– ವಿನಯ್ ಕುಲಕರ್ಣಿ ಸೇರಿ ಎಲ್ಲಾ ಅಪರಾಧಿಗಳ ಹೇಳಿಕೆ ದಾಖಲಿಸಿದ ಕೋರ್ಟ್
– ಜೈಲಿಗೆ ಹೋಗುವಾಗ ಮೂವರು ಮಕ್ಕಳನ್ನು ತಬ್ಬಿ ಕಣ್ಣೀರು ಹಾಕಿದ ಶಾಸಕ
ಬೆಂಗಳೂರು: ಯೋಗೇಶ್ ಗೌಡ ಕೊಲೆ ಪ್ರಕರಣದ (Yogesh Gowda Murder Case) ಅಪರಾಧಿಗಳಿಗೆ ನಾಳೆ ಶಿಕ್ಷೆ ಪ್ರಕಟವಾಗಲಿದೆ. ಶಾಸಕ ವಿನಯ್ ಕುಲಕರ್ಣಿ (Vinay Kulkarni) ಸೇರಿದಂತೆ ಎಲ್ಲಾ ಅಪರಾಧಿಗಳ ಹೇಳಿಕೆ ದಾಖಲಿಸಿದ ಕೋರ್ಟ್, ನಾಳೆ ಶಿಕ್ಷೆ ಪ್ರಕಟಿಸಲಾಗುವುದು ಎಂದು ತಿಳಿಸಿದೆ.
ವಿನಯ್ ಕುಲಕರ್ಣಿ ಹಾಗೂ ಇತರ ದೋಷಿಗಳನ್ನು ಎರಡು ಬಸ್‌ಗಳಲ್ಲಿ ಸಿಬಿಐ ಅಧಿಕಾರಿಗಳು ಇಂದು ಕೋರ್ಟ್ಗೆ ಕರೆತಂದರು. ಬಳಿಕ ಕೋರ್ಟ್ ಮುಂದೆ ಹಾಜರುಪಡಿಸಿದರು. ಪ್ರತಿ ಅಪರಾಧಿ ಬಳಿ ಒಬ್ಬೊಬ್ಬ ಪೊಲೀಸ್ ನಿಯೋಜನೆ ಮಾಡಲಾಯಿತು. ಸಿಬಿಐ ಪರವಾಗಿ ಎಎಸ್‌ಜಿ ಎಸ್‌ವಿ ರಾಜು ಹಾಜರಾದರು. ಇದನ್ನೂ ಓದಿ: ಸೆಲ್ ಒಳಗೆ ಹೋಗ್ತಿದ್ದಂತೆ ಕಣ್ಣೀರು – ಪರಪ್ಪನ ಅಗ್ರಹಾರ ಜೈಲಲ್ಲಿ ಇಡೀ ರಾತ್ರಿ ನಿದ್ದೆ ಮಾಡದ ಕುಲಕರ್ಣಿ
ಕಾನೂನಿನಲ್ಲಿ ಇರುವ ಗರಿಷ್ಠ ಶಿಕ್ಷೆಯನ್ನು ನೀಡಬೇಕು. ಯಾವುದೇ ಮಾನವೀಯತೆಯನ್ನು ಈ ಪ್ರಕರಣದಲ್ಲಿ ತೋರಬಾರದು. ಸಮಾಜದಲ್ಲಿ ಇದೊಂದು ಮಾದರಿಯಾಗಬೇಕು. ಪ್ರಕರಣದ 7 ನೇ ಆರೋಪಿ ಕಣ್ಣಿಗೆ ಖಾರದ ಪುಡಿ ಹಾಕಿ ಕೊಲೆ ಮಾಡಿದ್ದಾರೆ. ರಾಜಕೀಯ ದ್ವೇಷ ಇಟ್ಟುಕೊಂಡು ಕೊಲೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಸಿಬಿಐ ಪ್ರಕರಣ ತೆಗೆದುಕೊಂಡಾಗ ಸಾಕ್ಷ್ಯ ನಾಶ ಮಾಡಿದ್ದಾರೆ. ವಿಚಾರಣೆ ಸಂದರ್ಭದಲ್ಲಿ ಸಾಕ್ಷಿಗಳನ್ನು ಹಣಕೊಟ್ಟು ಖರೀದಿ ಮಾಡಿದ್ದಾರೆ. ವಿನಯ್ ಕುಲಕರ್ಣಿ ತನಗೆ ಇರುವ ಅವಕಾಶ ಹಣವನ್ನು ಬಳಕೆ ಮಾಡಿಕೊಂಡಿದ್ದಾರೆ. ಸಾಕ್ಷ್ಯಗಳನ್ನು ನಾಶ ಮಾಡಿದ್ದಾರೆ. ಒಬ್ಬ ಯುವ ರಾಜಕಾರಣಿಯ ಜೀವನ ಅಂತ್ಯಗೊಳಿಸಿದ್ದಾರೆ. ತುಂಬಾ ಉಪಾಯ ಮಾಡಿ ಸಂಚನ್ನು ಮಾಡಿ ಹತ್ಯೆಯನ್ನು ಮಾಡಿದ್ದಾರೆ. ತನ್ನ ರಾಜಕೀಯ ಬಲದಿಂದ ಪ್ರಕರಣ ದಾರಿ ತಪ್ಪಿಸುವ ಪ್ರಯತ್ನ ಮಾಡಲಾಯ್ತು. ಈ ಪ್ರಕರಣ ತಕ್ಷಣವೇ ನಡೆದಿದ್ದೆಲ್ಲ ಪ್ರೀಪ್ಲಾನ್ಡ್ ಎಂದು ಗರಿಷ್ಠ ಶಿಕ್ಷೆಗೆ ಎಎಸ್‌ಜಿ ಕೋರಿದರು.
