– ಉಳಿದ ಭಕ್ತರಂತೆ ಸಿಎಂ ವಿಜಯ್ ಕೂಡ ದೇವಿಯ ದರ್ಶನ ಮಾಡ್ತಾರೆ ಎಂದ ಅರ್ಚಕರು
ಉಡುಪಿ: ಕೊಲ್ಲೂರು ಮೂಕಾಂಬಿಕೆ (Kollur Mookambika Temple) ದರ್ಶನಕ್ಕೆ ತಮಿಳುನಾಡು ಸಿಎಂ ವಿಜಯ್ (Joseph Vijay) ಬರುತ್ತಿದ್ದಾರೆ ಎಂಬ ಕಾರಣಕ್ಕೆ ವಿಶೇಷ ಪೂಜೆಗಳೇನು ಇರುವುದಿಲ್ಲ ಎಂದು ದೇವಳದ ತಂತ್ರಿ ನಿತ್ಯಾನಂದ ಅಡಿಗ ಅವರು ತಿಳಿಸಿದ್ದಾರೆ.
ತಮಿಳುನಾಡಿ ಸಿಎಂ ವಿಜಯ್ ಕೊಲ್ಲೂರು ದೇವಳಕ್ಕೆ ಭೇಟಿ ಕುರಿತು ಮಾತನಾಡಿದ ಅವರು, ತಮಿಳುನಾಡಿನ ಮುಖ್ಯಮಂತ್ರಿ ವಿಜಯ ಅವರು ಇಂದು ಮಧ್ಯಾಹ್ನ 3 ಗಂಟೆಗೆ ಆಗಮಿಸಲಿದ್ದಾರೆ. ನಮಗೂ ಕೂಡ ಈ ಕುರಿತು ದೇವಸ್ಥಾನದಿಂದ ಒಂದು ವಿಜ್ಞಾಪನೆಯನ್ನು ಕಳಿಸಿದ್ದಾರೆ. ದೇವಸ್ಥಾನದಿಂದ ಒಳ್ಳೆಯ ರೀತಿಯಲ್ಲಿ ಸ್ವಾಗತಿಸಬೇಕು ಎನ್ನುವ ಸೂಚನೆ ಇದೆ. ದೇವಳದ ಅರ್ಚಕ ವೃಂದ ಸಿಬ್ಬಂದಿ ವರ್ಗಕ್ಕೆ ಮೌಖಿಕವಾಗಿ ಜೊತೆಗೆ ಲಿಖಿತವಾಗಿಯೂ ಆದೇಶ ನೀಡಿದ್ದಾರೆ. ತಮಿಳುನಾಡಿನಿಂದ ಕೊಲ್ಲೂರಿಗೆ ದೊಡ್ಡ ದೊಡ್ಡ ನಟರು ಪ್ರಭಾವಿಗಳು ಬರುವುದು ಸರ್ವೇಸಾಮಾನ್ಯ. ಹಿರಿಯ ಸಂಗೀತ ಮಾಂತ್ರಿಕ ಇಳಿಯರಾಜ, ಶಿವಮಣಿ ಅನೇಕರು ಇಲ್ಲಿಗೆ ಬರುತ್ತಾರೆ. ಜೊತೆಗೆ ನಮ್ಮ ರಾಜ್ಯದಿಂದ ಸಾಲುಮರದ ತಿಮ್ಮಕ್ಕ ಮೊದಲಾದವರು ಕೂಡ ಇಲ್ಲಿಗೆ ಭೇಟಿ ನೀಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ದೆಹಲಿಯಿಂದ ಹೊರಟ ತ.ನಾಡು ಸಿಎಂ ವಿಜಯ್; ಉಡುಪಿಯತ್ತ ಪ್ರಯಾಣ
ಈ ಹಿಂದೆ ತಮಿಳುನಾಡಿನ ಮುಖ್ಯಮಂತ್ರಿ ಆಗಿದ್ದ ಜಯಲಲಿತಾ ಅವರು ಭೇಟಿ ನೀಡಿದ್ದರು. ಬಳಿಕ ಸ್ಟ್ಯಾಲಿನ್ ಅವರ ಪತ್ನಿ, ಕುಟುಂಬದವರು ಬಂದು ಕೊಲ್ಲೂರು ದರ್ಶನ ಮಾಡಿದ್ದಾರೆ. ಹಾಗೆಯೇ ವಿಜಯ್ ಅವರ ಕುಟುಂಬದವರು ಈ ಹಿಂದೆ ಕೊಲ್ಲೂರಿಗೆ ಬರುತ್ತಿದ್ದರಂತೆ. ವಿಜಯ್ ಅವರು ಸಿಎಂ ಆದ ಬಳಿಕ ಮೊದಲ ಬಾರಿಗೆ ಕೊಲ್ಲೂರಿಗೆ ಭೇಟಿ ನೀಡುತ್ತಿದ್ದಾರೆ. ಕೊಲ್ಲೂರಿನಲ್ಲಿ ಸಿಎಂ ಬಂದಿದ್ದಾರೆ ಎನ್ನುವ ಕಾರಣಕ್ಕೆ ವಿಶೇಷ ಪೂಜೆಗಳೇನು ಇರುವುದಿಲ್ಲ. ಉಳಿದ ಭಕ್ತರಂತೆ ಸಿಎಂ ವಿಜಯ್ ಅವರು ಕೂಡ ದೇವಿಯ ದರ್ಶನ ಮಾಡಲಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಸರ್ಕಾರಿ ಪ್ರೋಟೋಕಾಲ್ ಪ್ರಕಾರ ಅವರು ಪೂರ್ಣಕುಂಭ ಸ್ವಾಗತದೊಂದಿಗೆ ದೇವಳಕ್ಕೆ ಬರಲಿದ್ದಾರೆ. ಒಳಗೆ ಬಂದು ದೇವರ ದರ್ಶನವನ್ನ ಮಾಡಿ ದೇವಸ್ಥಾನ ನೋಡಿ ತೆರಳಲಿದ್ದಾರೆ. ಇಂದು ಶುಕ್ರವಾರ ಬಹಳ ವಿಶೇಷ ದಿನವೇನಲ್ಲ. ಆದರೆ, ದೇವಿಗೆ ಸಂಜೆ ಪ್ರದೋಷ ಕಾಲಕ್ಕೂ ಮೊದಲು ಉತ್ಸವ ನಡೆಯಲಿದೆ. ಇದು ಸಿಎಂ ವಿಜಯ್ ಆಗಮನಕೋಸ್ಕರ ಮಾಡಿರುವ ಸಿದ್ಧತೆಗಳೇನಲ್ಲ. ಎಂದಿನಂತೆ ನಡೆಯುವ ಉತ್ಸವ ಇದಾಗಿದೆ. ಈ ಉತ್ಸವ ಪ್ರತಿ ಶುಕ್ರವಾರವು ನಡೆಯುವಂತೆ ಒಂದು ಸಾಮಾನ್ಯ ಪೂಜಾ ಪ್ರಕ್ರಿಯೆ. ಕೊಲ್ಲೂರಿನಲ್ಲಿ ಯಾರೇ ಬಂದರೂ ಕೂಡ ವಿಶೇಷವಾದ ಪೂಜೆ ಎನ್ನುವ ಯಾವುದೇ ಪರಿಪಾಠವಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಇಂದು ಕೊಲ್ಲೂರು ಮೂಕಾಂಬಿಕೆ ಸನ್ನಿಧಿಗೆ ತಮಿಳುನಾಡು ಸಿಎಂ ವಿಜಯ್
ಕೆಲವು ದೇವಸ್ಥಾನಗಳಲ್ಲಿ ವಿಶೇಷ ವ್ಯಕ್ತಿಗಳು ಬಂದಾಗ ಪದೇ ಪದೇ ಮಂಗಳಾರತಿ ಮಾಡುವ ಪ್ರಕ್ರಿಯೆ ಇದೆ. ಆದರೆ, ನಮ್ಮ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದಲ್ಲಿ ಈ ರೀತಿಯ ಯಾವುದೇ ಪೂಜಾ ಪ್ರಕ್ರಿಯೆಗಳು ಇಲ್ಲ. ಮಂಗಳಾರತಿಯ ಸಮಯದಲ್ಲಿ ಸಿಎಂ ವಿಜಯ್ ಅವರು ಆಗಮಿಸಿದರೆ ಅವರಿಗೆ ಮಂಗಳಾರತಿ ನೋಡುವ ಅವಕಾಶವಿದೆ. ದೇವರ ಮೇಲೆ ವಿಶ್ವಾಸ ಇರುವವರು ಎಲ್ಲರೂ ಕೊಲ್ಲೂರು ಶ್ರೀ ಮೂಕಾಂಬಿಕೆ ಸನ್ನಿಧಿಗೆ ಬರುತ್ತಾರೆ ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಅರ್ಚಕ ನಿತ್ಯಾನಂದ ಅಡಿಗ ವಿವರಿಸಿದರು.
