ಚಾಮರಾಜನಗರ: ನಾಲ್ಕು ದಶಕಗಳ ಬಳಿಕ ರಾಮನಗುಡ್ಡ ಜಲಾಶಯಕ್ಕೆ (Ramanagudda Reservoir) ಕೊನೆಗೂ ನೀರು ಹರಿದಿದೆ. ಬರಪೀಡಿತ ಪ್ರದೇಶಕ್ಕೆ ಕಾವೇರಿ ನೀರು ಹರಿದಿದ್ದು, ರೈತರ ಸಂಭ್ರಮ ಮುಗಿಲು ಮುಟ್ಟಿದೆ.
ಹನೂರು (Hanur) ತಾಲೂಕು ಸದಾ ಬರಪೀಡಿತ ಪ್ರದೇಶ. ತಮಿಳುನಾಡಿಗೆ ಹನೂರು ತಾಲೂಕಿನ ಮೂಲಕವೇ ಕಾವೇರಿ ಹರಿದು ಹೋದರೂ ಇಲ್ಲಿನ ಜನರಿಗೆ ಮಾತ್ರ ಕಾವೇರಿ ನೀರಿನ ಪ್ರಯೋಜನ ಸಿಗದಂತಾಗಿತ್ತು. ಹನೂರು ಸಮೀಪ ನಲವತ್ತು ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ರಾಮನಗುಡ್ಡ ಜಲಾಶಯ ಮಳೆ ಇಲ್ಲದ ಕಾರಣ ನೀರಿಲ್ಲದೇ ಬಣಗುಡುತ್ತಿತ್ತು. ಇಲ್ಲಿಗೆ ಕಾವೇರಿ ನದಿಯಿಂದ 2016 ರಲ್ಲೇ 20 ಕೋಟಿ ವೆಚ್ಚದಲ್ಲಿ ಪೈಪ್ಲೈನ್ ಮೂಲಕ ನೀರು ತುಂಬಿಸುವ ಯೋಜನೆ ಸಿದ್ಧಪಡಿಸಲಾಗಿತ್ತು. ಆರ್ಥಿಕ ಹೊರೆಯ ಕಾರಣ ಈ ಯೋಜನೆ ನೆನಗುದಿಗೆ ಬಿದ್ದಿತ್ತು. ಆದರೆ, ಸ್ವತಃ ಸಿವಿಲ್ ಇಂಜಿನಿಯರ್ ಪದವೀಧರರಾಗಿರುವ ಹನೂರು ಕ್ಷೇತ್ರದ ಶಾಸಕ ಎಂ.ಆರ್.ಮಂಜುನಾಥ್ ಈ ಯೋಜನೆಗೆ ಬೇರಯದೇ ಸ್ವರೂಪ ನೀಡುವ ಮೂಲಕ ರಾಮನಗುಡ್ಡ ಜಲಾಶಯಕ್ಕೆ ಕಾವೇರಿ ನೀರು ತುಂಬಿಸುವ ಕಾರ್ಯ ಮಾಡಿದ್ದಾರೆ. ಇದನ್ನೂ ಓದಿ: ಡಿಕೆಶಿ – ರಾಜಣ್ಣ ನಡ್ವೆ ಪ್ರತಿಷ್ಠೆಯ ಕಣವಾಯ್ತಾ ಅಪೆಕ್ಸ್ ಬ್ಯಾಂಕ್ ಚುನಾವಣೆ? – ನಿರ್ದೇಶಕ ಸ್ಥಾನಕ್ಕೆ ಕೆಎನ್ಆರ್ ನಾಮಪತ್ರ ಸಲ್ಲಿಕೆ!
