ಮೈಸೂರು ರಾಜಕಾರಣ ಅಂದರೆ ಒಮ್ಮೆ ಒಡೆಯರ್ ಯುಗ, ನಂತರ ದೇವರಾಜ ಅರಸು ಯುಗ. ಆಮೇಲೆ ನಡೆದಿದ್ದು ಜಾತಿ ಸಮೀಕರಣಗಳ ಮೃದಂಗ. ಆದರೆ ಕಳೆದ 2 ದಶಕಗಳಲ್ಲಿ ಈ ರಾಜಕೀಯ ನಕ್ಷೆಯ ಮಧ್ಯದಲ್ಲಿ ದೊಡ್ಡ ಅಕ್ಷರದಲ್ಲಿ ಬರೆಯಲ್ಪಟ್ಟ ಹೆಸರೆ ʻಸಿದ್ದರಾಮಯ್ಯʼ…
ಮೈಸೂರು ರಾಜಕಾರಣದ ಮಣ್ಣಿನಲ್ಲಿ ಹುಟ್ಟಿದ, ಹೋರಾಟದಲ್ಲಿ ಬೆಳೆದ, ಅಧಿಕಾರ ತ್ಯಾಗ, ಅಧಿಕಾರ ವಂಚಿತ, ಅಧಿಕಾರ ಅನುಭವಿಸಿದ ರಾಜಕಾರಣಿ ಅಂದರೆ ಅದು ಸಿದ್ದರಾಮಯ್ಯ (Siddaramaiah) ಮಾತ್ರ. ಕರ್ನಾಟಕ ರಾಜಕಾರಣದಲ್ಲಿ ಕೆಲವರು ಹುದ್ದೆ ಹಿಡಿದು ದೊಡ್ಡವರಾಗುತ್ತಾರೆ. ಕೆಲವರು ದೊಡ್ಡವರಾಗಿದ್ದರಿಂದ ಹುದ್ದೆ ಹುಡುಕಿಕೊಂಡು ಬರುತ್ತದೆ. ಆದರೆ ಸಿದ್ದರಾಮಯ್ಯ ಈ ಎರಡಕ್ಕಿಂತಲೂ ವಿಭಿನ್ನ.
ಸಿದ್ದರಾಮಯ್ಯ ಕೇವಲ ಮುಖ್ಯಮಂತ್ರಿ ಅಲ್ಲ. ಸಿದ್ದರಾಮಯ್ಯ ಕೇವಲ ಒಬ್ಬ ರಾಜಕೀಯ ನಾಯಕ ಅಲ್ಲ. ಬದಲಾಗಿ ಸಿದ್ದರಾಮಯ್ಯ ಅಂದರೆ ಒಂದು ವರ್ಗದ ಕೋಪದ ಧ್ವನಿ, ಒಂದು ಸಮಾಜದ ಆತ್ಮಗೌರವ, ಮೈಸೂರಿನ ಮಣ್ಣಿನ ದನಿ, ಹಿಂದುಳಿದವರ ರಾಜಕೀಯಾದ ಭಾಷೆ ಎಂಬ ಮಟ್ಟಿಗೆ ರಾಜಕಾರಣ ಮಾಡಿದ್ದಾರೆ. ಮೈಸೂರು ಭಾಗದ ರಾಜಕೀಯವನ್ನ ದೇವರಾಜ ಅರಸು ಅವರು ʻಶಕ್ತಿಯ ಸಮೀಕರಣʼ ಎಂದು ಬದಲಾಯಿಸಿದ್ದರೆ, ಸಿದ್ದರಾಮಯ್ಯ ಅದನ್ನ ʻಸಾಮಾಜಿಕ ನ್ಯಾಯದ ಯುದ್ಧʼ ಆಗಿ ಮಾಡಿದರು.

