ಇಸ್ಲಾಮಾಬಾದ್: ಕರಾಚಿಯಲ್ಲಿರುವ (Karachi) ಪಾಕ್ ಸೇನಾ ನೆಲೆಯ (Pak Army Base) ಮೇಲೆ ಉಗ್ರರು ಪುಲ್ವಾಮಾ ಮಾದರಿ ದಾಳಿ ನಡೆಸಿದ್ದಾರೆ. ಸ್ಫೋಟಕ ತುಂಬಿದ್ದ ವಾಹನವನ್ನು ಗುಲಿಸ್ತಾನ್-ಇ-ಜೌಹರ್‌ನಲ್ಲಿರುವ ಅರೆಸೈನಿಕ ಪಡೆಯ ಪ್ರಾಂತೀಯ ಪ್ರಧಾನ ಕಚೇರಿಗೆ ಉಗ್ರರು ಡಿಕ್ಕಿ ಹೊಡೆಸಿದ್ದಾರೆ. ಈ ದಾಳಿಯಿಂದ ನಾಲ್ವರು ಪಾಕ್ ಸೈನಿಕರು ಸಾವನ್ನಪ್ಪಿದ್ದಾರೆ.
ಈ ಘಟನೆಯ ಬಳಿಕ ಮತ್ತೊಂದು ದಾಳಿಗೆ ಸಜ್ಜಾಗಿದ್ದ ಉಗ್ರರ ಮೇಲೆ ಪಾಕ್ ಪಡೆ (Pak Army) ಗುಂಡಿನ ದಾಳಿ ನಡೆಸಿದ್ದು, 6 ಮಂದಿ ಉಗ್ರರು ಬಲಿಯಾಗಿದ್ದಾರೆ. ಸ್ಫೋಟದ ನಂತರ ಮೊಸಾಮಿಯಾತ್ ಚೌರಂಗಿ ಪ್ರದೇಶದ ಸುತ್ತಲೂ ಭಾರೀ ಗುಂಡಿನ ಸದ್ದು ಕೇಳಿಬಂದಿದೆ. ಸಶಸ್ತ್ರ ಸೇವಾ ಸಿಬ್ಬಂದಿ ಪ್ರದೇಶವನ್ನು ಸುತ್ತುವರೆದಿದ್ದಾರೆ. ಕ್ಷಿಪ್ರ ಪ್ರತಿಕ್ರಿಯೆ ಪಡೆ ಮತ್ತು ಪೊಲೀಸ್ ಕಮಾಂಡೋಗಳಂತಹ ವಿಶೇಷ ಘಟಕಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಇದನ್ನೂ ಓದಿ: ಅಪರಿಚಿತ ವ್ಯಕ್ತಿಯ ಗುಂಡೇಟಿಗೆ ಪುಲ್ವಾಮಾ ದಾಳಿಯ ಮಾಸ್ಟರ್‌ಮೈಂಡ್ ಹಮ್ಜಾ ಬುರ್ಹಾನ್ ಹತ್ಯೆ
ಕರಾಚಿಯಲ್ಲಿರುವ ಸಿಂಧ್ ರೇಂಜರ್ಸ್ ನೆಲೆಯ ಮೇಲಿನ ದಾಳಿಯ ಯತ್ನವನ್ನು ಪಾಕಿಸ್ತಾನ ಪಡೆಗಳು ವಿಫಲಗೊಳಿಸಿವೆ. ಈ ವೇಳೆ ಆರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ. ಒಬ್ಬನನ್ನು ಜೀವಂತವಾಗಿ ಸೆರೆಹಿಡಿಯಲಾಗಿದೆ ಎಂದು ವರದಿಯಾಗಿದೆ.
ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಯಿಂದ ಬೇರ್ಪಟ್ಟ ಉಗ್ರಗಾಮಿ ಗುಂಪು ಜಮಾತ್-ಉಲ್-ಅಹ್ರಾರ್ (ಜೆಯುಎ), ಸಿಂಧ್ ರೇಂಜರ್ಸ್ ಪ್ರಧಾನ ಕಚೇರಿಯ ಮೇಲೆ ನಡೆದ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಖುಲಾಫಾ-ಎ-ರಷಿದ್ದೀನ್ ಇಶ್ತಿಶ್ಹಾದಿ ಬ್ರಿಗೇಡ್ ಎಂಬ ಆತ್ಮಹತ್ಯಾ ದಳ ಈ ದಾಳಿಗಳನ್ನು ನಡೆಸಿದೆ.
ಇತ್ತೀಚಿನ ವರ್ಷಗಳಲ್ಲಿ ಪೊಲೀಸರು ಮತ್ತು ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನದಲ್ಲಿ ಉಗ್ರರ ದಾಳಿಗಳು ಹೆಚ್ಚಾಗಿವೆ. ಇದನ್ನೂ ಓದಿ: ಪುಲ್ವಾಮಾ ದಾಳಿಗೆ 7 ವರ್ಷ – 2019ರ ಫೆ.14 ರಂದು ನಡೆದಿದ್ದು ಏನು?
