– ಇನ್ನೂ 4,000 ಜನರು ಕಣ್ಮರೆ
ಕಠ್ಮಂಡು: ನೇಪಾಳ-ಟಿಬೆಟ್ ಗಡಿಯಲ್ಲಿ ಸಂಭವಿಸಿದ ಹಿಮಪಾತ ಮತ್ತು ಬಂಡೆಗಳ ಕುಸಿತದಿಂದ ಭೋಟೇಕೋಷಿ ನದಿಯಲ್ಲಿ ಉಂಟಾದ ಭಾರಿ ಪ್ರವಾಹಕ್ಕೆ ಸಿಲುಕಿ ಸಾವನ್ನಪ್ಪಿದವರ ಸಂಖ್ಯೆ 1,003ಕ್ಕೆ ತಲುಪಿದೆ. ಮಳೆಯ ನಡುವೆಯೂ ರಕ್ಷಣಾ ಕಾರ್ಯ ಮುಂದುವರಿದಿದ್ದು, ಈವರೆಗೂ 11,814 ಮಂದಿಯನ್ನು ರಕ್ಷಣೆ ಮಾಡಲಾಗಿದೆ.
ವಿನಾಶಕಾರಿ ಜಲಪ್ರಳಯದಿಂದಾಗಿ ನೇಪಾಳದಲ್ಲಿ (Nepal) 982 ಜನ ಹಾಗೂ ಚೀನಾದಲ್ಲಿ (China) 16 ಮಂದಿ ಮೃತಪಟ್ಟಿದ್ದಾರೆ. ಇನ್ನೂ 4,000 ಜನರು ಕಣ್ಮರೆಯಾಗಿದ್ದು, ಅವರ ಪತ್ತೆಗಾಗಿ ರಕ್ಷಣಾ ಕಾರ್ಯಚರಣೆ ಭರದಿಂದ ಸಾಗುತ್ತಿದೆ. ಪರಿಹಾರ ಮತ್ತು ರಕ್ಷಣಾ ಕಾರ್ಯಗಳಿಗಾಗಿ 21,300ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದನ್ನೂ ಓದಿ: ನೇಪಾಳದ ನೆರವಿಗೆ ಆಗಮಿಸಿದ ಬಾಲಿವುಡ್ ನಟ ಸೋನು ಸೂದ್

ಸೇತುವೆಗಳು ಮತ್ತು ರಸ್ತೆಗಳು ಕೊಚ್ಚಿಹೋಗಿ ಸಂಪರ್ಕ ಕಡಿತಗೊಂಡಿರುವ ಪ್ರದೇಶಗಳಲ್ಲಿ ಸಿಲುಕಿರುವ ಜನರನ್ನು ಹೆಲಿಕಾಪ್ಟರ್‌ಗಳ ಮೂಲಕ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದ್ದು, ಆಹಾರ ಹಾಗೂ ಅಗತ್ಯ ಸಾಮಾಗ್ರಿಗಳನ್ನು ತಲುಪಿಸಲಾಗುತ್ತಿದೆ. ಪೂರ್ವ, ಮಧ್ಯ ಮತ್ತು ಪಶ್ಚಿಮ ನೇಪಾಳದ ನದಿಗಳ ಮೇಲೆ ನಿರಂತರ ನಿಗಾ ಇಡಲಾಗಿದ್ದು, ರಸುವಾ ಮತ್ತು ನುವಾಕೋಟ್ ಜಿಲ್ಲೆಗಳಲ್ಲಿ ಪ್ರವಾಹದ ಆತಂಕ ಮುಂದುವರಿದಿದೆ. ಈ ನಡುವೆ, ಹವಾಮಾನ ವೈಪರೀತ್ಯ ಮತ್ತು ಮಳೆ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ.

