ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡುಬರುವ ಹಾರ್ಮೋನ್ ಸಮಸ್ಯೆಯಾದ ‘ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್’ (PCOS- Polycystic Ovary Syndrome ) ಹೆಸರನ್ನು ಈಗ ಅಧಿಕೃತವಾಗಿ ಬದಲಾಯಿಸಲಾಗಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ಇದೊಂದು ಐತಿಹಾಸಿಕ ಹೆಜ್ಜೆ ಎಂದು ಗುರುತಿಸಲಾಗಿದೆ. ಆಸ್ಟ್ರೇಲಿಯಾದ ಮೊನಾಶ್ ವಿಶ್ವವಿದ್ಯಾಲಯದ ನೇತೃತ್ವದಲ್ಲಿ ನಡೆದ ಪ್ರಯತ್ನದ ಫಲವಾಗಿ, PCOS ಅನ್ನು ಇನ್ನು ಮುಂದೆ ‘ಪಾಲಿಯೆಂಡೊಕ್ರೈನ್ ಮೆಟಬಾಲಿಕ್ ಓವೇರಿಯನ್ ಸಿಂಡ್ರೋಮ್’ (Polyendocrine Metabolic Ovarian Syndrome – PMOS) ಎಂದು ಮರುನಾಮಕರಣ ಮಾಡಲಾಗಿದೆ.
ಮೆಡಿಕಲ್ ಜರ್ನಲ್ ‘ದಿ ಲ್ಯಾನ್ಸೆಟ್’ (The Lancet) ನಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ, ಹಳೆಯ ಹೆಸರು PCOS ದಾರಿತಪ್ಪಿಸುವಂತಿತ್ತು ಮತ್ತು ಇದರಿಂದಾಗಿ ರೋಗಪತ್ತೆ ಹಚ್ಚುವಿಕೆ ತಡವಾಗುತ್ತಿತ್ತು. 14 ವರ್ಷಗಳ ಸುದೀರ್ಘ ಅಂತಾರಾಷ್ಟ್ರೀಯ ವೈಜ್ಞಾನಿಕ ಸಂಶೋಧನೆ ಮತ್ತು ಸಹಯೋಗದ ನಂತರ ‘ದಿ ಎಂಡೋಕ್ರೈನ್ ಸೊಸೈಟಿ’ ಸೇರಿದಂತೆ 50ಕ್ಕೂ ಹೆಚ್ಚು ಜಾಗತಿಕ ಆರೋಗ್ಯ ಸಂಸ್ಥೆಗಳು ಒಟ್ಟಾಗಿ ಈ ಐತಿಹಾಸಿಕ ತೀರ್ಮಾನಕ್ಕೆ ಬಂದಿವೆ.
ಇದೊಂದು ಅಭೂತಪೂರ್ವ ಪ್ರಕ್ರಿಯೆಯಾಗಿದ್ದು, ಜಗತ್ತಿನಾದ್ಯಂತ 56 ಪ್ರಮುಖ ಶೈಕ್ಷಣಿಕ, ವೈದ್ಯಕೀಯ ಮತ್ತು ರೋಗಿಗಳ ಹಿತರಕ್ಷಣಾ ಸಂಸ್ಥೆಗಳು ಒಟ್ಟಾಗಿ ಈ ನಿರ್ಧಾರಕ್ಕೆ ಬಂದಿವೆ. ಈ ಹೆಸರನ್ನು ಅಂತಿಮಗೊಳಿಸುವ ಮುನ್ನ ವಿಶ್ವಾದ್ಯಂತ 14,300ಕ್ಕೂ ಹೆಚ್ಚು ಜನರಿಂದ ಅಭಿಪ್ರಾಯ ಮತ್ತು ಸಲಹೆಗಳನ್ನು ಪಡೆದುಕೊಳ್ಳಲಾಗಿದೆ. ಈ ಮಹತ್ವದ ಬದಲಾವಣೆಯು ಮಹಿಳೆಯರ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆಯಲ್ಲಿ ಹೇಗೆ ಹೊಸ ಬದಲಾವಣೆ ತರಲಿದೆ ಎಂಬುದನ್ನು ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (AIIMS) ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗವು ವಿವರವಾದ ಮಾಹಿತಿ ಹಂಚಿಕೊಂಡಿದೆ.

