೆ ಎಂದು ಹೆಚ್ಚಿನ ತಜ್ಞರು ತಿಳಿಸಿದ್ದಾರೆ. ಭಾರತೀಯರು ಒಂದು ವರ್ಷದವರೆಗೆ ಚಿನ್ನ ಖರೀದಿಸುವುದನ್ನು ನಿಲ್ಲಿಸಿದರೆ, ಅದು ಭಾರತದ ಆಮದು ಬಿಲ್ ಅನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಬಹುದು. ಇನ್ಫೋಮೆರಿಕ್ಸ್ ರೇಟಿಂಗ್ಸ್‌ನ ಮುಖ್ಯ ಅರ್ಥಶಾಸ್ತ್ರಜ್ಞ ಮನೋರಂಜನ್ ಶರ್ಮಾ, ಚಿನ್ನದ ಆಮದು ಭಾರತದ ಅತಿದೊಡ್ಡ ತೈಲೇತರ ಆಮದುಗಳಲ್ಲಿ ಒಂದಾಗಿದೆ ಮತ್ತು ಖರೀದಿಗಳಲ್ಲಿ ತೀವ್ರ ಕುಸಿತವು ಆರ್ಥಿಕತೆಯ ಬಾಹ್ಯ ಸಮತೋಲನದ ಮೇಲಿನ ಒತ್ತಡವನ್ನು ಅರ್ಥಪೂರ್ಣವಾಗಿ ಕಡಿಮೆ ಮಾಡುತ್ತದೆ ಎಂದು ತಿಳಿಸಿದ್ದಾರೆ. ಭಾರತೀಯ ಕುಟುಂಬಗಳು ಒಂದು ವರ್ಷದವರೆಗೆ ಚಿನ್ನ ಖರೀದಿಸುವುದನ್ನು ನಿಲ್ಲಿಸಿದರೆ, ಚಾಲ್ತಿ ಖಾತೆ ಕೊರತೆ ತೀವ್ರವಾಗಿ ಕಡಿಮೆಯಾಗುತ್ತದೆ ಎಂದು ತಿಳಿಸಿದ್ದಾರೆ. ಚಿನ್ನವನ್ನು ಖರೀದಿಸದಿರುವುದರಿಂದ ಉಳಿಸಿದ ಡಾಲರ್‌ಗಳನ್ನು ಕಚ್ಚಾ ತೈಲದಂತಹ ಅಗತ್ಯ ಇಂಧನ ಆಮದುಗಳನ್ನು ಖರೀದಿಸಲು ಉತ್ತಮವಾಗಿ ಬಳಸಿಕೊಳ್ಳಬಹುದು. ಏಕೆಂದರೆ ಪಶ್ಚಿಮ ಏಷ್ಯಾ ಯುದ್ಧದಿಂದಾಗಿ ಇಂಧನ ಬೆಲೆ ಹೆಚ್ಚು ದುಬಾರಿಯಾಗಿವೆ ಎನ್ನುತ್ತಾರೆ ತಜ್ಞರು. ‘ಭಾರತೀಯರು ತಮ್ಮ ಚಿನ್ನದ ಬಳಕೆಯನ್ನು ಶೇ.10 ರಷ್ಟು ಕಡಿಮೆ ಮಾಡಿದರೂ ಸಹ, ಭಾರತಕ್ಕೆ 7.2 ಬಿಲಿಯನ್ ಡಾಲರ್ ಉಳಿತಾಯವಾಗುತ್ತದೆ ಎಂದು ಮನಿ ಕಂಟ್ರೋಲ್ ವಿಶ್ಲೇಷಣೆ ತಿಳಿಸಿದೆ.

