– ಅಮೆರಿಕದ ಶಕ್ತಿಶಾಲಿ ಬಿ-1 ಬಾಂಬರ್ ಯುದ್ಧ ವಿಮಾನಗಳ ಮೂಲಕ ಕ್ಸಿಗೆ ಸ್ವಾಗತ
ವಾಷಿಂಗ್ಟನ್: ಮೂರು ದಿನಗಳ ಅಮೆರಿಕ ಪ್ರವಾಸ ಕೈಗೊಂಡಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ (Xi Jinping) ಬುಧವಾರ ವಾಷಿಂಗ್ಟನ್‌ಗೆ ಬಂದಿಳಿದಿದ್ದಾರೆ. ಇದು ದಶಕಕ್ಕೂ ಹೆಚ್ಚು ಕಾಲದ ಬಳಿಕ ಅವರ ಮೊದಲ ಅಮೆರಿಕ ಭೇಟಿಯಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರೊಂದಿಗೆ ವ್ಯಾಪಾರ, ಕೃತಕ ಬುದ್ಧಿಮತ್ತೆ (AI), ನಿರ್ಣಾಯಕ ಖನಿಜಗಳು, ತೈವಾನ್ ಸೇರಿದಂತೆ ಹಲವು ಸೂಕ್ಷ್ಮ ವಿಚಾರಗಳ ಕುರಿತು ಉನ್ನತ ಮಟ್ಟದ ಮಾತುಕತೆ ನಡೆಯುವ ಸಾಧ್ಯತೆಗಳಿವೆ.
#WATCH | Chinese President Xi Jinping and First lady Peng Liyuan arrive in the United States; US President Donald Trump and First Lady Melania Trump receive them at Joint Base Andrews pic.twitter.com/ttOtyjlEnX
— ANI (@ANI) September 23, 2026
ಸೆಪ್ಟೆಂಬರ್ 23 ರಿಂದ 25ರ ವರೆಗೆ ನಡೆಯಲಿರುವ ಈ ಭೇಟಿಯು ಅಧಿಕೃತ ಶ್ವೇತಭವನದ (White House) ಸಭೆಗೂ ಮುನ್ನವೇ ಗಮನ ಸೆಳೆದಿದೆ. ಇದಕ್ಕೆ ಪ್ರಮುಖ ಕಾರಣ, ಟ್ರಂಪ್ ಅವರು ಸ್ವತಃ ಜಾಯಿಂಟ್ ಬೇಸ್ ಆಂಡ್ರ್ಯೂಸ್ (Joint Base Andrews) ಸೇನಾ ನೆಲೆಗೆ ತೆರಳಿ ಕ್ಸಿ ಜಿನ್‌ಪಿಂಗ್ ಅವರನ್ನ ಸ್ವಾಗತಿಸಿರುವುದು. ಟ್ರಂಪ್ ಹಾಗೂ ಅಮೆರಿಕದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಅವರು ಮೇರಿಲ್ಯಾಂಡ್‌ನ ಸೇನಾ ನೆಲೆಯಲ್ಲಿ ಕ್ಸಿ ಜಿನ್‌ಪಿಂಗ್ ಮತ್ತು ಅವರ ಪತ್ನಿ ಪೆಂಗ್ ಲಿಯುವಾನ್ ಅವರನ್ನ ಬರಮಾಡಿಕೊಂಡರು.
ವಿದೇಶಿ ನಾಯಕರನ್ನು ವಿಮಾನ ನಿಲ್ದಾಣದಲ್ಲೇ ಅಮೆರಿಕ ಅಧ್ಯಕ್ಷರು ವೈಯಕ್ತಿಕವಾಗಿ ಸ್ವಾಗತಿಸುವುದು ಇತ್ತೀಚಿನ ದಶಕಗಳಲ್ಲಿ ಅಪರೂಪವಾಗಿರುವ ಹಿನ್ನೆಲೆ ಈ ನಡೆ ವಿಶೇಷ ಗಮನ ಸೆಳೆದಿದೆ.

