ಮಾಸ್ಕೋ: ನಾಲ್ಕು ವರ್ಷಗಳಿಂದ ಜಗತ್ತಿನ ಗಮನ ಸೆಳೆದಿರುವ ರಷ್ಯಾ-ಉಕ್ರೇನ್ ಯುದ್ಧ (Russia-Ukraine War) ಕೊನೆಗೂ ಅಂತ್ಯವಾಗಲಿದ್ಯಾ ಎಂಬ ಪ್ರಶ್ನೆ ಮೂಡಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್(Vladimir Putin) ನೀಡಿದ ಹೊಸ ಹೇಳಿಕೆ ಇದೀಗ ಶಾಂತಿ ಮಾತುಕತೆಗಳ ಬಗ್ಗೆ ಹೊಸ ನಿರೀಕ್ಷೆ ಹುಟ್ಟಿಸಿದೆ.
ಮಾಸ್ಕೋದಲ್ಲಿ ನಡೆದ ವಿಜಯ ದಿನಾಚರಣೆಯ ವೇಳೆ ಮಾತನಾಡಿದ ಪುಟಿನ್, ಯುದ್ಧ ಮುಗಿಯುವ ಹಂತಕ್ಕೆ ಬಂದಿದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳುವ ಮೂಲಕ ಅವರು ಪರೋಕ್ಷವಾಗಿ ಯುದ್ಧ ನಿಲ್ಲಿಸುವ ಬಗ್ಗೆ ಸೂಚನೆ ನೀಡಿದ್ದಾರೆ.
ಇದೇ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಸೂಚಿಸಿದ್ದ ಮೂರು ದಿನಗಳ ಕದನ ವಿರಾಮವನ್ನು ರಷ್ಯಾ ಮತ್ತು ಉಕ್ರೇನ್ ಪಾಲಿಸಲು ಆರಂಭಿಸಿವೆ. ಜೊತೆಗೆ, ಎರಡೂ ದೇಶಗಳು ತಲಾ 1,000 ಕೈದಿಗಳನ್ನು ಬಿಡುಗಡೆ ಮಾಡಲು ಒಪ್ಪಿಕೊಂಡಿವೆ. ಯುದ್ಧ ಆರಂಭವಾದ ನಂತರ ನಡೆದ ಅತಿದೊಡ್ಡ ಕೈದಿಗಳ ವಿನಿಮಯಗಳಲ್ಲಿ ಇದೂ ಒಂದಾಗಿದೆ.
ಸಂಧಾನದ ಬಗ್ಗೆ ಮಾತನಾಡಿದ ಪುಟಿನ್, ಯುರೋಪಿಯನ್ ನಾಯಕರೊಂದಿಗೆ ಮತ್ತೆ ಸಂವಾದಕ್ಕೆ ಸಿದ್ಧ ಎಂದು ಹೇಳಿದ್ದಾರೆ. ಆದರೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ(Volodymyr Zelenskyy) ಜೊತೆ ನೇರ ಮಾತುಕತೆ ನಡೆಸಲು ಮೊದಲು ಶಾಂತಿ ಒಪ್ಪಂದದ ಬಗ್ಗೆ ಸಾಮಾನ್ಯ ಅರ್ಥೈಸಿಕೆ ಬೇಕು ಎಂದು ಷರತ್ತು ಹಾಕಿದ್ದಾರೆ. ಇದನ್ನೂ ಓದಿ: ರಷ್ಯಾ – ಉಕ್ರೇನ್ ಮಧ್ಯೆ 3 ದಿನಗಳ ಕದನ ವಿರಾಮ ಘೋಷಿಸಿದ ಟ್ರಂಪ್
ಫೆಬ್ರವರಿ 2022ರಲ್ಲಿ ಆರಂಭವಾದ ರಷ್ಯಾ-ಉಕ್ರೇನ್ ಯುದ್ಧದಲ್ಲಿ ಸಾವಿರಾರು ಜನರು ಸಾವನ್ನಪ್ಪಿದ್ದಾರೆ. ಲಕ್ಷಾಂತರ ಜನರು ತಮ್ಮ ಮನೆಗಳನ್ನು ತೊರೆಯಬೇಕಾದ ಪರಿಸ್ಥಿತಿ ಎದುರಿಸಿದ್ದಾರೆ. ಅನೇಕ ಉಕ್ರೇನ್ ನಗರಗಳು ಸಂಪೂರ್ಣ ಹಾನಿಗೊಳಗಾಗಿವೆ. ಈಗ ಪುಟಿನ್ ಹೇಳಿಕೆಯ ನಂತರ ಯುದ್ಧ ಅಂತ್ಯವಾಗುವ ನಿರೀಕ್ಷೆ ಮತ್ತೊಮ್ಮೆ ಜಗತ್ತಿನ ಗಮನ ಸೆಳೆದಿದೆ.

