ಪ್ರಶ್ನೆಪತ್ರಿಕೆ ಸೋರಿಕೆಯಂತಹ ಮಹಾಪರಾಧಗಳು ಲಕ್ಷಾಂತರ ಯುವಜನರ ಭವಿಷ್ಯವನ್ನು ಕತ್ತಲಿಗೆ ತಳ್ಳುವುದಷ್ಟೇ ಅಲ್ಲದೆ, ಇಡೀ ಶಿಕ್ಷಣ ಮತ್ತು ಉದ್ಯೋಗ ವ್ಯವಸ್ಥೆಯ ಮೇಲಿನ ನಂಬಿಕೆಯನ್ನೇ ಬುಡಮೇಲು ಮಾಡುತ್ತವೆ. ಇಂತಹ ಗಂಭೀರ ಅಪರಾಧಗಳಿಗೆ ವರ್ಷಗಟ್ಟಲೆ ವಿಚಾರಣೆ ನಡೆಯುತ್ತಿದ್ದರೆ, ಅಪರಾಧಿಗಳಿಗೆ ಕಾನೂನಿನ ಭಯವೇ ಇಲ್ಲದಂತಾಗುತ್ತದೆ. ಇದೇ ಕಾರಣಕ್ಕೆ, ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾದವರಿಗೆ ಕ್ಷಿಪ್ರ ಹಾಗೂ ಕಠಿಣ ಶಿಕ್ಷೆ ವಿಧಿಸಲು ಕೇಂದ್ರ ಸರ್ಕಾರ ತ್ವರಿತಗತಿ ನ್ಯಾಯಾಲಯಗಳನ್ನು (First Track Court ) ಸ್ಥಾಪಿಸಲು ಮುಂದಾಗಿದೆ.
ಸಾಮಾನ್ಯ ನ್ಯಾಯಾಲಯಗಳಲ್ಲಿ (Court) ವರ್ಷಾನುಗಟ್ಟಲೆ ಎಳೆಯುವ ಪ್ರಕರಣಗಳಿಗೆ ಹೋಲಿಸಿದರೆ, ಈ ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗಳು ಕಾರ್ಯಾಚರಿಸುವ ಶೈಲಿಯೇ ಬೇರೆ. ಹಾಗಿದ್ದರೆ ಏನಿದು ಫಾಸ್ಟ್ ಟ್ರ್ಯಾಕ್ ಕೋರ್ಟ್? ಇದು ಸಾಮಾನ್ಯ ಕೋರ್ಟ್‌ಗಳಿಗಿಂತ ಹೇಗೆ ಭಿನ್ನ? ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಇದರ ಪಾತ್ರವೇನು? ಎಂಬ ಸಂಪೂರ್ಣ ವಿವರ ಇಲ್ಲಿದೆ.
ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗಳು (FTCs) ಎಂದರೇನು?
ವೇಗವಾಗಿ ವಿಚಾರಣೆ ನಡೆಸುವ ನ್ಯಾಯಾಲಯಗಳು ವಿಶೇಷ ನ್ಯಾಯಾಲಯಗಳಾಗಿದ್ದು, ನಿರ್ದಿಷ್ಟ ವರ್ಗದ ಪ್ರಕರಣಗಳನ್ನು ವಿಶೇಷವಾಗಿ ಗಂಭೀರ ಅಪರಾಧಗಳು, ದೀರ್ಘಕಾಲದಿಂದ ಬಾಕಿ ಇರುವ ಪ್ರಕರಣಗಳು ಮತ್ತು ಸಾರ್ವಜನಿಕ ಮಹತ್ವದ ವಿಷಯಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಸ್ಥಾಪಿಸಲಾಗಿದೆ.