ಜಾಯಿಂಟ್ ಬೇಸ್ ಆಂಡ್ರ್ಯೂಸ್‌ನಲ್ಲೇ ಟ್ರಂಪ್ ಸ್ವಾಗತ
ಕ್ಸಿ ಜಿನ್‌ಪಿಂಗ್ ಆಗಮನಕ್ಕೂ ಮುನ್ನ ಟ್ರಂಪ್ ಹಾಗೂ ಮೆಲಾನಿಯಾ ಟ್ರಂಪ್ ಜಾಯಿಂಟ್ ಬೇಸ್ ಆಂಡ್ರ್ಯೂಸ್‌ಗೆ ತೆರಳಿದ್ದರು. ಸ್ವಾಗತ ಸಮಾರಂಭಕ್ಕಾಗಿ ಸೇನಾ ಗೌರವ ಪಡೆ ಮತ್ತು ಬ್ಯಾಂಡ್ ಅನ್ನು ಸಜ್ಜುಗೊಳಿಸಲಾಗಿತ್ತು. ಕ್ಸಿ ಅವರ ವಿಮಾನ ಲ್ಯಾಂಡ್ ಆದ ಬಳಿಕ ಅವರು ತಮ್ಮ ಪತ್ನಿ ಪೆಂಗ್ ಲಿಯುವಾನ್ ಅವರ ಕೈ ಹಿಡಿದು ವಿಮಾನದಿಂದ ಹೊರಬಂದರು. ಈ ವೇಳೆ ಟ್ರಂಪ್ ಮತ್ತು ಮೆಲಾನಿಯಾ ಅವರಿಬ್ಬರನ್ನೂ ಸ್ವಾಗತಿಸಿದರು. ವಿಮಾನದ ಸಮೀಪ ಸುಮಾರು 100 ಅಡಿ ರೆಡ್‌ಕಾರ್ಪೆಟ್ ಹಾಸಲಾಗಿತ್ತು. ಸೇನಾ ಬ್ಯಾಂಡ್ ಹಾಗೂ ಗೌರವ ಪಡೆ ಕೂಡ ನಿಯೋಜಿಸಲಾಗಿತ್ತು.
ಸ್ವಾಗತ ಸಮಾರಂಭದ ಭಾಗವಾಗಿ 2 B-1 ಬಾಂಬರ್ ವಿಮಾನಗಳು ಹಾರಾಟ ನಡೆಸಿದವು. ಅಮೆರಿಕದ ವಿವಿಧ ಸೇನಾ ಪಡೆಗಳ ಸಿಬ್ಬಂದಿ ಸಮಾರಂಭದಲ್ಲಿ ಭಾಗವಹಿಸಿದ್ದರು. ಅಮೆರಿಕ ಮತ್ತು ಚೀನಾದ ರಾಷ್ಟ್ರಗೀತೆಗಳನ್ನೂ ನುಡಿಸಲಾಯಿತು.
ವಿದೇಶಿ ನಾಯಕರನ್ನು ವಿಮಾನ ನಿಲ್ದಾಣದಲ್ಲೇ ಸ್ವಾಗತಿಸುವ ಪದ್ಧತಿ ಇತ್ತೀಚಿನ ದಶಕಗಳಲ್ಲಿ ಅಪರೂಪವಾಗಿರುವುದರಿಂದ ಟ್ರಂಪ್ ಅವರ ಈ ನಡೆ ರಾಜತಾಂತ್ರಿಕ ವಲಯದಲ್ಲಿ ಗಮನ ಸೆಳೆದಿದೆ. ಅಲ್ಲದೇ ಟ್ರಂಪ್ ಅವರು ಕ್ಸಿ ಅವರನ್ನ ವೈಯಕ್ತಿಕವಾಗಿ ಸ್ವಾಗತಿಸಲು ಬಯಸಿದ್ದಕ್ಕೆ ಕಾರಣ, ಅವರಿಬ್ಬರ ನಡುವೆ ಉತ್ತಮ ಸಂಬಂಧವಿದೆ ಎಂದು ಮೆಲಾನಿಯಾ ಟ್ರಂಪ್ ಹೇಳಿದ್ದಾರೆ. ಇದೇ ವೇಳೆ, ಈ ಸ್ವಾಗತವನ್ನು ಪರಸ್ಪರ ಗೌರವದ ಸಂಕೇತವೆಂದು ಶ್ವೇತಭವನ ಹೇಳಿಕೊಂಡಿದೆ.

