ವಾಷಿಂಗ್ಟನ್: ಇರಾನ್ (Iran) ವಿರುದ್ಧ ಕಠಿಣ ಮಿಲಿಟರಿ ಕ್ರಮ ಮತ್ತು ಆರ್ಥಿಕ ದಿಗ್ಬಂಧನದ ಭಾರಿ ಎಚ್ಚರಿಕೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ನೀಡಿದ್ದಾರೆ.
ಇಂದು (ಜೂನ್ 11) ಟ್ರೂತ್ ಸೋಷಿಯಲ್ ಖಾತೆಯಲ್ಲಿ ಸರಣಿ ಸಂದೇಶಗಳನ್ನು ಪ್ರಕಟಿಸಿರುವ ಅವರು, ಇರಾನ್ ವಿರುದ್ಧ ಅಮೆರಿಕ ಸೇನೆ ಯುದ್ಧ ಸಾರುವ ಮುನ್ಸೂಚನೆಗಳನ್ನು ಹೊರಹಾಕಿದ್ದಾರೆ.
ಇಂದು ರಾತ್ರಿಯೇ ಅಮೆರಿಕ ಸೇನೆಯು ಇರಾನ್ ಮೇಲೆ ಅತ್ಯಂತ ಬಲವಾದ ದಾಳಿ ನಡೆಸಲಿದೆ (VERY HARD TONIGHT) ಎಂದು ಟ್ರಂಪ್ ನೇರವಾಗಿಯೇ ಘೋಷಿಸಿದ್ದಾರೆ. ಇರಾನ್ ದೇಶದ ನೌಕಾಪಡೆ, ವಾಯುಪಡೆ ಮತ್ತು ಪ್ರಮುಖ ರಕ್ಷಣಾ ವ್ಯವಸ್ಥೆಗಳು ಈಗಾಗಲೇ ಧ್ವಂಸಗೊಂಡಿವೆ ಎಂದು ಪ್ರತಿಪಾದಿಸಿರುವ ಅವರು, ಮುಂದಿನ ಹಂತವಾಗಿ ಇರಾನ್ ಬೆನ್ನೆಲುಬನ್ನು ಮುರಿಯಲು ಸಜ್ಜಾಗಿದ್ದಾರೆ. ಇದನ್ನೂ ಓದಿ: ಭಾರತೀಯರಿದ್ದ ಹಡಗಿನ ಮೇಲೆ ದಾಳಿಗೆ ಅಮೆರಿಕ ಸಮರ್ಥನೆ – `ಜಲವೀರ್’ ಮೇಲಿನ ದಾಳಿ ವೀಡಿಯೋ ರಿಲೀಸ್
ಖಾರ್ಗ್ ದ್ವೀಪದ ಮೇಲೆ ಕಣ್ಣು!
ಹಿಂದೆ ವೆನೆಜುವೆಲಾದಲ್ಲಿ ತಳೆದಿದ್ದ ಕಠಿಣ ನಿಲುವನ್ನೇ ಈಗ ಇರಾನ್ ಮೇಲೂ ಪ್ರಯೋಗಿಸಲು ಟ್ರಂಪ್ ಮುಂದಾಗಿದ್ದಾರೆ. ಇರಾನ್ ದೇಶದ ಅತ್ಯಂತ ಪ್ರಮುಖ ತೈಲ ರಫ್ತು ಕೇಂದ್ರವಾಗಿರುವ ಖಾರ್ಗ್ ದ್ವೀಪವನ್ನು (Kharg Island) ಅಮೆರಿಕವು ಮುಂದಿನ ದಿನಗಳಲ್ಲಿ ತನ್ನ ಸಂಪೂರ್ಣ ಮಿಲಿಟರಿ ನಿಯಂತ್ರಣಕ್ಕೆ ತೆಗೆದುಕೊಳ್ಳಲಿದೆ ಎಂದು ಟ್ರಂಪ್ ಬೆದರಿಕೆ ಹಾಕಿದ್ದಾರೆ. ಇರಾನ್‌ನ ಒಟ್ಟು ತೈಲ ಮತ್ತು ಗ್ಯಾಸ್ ಮಾರುಕಟ್ಟೆಯನ್ನು ಅಮೆರಿಕ ತನ್ನ ವಶಕ್ಕೆ ಪಡೆಯಲಿದೆ ಎಂದು ಅವರು ಬರೆದುಕೊಂಡಿದ್ದಾರೆ.
ಇರಾನ್ ಅನ್ನು ಯಾವುದೇ ಷರತ್ತಿಲ್ಲದೆ ಶಾಂತಿ ಒಪ್ಪಂದಕ್ಕೆ ಒಪ್ಪುವಂತೆ ಮಣಿಸಲು ಟ್ರಂಪ್ ಈ ಅತ್ಯಂತ ಕಠಿಣ ಹಾಗೂ ಆಕ್ರಮಣಕಾರಿ ನಿಲುವು ತಳೆದಿದ್ದಾರೆ ಎನ್ನಲಾಗಿದೆ. ಖಾರ್ಗ್ ದ್ವೀಪವು ಇರಾನ್ ದೇಶದ ಒಟ್ಟು 90% ರಷ್ಟು ಕಚ್ಚಾ ತೈಲ ರಫ್ತನ್ನು ನಿರ್ವಹಿಸುವ ಪ್ರಮುಖ ಕೇಂದ್ರವಾಗಿದೆ. ಒಂದು ವೇಳೆ ಅಮೆರಿಕ ಈ ದ್ವೀಪವನ್ನು ತನ್ನ ವಶಕ್ಕೆ ಪಡೆದರೆ ಇರಾನ್ ಆರ್ಥಿಕವಾಗಿ ಸಂಪೂರ್ಣವಾಗಿ ಪತನಗೊಳ್ಳಲಿದೆ.
ಟ್ರಂಪ್ ಅವರ ಈ ದಿಢೀರ್ ಹೆಜ್ಜೆಯು ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿಯನ್ನು ಹೆಚ್ಚಿಸಿದ್ದು, ಜಾಗತಿಕವಾಗಿ ಕಚ್ಚಾ ತೈಲ (Crude Oil) ಬೆಲೆಯಲ್ಲಿ ಭಾರೀ ಏರಿಕೆಯಾಗುವ ಮತ್ತು ಷೇರು ಮಾರುಕಟ್ಟೆಗಳಲ್ಲಿ ತಲ್ಲಣ ಸೃಷ್ಟಿಯಾಗುವ ಆತಂಕವನ್ನು ಮೂಡಿಸಿದೆ.