ಆ.26ರಂದು ಸಂಭವಿಸಿದ ಈ ದುರಂತದಲ್ಲಿ ಪ್ರವಾಹದ ನೀರು ಹಳ್ಳಿಗಳು, ಪಟ್ಟಣಗಳು, ಮನೆಗಳು, ವಾಹನಗಳು, ರಸ್ತೆಗಳು, ಸೇತುವೆಗಳು ಹಾಗೂ ಜಲವಿದ್ಯುತ್ ಯೋಜನೆಗಳನ್ನು ಧ್ವಂಸಗೊಳಿಸಿದೆ. ಎಂಟು ಜಿಲ್ಲೆಗಳಲ್ಲಿ ಒಟ್ಟು 1,003 ಶವಗಳನ್ನು ಪತ್ತೆಹಚ್ಚಲಾಗಿದೆ. ನೇಪಾಳದ ಚಿತ್ವನ್ ಎಂಬಲ್ಲಿ 321 ಅತಿ ಹೆಚ್ಚು ಸಾವುಗಳು ವರದಿಯಾಗಿದೆ. ಇನ್ನೂ ನವಲ್‌ಪರಾಸಿಯ ಪೂರ್ವದಲ್ಲಿ 216 ಜನ ಮೃತಪಟ್ಟಿರುವುದು ವರದಿಯಾಗಿವೆ. ಉಳಿದಂತೆ ನುವಾಕೋಟ್‌ನಲ್ಲಿ 95, ಗೊರ್ಖಾದಲ್ಲಿ 65, ಧಾಡಿಂಗ್‌ನಲ್ಲಿ 57, ರಸುವಾದಲ್ಲಿ 41 ಮತ್ತು ತನಾಹುನ್‌ನಲ್ಲಿ 38 ಶವಗಳು ಪತ್ತೆಯಾಗಿವೆ. 583 ವಿದೇಶಿ ಪ್ರಜೆಗಳು ಸೇರಿದಂತೆ ಸುಮಾರು 4,000 ಜನರು ಇನ್ನೂ ಪತ್ತೆಯಾಗಿಲ್ಲ. ಇದುವರೆಗೂ ಸುಮಾರು 11,814 ಮಂದಿಯನ್ನು ರಕ್ಷಿಸಲಾಗಿದೆ.ಇದನ್ನೂ ಓದಿ: ಒಂದೇ ಮನೆಯಲ್ಲಿ 23 ಮೃತದೇಹಗಳು ಪತ್ತೆ! – ನೇಪಾಳ ಪ್ರವಾಹದ ಭೀಕರತೆಗೆ ಬೆಚ್ಚಿಬಿದ್ದ ರಕ್ಷಣಾ ತಂಡ

ಮಳೆಯಿಂದಾಗಿ ನದಿಗಳ ನೀರಿನ ಮಟ್ಟ ಹೆಚ್ಚಳ:
ಮತ್ತೆ ಮಳೆ ಸುರಿಯುತ್ತಿರುವುದರಿಂದ ನದಿಗಳ ನೀರಿನ ಮಟ್ಟ ಹೆಚ್ಚುತ್ತಿದ್ದು, ಅಧಿಕಾರಿಗಳು ಹೊಸ ಎಚ್ಚರಿಕೆಗಳನ್ನು ನೀಡಿದ್ದಾರೆ. ಪರಿಸ್ಥಿತಿ ಅವಲೋಕಿಸಲು ಇಂಧನ ಸಚಿವ ಬಿರಾಜ್ ಭಕ್ತ ಶ್ರೇಷ್ಠ ಅವರು ಮಂಗಳವಾರ (ಸೆ.1) ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ದುರ್ಬಲ ಮತ್ತು ದೂರದ ಪ್ರದೇಶಗಳಲ್ಲಿ ಸ್ಯಾಟಲೈಟ್ ಆಧಾರಿತ ಸಂವಹನ ವ್ಯವಸ್ಥೆ ಹಾಗೂ ಮಾನಿಟರಿಂಗ್ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದ್ದು, ಇದು ನದಿ ನೀರಿನ ಮಟ್ಟದ ಬಗ್ಗೆ ಮುನ್ಸೂಚನೆ ನೀಡಲಿದೆ.

11 ಜಲವಿದ್ಯುತ್ ಯೋಜನೆಗಳ 600ಕ್ಕೂ ಹೆಚ್ಚು ಕಾರ್ಮಿಕರು ಸಂಪರ್ಕಕ್ಕೆ ಸಿಕ್ಕಿಲ್ಲ. ಅಪ್ಪರ್ ತ್ರಿಶೂಲಿ-1ರಲ್ಲಿ 20 ವರ್ಷದ ಅನುಷ್ ಗುರುಂಗ್ ತಮ್ಮ ತಂದೆ ಲಕ್ಷ್ಮಣ್ ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅಪ್ಪರ್ ತ್ರಿಶೂಲಿ-3ಬಿಯಲ್ಲಿ 122 ಜನ ಹಾಗೂ ಅಪ್ಪರ್ ತ್ರಿಶೂಲಿ-3ಎಯಲ್ಲಿ 30 ರಿಂದ 40 ಕಾರ್ಮಿಕರು ಸುರಂಗದೊಳಗೆ ಸಿಲುಕಿರುವ ಶಂಕೆ ಇದೆ. ಸುರಂಗಗಳ ಪ್ರವೇಶದ್ವಾರಗಳು ಮಣ್ಣು ಮತ್ತು ಅವಶೇಷಗಳಿಂದ ಮುಚ್ಚಿಹೋಗಿರುವುದರಿಂದ ರಕ್ಷಣಾ ಕಾರ್ಯಕ್ಕೆ ತೀವ್ರ ತೊಂದರೆಯಾಗಿದೆ.ಇದನ್ನೂ ಓದಿ: Nepal Flood | ಮೃತರ ಸಂಖ್ಯೆ 939ಕ್ಕೆ ಏರಿಕೆ, ಇನ್ನೂ ಸುಮಾರು 4,000 ಜನ ಕಣ್ಮರೆ

