– ಆಶ್ರಯ ಪಡೆದಿದ್ದ ಮನೆಯೇ ಸಾವಿನ ಬಲೆಯಾಗಿ ಮಾರ್ಪಟ್ಟಿತು
ಕಠ್ಮಂಡು: ಆಗಸ್ಟ್ 26 ರಂದು ನೇಪಾಳ–ಟಿಬೆಟ್ ಗಡಿಯುದ್ದಕ್ಕೂ ಸಂಭವಿಸಿದ ವಿನಾಶಕಾರಿ ಹಠಾತ್ ಪ್ರವಾಹದ ಬಳಿಕ ನಾಪತ್ತೆಯಾಗಿರುವ ಸಾವಿರಾರು ಜನರಿಗಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಸಾವಿನ ಸಂಖ್ಯೆ 939ಕ್ಕೆ ಏರಿಕೆಯಾಗಿದ್ದು, 4,000ಕ್ಕೂ ಹೆಚ್ಚು ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. ಈ ನಡುವೆ ನುವಾಕೋಟ್‌ನಲ್ಲಿ ಪ್ರವಾಹದ ಅವಶೇಷಗಳಡಿ ಹೂತುಹೋಗಿದ್ದ ಒಂದೇ ಮನೆಯಿಂದ 23 ಮೃತದೇಹಗಳು ಪತ್ತೆಯಾಗಿರುವುದು ದುರಂತದ ಭೀಕರತೆಯನ್ನ ಮತ್ತೊಮ್ಮೆ ಬಯಲು ಮಾಡಿದೆ.
ನೇಪಾಳದ ಅತ್ಯಂತ ಹಾನಿಗೊಳಗಾದ ಪ್ರದೇಶಗಳಲ್ಲೊಂದಾದ ನುವಾಕೋಟ್‌ನ ಬಿಡೂರ್ ಪುರಸಭೆಯ ಬೆಟ್ರಾವತಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಭೋಟೇಕೋಶಿ ನದಿಯ ಉಕ್ಕಿ ಹರಿದ ನೀರಿನೊಂದಿಗೆ ಬಂದ ಅಪಾರ ಪ್ರಮಾಣದ ಮಣ್ಣು ಮತ್ತು ಅವಶೇಷಗಳಲ್ಲಿ ಮೂರು ಅಂತಸ್ತಿನ ಮನೆಯೊಂದು ಸಂಪೂರ್ಣವಾಗಿ ಹೂತುಹೋಗಿತ್ತು. ರಕ್ಷಣಾ ಸಿಬ್ಬಂದಿ ಆ ಮನೆಯ ಒಂದೇ ರೂಮಿನಿಂದ 21 ಮೃತದೇಹಗಳನ್ನ, ಮನೆಯ ಹೊರಭಾಗದಿಂದ ಮತ್ತೆರಡು ಮೃತದೇಹಗಳನ್ನ ಹೊರತೆಗೆದಿದ್ದಾರೆ.
ಪತ್ತೆಯಾದ ಮೃತದೇಹಗಳು ಜನಪ್ರಿಯ ಧಾರ್ಮಿಕ ಕ್ಷೇತ್ರ ಗೋಸೈಕುಂಡಕ್ಕೆ ತೆರಳುತ್ತಿದ್ದ ಯಾತ್ರಿಕರದ್ದಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮೃತರ ಗುರುತುಗಳು ಇನ್ನೂ ಪತ್ತೆಯಾಗಿಲ್ಲ.
ಆಶ್ರಯ ಪಡೆದಿದ್ದ ಮನೆಯೇ ಸಾವಿನ ಬಲೆ
ಶೋಧ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಮನೆಯ ಮೇಲ್ಛಾವಣಿಯ ಸಮೀಪವಿರುವ ಕೊಠಡಿಯಲ್ಲೇ 21 ಮೃತದೇಹಗಳು ಪತ್ತೆಯಾಗಿವೆ. ಆಗಸ್ಟ್ 26ರಂದು ಭೋಟೇಕೋಶಿ ಮತ್ತು ತ್ರಿಶೂಲಿ ನದಿ ವ್ಯವಸ್ಥೆಗಳಲ್ಲಿ ಉಂಟಾದ ಭೀಕರ ಪ್ರವಾಹವು ಈ ಕಟ್ಟಡವನ್ನ ಸಂಪೂರ್ಣವಾಗಿ ಆವರಿಸಿತ್ತು.
ಪ್ರವಾಹದ ನೀರು ಏರುತ್ತಿದ್ದಂತೆ ಕೆಳಭಾಗದಿಂದ ತಪ್ಪಿಸಿಕೊಳ್ಳಲು ಮನೆಯ ಮೇಲಂತಸ್ತುಗಳತ್ತ ತೆರಳಿದವರು, ಕೊನೆಗೆ ಅದೇ ಮನೆಯೊಳಗೆ ಸಿಲುಕಿ ಸಾವನ್ನಪ್ಪಿರಬಹುದು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಬದುಕುಳಿಯಲು ಆಶ್ರಯ ಪಡೆದಿದ್ದ ಮನೆಯೇ ಅವರ ಪಾಲಿಗೆ ಸಾವಿನ ಬಲೆಯಾಗಿ ಮಾರ್ಪಟ್ಟಿರುವ ಸಾಧ್ಯತೆ ಇದೆ.
23 ಮೃತದೇಹಗಳ ಪೈಕಿ 8 ಆಸ್ಪತ್ರೆಯಲ್ಲಿ
ಪತ್ತೆಯಾದ ಒಟ್ಟು 23 ಮೃತದೇಹಗಳ ಪೈಕಿ 8 ಮೃತದೇಹಗಳನ್ನ ತ್ರಿಶೂಲಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಉಳಿದ ಮೃತದೇಹಗಳನ್ನು ತಾತ್ಕಾಲಿಕವಾಗಿ ಮನೆಯ ಮೇಲ್ಛಾವಣಿಯಲ್ಲಿ ಇರಿಸಲಾಗಿದ್ದು, ಮುಂದಿನ ಹಂತದಲ್ಲಿ ಅವುಗಳನ್ನು ಸ್ಥಳಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೇಪಾಳದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ನಾಪತ್ತೆಯಾಗಿರುವ ಸಾವಿರಾರು ಜನರಿಗಾಗಿ ರಕ್ಷಣಾ ತಂಡಗಳು ಸಮಯದ ವಿರುದ್ಧ ಹೋರಾಟ ನಡೆಸುತ್ತಿವೆ.