ಅಪರಾಧಿ ಪರ ವಕೀಲರು ವಾದ ಮಂಡಿಸಿ, ಸಿಪರಾಧಿಗಳಿಗೆ ಸಣ್ಣ ಸಣ್ಣ ಮಕ್ಕಳಿದ್ದಾರೆ. ಶಿಕ್ಷೆ ಪ್ರಮಾಣ ಕಡಿಮೆ ಮಾಡುವಂತೆ ಮನವಿ ಮಾಡಿದರು. ವಿನಯ್ ಕುಲಕರ್ಣಿ ಪರ ಶ್ಯಾಮ್ ಸುಂದರ್ ವಾದಿಸಿದರು. ಇದನ್ನೂ ಓದಿ: ಯೋಗೇಶ್‌ಗೌಡ ಕೊಲೆ ಕೇಸಲ್ಲಿ ವಿನಯ್ ಕುಲಕರ್ಣಿ ದೋಷಿ – ಇಂದು ಶಿಕ್ಷೆ ಪ್ರಮಾಣ ಪ್ರಕಟ, ಎಲ್ಲರ ಚಿತ್ತ ಕೋರ್ಟ್‌ನತ್ತ
ಈ ವೇಳೆ ಅಪರಾಧಿಗಳು ಜಡ್ಜ್ ಮುಂದೆ ತಮ್ಮ ಮನೆ ಸಂಕಷ್ಟಗಳ ಬಗ್ಗೆ ಹೇಳಿಕೊಂಡರು. ಶಿಕ್ಷೆ ಪ್ರಮಾಣವನ್ನು ಕಡಿಮೆ ಮಾಡುವಂತೆ ಮನವಿ ಮಾಡಿದರು. ವಿನಯ್ ಕುಲಕರ್ಣಿ ಮಾತನಾಡಿ, ಇವತ್ತಿನವರೆಗೂ ಯಾರಿಗೂ ಅನ್ಯಾಯ ಮಾಡಿಲ್ಲ. ರಾಜಕೀಯದಲ್ಲಿ ಇದ್ದೀನಿ. ರಾಜಕೀಯ ಷಡ್ಯಂತ್ರದಿಂದಲೇ ಇದು ಆಗಿದೆ. ಇದು ನನಗೆ ನಿಜಕ್ಕೂ ಅನ್ಯಾಯ ಆಗಿದೆ. 3 ಮಕ್ಕಳು ಮದುವೆಗೆ ಬಂದಿದ್ದಾರೆ. ಇಬ್ಬರು ಹೆಣ್ಣು ಮಕ್ಕಳಿದ್ದಾರೆ, ಒಬ್ಬ ಗಂಡು ಮಗ ಇದ್ದಾನೆ. ಒಮ್ಮೆ ಮಂತ್ರಿ ಆಗಿದ್ದೇನೆ. ಹೆಚ್ಚು ಬಾರಿ ಕ್ಷೇತ್ರದಲ್ಲಿ ಗೆದ್ದಿದ್ದೇವೆ. ಅದಕ್ಕೆ ನನಗೆ ಈ ಪರಿಸ್ಥಿತಿ ಬಂದಿದೆ ಎಂದು ಜಡ್ಜ್ ಮುಂದೆ ಹೇಳಿದ್ದಾರೆ.
ನ್ಯಾಯಾಲಯ ಎಲ್ಲಾ ಅಪರಾಧಿಗಳ ಹೇಳಿಕೆ ದಾಖಲಿಸಿತು. ನಾಳೆ ಶಿಕ್ಷೆ ಪ್ರಮಾಣ ಪ್ರಕಟ ಮಾಡುವುದಾಗಿ ಕೋರ್ಟ್ ಹೇಳಿತು. ಕೋರ್ಟ್‌ನಿಂದ ಪರಪ್ಪನ ಅಗ್ರಹಾರ ಜೈಲಿನತ್ತ ಎಲ್ಲಾ ಅಪರಾಧಿಗಳನ್ನು ಕರೆದೊಯ್ಯಲಾಯಿತು.

