ಕೊರೋನ ಎಂಬ ಮಹಾಮಾರಿ ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿತ್ತು. ಇದರಿಂದ ಚೇತರಿಸಿಕೊಳ್ಳುತ್ತಿರುವ ಹೊತ್ತಲ್ಲೇ ಇದೀಗಾ ಹಂಟಾ ವೈರಸ್ ಎಂಬ ವಿಚಿತ್ರ ವೈರಾಣು ಸೋಂಕು ಅಲ್ಲಲ್ಲಿ ಹರಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಡಚ್ ಕ್ರೂಸ್ ಹಡಗಿನಲ್ಲಿ ಸಂಭವಿಸಿರುವ ಹಂಟಾ ವೈರಸ್ ಸೋಂಕು ಜಾಗತಿಕ ಆತಂಕಕ್ಕೆ ಕಾರಣವಾಗಿದ್ದು, ಈಗಾಗಲೇ 7 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಮೂವರು ಮೃತಪಟ್ಟಿದ್ದಾರೆ. ಹಾಗಿದ್ರೆ ಹಂಟಾ ವೈರಸ್ ಎಂದರೇನು? ಇದು ಎಷ್ಟು ಅಪಾಯಕಾರಿ? ಗುಣಲಕ್ಷಣಗಳೇನು ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.
ಹಂಟಾ ವೈರಸ್ ಎಂದರೇನು?
ಹಂಟಾ ವೈರಸ್ ಒಂದು ಅಪರೂಪದ ಅಪಾಯಕಾರಿ ವೈರಸ್. ಇದು ಇಲಿಗಳ ಮೂತ್ರ, ಜೊಲ್ಲು ಅಥವಾ ಮಲದ ಮೂಲಕ ಹರಡುತ್ತದೆ. ಹಂಟಾ ವೈರಸ್ ಗಾಳಿಯಲ್ಲಿ ಹರಡೋದಿಲ್ಲ. ಮನುಷ್ಯನಿಂದ ಮನುಷ್ಯನಿಗೆ ಹರಡುವ ಸಾಂಕ್ರಾಮಿಕವೂ ಇದಲ್ಲ. ಇಲಿ ಹಾಗೂ ಹೆಗ್ಗಣದ ಜಾತಿಯ ‘ದಂಶಕ’ಗಳಲ್ಲಿ ಈ ವೈರಸ್ ಕಾಣಿಸಿಕೊಳ್ಳುತ್ತೆ. ಈ ದಂಶಕಗಳ ಮಲ, ಮೂತ್ರ ಅಥವಾ ಜೊಲ್ಲು ರಸ ಮಾನವನ ಸಂಪರ್ಕಕ್ಕೆ ಬಂದಾಗ ಮಾನವನಿಗೂ ಹಂಟಾ ವೈರಸ್ ಹರಡುತ್ತದೆ.
ಕ್ರೂಸ್ ಹಡಗಿನಲ್ಲಿ ಸೋಂಕಿಗೆ ಮೂವರು ಬಲಿ:
ಅಟ್ಲಾಂಟಿಕ್ ಸಾಗರದಲ್ಲಿ ಸಂಚರಿಸುತ್ತಿದ್ದ ಡಚ್ ಕ್ರೂಸ್ ಹಡಗು ಎಂವಿ ಹೊಂಡಿಯಸ್‌ನಲ್ಲಿ ಹಂಟಾ ವೈರಸ್ ಸೋಂಕು ಪತ್ತೆಯಾಗಿದ್ದು, ಸದ್ಯ ಜಾಗತಿಕವಾಗಿ ಆತಂಕ ಸೃಷ್ಟಿಯಾಗಿದೆ. ಹಡಗಿನಲ್ಲಿ ಏಳು ಮಂದಿಗೆ ಸೋಂಕು ದೃಢಪಟ್ಟಿದೆ. ಇವರಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಸೋಂಕಿತ ಹಡಗಿನಲ್ಲಿ ಇಬ್ಬರು ಭಾರತೀಯ ಪ್ರಜೆಗಳು ಇದ್ದಾರೆ ಎಂದು ವರದಿಯಾಗಿದೆ.

