– ಚೆನ್ನಮ್ಮ ಅವರ ರೂಂ ಅನ್ನೇ ಐಸಿಯು ಮಾಡಿದ್ದೆವು
ಬೆಂಗಳೂರು: ಚೆನ್ನಮ್ಮ (Chennamma Deve Gowda) ಗೌಡರಿಗಾಗಿ ಊಟ ಮಾಡದೇ ಕಾಯುತ್ತಿದ್ದರು. ಅವರಿಗಾಗಿ ಇವರು ಕಾಯುತ್ತಿದ್ದರು, ಇವರಿಗಾಗಿ ಅವರು ಕಾಯುತ್ತಿದ್ದರು ಎಂದು ಅತ್ತೆ ಚೆನ್ನಮ್ಮ ಅವರನ್ನು ನೆನೆದು ಅಳಿಯ ಡಾ.ಸಿ.ಎನ್ ಮಂಜುನಾಥ್ (Dr C.N Manjunath) ಭಾವುಕರಾಗಿದ್ದಾರೆ.
ಚೆನ್ನಮ್ಮ ನಿಧನ ಹಿನ್ನೆಲೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚೆನ್ನಮ್ಮ ಅವರಿಗೆ ಒಂದು ವರ್ಷದಿಂದ ಉಸಿರಾಟದ ಸಮಸ್ಯೆಯಿತ್ತು. ಏಳು ತಿಂಗಳ ಹಿಂದೆ ಆಸ್ಪತ್ರೆಗೆ ದಾಖಲಿಸಿದ್ದೆವು. ಆಗ ಚೇತರಿಸಿಕೊಂಡಿದ್ದರು. ಆದರೂ ಆಗಾಗ ಮತ್ತೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಪದ್ಮನಾಭನಗರದ ಅತ್ತಿಗೆ ಮನೆಯಲ್ಲಿ ಐಸಿಯು ಮಾಡಿದ್ದೆವು. ಚೆನ್ನಮ್ಮ ಇರುವ ರೂಂ ಅನ್ನೇ ಐಸಿಯು ಮಾಡಿದ್ದೆವು. ಅಲ್ಲಿ ಎಲ್ಲ ವ್ಯವಸ್ಥೆ ಮಾಡಿದ್ದೆವು. ಸ್ಟಾಫ್ ನರ್ಸ್ ಕೂಡ ಇದ್ದರು. ಚೆನ್ನಮ್ಮ ವೀಲ್ ಚೇರ್‌ನಲ್ಲಿಯೇ ಪೂಜೆ ಮಾಡುತ್ತಿದ್ದರು, ಓಡಾಡುತ್ತಿದ್ದರು ಎಂದರು. ಇದನ್ನೂ ಓದಿ: ಚೆನ್ನಮ್ಮ ನಿಧನ – ದೇವೇಗೌಡರಿಗೆ ಫೋನ್ ಕರೆ ಮಾಡಿ ಪ್ರಧಾನಿ ಮೋದಿ ಸಂತಾಪ
ಇತ್ತೀಚೆಗೆ ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಿದ್ದೆವು. ಈ ಹಿಂದೆ ಆಸ್ಪತ್ರೆಗೆ ದಾಖಲಿಸಿದಾಗ ರಿಕವರಿ ಆಗಿದ್ದರು. ಈ ಬಾರಿ ಚೇತರಿಕೆಯಾಗಲಿಲ್ಲ. ಈ ಹಿಂದೆ ಆ್ಯಸಿಡ್ ದಾಳಿಯಾದಾಗ ಶೇ.2ರಷ್ಟು ಮಾತ್ರ ಬದುಕುಳಿಯುತ್ತಾರೆ ಎಂದಿದ್ದರು, ಆದರೂ ಬದುಕಿದ್ದರು. ಮುಖಕ್ಕೆ ಆ್ಯಸಿಡ್ ಬಿದ್ದಿದ್ದಕ್ಕೆ, ಮುಖ ನೋಡಿಕೊಳ್ಳಬಾರದು ಅಂತ ಕನ್ನಡಿಗೆ ಕವರ್ ಹಾಕಿದ್ದೆವು. ನಾನು ಇದನ್ನು ಅಕ್ಸೆಪ್ಟ್ ಮಾಡುತ್ತೇನೆ, ಕವರ್ ತೆಗೆಯಿರಿ ಎಂದಿದ್ದರು. ಅವರ ಸರಳತೆ, ತಾಳ್ಮೆಯನ್ನು 40 ವರ್ಷಗಳಿಂದ ನೋಡುತ್ತಿದ್ದೇನೆ ಎಂದು ಬೇಸರಿಸಿದರು. ಇದನ್ನೂ ಓದಿ: ಅಜ್ಜಿ ಅಂತ್ಯಕ್ರಿಯೆಗೆ ಬರ್ತಾರಾ ಪ್ರಜ್ವಲ್ ರೇವಣ್ಣ?