PCOS ಹೆಸರನ್ನು PMOS ಎಂದು ಬದಲಾಯಿಸಲು ಕಾರಣವೇನು?
ಹಳೆಯ ಹೆಸರಾದ ‘PCOS’ ಕೇವಲ ಅಂಡಾಶಯದ (Ovaries) ಮೇಲಷ್ಟೇ ಗಮನ ಹರಿಸುತ್ತಿತ್ತು. ಆದರೆ ಈ ಸಮಸ್ಯೆಯು ಕೇವಲ ಅಂಡಾಶಯಕ್ಕೆ ಮಾತ್ರ ಸೀಮಿತವಾಗಿರದೇ, ಮಹಿಳೆಯರ ಚಯಾಪಚಯ (Metabolic), ಹಾರ್ಮೋನ್, ಸಂತಾನೋತ್ಪತ್ತಿ ಮತ್ತು ಮಾನಸಿಕ ಆರೋಗ್ಯದ ಮೇಲೆಯೂ ತೀವ್ರ ಪರಿಣಾಮ ಬೀರುತ್ತದೆ.
ಹಳೆಯ ಹೆಸರು ಸಮಸ್ಯೆಯ ಸಂಪೂರ್ಣ ಸ್ವರೂಪವನ್ನು ಬಿಂಬಿಸುತ್ತಿರಲಿಲ್ಲ. ಆದ್ದರಿಂದ, ಈ ಕಾಯಿಲೆಯು ದೇಹದ ಹಲವು ಅಂಗವ್ಯೂಹಗಳ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಸ್ಪಷ್ಟಪಡಿಸಲು ‘PMOS’ ಎಂಬ ಹೊಸ ಹೆಸರನ್ನು ಇಡಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಈ ಹೆಸರನ್ನು ಜಾಗತಿಕವಾಗಿ ಹಂತಹಂತವಾಗಿ ಜಾರಿಗೆ ತರಲಾಗುವುದು.
ಹಳೆಯ ಹೆಸರು ಅರ್ಥ;
‘ಪಾಲಿಸಿಸ್ಟಿಕ್’ ಎಂದರೆ ಅಂಡಾಶಯದಲ್ಲಿ ನೀರು ಗುಳ್ಳೆಗಳಂತೆ ಕಾಣಿಸಿಕೊಳ್ಳುತ್ತದೆ. ಅವನ್ನೇ ‘ಪಾಲಿಸಿಸ್ಟಿಕ್’ ಎನ್ನಲಾಗುತ್ತದೆ. ಆದರೆ ವಾಸ್ತವದಲ್ಲಿ ಅವು ನೀರು ಗುಳ್ಳೆಗಳ್ಳಲ್ಲ. ಅನೇಕ ಮಹಿಳೆಯರಲ್ಲಿ. ಪ್ರತಿ ತಿಂಗಳ ಮುಟ್ಟಿನ ಚಕ್ರದಲ್ಲಿ ಅಂಡಾಶಯದಲ್ಲಿನ ಕೆಲವು ಕೋಶಗಳು ಬೆಳೆದು ಮೊಟ್ಟೆಯನ್ನು ಬಿಡುಗಡೆ ಮಾಡಬೇಕಿರುತ್ತದೆ. ಆದರೆ ಈ ಸಮಸ್ಯೆಯಿದ್ದಾಗ, ಹಾರ್ಮೋನ್ ಏರುಪೇರಿನಿಂದಾಗಿ ಆ ಕೋಶಗಳ ಬೆಳವಣಿಗೆ ಅರ್ಧಕ್ಕೇ ನಿಂತುಬಿಡುತ್ತದೆ. ಇವು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್‌ನಲ್ಲಿ ಸಣ್ಣ ಸಣ್ಣ ನೀರಗುಳ್ಳೆಗಳಂತೆ ಕಾಣಿಸುತ್ತವೆ. ಈ ತಪ್ಪು ತಿಳುವಳಿಕೆಯಿಂದಾಗಿ ರೋಗ ಪತ್ತೆ ಹಚ್ಚುವುದು ಮತ್ತು ರೋಗಿ ಹಾಗೂ ವೈದ್ಯರ ನಡುವಿನ ಸಂವಹನಕ್ಕೆ ಅಡ್ಡಿಯಾಗುತ್ತಿತ್ತು.