1948ರ ಆಗಸ್ಟ್ 12
ಮೈಸೂರು ಜಿಲ್ಲೆಯ ಸಿದ್ದರಾಮನಹುಂಡಿ ಹಳ್ಳಿಯ ಕುರುಬ ಸಮುದಾಯದ ಬಡ ಕೃಷಿಕ ಕುಟುಂಬದಲ್ಲಿ ಹುಟ್ಟಿದ ಹುಡುಗನೊಬ್ಬ 2 ಬಾರಿ ಮುಖ್ಯಮಂತ್ರಿ ಆಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಖುದ್ದು ಸಿದ್ದರಾಮಯ್ಯ ಅವರೇ ಇದನ್ನ ಅಂದು ಕೊಂಡಿರಲಿಲ್ಲ. ಬಿಎಸ್ಸಿ ಓದಿ ನಂತರ ಕಾನೂನು ಪದವಿ ಪಡೆದು ಕೆಲ ಕಾಲ ವಕೀಲರಾಗಿಯೂ ಕೆಲಸ ಮಾಡಿದರು. ಆದರೆ ಅವರ ಮನಸ್ಸು ಕೋರ್ಟ್‌ನಲ್ಲಿ ಇರಲಿಲ್ಲ. ಅದು ಬೀದಿಯ ಸಭೆಗಳಲ್ಲಿ, ಜನರ ನೋವಿನಲ್ಲಿ, ರಾಜಕೀಯ ಚರ್ಚೆಗಳಲ್ಲಿ ಅಲೆದಾಡುತ್ತಿತ್ತು. ಪರಿಣಾಮ ಪೂರ್ಣ ಪ್ರಮಾಣದ ರಾಜಕಾರಣಿ ಆದರು.
ಕರ್ನಾಟಕದಲ್ಲಿ ಹಿಂದುಳಿದ ವರ್ಗದ ರಾಜಕಾರಣವನ್ನು ಹೊಸ ರೂಪಕ್ಕೆ ತಂದವರು ದೇವರಾಜ ಅರಸು. ಅವರ ನಂತರ ಆ ರಾಜಕೀಯ ಪರಂಪರೆ ಬಲವಾಗಿ ಹಿಡಿದ ವ್ಯಕ್ತಿ ಸಿದ್ದರಾಮಯ್ಯ.
ಆ ಕಾಲದ ಮೈಸೂರು ರಾಜಕಾರಣವನ್ನ ಅರ್ಥಮಾಡಿಕೊಳ್ಳಬೇಕು ಅಂದರೆ ಮೂರು ಸಂಗತಿಗಳನ್ನು ನೆನಪಿಟ್ಟುಕೊಳ್ಳಬೇಕು:
1. ಒಕ್ಕಲಿಗರ ಪ್ರಭಾವ
2. ಲಿಂಗಾಯತ ಪ್ರಭಾವ
3. ಅರಸು ನಂತರ ಹಿಂದುಳಿದ ವರ್ಗದ ನಾಯಕತ್ವದ ಖಾಲಿತನ. ಈ ಖಾಲಿ ಜಾಗವನ್ನ ನಿಧಾನವಾಗಿ ತುಂಬಿದವರು ಸಿದ್ದರಾಮಯ್ಯ.

ಕಣ್ಣೀರು… ಹೊಸ ಅಧ್ಯಾಯ ಶುರು
1990ರ ದಶಕದಲ್ಲಿ ಎಚ್.ಡಿ ದೇವೇಗೌಡರ ನೇತೃತ್ವದ ಜನತಾ ಪರಿವಾರದಲ್ಲಿ ಸಿದ್ದರಾಮಯ್ಯ ದೊಡ್ಡ ಶಕ್ತಿಯಾಗಿ ಬೆಳೆದರು. 1994ರಲ್ಲಿ ಜನತಾ ದಳ ಅಧಿಕಾರಕ್ಕೆ ಬಂತು. ಸಿದ್ದರಾಮಯ್ಯ ಹಣಕಾಸು ಸಚಿವರಾದರು. ಅವರ ಬಜೆಟ್ ಭಾಷಣಗಳು ಗ್ರಾಮೀಣ ಕರ್ನಾಟಕದ ನೋವಿನ ಮೇಲೆ ನಿಂತಿದ್ದವು. ಅವರು ನಗರಗಳಿಗಿಂತ ಹಳ್ಳಿಗಳ ಭಾಷೆ ಮಾತನಾಡಿದರು. ಆಗಲೇ ಸಿದ್ದರಾಮಯ್ಯ ಜನನಾಯಕ ಆಗುವ ಹೆದ್ದಾರಿಗೆ ಬಂದಿದ್ದರು. ಆ ವೇಳೆಯಲ್ಲೇ ಜನತಾದಳದಲ್ಲಿ ಒಂದು ಗಂಭೀರ ಒಳಸಂಘರ್ಷ ಶುರುವಾಯಿತು. ದೇವೇಗೌಡ ಕುಟುಂಬದ ಪ್ರಭಾವ, ಸಿದ್ದರಾಮಯ್ಯ ಅವರ ಜನಪ್ರಿಯತೆ, ಮುಂದಿನ ಮುಖ್ಯಮಂತ್ರಿ ಯಾರು? ಎಂಬ ಪ್ರಶ್ನೆಗಳು ಈ ಸಂಘರ್ಷವನ್ನು ದೊಡ್ದದಾಗಿಸಿತು. ಇದು ಕೇವಲ ರಾಜಕೀಯ ವೈಮನಸ್ಸಲ್ಲ. ಇದು ʻವಾರಸುದಾರ ರಾಜಕಾರಣʼ ವಿರುದ್ಧ “ಸ್ವಯಂ ನಿರ್ಮಿತ ನಾಯಕ” ಎಂಬ ಹೋರಾಟದ ರೀತಿ ಮಾರ್ಪಾಡಾಯಿತು. ಆಗ 2005ರಲ್ಲಿ ಜೆಡಿಎಸ್‌ನಿಂದ ಅವರನ್ನು ಹೊರಹಾಕಲಾಯಿತು. ಆ ದಿನ ಸಿದ್ದರಾಮಯ್ಯ ಅತ್ತರು ಎನ್ನಲಾಗುತ್ತದೆ. ಆದರೆ ಆ ಕಣ್ಣೀರು ಅವರ ರಾಜಕೀಯ ಅಂತ್ಯವಾಗಲಿಲ್ಲ. ಅದು ಹೊಸ ಅಧ್ಯಾಯದ ಆರಂಭ ಆಯ್ತು.
2006 ರಲ್ಲಿ ಕಾಂಗ್ರೆಸ್ ಸೇರಿದರು. “ಜೆಡಿಎಸ್‌ನಿಂದ ಬಂದ ಈ ನಾಯಕ ಕಾಂಗ್ರೆಸ್‌ನಲ್ಲಿ ಉಳಿಯುತ್ತಾನಾ?”ಎಂದು ಅಂದು ಕಾಂಗ್ರೆಸ್ ನಲ್ಲೆ ಹಲವರು ಅನುಮಾನಪಟ್ಟಿದ್ದರು. ಆದರೆ ಮೈಸೂರು ಭಾಗದಲ್ಲಿ ಅವರ ಜನಾಧಾರ ಬೇರೆ ಮಟ್ಟದಲ್ಲಿತ್ತು. “ಅಹಿಂದ” ರಾಜಕೀಯ ಸಿದ್ದರಾಮಯ್ಯ ರಾಜಕೀಯದ ಅತ್ಯಂತ ದೊಡ್ಡ ಬ್ರ್ಯಾಂಡ್ ಆಯ್ತು. ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು. ಈ ಸಮೀಕರಣವು ಕರ್ನಾಟಕ ರಾಜಕಾರಣದಲ್ಲಿ ಸುನಾಮಿ ಎಬ್ಬಿಸಿತು.
ಸಿದ್ದರಾಮಯ್ಯ ಯುಗ ಆರಂಭ
ಕರ್ನಾಟಕದಲ್ಲಿ OBC ಮತದಾರರು: ಅಂದಾಜು 32–35%, ದಲಿತ ಮತದಾರರು: 17%, ಮುಸ್ಲಿಂ ಮತದಾರರು: 12–13%, ಈ ಮೂರು ವರ್ಗಗಳನ್ನ ಒಟ್ಟಿಗೆ ಹಿಡಿದ ರಾಜಕೀಯ ಸೂತ್ರವೇ ಅಹಿಂದ. ಇದೇ ಸಿದ್ದರಾಮಯ್ಯ ಪಾಲಿಗೆ ಅತಿ ದೊಡ್ಡ ಶಕ್ತಿಯು ಆಯಿತು. 2013 ರಲ್ಲಿ ಸಿದ್ದರಾಮಯ್ಯ ಯುಗ ಆರಂಭ ಆಯ್ತು. 2013 ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 122 ಸ್ಥಾನ ಗೆದ್ದಿತು. ಸಿದ್ದರಾಮಯ್ಯ ಮೊದಲ ಬಾರಿಗೆ ಮುಖ್ಯಮಂತ್ರಿಯಾದರು. ಅದು ಕೇವಲ ಸರ್ಕಾರ ಬದಲಾವಣೆ ಅಲ್ಲ. ಅದು ಮೈಸೂರು ಭಾಗದ ರಾಜಕೀಯ ಮನಃಸ್ಥಿತಿಯ ಬದಲಾವಣೆ ಎಂದು ವಿಶ್ಲೇಷಿಸಲಾಯಿತು.

