ಕುಟುಂಬಸ್ಥರು ಮಾತನಾಡಿ ಪತಿಯ ಮನೆಗೆ ಕಳುಹಿಸಿದ್ರು- ಎರಡು ದಿನದಲ್ಲೇ ಕೊಲೆ

1 Min Read

– ಪತ್ನಿಯ ಮೇಲೆ ಅನುಮಾನ ಪಟ್ಟು ಕೊಂದ ಶಿಕ್ಷಕ
– ತಾನೇ ಆಸ್ಪತ್ರೆಗೆ ಕರ್ಕೊಂಡು ಹೋದ

ಹೈದರಾಬಾದ್: ಪತ್ನಿ ಮೇಲೆ ಅನುಮಾನ ಹೊಂದಿದ್ದ ಪತಿ ಆಕೆಯನ್ನು ಥಳಿಸಿ ಕೊಲೆ ಮಾಡಿರುವ ಘಟನೆ ಆಂಧ್ರ ಪ್ರದೇಶದ ನಿಜಾಮಾಬಾದ್ ಜಿಲ್ಲೆಯಲ್ಲಿ ನಡೆದಿದೆ.

ಪಾವನಿ (36) ಕೊಲೆಯಾದ ಮಹಿಳೆ. ಪತಿ ಮುತ್ತಣ್ಣ ಪತ್ನಿಯ ಮೇಲೆ ಅನುಮಾನ ಪಟ್ಟು ಹಿಗ್ಗಾಮುಗ್ಗಾ ಥಳಿಸಿ ಕೊಲೆ ಮಾಡಿದ್ದಾನೆ. ಸದ್ಯಕ್ಕೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಏನಿದು ಪ್ರಕರಣ?
ಪಾವನಿ ಮತ್ತು ಮುತ್ತಣ್ಣ ಇಬ್ಬರಿಗೂ 16 ವರ್ಷದ ಹಿಂದೆ ಮದ್ವೆಯಾಗಿತ್ತು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮುತ್ತಣ್ಣ ಸರ್ಕಾರಿ ಶಾಲೆಯ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದು, ಪಾವನಿ ಕೂಡ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಳು.

ಕಳೆದ ಕೆಲ ತಿಂಗಳಿನಿಂದ ಪತ್ನಿಯ ಮೇಲೆ ಆರೋಪಿ ಮುತ್ತಣ್ಣ ಅನುಮಾನ ಪಡುತ್ತಿದ್ದನು. ಅಲ್ಲದೇ ದೈಹಿಕವಾಗಿ, ಮಾನಸಿಕವಾಗಿ ಹಿಂಸೆ ನೀಡುತ್ತಿದ್ದನು. ಪತಿಯ ಕಿರುಕುಳ ಸಹಿಸಲು ಸಾಧ್ಯವಾದ ಹಿನ್ನೆಲೆಯಲ್ಲಿ ಎರಡು ತಿಂಗಳ ಹಿಂದೆ ಪಾವನಿ ತವರು ಮನೆಗೆ ಹೋಗಿದ್ದಳು. ಎರಡು ದಿನಗಳ ಹಿಂದೆ ಎರಡು ಕುಟುಂಸ್ಥರು ಮಾತನಾಡಿ ಮತ್ತೆ ಪಾವನಿಯನ್ನು ಗಂಡನ ಮನೆಗೆ ಕಳುಹಿಸಿದ್ದರು.

ಮಂಗಳವಾರ ದಂಪತಿಯ ನಡುವೆ ಮತ್ತೆ ಜಗಳ ನಡೆದಿದೆ. ಆಗ ಕೋಪದಲ್ಲಿ ಪತಿ ಮುತ್ತಣ್ಣ ಪತ್ನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಪರಿಣಾಮ ಆಕೆ ಮನೆಯಲ್ಲಿ ಕುಸಿದು ಬಿದ್ದಿದ್ದಾಳೆ. ನಂತರ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಆದರೆ ಅಷ್ಟರಲ್ಲಿಯೇ ಪಾವನಿ ಸಾವನ್ನಪ್ಪಿದ್ದಳು.

ಸದ್ಯ ಮೃತ ಪಾವನಿ ಪೋಷಕರು ನೀಡಿದ ದೂರಿನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *