ಬಲವಂತದ ದುಡಿಮೆ (Forced Labour) ಮೂಲಕ ಸಂಪೂರ್ಣವಾಗಿ ಅಥವಾ ಭಾಗಶಃ ತಯಾರಿಸಲಾದ ವಸ್ತುಗಳ ಆಮದನ್ನು ನಿಷೇಧಿಸುವ ಮಹತ್ವದ ತಿದ್ದುಪಡಿಯನ್ನ ಕೇಂದ್ರ ಸರ್ಕಾರ ʻವಿದೇಶಿ ವ್ಯಾಪಾರ ನೀತಿ (Foreign Trade Policy–2023)ʼಗೆ ತಂದಿದೆ. ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಬಲವಂತದ ಕಾರ್ಮಿಕ ಪದ್ಧತಿಗೆ ಸಂಬಂಧಿಸಿದ ತನಿಖೆಗಳು ನಡೆಯುತ್ತಿರುವ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.
ಜುಲೈ 13ರಂದು ಹೊರಡಿಸಲಾದ ಅಧಿಕೃತ ಗೆಜೆಟ್ ಅಧಿಸೂಚನೆಯ ಮೂಲಕ ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯ (DGFT), ವಿದೇಶಿ ವ್ಯಾಪಾರ ನೀತಿಗೆ ಹೊಸ ನಿಯಮವನ್ನ ಸೇರಿಸಿದೆ. ಅದರ ಪ್ರಕಾರ, ʻಬಲವಂತದ ದುಡಿಮೆಯನ್ನು ಬಳಸಿ ಸಂಪೂರ್ಣವಾಗಿ ಅಥವಾ ಭಾಗಶಃ ತಯಾರಿಸಲಾದ ಯಾವುದೇ ವಸ್ತುವಿನ ಆಮದು ನಿಷೇಧಿತವಾಗಿದೆʼ ಎಂದು ಸ್ಪಷ್ಟಪಡಿಸಲಾಗಿದೆ. ಆದರೆ, ಈ ಅಧಿಸೂಚನೆಯಿಂದ ಯಾವುದೇ ದೇಶದ ಅಥವಾ ಯಾವುದೇ ನಿರ್ದಿಷ್ಟ ಉತ್ಪನ್ನದ ಆಮದು ತಕ್ಷಣವೇ ನಿಷೇಧವಾಗುವುದಿಲ್ಲ. ಭವಿಷ್ಯದಲ್ಲಿ ತನಿಖೆಯ ಆಧಾರದ ಮೇಲೆ ಗುರುತಿಸಲಾದ ಉತ್ಪನ್ನಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲು ಈ ನಿಯಮ ಕಾನೂನುಬದ್ಧ ಚೌಕಟ್ಟನ್ನು ಒದಗಿಸುತ್ತದೆ.

ಈ ಹೊಸ ನಿಯಮ ಅಧಿಕೃತ ಗೆಜೆಟ್‌ನಲ್ಲಿ ಪ್ರಕಟವಾದ ದಿನಾಂಕದಿಂದ 30 ದಿನಗಳ ಬಳಿಕ ಜಾರಿಗೆ ಬರಲಿದೆ. ಅಷ್ಟಕ್ಕೂ ಈ ಬಲವಂತದ ದುಡಿಮೆ ಅಂದ್ರೆ ಏನು? ವಿದೇಶಿ ವ್ಯಾಪಾರ ನೀತಿಯಲ್ಲಿ ಭಾರತ ಬಲಾವಣೆ ತಂದಿದ್ದು ಏಕೆ? ಇದರಿಂದ ಭಾರತಕ್ಕೆ ಏನು ಪ್ರಯೋಜನ ಎಂಬ ಬಗ್ಗೆ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ….
ಏನಿದು ಬಲವಂತದ ದುಡಿಮೆ?
ಬಲವಂತದ ದುಡಿಮೆ ಸಮಾವೇಶ, 1930 (ಸಂಖ್ಯೆ 29) ಕಾಯ್ದೆಯ ಪ್ರಕಾರ, ಯಾವುದೇ ದಂಡದ ಬೆದರಿಕೆಯ ಅಡಿಯಲ್ಲಿ ಅಥವಾ ವ್ಯಕ್ತಿ ಸ್ವಯಂ ಪ್ರೇರಣೆ ಇಲ್ಲದೆ ನಡೆಸುವ ಯಾವುದೇ ಕೆಲಸ ಅಥವಾ ಸೇವೆಯನ್ನು ಬಲವಂತದ ದುಡಿಮೆ ಎಂದು ಪರಿಗಣಿಸಲಾಗುತ್ತದೆ. ಬಲವಂತದ ದುಡಿಮೆಯು ಸರಕುಗಳ ಮೇಲಿನ ಆಮದು ನಿಯಂತ್ರಣಗಳನ್ನು ದೇಶಗಳು ಕಠಿಣಗೊಳಿಸುತ್ತಿರುವುದರಿಂದ ಪೂರೈಕೆ ಸರಪಳಿಯ ಮೇಲೆ ಇದು ಪ್ರಮುಖ ವ್ಯಾಪಾರ ಸಮಸ್ಯೆಯಾಗಿ ಮಾರ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ 60 ದೇಶಗಳ ವಿರುದ್ಧ ಸೆಕ್ಷನ್ 301(ಬಿ)ರ ಅಡಿ ತನಿಖೆ ಪ್ರಾರಂಭಿಸಿದೆ.

ವಿದೇಶಿ ವ್ಯಾಪಾರ ನೀತಿಯಲ್ಲಿ ಏನು ಬದಲಾವಣೆ?
ವಿದೇಶಿ ವ್ಯಾಪಾರ ನೀತಿ ತಿದ್ದುಪಡಿ ನಂತರ, ಯಾವುದೇ ವಸ್ತುವನ್ನು ಬಲವಂತದ ದುಡಿಮೆಯ ಮೂಲಕ ತಯಾರಿಸಲಾಗಿದೆ ಎಂಬುದಕ್ಕೆ ತನಿಖೆ ಅಥವಾ ಸೂಕ್ತ ಸಾಕ್ಷ್ಯ ದೊರೆತರೆ, ಆ ವಸ್ತುವಿನ ಆಮದನ್ನು ನಿಷೇಧಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಲಭ್ಯವಾಗಲಿದೆ. ಇಂತಹ ತನಿಖೆ ನಡೆಸುವ ವಿಧಾನವನ್ನು ಹ್ಯಾಂಡ್‌ಬುಕ್ ಆಫ್ ಪ್ರೊಸೀಜರ್ಸ್–2023ನಲ್ಲಿ ಪ್ರತ್ಯೇಕವಾಗಿ ವಿವರಿಸಲಾಗುತ್ತದೆ. ಇದರ ಜೊತೆಗೆ, FTP–2023ರ ಅಧ್ಯಾಯ-11ರಲ್ಲಿ ʻForced Labourʼ ಎಂಬ ಹೊಸ ವ್ಯಾಖ್ಯಾನವನ್ನು ಸೇರಿಸಲಾಗಿದೆ.
ಈ ತಿದ್ದುಪಡಿ ಏಕೆ?
ಅಮೆರಿಕದ ʻಯುಎಸ್ ಟ್ರೇಡ್ ರೆಪ್ರಸೆಂಟೇಟಿವ್ʼ (USTR) ಭಾರತ ಸೇರಿದಂತೆ ಸುಮಾರು 60 ರಾಷ್ಟ್ರಗಳ ವಿರುದ್ಧ ಸೆಕ್ಷನ್ 301 ಅಡಿಯಲ್ಲಿ ತನಿಖೆ ನಡೆಸುತ್ತಿದೆ. ಬಲವಂತದ ದುಡಿಮೆಯಿಂದ ತಯಾರಾದ ವಸ್ತುಗಳ ಆಮದನ್ನು ತಡೆಯುವಲ್ಲಿ ಈ ದೇಶಗಳು ಸಮರ್ಪಕ ಕ್ರಮ ಕೈಗೊಂಡಿಲ್ಲ ಎಂಬ ಆರೋಪವನ್ನು USTR ಮಾಡಿದೆ. ಕಳೆದ ಜೂನ್ 3ರಂದು ಅಮೆರಿಕ, ಭಾರತ ಸೇರಿದಂತೆ 54 ರಾಷ್ಟ್ರಗಳಿಂದ ಆಮದಾಗುವ ಉತ್ಪನ್ನಗಳ ಮೇಲೆ 12.5% ಹೆಚ್ಚುವರಿ ಸುಂಕ ವಿಧಿಸುವ ಪ್ರಸ್ತಾಪವನ್ನೂ ಮುಂದಿಟ್ಟಿತ್ತು.