ಕರ್ನಾಟಕದಲ್ಲಿ ಪೂರ್ಣ 5 ವರ್ಷ ಅವಧಿ ಮುಗಿಸಿದ ಕಾಂಗ್ರೆಸ್ ಮುಖ್ಯಮಂತ್ರಿಗಳಲ್ಲಿ ಸಿದ್ದರಾಮಯ್ಯ ಪ್ರಮುಖರು. 2018ರಲ್ಲಿ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗದಿದ್ದರೂ, ಬಿಜೆಪಿಯನ್ನು ತಡೆಯಲು ಜೆಡಿಎಸ್‌ಗೆ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಟ್ಟಿತು. ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆದರು. ಇದು ಸಿದ್ದರಾಮಯ್ಯ ರಾಜಕೀಯ ಜೀವನದ ದೊಡ್ಡ ನೋವು ಎಂದು ಕಾಂಗ್ರೆಸ್ ವಲಯ ಹೇಳುತ್ತದೆ. ಕಾರಣ ಒಮ್ಮೆ ಅವರನ್ನು ಪಕ್ಷದಿಂದ ಹೊರಹಾಕಿದ ಅದೇ ಕುಟುಂಬಕ್ಕೆ ಮತ್ತೆ ಅಧಿಕಾರ ಒಪ್ಪಿಸಬೇಕಾಯಿತು. ರಾಜಕೀಯದಲ್ಲಿ ಕೆಲ ಸೋಲುಗಳು ಚುನಾವಣೆಯಲ್ಲಿ ಮಾತ್ರ ಬರುವುದಿಲ್ಲ. ಅವು ಇಂತಹ ಸನ್ನಿವೇಶಗಳ ಮೂಲಕ ಒಳಗೆ ಸೃಷ್ಟಿಯಾಗುತ್ತವೆ.
ಮೈಸೂರು ಭಾಗದ ರಾಜಕಾರಣವನ್ನು ಮೂರು ಕಾಲಘಟ್ಟಗಳಲ್ಲಿ ನೋಡಬಹುದು:
* ನಾಲ್ವಡಿ ಕೃಷ್ಣರಾಜ ಒಡೆಯರ್ ಯುಗ,
* ದೇವರಾಜ ಅರಸು ಯುಗ
* ಸಿದ್ದರಾಮಯ್ಯ ಯುಗ.
ಗ್ರಾಮೀಣ ಭಾಷಣ ಶೈಲಿ, ವರ್ಗ ರಾಜಕಾರಣದ ಹಿಡಿತ, ಸಂಘಟನಾ ಸಾಮರ್ಥ್ಯ, ಜನರ ಜೊತೆ ನೇರ ಸಂಪರ್ಕ, ತಕ್ಷಣ ಪ್ರತಿಕ್ರಿಯಿಸುವ ರಾಜಕೀಯ ಸ್ವಭಾವ ಸಿದ್ದರಾಮಯ್ಯ ರನ್ನು ಈ ಕಾಲದ ರಾಜಕೀಯದಲ್ಲಿ ಬಹು ಎತ್ತರಕ್ಕೆ ನಿಲ್ಲಿಸಿದ್ದು ಸತ್ಯ. ಅವರ ವಿರುದ್ಧವು ಅನೇಕ ಟೀಕೆಗಳಿವೆ. ಅತಿಯಾದ ವರ್ಗ ರಾಜಕಾರಣ ಮಾಡುತ್ತಾರೆ. ಹಿಂದೂ ವಿರೋಧಿ ಎಂಬ ಆರೋಪ. ಅಧಿಕಾರ ಕೇಂದ್ರೀಕರಣ. ಆಪ್ತ ಬಳಗ ರಾಜಕಾರಣ ಇವೆಲ್ಲಾ ಆರೋಪಗಳ ನಡುವೆಯೂ ಅವರ ವಿರೋಧಿಗಳೂ ಒಪ್ಪುವ ಸಂಗತಿ ಎನ್ನೆಂದರೆ ʻಸಿದ್ದರಾಮಯ್ಯ ಜನಸಾಮಾನ್ಯರ ನಾಡಿ ಗೊತ್ತಿರುವ ನಾಯಕʼ.
ಕರ್ನಾಟಕದ ರಾಜಕೀಯ ವ್ಯಾಕರಣ
ರಾಜಕೀಯದಲ್ಲಿ ಕೆಲವರು ಅಧಿಕಾರಕ್ಕಾಗಿ ಬದುಕುತ್ತಾರೆ. ಕೆಲವರು ಅಧಿಕಾರ ಕಳೆದುಕೊಂಡರೂ ಕಥೆಯಾಗುತ್ತಾರೆ. ಸಿದ್ದರಾಮಯ್ಯ 2ನೇ ವರ್ಗದವರು. ಮೈಸೂರು ಅರಮನೆಯ ನೆರಳಲ್ಲಿ ಹುಟ್ಟಿದ ಅನೇಕ ರಾಜಕಾರಣಿಗಳು ಅಧಿಕಾರ ಕಂಡರು. ಆದರೆ ಹಳ್ಳಿಯ ಮಣ್ಣಿನ ವಾಸನೆ ಕಳೆದುಕೊಳ್ಳದೆ, “ನಾನು ನಿಮ್ಮೊಳಗೆ ಒಬ್ಬ” ಎಂದು ಹೇಳಿಕೊಂಡು ಎರಡು ಬಾರಿ ಮುಖ್ಯಮಂತ್ರಿ ಕುರ್ಚಿ ಕೂತಿದ್ದು ಈಗ ಅಕ್ಷರಶಃ ಇತಿಹಾಸ. ಸಿದ್ದರಾಮಯ್ಯ ಒಂದರ್ಥದಲ್ಲಿ ದೇವರಾಜ ಅರಸಿನ ನಂತರದ ದೊಡ್ಡ ಸಾಮಾಜಿಕ ರಾಜಕೀಯ ಪ್ರಯೋಗ. ಒಬ್ಬ ಕುರುಬ ಹುಡುಗ ಕರ್ನಾಟಕದ ರಾಜಕೀಯ ವ್ಯಾಕರಣವೇ ಬದಲಾಯಿಸಿದ್ದು ಅಚ್ಚರಿ ವಿಚಾರ. ಇತಿಹಾಸದಲ್ಲಿ ಕೆಲವರು ಗೆಲುವಿನಿಂದ ನೆನಪಾಗುತ್ತಾರೆ. ಕೆಲವರು ಹೋರಾಟದಿಂದ ನೆನಪಾಗುತ್ತಾರೆ. ಸಿದ್ದರಾಮಯ್ಯ — ಎರಡರಿಂದಲೂ ನೆನಪಾಗುವ ನಾಯಕನಾಗಿದ್ದಾರೆ.
ಸಿದ್ದರಾಮಯ್ಯ ನಂತರ ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಗೆ ಒಂದೇ ಕೇಂದ್ರ ಬಿಂದುವಿನ ನಾಯಕತ್ವ ಕಾಣಿಸುತ್ತಿಲ್ಲ. ಸ್ಥಳೀಯ ನಾಯಕರಿದ್ದಾರೆ. ಸಚಿವರಿದ್ದಾರೆ. ಪ್ರಭಾವಿಗಳಿದ್ದಾರೆ. ಆದರೆ ಎಲ್ಲಾ ಸಮುದಾಯಗಳಿಗೂ ಒಪ್ಪುವ ಮಾಸ್ ನಾಯಕ ಇನ್ನೂ ಖಾಲಿ!.