ನ್ಯಾಯಾಂಗದ ವಿಳಂಬವನ್ನು ಕಡಿಮೆ ಮಾಡುವುದು, ನ್ಯಾಯ ಸಿಗುವ ಪ್ರಕ್ರಿಯೆಯನ್ನು ಸುಲಭಗೊಳಿಸುವುದು ಮತ್ತು ನ್ಯಾಯದಾನ ವ್ಯವಸ್ಥೆಯ ಮೇಲೆ ಸಾರ್ವಜನಿಕರ ನಂಬಿಕೆಯನ್ನು ಬಲಪಡಿಸುವುದು ಇದರ ಉದ್ದೇಶ. ಸಾಮಾನ್ಯ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ನಿರ್ವಹಿಸುವ ನಿಯಮಿತ ನ್ಯಾಯಾಲಯಗಳಂತಲ್ಲದೆ ಕಟ್ಟುನಿಟ್ಟಾದ ಸಮಯದ ಮಿತಿಯಲ್ಲಿ ಪ್ರಕರಣಗಳನ್ನು ಪರಿಹರಿಸಲು ಪ್ರತಿದಿನ ಅಥವಾ ಸಣ್ಣ ಮಧ್ಯಂತರಗಳಲ್ಲಿ ವಿಚಾರಣೆಗಳನ್ನು ನಡೆಸುತ್ತವೆ.
ಇವು ಪ್ರತ್ಯೇಕ ಸಾಂವಿಧಾನಿಕ ನ್ಯಾಯಾಲಯಗಳಲ್ಲ. ಇವುಗಳನ್ನು ರಾಜ್ಯ ಕಾಯಿದೆಗಳು/ಹೈಕೋರ್ಟ್ ಅಧಿಸೂಚನೆಗಳ ಅಡಿಯಲ್ಲಿ ಸ್ಥಾಪಿಸಲಾಗುತ್ತದೆ. ಇವು ಹಾಲಿ ಇರುವ ನ್ಯಾಯಾಂಗ ಶ್ರೇಣಿಯೊಳಗೆ (ಸಾಮಾನ್ಯವಾಗಿ ಸೆಷನ್ಸ್ ಕೋರ್ಟ್ ಮಟ್ಟದಲ್ಲಿ) ಹೆಚ್ಚುವರಿ ನ್ಯಾಯಾಧೀಶರೊಂದಿಗೆ ಕಾರ್ಯನಿರ್ವಹಿಸುತ್ತವೆ.
ಈ ನ್ಯಾಯಾಲಯಗಳ ಸ್ಥಾಪನೆಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಜವಾಬ್ದಾರಿಯಾಗಿದೆ. ಕೇಂದ್ರವು ನೀತಿ ಮತ್ತು ಆರ್ಥಿಕ ನೆರವು ನೀಡಿದರೆ, ರಾಜ್ಯಗಳು ತಮ್ಮ ಹೈಕೋರ್ಟ್‌ಗಳ ಸಮಾಲೋಚನೆಯೊಂದಿಗೆ ಈ ನ್ಯಾಯಾಲಯಗಳನ್ನು ಸ್ಥಾಪಿಸಬೇಕು. ಇದನ್ನೂ ಓದಿ: ಇಂಟೆಲ್ ಅಧಿಕಾರಿ ಹತ್ಯೆ: ಮಾಜಿ ಎಎಪಿ ನಾಯಕ ತಾಹಿರ್ ಹುಸೇನ್‌ಗೆ ಜೀವಾವಧಿ ಶಿಕ್ಷೆ
ಭಾರತದಲ್ಲಿ ಆರಂಭ ಯಾವಾಗ?
ಜಿಲ್ಲಾ, ಸಿವಿಲ್, ಮತ್ತು ಕ್ರಿಮಿನಲ್ ನ್ಯಾಯಾಲಯಗಳಲ್ಲಿ ದೀರ್ಘಕಾಲದಿಂದ ಬಾಕಿ ಉಳಿದಿರುವ ಪ್ರಕರಣಗಳನ್ನು, ವಿಶೇಷವಾಗಿ ದೀರ್ಘಕಾಲದಿಂದ ಜೈಲಿನಲ್ಲಿದ್ದ ವಿಚಾರಣಾಧೀನ ಕೈದಿಗಳ ಪ್ರಕರಣಗಳನ್ನು ವಿಲೇವಾರಿ ಮಾಡಲು ಮೊದಲ ಬಾರಿಗೆ 2000 ಇಸ್ವಿಯಲ್ಲಿ 11ನೇ ಹಣಕಾಸು ಆಯೋಗ ಶಿಫಾರಸು ಮಾಡಿತು.
ದೌರ್ಜನ್ಯ ಪ್ರಕರಣಗಳು, ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರಿಗೆ ಸಂಬಂಧಿಸಿದ ಪ್ರಕರಣಗಳು ಹಾಗೂ 5 ವರ್ಷಗಳಿಗಿಂತ ಹೆಚ್ಚು ಕಾಲ ಬಾಕಿ ಇರುವ ಆಸ್ತಿ ವಿವಾದಗಳನ್ನು ನಿರ್ವಹಿಸಲು 1,800 ಇಂತಹ ನ್ಯಾಯಾಲಯಗಳನ್ನು ಸ್ಥಾಪಿಸಲು 14ನೇ ಹಣಕಾಸು ಶಿಫಾರಸು ಮಾಡಿತು.
2018ರ ಕ್ರಿಮಿನಲ್ ಕಾನೂನು (ತಿದ್ದುಪಡಿ) ಕಾಯಿದೆ ಮತ್ತು ಸುಪ್ರೀಂ ಕೋರ್ಟ್ ನಿರ್ದೇಶನಗಳ ನಂತರ, ಕೇಂದ್ರ ಸರ್ಕಾರವು ಅಕ್ಟೋಬರ್ 2019 ರಲ್ಲಿ ‘ನಿರ್ಭಯ ನಿಧಿ’ಯ ಮೂಲಕ ಹಣಕಾಸು ಒದಗಿಸುವ ಯೋಜನೆಯನ್ನು ಪ್ರಾರಂಭಿಸಿತು. ಇದರಡಿಯಲ್ಲಿ ಅತ್ಯಾಚಾರ ಪ್ರಕರಣಗಳು ಮತ್ತು ಪೋಕ್ಸೋ (POCSO) ಕಾಯ್ದೆಯಡಿಯ ಅಪರಾಧಗಳ ವಿಚಾರಣೆಗೆಂದೇ ಪ್ರತ್ಯೇಕವಾಗಿ ವಿಶೇಷ ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗಳನ್ನು ಸ್ಥಾಪಿಸಲಾಯಿತು.

ಎರಡು ರೀತಿ ಕೋರ್ಟ್‌ಗಳು
ಸಾಮಾನ್ಯ ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗಳು: 11ನೇ ಮತ್ತು 14ನೇ ಹಣಕಾಸು ಆಯೋಗಗಳು ಶಿಫಾರಸು ಮಾಡಿದ ನ್ಯಾಯಾಲಯಗಳು. ಜನವರಿ 2026 ರ ಹೊತ್ತಿಗೆ, 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇಂತಹ 862 ನ್ಯಾಯಾಲಯಗಳು ಕಾರ್ಯಾಚರಿಸುತ್ತಿವೆ.
ವಿಶೇಷ ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗಳು: ಇವು ಕೇಂದ್ರ ಸರ್ಕಾರದ ಧನಸಹಾಯದೊಂದಿಗೆ ಸ್ಥಾಪಿತವಾಗಿದ್ದು, ಅತ್ಯಾಚಾರ ಮತ್ತು ಪೋಕ್ಸೋ ಕಾಯಿದೆಯಡಿಯ ಪ್ರಕರಣಗಳ ಸಮಯಬದ್ಧ ವಿಚಾರಣೆಗೆ ಸಂಪೂರ್ಣವಾಗಿ ಮೀಸಲಾಗಿವೆ. 2026ರ ಮಧ್ಯದ ವೇಳೆಗೆ 29 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 774 ಇಂತಹ ನ್ಯಾಯಾಲಯಗಳು ಕಾರ್ಯಾಚರಿಸುತ್ತಿವೆ.
ಈ ಕೋರ್ಟ್‌ಗಳ ಮಹತ್ವವೇನು?
