ನವದೆಹಲಿ: ಇಂಡಿಯಾ ಬ್ಲಾಕ್ನ ‘ಚಲೋ ದೆಹಲಿ’ ರ್ಯಾಲಿಗೆ ಗೈರುಹಾಜರಾದ 300ಕ್ಕೂ ಹೆಚ್ಚು ಪದಾಧಿಕಾರಿಗಳನ್ನು ಭಾರತೀಯ ಯುವ ಕಾಂಗ್ರೆಸ್ (IYC) ಅಮಾನತುಗೊಳಿಸಿದೆ. ಸಂಘಟನೆಯಲ್ಲಿ ಶಿಸ್ತು ಕಾಪಾಡುವ ಹಾಗೂ ಸಾಮೂಹಿಕ ಕಾರ್ಯಕ್ರಮಗಳಲ್ಲಿ ಪದಾಧಿಕಾರಿಗಳ ಭಾಗವಹಿಸುವಿಕೆಯನ್ನು ಖಚಿತಪಡಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಐವೈಸಿ ಮೂಲಗಳ ಪ್ರಕಾರ, ವಿಧಾನಸಭಾ ಮಟ್ಟದಿಂದ ಕೇಂದ್ರ ಮಟ್ಟದವರೆಗಿನ ಪದಾಧಿಕಾರಿಗಳು ರ್ಯಾಲಿಯಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಭಾಗವಹಿಸುವಂತೆ ಸೂಚಿಸಲಾಗಿತ್ತು. ‘ಐವೈಸಿ ಜೊತೆ’ ಆ್ಯಪ್ ಮೂಲಕ ತಮ್ಮ ಹಾಜರಾತಿ ದಾಖಲಿಸುವಂತೆಯೂ ನಿರ್ದೇಶಿಸಲಾಗಿತ್ತು. ರ್ಯಾಲಿಗೂ ಮುನ್ನ ಮಿಂಟೋ ರಸ್ತೆ ಕ್ರಾಸಿಂಗ್ನಲ್ಲಿ ಮೆರವಣಿಗೆಗೆ ಸೇರಲು ಸಭಾ ಸ್ಥಳ ನಿಗದಿಪಡಿಸಲಾಗಿತ್ತು.
ರ್ಯಾಲಿ ಮುಗಿದ ಬಳಿಕ ಹಾಜರಾತಿ ಪರಿಶೀಲಿಸಿದ ಸಂಘಟನೆ, 12 ರಾಜ್ಯಗಳ 300ಕ್ಕೂ ಹೆಚ್ಚು ಪದಾಧಿಕಾರಿಗಳು ಯಾವುದೇ ಸಮಂಜಸ ಕಾರಣ ನೀಡದೆ ಗೈರುಹಾಜರಾಗಿರುವುದನ್ನು ಗುರುತಿಸಿದೆ. ಹೀಗಾಗಿ ಅವರನ್ನು ಅಮಾನತುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ, ಅಮಾನತುಗೊಂಡ ಪದಾಧಿಕಾರಿಗಳು ಮುಂದಿನ ದಿನಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದರೆ ಮತ್ತೆ ಸಂಘಟನೆಗೆ ಸೇರಿಸಿಕೊಳ್ಳಲಾಗುವುದು ಎಂದು ತಿಳಿಸಲಾಗಿದೆ.ಇದನ್ನೂ ಓದಿ: ಹೆಂಡ್ತಿ ಮೇಲಿನ ಸಿಟ್ಟಿಗೆ ಬೆಂಗ್ಳೂರಲ್ಲಿ ಏಳು ಮರ್ಡರ್ – ಕೊಲೆಗೈದು ನಂದಿ ಬೆಟ್ಟದಲ್ಲಿ ಮೃತದೇಹ ಎಸೆದಿರುವ ಹಂತಕ
ಮಧ್ಯಪ್ರದೇಶದಲ್ಲಿ ಅತಿ ಹೆಚ್ಚು ಅಮಾನತು
ಅಮಾನತುಗೊಂಡವರ ಪೈಕಿ ಮಧ್ಯಪ್ರದೇಶದ 60ಕ್ಕೂ ಹೆಚ್ಚು ಪದಾಧಿಕಾರಿಗಳಿದ್ದಾರೆ. ರಾಜಸ್ಥಾನದ 32ಕ್ಕೂ ಹೆಚ್ಚು ಪದಾಧಿಕಾರಿಗಳ ಮೇಲೂ ಕ್ರಮ ಕೈಗೊಳ್ಳಲಾಗಿದೆ. ಗುಜರಾತ್, ಜಾರ್ಖಂಡ್, ಉತ್ತರ ಪ್ರದೇಶದ ಮಧ್ಯ ಮತ್ತು ಪೂರ್ವ ಭಾಗ, ಉತ್ತರಾಖಂಡ ಹಾಗೂ ತೆಲಂಗಾಣ ಸೇರಿದಂತೆ ಒಟ್ಟು 12 ರಾಜ್ಯಗಳ ಪದಾಧಿಕಾರಿಗಳು ಅಮಾನತುಗೊಂಡಿದ್ದಾರೆ.
ನವೆಂಬರ್ 1ರಂದು ನಡೆದ ರ್ಯಾಲಿಯಲ್ಲಿ ಸುಮಾರು 20 ಸಾವಿರ ಕಾರ್ಯಕರ್ತರು ಭಾಗವಹಿಸಿದ್ದರು. ಆದರೆ, ಕೆಲವು ಪದಾಧಿಕಾರಿಗಳು ಗೈರುಹಾಜರಾಗಿದ್ದರು ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಉದಯ್ ಭಾನು ಚಿಬ್ ತಿಳಿಸಿದ್ದಾರೆ.
ಸಾಮಾನ್ಯ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದಾಗ ಪದಾಧಿಕಾರಿಗಳೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಸಂಘಟನೆಯಲ್ಲಿ ಶಿಸ್ತು ಮುಖ್ಯ ಎಂಬ ಸಂದೇಶ ನೀಡುವುದು ಅಗತ್ಯವಾಗಿತ್ತು ಎಂದು ಅವರು ಹೇಳಿದ್ದಾರೆ.
ಯುವ ಕಾಂಗ್ರೆಸ್ನಲ್ಲಿ ಕೇಂದ್ರ ಮಟ್ಟದಿಂದ ವಿಧಾನಸಭಾ ಮಟ್ಟದವರೆಗೆ ಸುಮಾರು 45 ಸಾವಿರ ಪದಾಧಿಕಾರಿಗಳಿದ್ದಾರೆ. ನೆರೆಯ ರಾಜ್ಯಗಳ ಪದಾಧಿಕಾರಿಗಳಿಗೆ ಮಾತ್ರ ರ್ಯಾಲಿಯಲ್ಲಿ ಭಾಗವಹಿಸುವಂತೆ ಸೂಚಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ: ನರಕ ಚತುರ್ದಶಿ| ತಾಯಿಯಿಂದಲೇ ಮಗನ ಸಂಹಾರ – ಪುರಾಣ ಕಥೆ ಓದಿ