ಸಿದ್ದರಾಮಯ್ಯ ಅಧಿಕಾರ ತ್ಯಾಗದಿಂದ ಕಾಂಗ್ರೆಸ್ ಪ್ರಮುಖವಾಗಿ ಮೂರು ರಾಜಕೀಯ ಪರಿಣಾಮಗಳನ್ನಂತೂ ಎದುರಿಸಲೇಬೇಕಿದೆ. ಕಾಂಗ್ರೆಸ್ ಒಳಗಿನ ಗುಂಪು ರಾಜಕೀಯ ಹೆಚ್ಚಾಗಬಹುದು. ಮೈಸೂರು ಭಾಗದ ಕಾಂಗ್ರೆಸ್ ನಲ್ಲಿ ಈಗಾಗಲೇ ಹಲವು ಸ್ಥಳೀಯ ಶಕ್ತಿ ಕೇಂದ್ರಗಳಿವೆ. ಸಿದ್ದರಾಮಯ್ಯ ಅಧಿಕಾರ ಗದ್ದುಗೆ ಮೇಲೆ ಇದ್ದಾಗ ಮೇಲ್ನೋಟಕ್ಕಾದರು ಅವೆಲ್ಲಾ ಒಂದೇ ನೆರಳಿನೊಳಗೆ ಇದ್ದವು. ಆ ನೆರಳು ಇರುವುದಿಲ್ಲ. ಅಲ್ಲಿಗೆ ಒಳ ಜಗಳ ತಾರಕ್ಕಕ್ಕೆ ಏರಬಹುದು. ಸಿದ್ದರಾಮಯ್ಯ ಕೇವಲ ಒಬ್ಬ ಮುಖ್ಯಮಂತ್ರಿ ಅಷ್ಟೆ ಕಾಂಗ್ರೆಸ್ ನಲ್ಲಿ ಇರಲಿಲ್ಲ. ಸಿದ್ದರಾಮಯ್ಯ ಒಂದು’ ವೋಟ್ ಟ್ರಾನ್ಸ್ ಫರ್ ಮೆಷಿನ್’ ರೀತಿ ಇದ್ದರು. ಸಿಎಂ ಗದ್ದುಗೆಯಿಂದ ದಿಢೀರ್ ನಿರ್ಗಮಿಸುವ ಕಾರಣ ಆ ಮೆಷಿನ್ ಹೇಗೆ ವರ್ಕ್ ಆಗುತ್ತೆ ಅನ್ನೋದೆ ಬಹು ದೊಡ್ಡ ಪ್ರಶ್ನೆ.
ಮೈಸೂರು ರಾಜಕಾರಣದ ಇತಿಹಾಸ ನೋಡಿದರೆ ಪ್ರತಿಯೊಂದು ಯುಗಕ್ಕೂ ಒಬ್ಬ ಕೇಂದ್ರ ನಾಯಕ ಇದ್ದಾನೆ. ಒಡೆಯರ್ ಯುಗ, ದೇವರಾಜ ಅರಸು ಯುಗ, ಜೆಡಿಎಸ್ ಕುಟುಂಬ ರಾಜಕಾರಣ, ಸಿದ್ದರಾಮಯ್ಯ ಯುಗ. ಪ್ರಶ್ನೆ ಏನೆಂದರೆ – ಮುಂದಿನ ಯುಗ ಯಾರದು? ಸಿದ್ದರಾಮಯ್ಯ ಸಿಎಂ ಹುದ್ದೆ ಬಿಡುವ ಈ ದಿನ ಮೈಸೂರು ರಾಜಕಾರಣದಲ್ಲಿ ಬರೀ ಮುಖ್ಯಮಂತ್ರಿ ಕುರ್ಚಿ ಖಾಲಿ ಆದ ದಿನ ಆಗುವುದಿಲ್ಲ. ಬದಲಾಗಿ ಒಂದು ದೊಡ್ಡ ಸಾಮಾಜಿಕ ಸಮೀಕರಣವೇ ಹೊಸ ನಾಯಕನ ಹುಡುಕಾಟ ಆರಂಭವಾದ ದಿನವಾಗುತ್ತದೆ!. ರಾಜಕಾರಣದಲ್ಲಿ ಖಾಲಿ ಜಾಗ ಎಂದಿಗೂ ಖಾಲಿಯಾಗಿರುವುದಿಲ್ಲ. ಆದರೆ ಸಿದ್ದರಾಮಯ್ಯ ಬಿಟ್ಟ ಜಾಗ ತುಂಬಲು ಕೇವಲ ನಾಯಕ ಸಾಕಾಗುವುದಿಲ್ಲ. ಜನಮನ ಓದಬಲ್ಲ ರಾಜಕೀಯ ಭಾಷೆ ಬೇಕು. ಮೈಸೂರು ರಾಜಕಾರಣ ಈಗ ಈ ಹೊಸ ಭಾಷೆಯ ನಿರೀಕ್ಷೆಯಲ್ಲಿದೆ.
