ದಿಸ್ಪುರ್: 14 ವರ್ಷಗಳ ಹಿಂದೆ ನಡೆದಿದ್ದ ಶಾಲಾ ಶಿಕ್ಷಕರೊಬ್ಬರ (Teacher) ನಾಪತ್ತೆ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತ್ರಿಪುರಾ (Tripura) ಪೊಲೀಸರು ಅಸ್ಸಾಂನ (Assam) ಕರೀಂಗಂಜ್ನಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.
ಬಾಜು ಬಂಧಿತ ಆರೋಪಿ. ಈತನನ್ನು ಗುರುವಾರ (ನ.19) ಬಂಧಿಸಿ ಅಗರ್ತಲಾಕ್ಕೆ ಕರೆತರಲಾಗಿದೆ. ಅಲ್ಲಿ ಆತನನ್ನು ಪಶ್ಚಿಮ ತ್ರಿಪುರಾದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯವು ನಾಲ್ಕು ದಿನಗಳ ಕಾಲ ಸಿಐಡಿ ಪೊಲೀಸ್ ಕಸ್ಟಡಿ ಆರೋಪಿಯನ್ನು ಒಪ್ಪಿಸಿದೆ. ಇದನ್ನೂ ಓದಿ: ನಿನಗೊಂದು ಗತಿ ಕಾಣಿಸುತ್ತೇನೆ ಅಂತ ಹೆಂಡತಿ ಸ್ನೇಹಿತನಿಗೆ ಆಸಿಡ್ ಎರಚಿದ ಪತಿ!
ಏನಿದು ಪ್ರಕರಣ?
ಮೇ 28, 2011 ರಂದು 40 ವರ್ಷ ವಯಸ್ಸಿನ ಅಗರ್ತಲಾದ ಭಾಟಿ ಅಭೋಯ್ನಗರ ನಿವಾಸಿ ಆಶಿಶ್ ಸೋಮ್ ನಾಪತ್ತೆಯಾಗಿದ್ದರು. ಟಿಂಬರ್ ವ್ಯವಹಾರದಲ್ಲಿ ಭಾಗಿಯಾಗಿದ್ದ ಸೋಮ್, ವ್ಯವಹಾರಕ್ಕೆ ಸಂಬಂಧಿಸಿದಂತೆ ಕಾಂಚನಪುರಕ್ಕೆ ತೆರಳಿದ್ದರು. ಆದರೆ ಅವರು ಮನೆಗೆ ವಾಪಸ್ ಆಗಿರಲಿಲ್ಲ.
ಸೋಮ್ ಅವರನ್ನು ಅಪಹರಿಸಿದ್ದೇವೆ ಎಂದು ಕುಟುಂಬಕ್ಕೆ ದುಷ್ಕರ್ಮಿಗಳು ಕರೆ ಮಾಡಿದ್ದರು. ಅಪಹರಣಕಾರರು ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಕುಟುಂಬವು ಕೆಲವು ದಿನಗಳ ಅಂತರದಲ್ಲಿ ಸುಮಾರು 25 ಲಕ್ಷ ರೂ.ಗಳನ್ನು ಅಪಹರಣಕಾರರಿಗೆ ನೀಡಿತ್ತು. ಹಣ ನೀಡಿದ್ದರೂ ಸಹ ಸೋಮ್ ಹಿಂತಿರುಗಲಿಲ್ಲ. ಅವರ ಬಗ್ಗೆ ಯಾವುದೇ ಮಾಹಿತಿ ಕೂಡ ಸಿಕ್ಕಿರಲಿಲ್ಲ. ಈ ಬಗ್ಗೆ ತನಿಖೆ ನಡೆಸುವಂತೆ ಕುಟುಂಬಸ್ಥರು ನ್ಯಾಯಾಲಯದ ಮೊರೆ ಹೋಗಿದ್ದರು.
ತನಿಖೆಯ ವೇಳೆ, ಸೋಮ್ ಅವರ ಬ್ಯುಸಿನೆಸ್ ಪಾರ್ಟ್ನರ್ ಎಂದು ಹೇಳಲಾಗಿದ್ದ ಹುಸೇನ್ ಅಹ್ಮದ್ ವಿರುದ್ಧ ಸಹ ಶಂಕೆ ವ್ಯಕ್ತವಾಗಿತ್ತು. ಇನ್ನೂ ಬಂಧಿತ ಆರೋಪಿ ಬಾಜುನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಆತ ಹಲವು ವಿಚಾರಗಳನ್ನು ಬಾಯಿಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಸ್ಥಿಪಂಜರ ಹೊರತೆಗೆದು ತನಿಖೆ
ಈ ವರ್ಷ ಸೆ.16 ರಂದು ಕರೀಮ್ಗಂಜ್ ಜಿಲ್ಲೆಯ ಸೋನ್ಬಿಲ್ ಪ್ರದೇಶದ ಸ್ಮಶಾನದಲ್ಲಿ ಮೂರು ಸಮಾಧಿಗಳಿಂದ ಪೊಲೀಸರು ಅಸ್ಥಿಪಂಜರದ ಅವಶೇಷಗಳನ್ನು ತೆಗೆದಿದ್ದರು. ಈ ಅವಶೇಷಗಳು ಸಿಕ್ಕ ಬಳಿಕ ತನಿಖೆ ಚುರುಕು ಪಡೆದುಕೊಂಡಿದೆ.
ಪೊಲೀಸರು ಸೋಮ್ ಕುಟುಂಬದ ಸದಸ್ಯರಿಂದ ಡಿಎನ್ಎ ಮಾದರಿಗಳನ್ನು ಸಂಗ್ರಹಿಸಿದ್ದು, ಪತ್ತೆಯಾದ ಅವಶೇಷಗಳೊಂದಿಗೆ ಪರೀಕ್ಷೆಗೆ ರವಾನಿಸಿದ್ದಾರೆ. ಈ ವರದಿ ಸಿಕ್ಕ ಬಳಿಕ ತನಿಖೆಗೆ ಹೊಸ ಆಯಾಮ ಸಿಗಲಿದೆ. ಇದನ್ನೂ ಓದಿ: ಇನ್ಫ್ಲುಯೆನ್ಸರ್ ಮನೆಗೆ ನುಗ್ಗಿ ಮದುವೆಗೆ ಪಟ್ಟು ಹಿಡಿದ ಅಭಿಮಾನಿಗೆ ಥಳಿತ – ಚಿಕಿತ್ಸೆ ಫಲಿಸದೆ ಸಾವು