PMOSನ ಲಕ್ಷಣಗಳು:
ಹೊಸದಾಗಿ ನಾಮಕರಣಗೊಂಡಿರುವ PMOS ಕಾಯಿಲೆಯು ಕೇವಲ ಮುಟ್ಟಿನ ಸಮಸ್ಯೆಯಲ್ಲ, ಇದು ದೇಹದ ವಿವಿಧ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ:
ಚಯಾಪಚಯ ಸಮಸ್ಯೆಗಳು: ಬೊಜ್ಜು, ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಏರುಪೇರು, ಮಧುಮೇಹ, ಅಧಿಕ ರಕ್ತದೊತ್ತಡ, ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಳ, ಫ್ಯಾಟಿ ಲಿವರ್, ಹೃದಯ ಸಂಬಂಧಿ ಕಾಯಿಲೆಗಳು ಮತ್ತು ನಿದ್ರೆಯ ಸಮಯದಲ್ಲಿ ಉಸಿರಾಟದ ತೊಂದರೆ ಉಂಟುಮಾಡುತ್ತದೆ.
ಸಂತಾನೋತ್ಪತ್ತಿ ಸಮಸ್ಯೆಗಳು: ಅನಿಯಮಿತ ಋತುಚಕ್ರ, ಅಂಡೋತ್ಪತ್ತಿ ಸಮಸ್ಯೆಯಿಂದಾಗಿ ಬಂಜೆತನ, ಗರ್ಭಾವಸ್ಥೆಯ ಸಂಕೀರ್ಣತೆಗಳು ಮತ್ತು ಕ್ಯಾನ್ಸರ್ ಅಪಾಯ.
ಮಾನಸಿಕ ತೊಂದರೆಗಳು: ಖಿನ್ನತೆ, ಆತಂಕ ಮತ್ತು ತಿನ್ನುವ ಕ್ರಮದಲ್ಲಿ ಏರುಪೇರು.
ಚರ್ಮದ ತೊಂದರೆಗಳು: ಮುಖದ ಮೇಲೆ ಮೊಡವೆಗಳು, ತಲೆಯ ಕೂದಲು ತೆಳುವಾಗುವುದು ಮತ್ತು ಮುಖ ಹಾಗೂ ದೇಹದ ಮೇಲೆ ಅತಿಯಾದ ಕೂದಲು ಬೆಳೆಯುವುದು
ಚಿಕಿತ್ಸೆ ಮತ್ತು ರೋಗನಿರ್ಣಯದಲ್ಲಿ ಬದಲಾವಣೆ ಏನು?
ಈ ಹೊಸ ಹೆಸರಿನಿಂದಾಗಿ ಸದ್ಯಕ್ಕೆ ರೋಗನಿರ್ಣಯದ ಮಾನದಂಡಗಳಲ್ಲಾಗಲಿ ಅಥವಾ ಚಿಕಿತ್ಸಾ ಪದ್ಧತಿಗಳಲ್ಲಾಗಲಿ ತಕ್ಷಣದ ಬದಲಾವಣೆಗಳೇನೂ ಆಗುವುದಿಲ್ಲ. ಪ್ರಸ್ತುತ ಚಾಲ್ತಿಯಲ್ಲಿರುವ ಚಿಕಿತ್ಸೆಗಳೇ ಮುಂದುವರಿಯಲಿವೆ. ಆದರೆ, ಈ ಬದಲಾವಣೆಯು ಮಹಿಳೆಯರಲ್ಲಿ ತಮ್ಮ ಕಾಯಿಲೆಯ ಬಗ್ಗೆ ಹೆಚ್ಚಿನ ತಿಳುವಳಿಕೆಯನ್ನು ಮೂಡಿಸುತ್ತದೆ. ಅಲ್ಲದೇ ವೈದ್ಯರು ಕೇವಲ ಗರ್ಭಕೋಶ ಅಥವಾ ಋತುಚಕ್ರದ ಸಮಸ್ಯೆಗೆ ಚಿಕಿತ್ಸೆ ನೀಡುವುದನ್ನು ಬಿಟ್ಟು, ರೋಗಿಯ ಸಕ್ಕರೆ ಕಾಯಿಲೆ, ಕೊಲೆಸ್ಟ್ರಾಲ್, ರಕ್ತದೊತ್ತಡ ಮತ್ತು ಜೀವನಶೈಲಿ ಬದಲಾವಣೆಯತ್ತ ಸಮಗ್ರ ಗಮನ ಹರಿಸಲಿದೆ.

