ಬೆಂಗಳೂರು: ನಗರದಲ್ಲಿ ಎರಡನೇ ವಿಮಾನ ನಿಲ್ದಾಣಕ್ಕೆ (Bengaluru Second Airport) ಮೂರು ಸ್ಥಳಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದ್ದು, ಅದರಲ್ಲಿ ತುಮಕೂರು (Tumakuru) ಜಿಲ್ಲೆಯಲ್ಲಿ ಮಾಡುವ ಪ್ರಸ್ತಾಪ ಇಲ್ಲ ಅಂತಾ ಸರ್ಕಾರ ಸ್ಪಷ್ಟಪಡಿಸಿದೆ.
ಅಧಿವೇಶನದಲ್ಲಿ ತುಮಕೂರು ಎಂಎಲ್‌ಎ ಜ್ಯೋತಿ ಗಣೇಶ್ ಕೇಳಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಸಚಿವ ಎಂಬಿ ಪಾಟೀಲ್ (MB Patil) ಅವರು ಉತ್ತರಿಸಿದರು. ಎರಡನೇ ವಿಮಾನ ನಿಲ್ದಾಣಕ್ಕೆ ಸೋಮನಹಳ್ಳಿ-ಕನಕಪುರ ರಸ್ತೆ ರಾಮನಗರ, ಚೂಡಹಳ್ಳಿ- ಕನಕಪುರ ರಸ್ತೆ ರಾಮನಗರ, ಗುಡೆಮಾರನಹಳ್ಳಿ ನೆಲಮಂಗಲ ಮೂರು ಸ್ಥಳಗಳು ಶಾರ್ಟ್‌ಲಿಸ್ಟ್ ಆಗಿದೆ ಎಂದು ಸದನಕ್ಕೆ ಮಾಹಿತಿ ನೀಡಿದ್ದಾರೆ. ಜೊತೆಗೆ ಹಾರೋಹಳ್ಳಿ ಕೂಡ ಅಂತಿಮ ಪರಿಶೀಲನೆಯ ಹಂತದಲ್ಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಕಟ್ ಆಗಿ ಹೊಳೆಗೆ ಬಿದ್ದಿದ್ದ ವಿದ್ಯುತ್ ತಂತಿಯನ್ನ ಈಜಿ ಮರು ಜೋಡಿಸಿದ ಲೈನ್‌ಮನ್
ಈ ಹಿಂದೆ ತುಮಕೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ಬೇಕು ಎಂದು ಪರಮೇಶ್ವರ್ ಆಗ್ರಹಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿ, ಕೇಂದ್ರ ಸರ್ಕಾರದ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ನೀತಿಯ ಪ್ರಕಾರ, ಹಾಲಿ ಇರುವ ನಾಗರಿಕವಿಮಾನ ನಿಲ್ದಾಣದಿಂದ 150 ಕಿ.ಮೀ ವ್ಯಾಪ್ತಿಯಲ್ಲಿ ಇನ್ನೊಂದು ಹೊಸ ವಿಮಾನ ನಿಲ್ದಾಣಕ್ಕೆ ಸಾಮಾನ್ಯವಾಗಿ ಅನುಮತಿ ನೀಡಲಾಗುವುದಿಲ್ಲ. ಒಂದು ವೇಳೆ ಈ ವ್ಯಾಪ್ತಿಯಲ್ಲಿ ವಿಮಾನ ನಿಲ್ದಾಣ ನಿರ್ಮಿಸಬೇಕಾದರೆ, ಹಾಲಿ ಇರುವ ವಿಮಾನ ನಿಲ್ದಾಣದ ಮೇಲಾಗುವ ಪ್ರಭಾವವನ್ನು ಆಧರಿಸಿ ಪ್ರತ್ಯೇಕವಾಗಿ ಪರಿಶೀಲಿಸಿ ಕೇಂದ್ರ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದಿದ್ದಾರೆ.
ಇದೇ ವೇಳೆ ಮುಂಬರುವ ಬಜೆಟ್‌ನಲ್ಲಿ ತುಮಕೂರು ವಿಮಾನ ನಿಲ್ದಾಣಕ್ಕೆ ಹಣ ಕಾಯ್ದಿರಿಸಲಾಗುತ್ತದೆಯೇ ಎಂಬ ಪ್ರಶ್ನೆಗೆ, ಅಂತಹ ಯಾವುದೇ ಯೋಜನೆ ಸರ್ಕಾರದ ಪರಿಶೀಲನೆಯಲ್ಲಿ ಇಲ್ಲದಿರುವುದರಿಂದ ಅನುದಾನ ಹಂಚಿಕೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಬ್ಯಾಂಕ್ ಎದುರೇ ಗುಂಡಿಕ್ಕಿ ಪತ್ನಿ ಕೊಂದ ಲಕ್ನೋ SBI ಉದ್ಯೋಗಿ – ಮನೆಯಲ್ಲಿ ಸಹೋದರಿ ಕೊಂದು ತಾನೂ ಆತ್ಮಹತ್ಯೆ