ಅರ್ಜೆಂಟೀನಾದ ಉಶುವಾಯಾದಿಂದ ಏಪ್ರಿಲ್ 1ರಂದು ಹೊರಟಿದ್ದ ಕ್ರೂಸ್ ಹಡಗಿನಲ್ಲಿ ಮಾರಣಾಂತಿಕ ಹಂಟಾ ವೈರಸ್ ಹರಡಿತು. ಹಡಗಿನಲ್ಲಿ ಸಿಬ್ಬಂದಿ ಸಹಿತ 147 ಮಂದಿ 23 ವಿವಿಧ ದೇಶಗಳಿಗೆ ಪ್ರಯಾಣಿಸುತ್ತಿದ್ದರು. ಈ ಪೈಕಿ 70 ವರ್ಷ ವಯಸ್ಸಿನ ಡಚ್ ಪ್ರಜೆ ಮತ್ತು ಅವರ 69 ವರ್ಷದ ಪತ್ನಿ ಸೋಂಕಿಗೆ ತುತ್ತಾಗಿ ಶಿಪ್ ನಲ್ಲೇ ಸಾವನ್ನಪ್ಪಿದ್ದರು. ಇದಲ್ಲದೆ ಮತ್ತೋರ್ವ ಜರ್ಮನ್ ಪ್ರಯಾಣಿಕ ಕೂಡ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಈ ಪ್ರಕರಣಗಳ ಬಳಿಕ ವೈರಸ್ ಪ್ರಸರಣದ ಕುರಿತು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆರಂಭದಲ್ಲಿ ಸುಮಾರು 150 ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿ 28 ದೇಶಗಳ ನಾಗರಿಕರು ಹಡಗಿನಲ್ಲಿ ಇದ್ದರು.
ಏಪ್ರಿಲ್ 24ರಂದು ಕೆಲವರು ಸೆಂಟ್ ಹೆಲಿನಾ ದ್ವೀಪದಲ್ಲಿ ಇಳಿದಿದ್ದರು. ಪ್ರಯಾಣಿಕರ ಪಟ್ಟಿಯಲ್ಲಿ ಫಿಲಿಪೈನ್ಸ್, ಯುಕೆ, ಅಮೆರಿಕಾ, ನೆದರ್‌ಲ್ಯಾಂಡ್ಸ್, ಸ್ಪೇನ್, ಜರ್ಮನಿ, ಕೆನಡಾ ಹಾಗೂ ಭಾರತ ಸೇರಿದಂತೆ ಹಲವು ದೇಶಗಳ ನಾಗರಿಕರು ಇದ್ದರು ಎಂದು ವರದಿಯಾಗಿದೆ. ಹಡಗಿನಿಂದ ಇಳಿದ ಪ್ರಯಾಣಿಕರನ್ನು ಪತ್ತೆಹಚ್ಚಲು ಆರೋಗ್ಯ ಅಧಿಕಾರಿಗಳು ತೀವ್ರ ಕ್ರಮ ಕೈಗೊಂಡಿದ್ದು, ಸೋಂಕು ಮತ್ತಷ್ಟು ಹರಡದಂತೆ ನಿಗಾವಹಿಸುತ್ತಿದ್ದಾರೆ.
ಹಡಗಿನಲ್ಲಿರುವ ಎಲ್ಲರೂ ಮಾಸ್ಕ್ ಧರಿಸುವಂತೆ ಆರೋಗ್ಯ ಅಧಿಕಾರಿಗಳು ಸೂಚಿಸಿದ್ದು, ಸೋಂಕಿತರಿಗೆ ಚಿಕಿತ್ಸೆ ನೀಡುವವರು ಮತ್ತು ಸಂಪರ್ಕದಲ್ಲಿರುವವರು ಹೆಚ್ಚಿನ ಮಟ್ಟದ ರಕ್ಷಣಾ ಸಾಧನಗಳನ್ನು ಬಳಸಬೇಕು ಎಂದು ಸಲಹೆ ನೀಡಲಾಗಿದೆ.
ಸಾಮಾನ್ಯವಾಗಿ ಹಂಟಾ ವೈರಸ್ ಸೋಂಕಿತ ಇಲಿಗಳು ಅಥವಾ ಅವುಗಳ ಮಲಮೂತ್ರದ ಸಂಪರ್ಕದಿಂದ ಹರಡುತ್ತದೆ. ಆದರೆ ಈ ಬಾರಿ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಸಾಧ್ಯತೆಯೂ ಹೆಚ್ಚಿರುವುದಾಗಿ ಡಬ್ಲ್ಯುಹೆಚ್‌ಒ ತಿಳಿಸಿದೆ.