ತ್ವರಿತ ನ್ಯಾಯ: ಸಾಮಾನ್ಯ ನ್ಯಾಯಾಲಯಗಳಿಗಿಂತ ಇವು ವೇಗವಾಗಿ ಪ್ರಕರಣಗಳನ್ನು ವಿಲೇವಾರಿ ಮಾಡುತ್ತವೆ. 2024 ರಲ್ಲಿ ಈ ಕೋರ್ಟ್‌ಗಳು ತಿಂಗಳಿಗೆ ಸರಾಸರಿ 9.5 ಪ್ರಕರಣಗಳನ್ನು ವಿಲೇವಾರಿ ಮಾಡಿದ್ದರೆ, ಸಾಮಾನ್ಯ ನ್ಯಾಯಾಲಯಗಳು ಸರಾಸರಿ 3.3 ಪ್ರಕರಣಗಳನ್ನು ಮಾತ್ರ ವಿಲೇವಾರಿ ಮಾಡಿದ್ದವು. ಅದೇ ವರ್ಷದಲ್ಲಿ ಸಲ್ಲಿಕೆಯಾದ 88,902 ಹೊಸ ಪ್ರಕರಣಗಳಲ್ಲಿ 85,595 ಪ್ರಕರಣಗಳನ್ನು ಪರಿಹರಿಸಿ 96.28% ರಷ್ಟು ದಾಖಲೆಯ ವಿಲೇವಾರಿ ದರವನ್ನು ಸಾಧಿಸಿವೆ.
ಕೇಸ್ ಕಡಿಮೆಯಾಗುತ್ತದೆ: ಕಳೆದ ಮೂರು ವರ್ಷಗಳಲ್ಲಿ ಸಾಮಾನ್ಯ ಸಾಮಾನ್ಯ ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗಳು 40 ಲಕ್ಷಕ್ಕೂ ಹೆಚ್ಚು ಪ್ರಕರಣಗಳನ್ನು ವಿಲೇವಾರಿ ಮಾಡಿವೆ. ಇದರಿಂದ ಸಾಮಾನ್ಯ ನ್ಯಾಯಾಲಯಗಳು ತಮ್ಮ ಸಾಮಾನ್ಯ ಪ್ರಕರಣಗಳ ಮೇಲೆ ಗಮನ ಹರಿಸಲು ಸಾಧ್ಯವಾಗುತ್ತದೆ.
ಸಂತ್ರಸ್ತರ ರಕ್ಷಣೆ: ಈ ನ್ಯಾಯಾಲಯಗಳನ್ನು ಸಂತ್ರಸ್ತರ ಪರಿಸ್ಥಿತಿಗೆ ಸೂಕ್ಷ್ಮವಾಗಿ ಸ್ಪಂದಿಸುವಂತೆ ವಿನ್ಯಾಸಗೊಳಿಸಲಾಗಿದೆ. ಮಕ್ಕಳು ಮತ್ತು ಸಂತ್ರಸ್ತರಿಗೆ ಭಯವಿಲ್ಲದ ವಾತಾವರಣ ನಿರ್ಮಿಸಲು ಸೂಕ್ಷ್ಮ ಸಾಕ್ಷಿ ಹೇಳಿಕೆ ಕೇಂದ್ರಗಳನ್ನು ಸ್ಥಾಪಿಸುವುದು ಮತ್ತು ವಿಚಾರಣೆಗೆ ಮಗು ಮನಃಶಾಸ್ತ್ರಜ್ಞರ ನೆರವು ಪಡೆಯುವುದು ಇದರಲ್ಲಿ ಸೇರಿದೆ.
ನಂಬಿಕೆ ಹೆಚ್ಚಾಗುತ್ತದೆ: ಅತ್ಯಾಚಾರ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳಲ್ಲಿ ವೇಗವಾಗಿ ಶಿಕ್ಷೆ ವಿಧಿಸುವುದರಿಂದ ಅಪರಾಧಿಗಳಲ್ಲಿ ಭಯ ಮೂಡುತ್ತದೆ ಮತ್ತು ಕಾನೂನು ವ್ಯವಸ್ಥೆಯ ಮೇಲೆ ಸಾರ್ವಜನಿಕರ ನಂಬಿಕೆ ಹೆಚ್ಚಾಗುತ್ತದೆ.

ಪ್ರಮುಖ ಸವಾಲುಗಳು ಏನು?