ಕೊಳ್ಳೇಗಾಲ ತಾಲೂಕು ಸರಗೂರು ಬಳಿ ಹರಿಯುವ ಕಾವೇರಿ ನದಿಯಿಂದ ಹನೂರು ತಾಲೂಕಿನ ಬೂದಬಾಳು ಗ್ರಾಮದವರೆಗೆ ಎರಡೂವರೆ ಕೋಟಿ ವೆಚ್ಚದಲ್ಲಿ ಪೈಪ್ಲೈನ್ ಮೂಲಕ ಕಾವೇರಿ ನೀರು ತಂದು ಬಳಿಕ ಬೂದಬಾಳು ಗ್ರಾಮದಿಂದ ನೈಸರ್ಗಿಕವಾಗಿ ಇರುವ ದೊಡ್ಡಹಳ್ಳದ ಮೂಲಕ ಹರಿಸಿ ರಾಮನಗುಡ್ಡ ಜಲಾಶಯಕ್ಕೆ ತುಂಬಿಸುವ ಯೋಜನೆ ಸಾಕಾರಗೊಳಿಸುವಲ್ಲಿ ಶಾಸಕ ಮಂಜುನಾಥ್ ಯಶಸ್ವಿಯಾಗಿದ್ದಾರೆ.
ಎಂಬತ್ತು ಎಕರೆ ವಿಸ್ತೀರ್ಣದ ರಾಮನಗುಡ್ಡ ಜಲಾಶಯ ಸುಮಾರು 980 ಎಕರೆ ಅಚ್ಚುಕಟ್ಟು ಪ್ರದೇಶ ಹೊಂದಿದೆ. ಬೂದಬಾಳು ಗ್ರಾಮದಿಂದ ರಾಮನಗುಡ್ಡದವರೆಗೆ ಇರುವ ದೊಡ್ಡ ಹಳ್ಳದ ಮಾರ್ಗದಲ್ಲಿ 27 ಚೆಕ್ ಡ್ಯಾಂಗಳಿವೆ. ದೊಡ್ಡ ಹಳ್ಳದ ಮೂಲಕ ಕಾವೇರಿ ನೀರು ಹರಿಯುವುದರಿಂದ ಚೆಕ್ ಡ್ಯಾಂಗಳು ತುಂಬಿ ಸುತ್ತಮುತ್ತಲ ಸಾವಿರಾರು ಎಕರೆ ಪ್ರದೇಶದಲ್ಲಿ ಅಂತರ್ಜಲ ವೃದ್ಧಿಯಾಗಲಿದೆ. ಕೃಷಿ ಹಾಗೂ ಜನಜಾನುವಾರುಗಳಿಗೆ ನೀರಿನ ಬವಣೆ ತಪ್ಪಲಿದೆ. ಇದನ್ನೂ ಓದಿ: ಹಾವೇರಿ| ರಾಜ್ಯಮಟ್ಟದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೆಸರು ಮಾಡಿದ್ದ ಕೊಬ್ಬರಿ ಹೋರಿ ಸಾವು
ಈ ಮಹತ್ವದ ಯೋಜನೆಗೆ ಚಾಲನೆ ಸಿಗುತ್ತಿದ್ದಂತೆ ಈ ಭಾಗದ ಜನರ ಸಂತಸಕ್ಕೆ ಪಾರವೇ ಇಲ್ಲದಂತಾಗಿದ್ದು, ಬೂದಬಾಳು ಬಳಿ ಕಾವೇರಿ ನೀರು ಉಕ್ಕಿ ಹರಿಯುತ್ತಿದ್ದಂತೆ ಜನರ ಸಂಭ್ರಮ ಮುಗಿಲುಮುಟ್ಟಿತ್ತು. ಇದೇ ರೀತಿ ನೆನಗುದಿಗೆ ಬಿದ್ದಿರುವ ಹುಬ್ಬೆ ಹುಣಸೆ ಜಲಾಶಯದ ಯೋಜನೆಯನ್ನು ಅನುಷ್ಠಾನಗೊಳಿಸಬೇಕು. ಆ ಮೂಲಕ ಹನೂರು ಭಾಗದ ನೀರಿನ ಸಮಸ್ಯೆಯನ್ನು ನೀಗಿಸಬೇಕು ಎಂಬುದು ಜನರ ಆಶಯ.

