– ಗಾಂಜಾ ನೀಡಿ ಬ್ಲ್ಯಾಕ್‌ಮೇಲ್
ಚಿಕ್ಕೋಡಿ: ಪತ್ರಕರ್ತರ ಸೋಗಿನಲ್ಲಿ ಜನರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ನಾಲ್ವರು ಯೂಟ್ಯೂಬರ್‌ಗಳನ್ನು (Fake Youtubers) ಬೆಳಗಾವಿ (Belagavi) ಪೊಲೀಸರು (Hukkeri Police) ಬಂಧಿಸಿದ್ದಾರೆ.
ಯೂಟ್ಯೂಬ್ ಚಾನೆಲ್ ಹೆಸರಿನಲ್ಲಿ ಸುಲಿಗೆ ನಡೆಸುತ್ತಿದ್ದ ಈ ಗ್ಯಾಂಗ್‌ನ್ನು ಹುಕ್ಕೇರಿ ಪೊಲೀಸರು ಪತ್ತೆಹಚ್ಚಿ ಜೈಲಿಗಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯ ಕೊಟಬಾಗಿ ಗ್ರಾಮದ ಮೆಹಬೂಬ್ ಜಮಾದಾರ್ ಅವರನ್ನು ಟಾರ್ಗೆಟ್ ಮಾಡಿಕೊಂಡು ಆರೋಪಿಗಳು ಮೊದಲೇ ಗಾಂಜಾ ಪ್ಯಾಕೆಟ್ ನೀಡಿದ್ದಾರೆ. ಬಳಿಕ ಪೊಲೀಸರ ಹೆಸರಿನಲ್ಲಿ ಬೆನ್ನಟ್ಟಿಕೊಂಡು ಬಂದು, ಗಾಂಜಾ ಮಾರಾಟ ಮಾಡುತ್ತಿದ್ದೀಯಾ ಎಂದು ಬೆದರಿಕೆ ಹಾಕಿದ್ದಾರೆ.
ಗಾಂಜಾ ಪ್ಯಾಕೆಟ್ ನೀಡಿದ್ದನ್ನು ತಾವೇ ವಿಡಿಯೋ ಮಾಡಿ, ಹಣ ಕೊಟ್ಟರೆ ಕೇಸ್ ಹಾಕುವುದಿಲ್ಲ ಎಂದು ಬೆದರಿಸಿದ್ದಾರೆ. ಮೊದಲಿಗೆ 3 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿಗಳು, ಕೊನೆಗೆ ಮೆಹಬೂಬ್ ಬಳಿ ಇದ್ದ 60 ಸಾವಿರ ಹಣವನ್ನು ವಸೂಲಿ ಮಾಡಿದ್ದಾರೆ. ಅಷ್ಟೇ ಅಲ್ಲ, ಕೇಳಿದಷ್ಟು ಹಣ ಕೊಟ್ಟಿಲ್ಲವೆಂದು ಮೆಹಬೂಬ್‌ನ ವಿಡಿಯೋವನ್ನು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ.ಇದನ್ನೂ ಓದಿ: ಪ್ರತಿಭಟನೆ ಆರಂಭವಾದ ಮೊದಲ ದಿನವೇ ಪ್ರಧಾನ್ ರಾಜೀನಾಮೆ ನೀಡಲು ಮುಂದಾಗಿದ್ದರು: ಕೈಲಾಶ್ ವಿಜಯವರ್ಗೀಯ
ವಿಡಿಯೋ ವೈರಲ್ ಆದ ಬಳಿಕ ಮೆಹಬೂಬ್ ಹುಕ್ಕೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ, ಯೂಟ್ಯೂಬ್ ಮುಖವಾಡದಲ್ಲಿ ಸುಲಿಗೆ ಮಾಡುತ್ತಿದ್ದ ಜಾಲವನ್ನು ಬಯಲಿಗೆಳೆದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಲ್ಲಪ್ಪ ಮಾಳಾಜ್, ಮಲ್ಲಿಕಾರ್ಜುನ ಜುಲಫಿ, ಪೃಥ್ವಿರಾಜ್ ಚೌಹಾಣ್ ಹಾಗೂ ಡೇವಿಡ್ ತಂಗೇರಾಳ ಎಂಬ ನಾಲ್ವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಕಾರು, ಮೊಬೈಲ್ ಫೋನ್‌ಗಳು ಹಾಗೂ ನಗದು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಇದನ್ನೂ ಓದಿ: ಪಿಒಪಿ ಬೇಡ, ಪರಿಸರ ಸ್ನೇಹಿ ಗಣೇಶ ಮೂರ್ತಿ ಬಳಕೆಗೆ ಪ್ರಧಾನಿ ಮೋದಿ ಕರೆ
