– ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ
ಕೋಲ್ಕತ್ತಾ: ಪಶ್ಚಿಮ ಬಂಗಾಳ ಸರ್ಕಾರವು ಏಕರೂಪ ನಾಗರಿಕ ಸಂಹಿತೆ (UCC) ಕರಡು ಮಸೂದೆಯನ್ನು ಪರಿಶೀಲಿಸಿ ಅಂತಿಮ ರೂಪ ನೀಡಲು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ಅವರ ಅಧ್ಯಕ್ಷತೆಯಲ್ಲಿ 9 ಸದಸ್ಯರ ತಜ್ಞರ ಸಮಿತಿಯನ್ನ (SC Retired Judge Committee) ರಚನೆ ಮಾಡಿದೆ. ಈ ಕುರಿತು ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಸಮಿತಿಯು ಯುಸಿಸಿ ಕರಡು ಮಸೂದೆಯ (UCC Draft Bill) ಕಾನೂನು, ಸಾಮಾಜಿಕ ಹಾಗೂ ಆಡಳಿತಾತ್ಮಕ ಅಂಶಗಳನ್ನ ಸಮಗ್ರವಾಗಿ ಪರಿಶೀಲಿಸಿ ಅಗತ್ಯ ತಿದ್ದುಪಡಿಗಳನ್ನು ಶಿಫಾರಸು ಮಾಡಲಿದೆ. ಪರಿಶೀಲನೆ ಪೂರ್ಣಗೊಂಡ ಬಳಿಕ ಅಂತಿಮ ವರದಿಯನ್ನ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಿದೆ.

ಸರ್ಕಾರವು (Bengal Govt) ಮುಂಬರುವ ಆಗಸ್ಟ್ ವಿಧಾನಸಭಾ ಅಧಿವೇಶನದಲ್ಲೇ ಯುಸಿಸಿ ಮಸೂದೆಯನ್ನು ಮಂಡಿಸುವ ಉದ್ದೇಶ ಹೊಂದಿದೆ. ಆದರೆ, ರಾಜ್ಯದ ಆದಿವಾಸಿ ಸಮುದಾಯಗಳನ್ನು ಈ ಮಸೂದೆಯ ವ್ಯಾಪ್ತಿಯಿಂದ ಹೊರಗಿಡುವ ಪ್ರಸ್ತಾವವಿದೆ. ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆ; 1835-2024ರ ವರೆಗೆ ಒಂದು ನೋಟ..
ಯುಸಿಸಿ ಜಾರಿಗೆ ಸಂಬಂಧಿಸಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ನಡುವೆಯೇ ಪಶ್ಚಿಮ ಬಂಗಾಳ ಸರ್ಕಾರದ ಈ ಕ್ರಮ ಮಹತ್ವ ಪಡೆದಿದೆ. ಕರಡು ಮಸೂದೆಯನ್ನು ತಜ್ಞರ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಪರಿಷ್ಕರಿಸಿದ ಬಳಿಕವೇ ವಿಧಾನಸಭೆಯಲ್ಲಿ ಮಂಡಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

ಏನಿದು ಏಕರೂಪ ನಾಗರಿಕ ಸಂಹಿತೆ?
ಮದುವೆ, ವಿಚ್ಛೇದನ, ದತ್ತು, ಉತ್ತರಾಧಿಕಾರ ಮುಂತಾದ ವಿಚಾರಗಳಲ್ಲಿ ಧರ್ಮಾಧಾರಿತ ಕಾನೂನುಗಳನ್ನು ಕೈಬಿಟ್ಟು, ಎಲ್ಲಾ ಜಾತಿ, ಧರ್ಮಗಳಿಗೆ ಒಂದೇ ಕಾನೂನು ಅನ್ವಯವಾಗುವಂತೆ ಮಾಡುವುದು. ಅಂದರೆ ಯಾವುದೇ ಜಾತಿ, ಧರ್ಮ, ಪ್ರಾಂತ್ಯಭೇದ ಮಾಡದೇ ದೇಶದ ಎಲ್ಲರಿಗೂ ಒಂದೇ ಕಾನೂನು ಇರಬೇಕು ಎನ್ನುವುದೇ ಏಕರೂಪ ನಾಗರಿಕ ಸಂಹಿತೆ. ಕಾನೂನಿನ ಮುಂದೆ ಎಲ್ಲರೂ ಒಂದೇ ಎಂಬುದು ಇದರ ಪ್ರತಿಪಾದನೆ. ಇದನ್ನೂ ಓದಿ: ಮದುವೆ, ವಿಚ್ಛೇದನ, ಆಸ್ತಿ.. ಎಲ್ಲಾ ಧರ್ಮಿಯರಿಗೆ ಒಂದೇ ಕಾನೂನು: ಇಂದಿನಿಂದ ಉತ್ತರಾಖಂಡದಲ್ಲಿ UCC ಜಾರಿ
ಭಾರತದಲ್ಲಿ ಸಂಹಿತೆ ಇತಿಹಾಸವೇನು?
ಬ್ರಿಟಿಷ್ ಸರ್ಕಾರವು 1835 ರಲ್ಲಿ ಸಿದ್ಧಪಡಿಸಿದ ವರದಿಯಲ್ಲಿ, ಅಪರಾಧ, ಸಾಕ್ಷ್ಯ ಮತ್ತು ಒಪ್ಪಂದಗಳಿಗೆ ಸಂಬಂಧಿಸಿದಂತೆ ದೇಶದಾದ್ಯಂತ ಏಕರೂಪದ ಕಾನೂನು ಜಾರಿಯ ಅಗತ್ಯವಿದೆ ಎಂಬುದನ್ನು ಒತ್ತಿಹೇಳಿತು. 1840 ರಲ್ಲಿ ಇದನ್ನು ಜಾರಿಗೊಳಿಸಿತು. ಆದರೆ ಧರ್ಮದ ಆಧಾರದ ಮೇಲೆ ಹಿಂದೂಗಳು ಮತ್ತು ಮುಸ್ಲಿಮರ ವೈಯಕ್ತಿಕ ಕಾನೂನನ್ನು ಬ್ರಿಟಿಷರು ಪ್ರತ್ಯೇಕಿಸಿದರು. ಅಲ್ಲಿಂದ ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆಯ ಬೇಡಿಕೆಯ ಕೂಗು ಶುರುವಾಯಿತು. ಇದನ್ನೂ ಓದಿ: ಹಿಂದೂಗಳಿಗೊಂದು ಮುಸ್ಲಿಮರಿಗೊಂದು ಕಾನೂನು ಮಾಡಲು ಸಾಧ್ಯವಿಲ್ಲ: ಕೇಂದ್ರ ಸಚಿವ ಗಿರಿರಾಜ್ ಸಿಂಗ್