ಕೆಳಹಂತದ ನ್ಯಾಯಾಂಗದಲ್ಲಿ ಖಾಲಿ ಇರುವ ಹುದ್ದೆಗಳು ಈ ಕೋರ್ಟ್‌ಗಳ ದಕ್ಷತೆಯನ್ನು ಕುಗ್ಗಿಸಿವೆ. ಉದಾಹರಣೆಗೆ, ಮಹಾರಾಷ್ಟ್ರದಲ್ಲಿ ಮಂಜೂರಾದ 138 ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗಳಲ್ಲಿ, ನ್ಯಾಯಾಧೀಶರ ಕೊರತೆಯಿಂದಾಗಿ ಕೇವಲ 58 ನ್ಯಾಯಾಲಯಗಳು ಮಾತ್ರ ಸಕ್ರಿಯವಾಗಿವೆ.
ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿರುವ ಕೋರ್ಟ್‌ಗಳು ತಾಂತ್ರಿಕ ಕೊರತೆಯನ್ನು ಎದುರಿಸುತ್ತಿವೆ. ಆಧುನಿಕ ಡಿಜಿಟಲ್ ಪ್ರಕರಣ ನಿರ್ವಹಣಾ ವ್ಯವಸ್ಥೆ, ವೀಡಿಯೊ ಕಾನ್ಫರೆನ್ಸಿಂಗ್ ಮತ್ತು ಪೋಕ್ಸೋ ವಿಚಾರಣೆಗೆ ಅಗತ್ಯವಿರುವ ಮೌಲ್ಯಯುತ ವ್ಯವಸ್ಥೆಗಳ ಕೊರತೆಯಿದೆ.
2024 ರಲ್ಲಿ ಹಲವು ರಾಜ್ಯಗಳಲ್ಲಿ ಈ ನ್ಯಾಯಾಲಯಗಳಲ್ಲಿ ಶಿಕ್ಷೆಯಾಗುವ ಪ್ರಮಾಣ ಆತಂಕಕಾರಿ ಮಟ್ಟದಲ್ಲಿ ಕಡಿಮೆಯಿತ್ತು. ಉದಾಹರಣೆಗೆ, ಪಶ್ಚಿಮ ಬಂಗಾಳದಲ್ಲಿ 2%, ಜಮ್ಮು ಮತ್ತು ಕಾಶ್ಮೀರದಲ್ಲಿ 4.5% ಆಂಧ್ರಪ್ರದೇಶದಲ್ಲಿ 5.2%, ಮತ್ತು ದೆಹಲಿಯಲ್ಲಿ 8.6% ಮಾತ್ರ ಶಿಕ್ಷೆಯ ಪ್ರಮಾಣ ದಾಖಲಾಗಿದೆ.
ವಿಲೇವಾರಿ ದರ ಹೆಚ್ಚಿದ್ದರೂ, ಪ್ರತಿದಿನ ಹೊಸದಾಗಿ ದಾಖಲಾಗುವ ಪ್ರಕರಣಗಳ ಸಂಖ್ಯೆ ಹೆಚ್ಚಿರುವುದರಿಂದ ಬಾಕಿ ಪ್ರಕರಣಗಳ ಸಂಖ್ಯೆ ದೊಡ್ಡದಾಗಿಯೇ ಉಳಿದಿದೆ. ಇತ್ತೀಚಿನ ಮಾಹಿತಿಯಂತೆ ದೇಶಾದ್ಯಂತ FTSCಗಳಲ್ಲಿ 2.4 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಇವೆ.
ಕೇಂದ್ರ ಮತ್ತು ರಾಜ್ಯಗಳ ನಡುವಿನ ಜವಾಬ್ದಾರಿ ಹಂಚಿಕೆಯಿಂದಾಗಿ, ಕೆಲವು ರಾಜ್ಯಗಳು ಅಗತ್ಯ ಅನುದಾನ ನೀಡಲು ಹೆಣಗಾಡುತ್ತಿವೆ. ಇದು ರಾಜ್ಯದಿಂದ ರಾಜ್ಯಕ್ಕೆ ಕಾರ್ಯಕ್ಷಮತೆಯಲ್ಲಿ ವ್ಯತ್ಯಾಸವನ್ನುಂಟುಮಾಡಿದೆ.