ರೋಗದ ಲಕ್ಷಣಗಳೇನು?
-101 ಡಿಗ್ರಿ ಫ್ಯಾರನ್‌ಹೀಟ್ ಗಿಂತ ಹೆಚ್ಚಿನ ಜ್ವರ
-ಶೀತ
-ತುಂಬಾ ಸುಸ್ತು
-ಸ್ನಾಯು ನೋವು, ವಿಶೇಷವಾಗಿ ನಿಮ್ಮ ತೊಡೆಗಳು, ಸೊಂಟ ಮತ್ತು ಬೆನ್ನಿನ ಸುತ್ತಲೂ ನೋವು
-ವಾಕರಿಕೆ, ವಾಂತಿ ಮತ್ತು ಅತಿಸಾರ ಸೇರಿದಂತೆ ಹೊಟ್ಟೆಯ ಸಮಸ್ಯೆಗಳು
-ಚರ್ಮದ ದದ್ದು
-ತಲೆನೋವು
-ತಲೆತಿರುಗುವಿಕೆ
ವೈರಸ್ ಹರಡುವುದು ಹೇಗೆ?
ವೈದ್ಯಕೀಯ ವರದಿಗಳ ಪ್ರಕಾರ, ಇಲಿಗಳ ಜೊತೆಗೆ, ವೈರಸ್ ಅಳಿಲುಗಳಿಂದಲೂ ಹರಡಬಹುದು. ಆರಂಭಿಕ ಲಕ್ಷಣಗಳು ಸಾಮಾನ್ಯವಾಗಿ ಸೌಮ್ಯವಾಗಿದ್ದರೂ ತೀವ್ರವಾದ ಪ್ರಕರಣಗಳು ಬಹು ಅಂಗಗಳಿಗೆ ಹಾನಿಯನ್ನು ಉಂಟು ಮಾಡಬಹುದು. ಜೀವಕ್ಕೂ ಹೆಚ್ಚು ಅಪಾಯಕಾರಿಯಾಗಿದೆ. ರೋಗವು ಮುಂದುವರೆದಂತೆ ತ್ವರಿತ ಹೃದಯ ಬಡಿತ, ಉಸಿರಾಟದ ತೊಂದರೆಯಂತಹ ಲಕ್ಷಣಗಳು ಸ್ಪಷ್ಟವಾಗಿ ಕಾಣಿಸುತ್ತದೆ. ರೋಗವನ್ನು ಸಮಯೋಚಿತವಾಗಿ ಪತ್ತೆಹಚ್ಚಿ ಚಿಕಿತ್ಸೆ ನೀಡದಿದ್ದರೆ, ಅದು ಮಾರಣಾಂತಿಕ ಅಪಾಯ ಉಂಟುಮಾಡುತ್ತದೆ.
ಈ ವೈರಸ್ ಅಪರೂಪದ ಕಾಯಿಲೆಯಾಗಿ ಉಳಿದಿದೆ. 1993 ಮತ್ತು 2022ರ ಮಧ್ಯೆ ಅಮೆರಿಕದಲ್ಲಿ 864 ಪ್ರಕರಣಗಳು ವರದಿಯಾಗಿವೆ. ಇಲಿಗಳು ಇರುವ ಪ್ರದೇಶದಲ್ಲಿ ವಾಸಿಸುತ್ತಿದ್ದರೆ, ಜ್ವರ ತರಹದ ರೋಗಲಕ್ಷಣಗಳನ್ನು ಅನುಭವಿಸಲು ಆರಂಭಿಸಿದರೆ, ತಕ್ಷಣದ ವೈದ್ಯಕೀಯ ಚಿಕಿತ್ಸೆ ಪಡೆಯುವುದು ತುಂಬಾ ಮುಖ್ಯವಾಗಿದೆ.