ಇದೇ ವೇಳೆ ಕೆನಡಾ, ಈಕ್ವೆಡಾರ್, ಯುರೋಪಿಯನ್ ಯೂನಿಯನ್, ಇಂಡೋನೇಷ್ಯಾ, ಮೆಕ್ಸಿಕೋ ಹಾಗೂ ಪಾಕಿಸ್ತಾನ ಸೇರಿದಂತೆ ಕೆಲವು ರಾಷ್ಟ್ರಗಳು ಬಲವಂತದ ದುಡಿಮೆಯಿಂದ ತಯಾರಾದ ವಸ್ತುಗಳ ಆಮದಿಗೆ ದೇಶೀಯ ಮಟ್ಟದಲ್ಲೇ ನಿರ್ಬಂಧ ಹೇರಿರುವ ಕಾರಣ, ಅವುಗಳಿಗೆ ಹೆಚ್ಚುವರಿ 10% ಆಮದು ಸುಂಕ ಅನ್ವಯಿಸುವ ಪ್ರಸ್ತಾಪವೂ ಇದೆ. ಆದ್ರೆ ಭಾರತ ಮತ್ತು ಅಮೆರಿಕ ನಡುವೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ (Bilateral Trade Agreement–BTA) ಕುರಿತು ಮಾತುಕತೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ತಿದ್ದುಪಡಿ ಮಹತ್ವ ಪಡೆದಿದೆ.

ತಕ್ಷಣವೇ ಆಮದು ನಿಷೇಧವಾಗುತ್ತದೆಯೇ?
ಖಂಡಿತವಾಗಿಯೂ ಇಲ್ಲ. ಈ ಅಧಿಸೂಚನೆಯಿಂದ ಯಾವುದೇ ಉತ್ಪನ್ನದ ಅಥವಾ ಯಾವುದೇ ದೇಶದ ಆಮದು ತಕ್ಷಣವೇ ನಿಷೇಧವಾಗುವುದಿಲ್ಲ. ಬದಲಾಗಿ, ಭವಿಷ್ಯದಲ್ಲಿ DGFT ನಡೆಸುವ ತನಿಖೆಯಲ್ಲಿ ಬಲವಂತದ ದುಡಿಮೆಯಿಂದ ಉತ್ಪಾದನೆಯಾಗಿದೆ ಎಂದು ದೃಢಪಟ್ಟ ಉತ್ಪನ್ನಗಳ ವಿರುದ್ಧ ಮಾತ್ರ ಸರ್ಕಾರ ನಿಷೇಧ ಹೇರಲು ಸಾಧ್ಯವಾಗುವಂತೆ ಕಾನೂನುಬದ್ಧ ವ್ಯವಸ್ಥೆ ರೂಪಿಸಲಾಗಿದೆ.
ತಜ್ಞರು ಏನು ಹೇಳುತ್ತಾರೆ?
ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಶಿಯೇಟಿವ್ (GTRI) ಸಂಸ್ಥಾಪಕ ಅಜಯ್ ಶ್ರೀವಾಸ್ತವ ಅವರ ಪ್ರಕಾರ, ಈ ಅಧಿಸೂಚನೆ ತಕ್ಷಣದ ನಿಷೇಧವಲ್ಲ, ಬದಲಾಗಿ ಭವಿಷ್ಯದ ಕ್ರಮಗಳಿಗೆ ಅಗತ್ಯವಾದ ಕಾನೂನು ಚೌಕಟ್ಟನ್ನು ಸೃಷ್ಟಿಸಿದೆ. ಈ ನಿಯಮದ ಪರಿಣಾಮಕಾರಿತ್ವವು ಸರ್ಕಾರ ಯಾವ ರೀತಿಯಲ್ಲಿ ತನಿಖೆ ನಡೆಸುತ್ತದೆ? ಯಾವ ಸಾಕ್ಷ್ಯವನ್ನು ಪರಿಗಣಿಸುತ್ತದೆ? ಹಾಗೂ ಯಾವ ಉತ್ಪನ್ನಗಳನ್ನು ಗುರಿಯಾಗಿಸುತ್ತದೆ? ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕದ ದೃಷ್ಟಿಯಲ್ಲಿ ವಿಶೇಷವಾಗಿ ಹತ್ತಿ, ಜವಳಿ ಉತ್ಪನ್ನಗಳು, ಸೌರ ಫಲಕಗಳ ಪಾಲಿಸಿಲಿಕಾನ್, ಸಮುದ್ರ ಆಹಾರ, ಲೋಹಗಳು, ಬ್ಯಾಟರಿಗಳು ಹಾಗೂ ಎಲೆಕ್ಟ್ರಾನಿಕ್ ಉತ್ಪನ್ನಗಳು, ವಿಶೇಷವಾಗಿ ಚೀನಾದ ಕ್ಸಿನ್‌ಜಿಯಾಂಗ್ ಪ್ರದೇಶಕ್ಕೆ ಸಂಬಂಧಿಸಿದ ಸರಬರಾಜು ಸರಪಳಿಗಳು ಹೆಚ್ಚಿನ ಅಪಾಯದಲ್ಲಿವೆ ಎಂದು ಅವರು ಹೇಳಿದ್ದಾರೆ.

ಇನ್ನೂ EY ಇಂಡಿಯಾ ಸಂಸ್ಥೆಯ ಟ್ರೇಡ್ ಪಾಲಿಸಿ ಲೀಡರ್ ಅಗ್ನೇಶ್ವರ್ ಸೇನ್ ಪ್ರತಿಕ್ರಿಯಿಸಿ, ಇದು ಕೇವಲ ಅಮೆರಿಕದ ಆರೋಪಗಳಿಗೆ ಉತ್ತರ ನೀಡುವುದಲ್ಲ, ತನ್ನ ಸರಬರಾಜು ಸರಪಳಿಯಲ್ಲಿಯೂ ಬಲವಂತದ ದುಡಿಮೆಯನ್ನು ನಿಯಂತ್ರಿಸುವ ಸಾಮರ್ಥ್ಯ ಭಾರತಕ್ಕಿದೆ ಎಂಬುದನ್ನು ಜಾಗತಿಕ ಮಟ್ಟದಲ್ಲಿ ಸ್ಪಷ್ಟಪಡಿಸುವ ಕ್ರಮವಾಗಿದೆ ಎಂದಿದ್ದಾರೆ.
ಮುಂದೇನು?
ಹೊಸ ನಿಯಮ ಜಾರಿಗೆ ಬಂದ ಬಳಿಕ, ಬಲವಂತದ ದುಡಿಮೆಯಿಂದ ತಯಾರಿಸಲಾಗಿದೆ ಎಂಬುದಕ್ಕೆ ಸಾಕ್ಷ್ಯ ಸಿಕ್ಕರೆ, ಅಂತಹ ಉತ್ಪನ್ನಗಳ ಆಮದನ್ನು ಕೇಂದ್ರ ಸರ್ಕಾರ ನಿಷೇಧಿಸಬಹುದು. ಇದರೊಂದಿಗೆ ಭಾರತವು ಅಂತಾರಾಷ್ಟ್ರೀಯ ಕಾರ್ಮಿಕ ಮಾನದಂಡಗಳಿಗೆ ಅನುಗುಣವಾಗಿ ತನ್ನ ವ್ಯಾಪಾರ ನೀತಿಯನ್ನು ಮತ್ತಷ್ಟು ಬಲಪಡಿಸುವ ಜೊತೆಗೆ, ಭವಿಷ್ಯದ ಜಾಗತಿಕ ವ್ಯಾಪಾರ ಒಪ್ಪಂದಗಳು ಹಾಗೂ ಮಾರುಕಟ್ಟೆ ಪ್ರವೇಶದ ಮಾತುಕತೆಯಲ್ಲೂ ತನ್ನ ಸ್ಥಾನವನ್ನು ಇನ್ನಷ್ಟು ಸದೃಢಗೊಳಿಸುವ ನಿರೀಕ್ಷೆಯಿದೆ.
