ಚೆನ್ನೈ: ದಕ್ಷಿಣ ಭಾರತೀಯ ಚಿತ್ರರಂಗದ ಹಿರಿಯ ಮತ್ತು ಬಹುಭಾಷಾ ತಾರೆ, ಪದ್ಮಶ್ರೀ ಪುರಸ್ಕೃತೆ ಸಾಹುಕಾರ್ ಜಾನಕಿ(Sowcar Janaki) ಅವರು ಇಂದು ನಿಧನರಾಗಿದ್ದಾರೆ.
ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಚೆನ್ನೈನ ಆಸ್ಪತ್ರೆಯಲ್ಲಿ ಮಧ್ಯಾಹ್ನ 1:59ಕ್ಕೆ ವಿಧಿವಶರಾದರು.
ಏಳು ದಶಕಗಳ ಕಾಲ ಭಾರತೀಯ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಸಾಹುಕಾರ್ ಜಾನಕಿ(94) ಅವರು ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಬರೋಬ್ಬರಿ 400ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು. ತಮ್ಮ ನಟನಾ ಸಾಮರ್ಥ್ಯದಿಂದ ಚಿತ್ರರಂಗದಲ್ಲಿ ಅಪಾರ ಗೌರವ ಮತ್ತು ಅಭಿಮಾನಿಗಳನ್ನು ಸಂಪಾದಿಸಿದ್ದರು.
ಭಾರತೀಯ ಕಲೆ ಮತ್ತು ಚಿತ್ರರಂಗಕ್ಕೆ ಅವರು ನೀಡಿದ ಜೀವಮಾನದ ಕೊಡುಗೆಯನ್ನು ಪರಿಗಣಿಸಿ, ಭಾರತ ಸರ್ಕಾರವು ಅವರಿಗೆ 2022ರಲ್ಲಿ ದೇಶದ ಪ್ರತಿಷ್ಠಿತ ‘ಪದ್ಮಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.

ದಿವಂಗತ ಶಂಕರಮಂಚಿ ಶ್ರೀನಿವಾಸ ರಾವ್ ಅವರನ್ನು ಮದುವೆಯಾಗಿದ್ದ ಸಾಹುಕಾರ್ ಜಾನಕಿ ಅವರು ಮಕ್ಕಳಾದ ಯಜ್ಞಪ್ರಭಾ ಕೋಟಿ, ವೆಂಕಟರಮಣ ಶಂಕರಮಂಚಿ, ಸಾಚಿ ರಾವ್ ಅವರನ್ನು ಅಗಲಿದ್ದಾರೆ.
ಸಾಹುಕಾರ್ ಜಾನಕಿ ನಿಧನಕ್ಕೆ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಚಿತ್ರರಂಗದ ಗಣ್ಯರು, ಅಭಿಮಾನಿಗಳು ಹಾಗೂ ವಿವಿಧ ಕ್ಷೇತ್ರಗಳ ಪ್ರಮುಖರು ತೀವ್ರ ಸಂತಾಪ ಸೂಚಿಸಿದ್ದಾರೆ.
ಸಾಹುಕಾರ್ ಜಾನಕಿ ಅವರು ಕನ್ನಡದ ಹಲವು ಸಿನಿಮಾಗಳಲ್ಲೂ ನಟಿಸಿದ್ದಾರೆ. ಡಾ.ರಾಜ್‌ಕುಮಾರ್ ನಟನೆಯ ಶಬ್ಧವೇದಿ ಮತ್ತು ಪುನೀತ್‌ರಾಜ್‌ಕುಮಾರ್ ನಟನೆಯ ಅಭಿ ಸಿನಿಮಾದಲ್ಲಿ ಪೋಷಕ ನಟಿಯಾಗಿ ನಟಿಸಿ ಜನಮನಗೆದ್ದಿದ್ದರು.

ಸಾಹುಕಾರ್ ಜಾನಕಿ ಅವರು ಕನ್ನಡದಲ್ಲಿ ಮೊದಲು ನಟಿಸಿದ ಸಿನಿಮಾ ದೇವಕನ್ನಿಕಾ. ತೆಲುಗಿನ ಸಾಹುಕಾರ್ ಚಿತ್ರದ ಯಶಸ್ಸಿನ ನಂತರ ಇವರ ಹೆಸರಿನೊಂದಿಗೆ ‘ಸಾಹುಕಾರ್’ ಎಂಬ ಬಿರುದು ಶಾಶ್ವತವಾಗಿ ಸೇರಿಕೊಂಡಿತು. ಇವರು ಕನ್ನಡ, ತಮಿಳು, ತೆಲುಗು ಸೇರಿದಂತೆ 400ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ.
ಪ್ರಮುಖ ಕನ್ನಡ ಸಿನಿಮಾಗಳು ದೇವಕನ್ನಿಕಾ (ಮೊದಲ ಕನ್ನಡ ಚಿತ್ರ), ಗೌರಿ, ಭಾಗ್ಯಚಕ್ರ, ಕನ್ಯಾರತ್ನ, ರತ್ನಗಿರಿ ರಹಸ್ಯ, ಸ್ಕೂಲ್ ಮಾಸ್ಟರ್, ತಾಯಿಗೆ ತಕ್ಕ ಮಗ, ಶಬ್ದವೇಧಿ ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಕೊನೆಯದ್ದಾಗಿ ತಮಿಳು ನಟ ಕಾರ್ತಿ, ಜ್ಯೋತಿಕಾ ನಟನೆಯ ʻತಂಬಿʼ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.

