Connect with us

Latest

ಭಾರತದ ಸ್ಥಳೀಯ ದರೋಡೆಕೋರರನ್ನು ಬಳಸಿ ಪಾಕಿಸ್ತಾನದಿಂದ ದಾಳಿಗೆ ಸಂಚು

Published

on

– ಸ್ಥಳೀಯ ಯುವಕರನ್ನೇ ಬಳಸಿ ದಾಳಿಗೆ ಸ್ಕೆಚ್
– ದರೋಡೆಕೋರರಿಗೆ ಟಾಸ್ಕ್ ನೀಡಿ ಕಾರ್ಯಸಾಧನೆ

ನವದೆಹಲಿ: ಎಷ್ಟು ಪ್ಲಾನ್ ಮಾಡಿದರೂ ಭಾರತದಲ್ಲಿ ದಾಳಿ ನಡೆಸಲು ಸಾಧ್ಯವಾಗದೆ ಪಾಪಿ ಪಾಕಿಸ್ತಾನದ ಹತಾಶೆಗೊಂಡಿದೆ. ಹೀಗಾಗಿ ಐಎಸ್‍ಐ(ಇಂಟರ್ ಸರ್ವಿಸ್ ಇಂಟಲಿಜೆನ್ಸ್) ಹಾಗೂ ಇತರ ಸಂಘಟನೆಗಳ ಮೂಲಕ ಇದೀಗ ಭಾರತದ ಸ್ಥಳೀಯ ಯುವಕರನ್ನೇ ಬಳಸಿಕೊಂಡು ದಾಳಿ ನಡೆಸಲು ಸಂಚು ರೂಪಿಸುತ್ತಿವೆ ಎಂಬ ಭಯಾನಕ ಮಾಹಿತಿ ಬಹಿರಂಗವಾಗಿದೆ.

ಇದು ಉಗ್ರ ಸಂಘಟನೆಗಳು ಹಾಗೂ ಪಾಕಿಸ್ತಾನದ ಇತ್ತೀಚಿನ ಟ್ರೆಂಡ್ ಆಗಿದ್ದು, ಭಾರತದಲ್ಲಿನ ಗುಪ್ತಚರ ಸಂಸ್ಥೆಗಳು ಹಾಗೂ ಭದ್ರತಾ ಸಿಬ್ಬಂದಿಯ ಗಮನ ಬೇರೆಡೆ ಸೆಳೆದು ಕೃತ್ಯ ಎಸಗಲು ಸಂಚು ರೂಪಿಸಲಾಗುತ್ತಿದೆ. ಭಾರತದಲ್ಲಿ ಹೆಚ್ಚಿನ ಭದ್ರತೆ ಇರುವ ಹಿನ್ನೆಲೆ ಪಾಕಿಸ್ತಾನ ಐಎಸ್‍ಐ ಹಾಗೂ ಇತರ ಉಗ್ರ ಸಂಘಟನೆಗಳು ನೇರವಾಗಿ ದಾಳಿ ನಡೆಸಲು ಆಗುತ್ತಿಲ್ಲ. ಹೀಗಾಗಿ ಭಾರತದಲ್ಲಿ ಯಾವುದೇ ದಾಳಿ, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಚಟುವಟಿಕೆಗಳಿಗೆ ಸ್ಥಳೀಯ ಯುವಕರನ್ನೇ ಬಳಸಿಕೊಂಡು ಅವರಿಗೇ ಟಾಸ್ಟ್ ನೀಡುತ್ತಿದೆ ಎಂಬ ಭಯಾನಕ ಅಂಶ ಇದೀಗ ಹೊರ ಬಿದ್ದಿದೆ.

ಇತ್ತೀಚೆಗೆ ಛತ್ತಿಸ್‍ಗಢದ ಇಂಟಲಿಜೆನ್ಸ್ ಯುನಿಟ್ ಈ ಕುರಿತು ಫುಲ್ ಅಲರ್ಟ್ ಆಗಿದ್ದು, ಟೆರರಿಸ್ಟ್‍ಗಳು ಹಾಗೂ ಹೆಚ್ಚು ಪ್ರಭಾವ, ಸ್ಥಳೀಯ ಸಂಪರ್ಕ ಹೊಂದಿರುವ ದರೋಡೆಕೋರರ ಕುರಿತು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ. ಈ ಕುರಿತು ಕೆಲ ದರೋಡೆಕೋರರ ಹೆಸರನ್ನು ಸಹ ಗುಪ್ತಚರ ದಳ ಉಲ್ಲೇಖಿಸಿದೆ. ಐಎಸ್‍ಐ ಮತ್ತು ಭಯೋತ್ಪಾದಕ ಸಂಘಟನೆಗಳು ಈ ದರೋಡೆಕೋರರೊಂದಿಗೆ ಸಂಪರ್ಕದಲ್ಲಿವೆ. ಅಲ್ಲದೆ ಭಾರತದಲ್ಲಿ ದಾಳಿ ನಡೆಸಲು ಅವರಿಗೆ ಟಾಸ್ಕ್ ನೀಡಲಾಗುತ್ತಿದೆ ಎಂದು ಗುಪ್ತಚರ ದಳ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರಿಗೆ ಎಚ್ಚರಿಸಿದೆ. ಈ ಪೈಕಿ ಕೆಲ ದರೋಡೆಕೋರರನ್ನು ಬಂಧಿಸಲಾಗಿದ್ದು, ಇನ್ನೂ ಕೆಲವರು ಪರಾರಿಯಾಗಿದ್ದಾರೆ ಎಂದು ತಿಳಿಸಿದೆ.