ಪೋಲಿಸರು ಚಾರ್ಜ್‌ಶೀಟ್ ಸಲ್ಲಿಸುವಲ್ಲಿ ವಿಳಂಬ ಮಾಡುವುದು, ಸಮನ್ಸ್ ಜಾರಿಯಾಗದಿರುವುದು ಮತ್ತು ಸಾಕ್ಷಿಗಳನ್ನು ಸಮಯಕ್ಕೆ ಸರಿಯಾಗಿ ಹಾಜರುಪಡಿಸದಿರುವುದು ನ್ಯಾಯಾಲಯದ ಪ್ರಕ್ರಿಯೆಯನ್ನು ವಿಳಂಬಗೊಳಿಸುತ್ತದೆ. ಸಿಬ್ಬಂದಿ ನೇಮಕಾತಿ ಮತ್ತು ಮೂಲಸೌಕರ್ಯವು ರಾಜ್ಯ ಸರ್ಕಾರಗಳು ಹಾಗೂ ಹೈಕೋರ್ಟ್‌ಗಳ ಮೇಲೆ ಅವಲಂಬಿತವಾಗಿರುವುದರಿಂದ, ದೇಶಾದ್ಯಂತ ಇವುಗಳ ಕಾರ್ಯಾಚರಣೆಯಲ್ಲಿ ಏಕರೂಪತೆ ಇಲ್ಲ.

ದಕ್ಷತೆಯನ್ನು ಹೆಚ್ಚಿಸುವುಸು ಹೇಗೆ?
ಒಪ್ಪಂದ ಆಧಾರಿತ ನೇಮಕಾತಿಗಳ ಬದಲಿಗೆ ಕಾಯಂ ನ್ಯಾಯಾಧೀಶರ ವೃಂದವನ್ನು ನೇಮಿಸಬೇಕು. ಇದರಿಂದ ನ್ಯಾಯಾಧೀಶರಿಗೆ ನುರಿತ ಅನುಭವ ಸಿಗುತ್ತದೆ ಮತ್ತು ವಿಚಾರಣೆಗಳು ತಡೆರಹಿತವಾಗಿ ನಡೆಯುತ್ತವೆ. ಸಾಮಾನ್ಯ ನ್ಯಾಯಾಲಯಗಳ ಜಾಗವನ್ನು ಹಂಚಿಕೊಳ್ಳುವ ಬದಲು ಪ್ರತಿಯೊಂದು ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗಳಿಗೂ ಪ್ರತ್ಯೇಕ ಕೊಠಡಿಗಳನ್ನು ಒದಗಿಸಬೇಕು. ಇ-ಕೋರ್ಟ್ಸ್ ಮಿಷನ್ (ಹಂತ III) ಅಡಿಯಲ್ಲಿ ಡಿಜಿಟಲ್ ಫೈಲಿಂಗ್ ಮತ್ತು ವರ್ಚುವಲ್ ವಿಚಾರಣೆಗಳನ್ನು ವೇಗಗೊಳಿಸಬೇಕು.
ತಾತ್ಕಾಲಿಕ ಯೋಜನೆಗಳು ಅಥವಾ ನಿಧಿಗಳನ್ನು (ನಿರ್ಭಯ ನಿಧಿಯಂತಹ) ನೆಚ್ಚಿಕೊಳ್ಳುವ ಬದಲು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಖಾಯಂ ಆಯವ್ಯಯದಲ್ಲಿ ಕೋರ್ಟ್‌ಗಳ ವೆಚ್ಚವನ್ನು ಸೇರಿಸಿಕೊಳ್ಳಬೇಕು.
ಜಿಲ್ಲಾ ಮಟ್ಟದಲ್ಲಿ ಪೊಲೀಸ್, ಅಭಿಯೋಗ (Prosecution), ವಿಧಿವಿಜ್ಞಾನ ಪ್ರಯೋಗಾಲಯ (Forensic Labs) ಮತ್ತು ನ್ಯಾಯಾಂಗವನ್ನು ಒಳಗೊಂಡ ಸಮನ್ವಯ ಸಮಿತಿಗಳನ್ನು ರಚಿಸಬೇಕು. ಎಫ್‌ಐಆರ್‌ನಿಂದ ಹಿಡಿದು ವಿಚಾರಣೆ ಮುಗಿಯುವವರೆಗೆ ಪ್ರತಿಯೊಂದು ಹಂತಕ್ಕೂ ಸಮಯದ ಮಿತಿಯನ್ನು ನಿಗದಿಪಡಿಸಬೇಕು. ಪೋಕ್ಸೋ/ಅತ್ಯಾಚಾರ ಪ್ರಕರಣಗಳ FTSCಗಳ ಯಶಸ್ಸನ್ನು ಆಧರಿಸಿ, ಇತರ ಗಂಭೀರ ವಿಷಯಗಳಿಗೂ (ಸೈಬರ್ ಅಪರಾಧಗಳು, ಹಿರಿಯ ನಾಗರಿಕರ ಮೇಲಿನ ದೌರ್ಜನ್ಯಗಳು) ಮಾದರಿಯನ್ನು ವಿಸ್ತರಿಸಬಹುದು.