ಭಾರತದಲ್ಲಿ ಈ ಸಮಸ್ಯೆಯ ಪ್ರಮಾಣವು ಶೇಕಡಾ 16 ರಿಂದ 18 ರಷ್ಟಿದ್ದು, ಇದು ಅತ್ಯಂತ ಹೆಚ್ಚಿನ ಪ್ರಮಾಣವಾಗಿದೆ. ಭಾರತೀಯರಲ್ಲಿ ಹೆಚ್ಚಾಗಿ ಅನುವಂಶೀಯವಾಗಿ ಹೃದಯ ಕಾಯಿಲೆ ಮತ್ತು ಮಧುಮೇಹ ಬರುವ ಅಪಾಯವಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, PCOS ಅನ್ನು ಕೇವಲ ಸ್ತ್ರೀರೋಗ ಸಮಸ್ಯೆಯಾಗಿ ನೋಡಿ ರೋಗನಿರ್ಣಯ ವಿಳಂಬ ಮಾಡಿದರೆ, ಮುಂದಿನ ದಿನಗಳಲ್ಲಿ ದೇಹದ ಜೀವಕೋಶಗಳು ಇನ್ಸುಲಿನ್ ಹಾರ್ಮೋನ್‌ಗೆ ಸ್ಪಂದಿಸದಿರುವುದು, ಬಂಜೆತನ, ಗರ್ಭಾವಸ್ಥೆಯ ಮಧುಮೇಹ ಮತ್ತು ಹೃದಯಾಘಾತದಂತಹ ಗಂಭೀರ ಸಮಸ್ಯೆಗಳನ್ನು ತಡೆಗಟ್ಟುವ ಅವಕಾಶವನ್ನು ಮಹಿಳೆಯರು ಕಳೆದುಕೊಳ್ಳುತ್ತಾರೆ.
ಹೊಸ ಹೆಸರಾದ PMOS ಚಾಲ್ತಿಗೆ ಬರುವುದರಿಂದ, ಭಾರತದಲ್ಲಿ ಬೊಜ್ಜು, ಮಧುಮೇಹ ಮತ್ತು ರಕ್ತದೊತ್ತಡದಂತಹ ದೀರ್ಘಕಾಲೀನ ಆರೋಗ್ಯ ಅಪಾಯಗಳನ್ನು ಮೊದಲೇ ಪತ್ತೆಹಚ್ಚಲು ನೆರವಾಗುತ್ತದೆ. ಜೊತೆಗೆ, ಬಂಜೆತನ ಅಥವಾ ತೂಕ ಹೆಚ್ಚಳದಂತಹ ಲಕ್ಷಣಗಳಿಂದ ಮಹಿಳೆಯರು ಎದುರಿಸುತ್ತಿದ್ದ ಸಾಮಾಜಿಕ ಮುಜುಗರ ಮತ್ತು ಕೀಳರಿಮೆಯನ್ನು ಕಡಿಮೆ ಮಾಡಲು ಇದು ಸಹಕಾರಿಯಾಗಲಿದೆ.
ಜಾಗತಿಕವಾಗಿ ವೈದ್ಯಕೀಯ ಸಮುದಾಯ ಮತ್ತು ರೋಗಿಗಳು ಒಟ್ಟಾಗಿ ಈ ತಪ್ಪು ಹೆಸರನ್ನು ತಿದ್ದಿದ್ದಾರೆ. ಈ ಮರುನಾಮಕರಣವು ಕೇವಲ ಹೆಸರಿಗಷ್ಟೇ ಸೀಮಿತವಾಗಿರದೇ, ಈ ಕಾಯಿಲೆಯಿಂದ ಬಳಲುತ್ತಿರುವ ಕೋಟ್ಯಂತರ ಮಹಿಳೆಯರ ಚಿಕಿತ್ಸೆ, ಜಾಗೃತಿ ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸುವಲ್ಲಿ ಮೈಲಿಗಲ್ಲಾಗಲಿದೆ.

