– ಯಾವುದೇ ಸೂಚನೆ ನೀಡದೆ ದಾಳಿ
ಟೆಹ್ರಾನ್: ಹಾರ್ಮುಜ್ ಜಲಸಂಧಿಯಲ್ಲಿ (Hormuz) ಭಾರತದ ಎರಡು ತೈಲ ಟ್ಯಾಂಕರ್‌ಗಳ (Indian Oil Tanker) ಮೇಲೆ ಇರಾನ್‌ನಿಂದ (Iran) ಗುಂಡಿನ ದಾಳಿ ನಡೆದಿದೆ ಎಂದು ವರದಿಯಾಗಿದೆ. ಕ್ವೆಶ್ಮ್ ಮತ್ತು ಲಾರಕ್ ದ್ವೀಪಗಳ ನಡುವಿನ ಸಮುದ್ರದಲ್ಲಿ ಈ ದಾಳಿ ನಡೆದಿದೆ. ದಾಳಿ ಬಳಿಕ ತೈಲ ಟ್ಯಾಂಕರ್‌ಗಳು ಅಲ್ಲಿಂದ ವಾಪಸ್ ಆಗಿವೆ ಎಂದು ವರದಿಯಾಗಿದೆ.
ಜಲಸಂಧಿಯಲ್ಲಿ ಹಡಗುಗಳು ಬರುತ್ತಿದ್ದಂತೆ ಇರಾನ್‌ನ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ (IRGC) ಎರಡು ಗನ್‌ಬೋಟ್‌ಗಳು ಅವನ್ನು ಸಮೀಪಿಸಿವೆ. ಈ ವೇಳೆ ಯಾವುದೇ ರೇಡಿಯೋ ಸಂದೇಶ ನೀಡದೆ ಗುಂಡಿನ ದಾಳಿ ನಡೆಸಲಾಗಿದೆ ಎಂದು ಟ್ಯಾಂಕರ್‌ನ ಕ್ಯಾಪ್ಟನ್ ವರದಿ ಮಾಡಿದ್ದಾರೆ. ಇದನ್ನೂ ಓದಿ: ಅಮೆರಿಕ ನೌಕಾ ದಿಗ್ಬಂಧನ ತೆಗೆಯದಿದ್ರೆ, ಹಾರ್ಮುಜ್ ಜಲಸಂಧಿಯನ್ನ ಮತ್ತೆ ಮುಚ್ಚುತ್ತೇವೆ: ಇರಾನ್ ವಾರ್ನಿಂಗ್
ಒಮನ್‌ನ ಈಶಾನ್ಯಕ್ಕೆ 37 ಕಿಲೋಮೀಟರ್ ದೂರದಲ್ಲಿ ಈ ದಾಳಿ ನಡೆದಿದೆ. ಟ್ಯಾಂಕರ್ ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಯುಕೆ ಕಡಲ ವ್ಯಾಪಾರ ಕಾರ್ಯಾಚರಣೆ ಕೇಂದ್ರ ಮಾಹಿತಿ ಹಂಚಿಕೊಂಡಿದೆ.
ಈ ಬೆಳವಣಿಗೆ ನಡುವೆ ಜಲಸಂಧಿಯನ್ನು ದಾಟಲು ಪ್ರಯತ್ನಿಸುತ್ತಿರುವ ವ್ಯಾಪಾರಿ ಹಡಗುಗಳು ಇರಾನಿನ ನೌಕಾಪಡೆಯಿಂದ ರೇಡಿಯೋ ಸಂದೇಶಗಳನ್ನು ಸ್ವೀಕರಿಸಿವೆ. ಈ ಸಂದೇಶದಲ್ಲಿ ಅಮೆರಿಕ ಸರ್ಕಾರವು ತನ್ನ ಬದ್ಧತೆಯನ್ನು ತೋರಿಸುವಲ್ಲಿ ವಿಫಲವಾಗಿದೆ. ಇದೇ ಕಾರಣಕ್ಕೆ ಹಾರ್ಮುಜ್ ಜಲಸಂಧಿಯನ್ನು ಮತ್ತೆ ಸಂಪೂರ್ಣವಾಗಿ ಮುಚ್ಚಿದ್ದೇವೆ ಎಂದು ನಾವು ಘೋಷಿಸುತ್ತೇವೆ. ಯಾವುದೇ ರಾಷ್ಟ್ರದ ಹಡಗು ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗಲು ಅನುಮತಿಸಲಾಗುವುದಿಲ್ಲ ಎಂದು ಎಚ್ಚರಿಸಲಾಗಿದೆ.
ಮತ್ತೆ ಹಾರ್ಮುಜ್ ಜಲಸಂಧಿ ನಿರ್ಬಂಧ
ಹಾರ್ಮುಜ್ ಜಲಸಂಧಿ ಸಶಸ್ತ್ರ ಪಡೆಗಳ ಕಟ್ಟುನಿಟ್ಟಾದ ನಿರ್ವಹಣೆ ಮತ್ತು ನಿಯಂತ್ರಣದಲ್ಲಿದೆ ಎಂದು ಇರಾನ್ ಸೇನೆ ಹೇಳಿದೆ. ತಮ್ಮ ದೇಶದ ಬಂದರುಗಳ ಮೇಲಿನ ಯುಎಸ್ ದಿಗ್ಬಂಧನ ಜಾರಿಯಲ್ಲಿರುವವರೆಗೆ ಜಲಸಂಧಿಯ ಮೂಲಕ ಹಡಗುಗಳ ಸಂಚಾರ ನಿರ್ಬಂಧ ಮುಂದುವರಿಯುತ್ತದೆ. ಇರಾನ್‌ಗೆ ಭೇಟಿ ನೀಡುವ ಎಲ್ಲಾ ಹಡಗುಗಳಿಗೆ ಅಮೆರಿಕ (America) ಅವಕಾಶ ನೀಡುವವರೆಗೂ ಹಾರ್ಮುಜ್ ಜಲಸಂಧಿಯನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲಾಗುತ್ತದೆ ಎಂದು ಇರಾನ್ ಎಚ್ಚರಿಸಿದೆ.
ಪರಮಾಣು ಕಾರ್ಯಕ್ರಮ ಸೇರಿದಂತೆ ವಾಷಿಂಗ್ಟನ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳುವವರೆಗೆ ಅಮೆರಿಕದ ದಿಗ್ಬಂಧನ ಜಾರಿಯಲ್ಲಿರುತ್ತದೆ ಎಂದು ಟ್ರಂಪ್ ಹೇಳಿದ್ದಕ್ಕೆ ಪ್ರತಿಕ್ರಿಯೆಯಾಗಿ ಇರಾನ್ ಈ ಕ್ರಮಕೈಗೊಂಡಿದೆ.
ಇರಾನ್‌ನ ನಿಯಂತ್ರಣ ಕ್ರಮವನ್ನು ನವೀಕರಿಸಿದ ನಂತರ ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗಲು ಬಂದಿದ್ದ ಸುಮಾರು 10 ಹಡಗುಗಳು ಶನಿವಾರ ಹಿಂತಿರುಗಿವೆ ಎಂದು ಹಡಗು ಟ್ರ್ಯಾಕಿಂಗ್ ಡೇಟಾ ತಿಳಿಸಿದೆ. ಇದನ್ನೂ ಓದಿ: ವಿಶ್ವದ ಎಲ್ಲಾ ರಾಷ್ಟ್ರಗಳಿಗೆ ಹಾರ್ಮುಜ್ ಜಲಸಂಧಿ ಓಪನ್ – ಧನ್ಯವಾದ ಹೇಳಿದ ಟ್ರಂಪ್