ಸೂಕ್ತ ಸಿವಿಲ್ ಮತ್ತು ಸಣ್ಣಪುಟ್ಟ ವಿವಾದಗಳಿಗೆ ಮಧ್ಯಸ್ಥಿಕೆ (Mediation), ಪಂಚಾಯ್ತಿ ಮತ್ತು ಲೋಕ್ ಅದಾಲತ್‌ಗಳನ್ನು ಪ್ರೋತ್ಸಾಹಿಸಬೇಕು. ಇದರಿಂದ ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗಳು ಕೇವಲ ಗಂಭೀರ ಕ್ರಿಮಿನಲ್ ಪ್ರಕರಣಗಳ ಮೇಲೆ ಗಮನ ಹರಿಸಲು ಸಾಧ್ಯವಾಗುತ್ತದೆ.
ಲಕ್ಷಾಂತರ ವಿದ್ಯಾರ್ಥಿಗಳ ಶ್ರಮ ಮತ್ತು ಭವಿಷ್ಯಕ್ಕೆ ಕೊಳ್ಳಿ ಇಡುವ ಪರೀಕ್ಷಾ ಅಕ್ರಮ ತಡೆಯಲು ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗಳ ಸ್ಥಾಪನೆ ಅತ್ಯಂತ ಅಗತ್ಯ ಹಾಗೂ ಸ್ವಾಗತಾರ್ಹ ಹೆಜ್ಜೆ. ನ್ಯಾಯ ವಿಳಂಬವಾದರೆ ಅದು ನ್ಯಾಯ ನಿರಾಕರಿಸಿದಂತೆಯೇ ಸರಿ. ಪರೀಕ್ಷಾ ಅಕ್ರಮವೆಸಗುವ ದಂಧೆಕೋರರಿಗೆ ಈ ನ್ಯಾಯಾಲಯಗಳು ಕೇವಲ ಶಿಕ್ಷೆ ವಿಧಿಸುವ ಕೇಂದ್ರಗಳಾಗಷ್ಟೇ ಅಲ್ಲದೆ, ಪ್ರಬಲ ತಡೆಯೊಡ್ಡುವ ಶಕ್ತಿಯಾಗಿ ಕೆಲಸ ಮಾಡಬೇಕಿದೆ. ಕೇವಲ ಹೊಸ ಕೋರ್ಟ್‌ಗಳನ್ನು ಘೋಷಿಸಿದರೆ ಸಾಲದು; ಅಗತ್ಯ ನ್ಯಾಯಾಧೀಶರ ನೇಮಕ, ಆಧುನಿಕ ತಂತ್ರಜ್ಞಾನದ ಬಳಕೆ ಹಾಗೂ ಸಮಯಬದ್ಧ ತನಿಖೆ ಜತೆಯಾದಾಗ ಮಾತ್ರ ಈ ‘ಫಾಸ್ಟ್ ಟ್ರ್ಯಾಕ್’ ವ್ಯವಸ್ಥೆ ನಿಜವಾದ ಅರ್ಥದಲ್ಲಿ ಯಶಸ್ವಿಯಾಗಲು ಸಾಧ್ಯ. ಸಾರ್ವಜನಿಕ ವ್ಯವಸ್ಥೆ ಮತ್ತು ನ್ಯಾಯಾಂಗದ ಮೇಲೆ ಯುವಜನತೆ ಇಟ್ಟಿರುವ ನಂಬಿಕೆಯನ್ನು ಮರುಸ್ಥಾಪಿಸಲು ಇದು ಅತ್ಯಂತ ಸೂಕ್ತ ಸಮಯ.