ಆರಂಭದಲ್ಲಿ ಈ ರೋಗ ಲಕ್ಷಣಗಳು ಜ್ವರ, ಶೀತ, ಸ್ನಾಯು ನೋವು ಹಾಗೂ ತಲೆನೋವು ಸೇರಿದಂತೆ ವಿವಿಧ ಸಮಸ್ಯೆಗಳನ್ನು ಉಂಟುಮಾಡುತ್ತವೆ. ಆರಂಭಿಕ ಹಂತಗಳಲ್ಲಿ ಇದು ಸಾಮಾನ್ಯ ಜ್ವರವೇ ಅಥವಾ ವೈರಸ್ ಎಂದು ಗುರುತಿಸುವುದು ಕಷ್ಟ. ರೋಗವು ಮುಂದುವರೆದಂತೆ, ಇದು ಎದೆಯ ಬಿಗಿತ ಹಾಗೂ ಉಸಿರಾಟದ ತೊಂದರೆಗೆ ಕಾರಣವಾಗುತ್ತದೆ. ಸೋಂಕು ಶ್ವಾಸಕೋಶದಲ್ಲಿ ದ್ರವವನ್ನು ಸಂಗ್ರಹಿಸಲು ಕಾರಣವಾಗುತ್ತದೆ. ಇದರಿಂದಾಗಿ ಉಸಿರಾಟದ ತೊಂದರೆ ಹೆಚ್ಚಾಗುತ್ತದೆ. ಸೋಂಕು ಮೂತ್ರಪಿಂಡಗಳು ಮತ್ತು ಇತರ ಅಂಗಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಇದನ್ನು ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗಿದೆ.

ಹಂಟಾ ವೈರಸ್ ಸೋಂಕಿನಿಂದ ರಕ್ಷಿಸುವುದು ಹೇಗೆ?
ಪ್ರಸ್ತುತ ಹಂಟಾ ವೈರಸ್ ಸೋಂಕಿಗೆ ಚಿಕಿತ್ಸೆ ನೀಡಲು ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲವೇ ಔಷಧಿ ಲಭ್ಯವಿಲ್ಲ. ಈ ರೋಗಲಕ್ಷಣಗಳನ್ನು ನಿರ್ವಹಿಸಲು ಹಾಗೂ ಸೋಂಕಿನಿಂದ ಉಂಟಾಗುವ ಅಂಗ ಹಾನಿಯನ್ನು ತಡೆಗಟ್ಟಲು ಚಿಕಿತ್ಸೆ ನೀಡಲಾಗುತ್ತದೆ. ರೋಗಿಗಳಿಗೆ ಚಿಕಿತ್ಸೆಗಾಗಿ ಆಕ್ಸಿಜನ್ ಸಪೋರ್ಟ್ ಮತ್ತು ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ನೀಡುವುದು ಅಗತ್ಯವಿರುತ್ತದೆ. ನಿರ್ಲಕ್ಷ್ಯ ಮಾಡದೆ ವೈದ್ಯರಿಂದ ಚಿಕಿತ್ಸೆ ಪಡೆಯಬೇಕಾಗುತ್ತದೆ.
ಈ ಸೋಂಕು ತಡೆಗಟ್ಟಲು ಇಲಿಗಳ ಮಲ ಅಥವಾ ಮೂತ್ರದ ಸಂಪರ್ಕಕ್ಕೆ ಬರದಂತೆ ನೋಡಿಕೊಳ್ಳಬೇಕಾಗುತ್ತದೆ. ಸ್ವಚ್ಛಗೊಳಿಸುವಾಗ ಕೈಗವಸುಗಳನ್ನು ಧರಿಸಿ ಹಾಗೂ ಬ್ಲೀಚ್ ಅನ್ನು ಬಳಸಿ. ಹೆಚ್ಚಿನ ಇಲಿಗಳಿರುವ ಪ್ರದೇಶಗಳಲ್ಲಿ ಸ್ವಚ್ಛಗೊಳಿಸಲು ಪೊರಕೆಗಳು ಅಥವಾ ವ್ಯಾಕ್ಯೂಮ್ ಕ್ಲೀನರ್‌ಗಳನ್ನು ಬಳಸುವುದನ್ನು ತಪ್ಪಿಸಿ, ಏಕೆಂದರೆ ಇದು ವೈರಸ್ ಅನ್ನು ಏರೋಸಾಲೈಸ್ ಮಾಡಬಹುದು ಹಾಗೂ ಈ ಸೋಂಕನ್ನು ಹರಡುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ.