ಹಿರಿಯ ಅಧಿಕಾರಿಯೊಬ್ಬರು ಈ ಕುರಿತು ಮಾತನಾಡಿ, ಸ್ಥಳೀಯ ದರೋಡೆಕೋರರನ್ನು ಐಎಸ್‍ಐ ಸಂಪರ್ಕಿಸಬಹುದು ಅಥವಾ ಈಗಾಗಲೇ ಅವರ ಸಂಪರ್ಕದಲ್ಲಿರಬಹುದು. ಕೇಂದ್ರ ಗುಪ್ತಚರ ದಳದ ಪಂಜಾಬ್ ಘಟಕ ಕೆಲ ದಿನಗಳ ಹಿಂದೆಯೇ ಈ ಕುರಿತು ಎಚ್ಚರಿಕೆ ನೀಡಿದ್ದು, ಐಎಸ್‍ಐ ಹಾಗೂ ಇತರ ಭಯೋತ್ಪಾದಕ ಸಂಘಟನೆಗಳು ಕೆಲ ನಾಯಕರನ್ನು ಟಾರ್ಗೆಟ್ ಮಾಡುವಂತೆ ಐವರು ದರೋಡೆಕೋರರಿಗೆ ಟಾಸ್ಕ್ ನೀಡಿದ್ದು, ಈ ಐವರಲ್ಲಿ ಇಬ್ಬರು ಪರಾರಿಯಾಗಿದ್ದಾರೆ. ಪೊಲೀಸರು ಅವರಿಗಾಗಿ ಹುಡುಕಾಟ ನಡೆಸಿದ್ದಾರೆ. ಉಳಿದ ಮೂವರನ್ನು ಪಂಜಾಬ್‍ನ ವಿವಿಧ ಜೈಲುಗಳಲ್ಲಿ ಇರಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ದರೋಡೆಕೋರರು ಹತ್ತಾರು ಕೊಲೆ, ದರೋಡೆ ಹಾಗೂ ಜೈಲುಗಳಲ್ಲಿದ್ದುಕೊಂಡೇ ಸಂಚು ರೂಪಿಸುತ್ತಿದ್ದಾರೆ. ಹೀಗಾಗಿ ಸ್ಥಳೀಯ ದರೋಡೆಕೋರರ ಚಲನವಲನಗಳ ಕುರಿತು ಕಣ್ಣಿಡುವಂತೆ ಸ್ಥಳೀಯ ಪೊಲೀಸರಿಗೆ ತಿಳಿಸಲಾಗಿದೆ. ಅವರು ಜೈಲಿನಲ್ಲಿದ್ದರೂ ನಿಗಾ ವಹಿಸಬೇಕೆಂದು ತಿಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ತಂತ್ರದ ಹಿಂದಿನ ಕಾರಣವೇನೆಂಬುದನ್ನು ಸಹ ಅಧಿಕಾರಿಗಳು ವಿವರಿಸಿದ್ದು, ಐಎಸ್‍ಐನ ಬೆನ್ನೆಲುಬಾಗಿದ್ದು ಅವರೇ ರಚಿಸಿದ ಸ್ಥಳೀಯ ಗುಂಪು. ಆದರೆ ಇತ್ತೀಚೆಗೆ ಬಹುತೇಕರು ಹೆದರಿಕೊಂಡು ಈ ಕೆಲಸ ಮಾಡುತ್ತಿಲ್ಲ. ಪೊಲೀಸರು ಕೊಲ್ಲುತ್ತಾರೆ ಎಂಬ ಭಯದಿಂದ ಇಂತಹ ಕೆಲಸ ಮಾಡುತ್ತಿಲ್ಲ. ಅಲ್ಲದೆ ಇಂತಹ ಸ್ಥಳೀಯ ಗುಂಪುಗಳನ್ನು ನಿಯಂತ್ರಿಸಲು ಯಾವುದೇ ಕಮಾಂಡರ್‍ಗಳು ಸಹ ಅವರ ಬಳಿ ಇಲ್ಲ. ಆದರೆ ಸ್ಥಳೀಯ ದರೋಡೆಕೋರರಾದರೆ ಸುಲಭವಾಗಿ ತಮಗೆ ಬೇಕಾದ ಪರಿಕರಗಳನ್ನು ಸಂಗ್ರಹಿಸಿ, ಸ್ಥಳೀಯ ಮಟ್ಟದಲ್ಲಿ ದಾಳಿ ನಡೆಸುತ್ತಾರೆ. ಹೀಗಾಗಿ ಭಯೋತ್ಪಾದಕ ಸಂಘಟನೆಗಳು ತಮ್ಮ ಕೃತ್ಯಕ್ಕಾಗಿ ಸ್ಥಳೀಯ ದರೋಡೆಕೋರರನ್ನು ಬಳಸಿಕೊಳ್ಳುತ್ತಿವೆ ಎಂದು ಮಾಹಿತಿ ನೀಡಿದ್ದಾರೆ.

Click to comment

Leave a Reply

Your email address will not be published. Required fields are marked *