ಡೆಹ್ರಾಡೂನ್: ಉತ್ತರಾಖಂಡ್ ಸಚಿವೆ ರೇಖಾ ಆರ್ಯ ಅವರ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ ಆರೋಪದ ಮೇಲೆ ಅವರ ಪತಿ ಲಾಲ್ ಸಾಹು ಅಲಿಯಾಸ್ ಪಪ್ಪು ಗಿರಿಧಾರಿ ಲಾಲ್ನನ್ನು ಪೊಲೀಸರು ಉತ್ತರ ಪ್ರದೇಶದ ಝಾನ್ಸಿಯಲ್ಲಿ ಬಂಧಿಸಿದ್ದಾರೆ. ಗಿರಿಧಾರಿ ಲಾಲ್ ವಿರುದ್ಧ ನಕಲಿ ದಾಖಲೆ ಸೃಷ್ಟಿ (Forgery) ಮತ್ತು ಎಸ್ಸಿ/ಎಸ್ಟಿ (SC/ST) ಕಾಯ್ದೆಯಡಿ ಗಂಭೀರ ಆರೋಪ ಹೊರಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಡೆಹ್ರಾಡೂನ್ ಎಸ್ಎಸ್ಪಿ ಪ್ರಮೇಂದ್ರ ದೋಭಾಲ್ ಅವರು, ಗಿರಿಧಾರಿ ಲಾಲ್ ಅವರನ್ನು ನಕಲಿ ದಾಖಲೆ ಸೃಷ್ಟಿಸಿದ ಆರೋಪ ಹಾಗೂ ಎಸ್ಸಿ/ಎಸ್ಟಿ ಕಾಯ್ದೆಯಡಿ ಬರುವ ಗಂಭೀರ ಆರೋಪದ ಮೇಲೆ ಬಂಧಿಸಲಾಗಿದೆ. ಉಧಮ್ ಸಿಂಗ್ ನಗರ ಜಿಲ್ಲೆಯ ಕಿಚ್ಚಾ ಬಳಿ ಮತ್ತೊಬ್ಬ ಆರೋಪಿ ಸತ್ಯೇಂದ್ರ ಠಾಕೂರ್ನನ್ನೂ ಬಂಧಿಸಲಾಗಿದೆ. ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವೇಶ್ಯಾವಾಟಿಕೆಗೆ ಪೋಷಕರಿಂದಲೇ ಮಕ್ಕಳ ಮಾರಾಟ – ರಹಸ್ಯ ಕಾರ್ಯಾಚರಣೆ ನಡೆಸಿ 6 ಬಾಲಕಿಯರನ್ನು ರಕ್ಷಿಸಿದ ಪೊಲೀಸರು
ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯಲ್ಲಿರುವ ಖಾಸಗಿ ವಿಶ್ವವಿದ್ಯಾಲಯವೊಂದರ ಆವರಣದ ಹೊರಗೆ, ಗಿರಿಧಾರಿ ಲಾಲ್ ಸಾಹು ತಲೆಮರೆಸಿಕೊಂಡಿದ್ದ. ಶುಕ್ರವಾರ ಪೊಲೀಸರು ಆತನನ್ನು ಬಂಧಿಸಿದ್ದರು. ಆತನನ್ನು ಉತ್ತರಾಖಂಡ್ಗೆ ಕರೆತರಲಾಗಿದೆ. ಸಾಹು ವಿರುದ್ಧ 44ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಕೆಲವು ಪ್ರಕರಣಗಳಲ್ಲಿ ಈಗಾಗಲೇ ಶಿಕ್ಷೆಗೊಳಗಾಗಿದ್ದಾನೆ. ಇನ್ನು ಕೆಲವು ಪ್ರಕರಣಗಳು ವಿಚಾರಣಾ ಹಂತದಲ್ಲಿವೆ. ಈಗ ದಾಖಲಾಗಿರುವ ಪ್ರಕರಣದಲ್ಲಿ ಬೇರೆಯಾರದ್ದಾದರೂ ವ್ಯಕ್ತಿಗಳ ಹೆಸರುಗಳು ಬೆಳಕಿಗೆ ಬಂದರೆ, ಅವರ ವಿರುದ್ಧವೂ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಪತಿ ವಿರುದ್ಧ ರೇಖಾ ಆರ್ಯ ಗಂಭೀರ ಆರೋಪ
ಪೊಲೀಸರಿಗೆ ರೇಖಾ ಅವರು ನೀಡಿದ ದೂರಿನಲ್ಲಿ, ಕಳೆದ ಕೆಲವು ತಿಂಗಳುಗಳಿಂದ ತಮ್ಮ ಪತಿಯ ವರ್ತನೆಯಲ್ಲಿ ಬದಲಾವಣೆಯಾಗಿದೆ. ತಮ್ಮ ಪತಿಗೆ ಇತರ ಮಹಿಳೆಯರೊಂದಿಗೆ ಅಕ್ರಮ ಸಂಬಂಧಗಳಿರುವ ವಿಷಯ ತಿಳಿದುಬಂದಿದೆ. ಈ ಸಂಬಂಧಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದಾಗ, ಪತಿ ಆರಂಭದಲ್ಲಿ ತಮ್ಮ ತಪ್ಪುಗಳನ್ನು ಒಪ್ಪಿಕೊಂಡು, ಮೌಖಿಕವಾಗಿ ಹಾಗೂ ಲಿಖಿತವಾಗಿ ಕ್ಷಮೆಯಾಚಿಸಿದ್ದ. ಆದರೆ, ಕ್ಷಮೆ ಕೋರಿದ ನಂತರವೂ ಅದೇ ಚಟುವಟಿಕೆಗಳನ್ನು ಮುಂದುವರಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಈ ಸಂಬಂಧಗಳನ್ನು ವಿರೋಧಿಸಿದಾಗ, ಗಿರಿಧಾರಿ ಲಾಲ್ ಸಾಹು ತಮ್ಮ ಮೇಲೆ ದೈಹಿಕ ಹಲ್ಲೆ ನಡೆಸಲು, ನಿಂದಿಸಲು ಮತ್ತು ಕೊಲೆ ಬೆದರಿಕೆ ಹಾಕಲು ಪ್ರಾರಂಭಿಸಿದ. ಅಲ್ಲದೆ, ತಮ್ಮ ಅಧಿಕೃತ ನಿವಾಸದಲ್ಲಿ ಸಿಬ್ಬಂದಿಯ ಸಮ್ಮುಖದಲ್ಲೇ, ಜಾತಿ ಆಧಾರಿತ ಅವಹೇಳನಕಾರಿ ಮಾತುಗಳನ್ನು ಬಳಸಿ ನಿಂದಿಸುತ್ತಿದ್ದ.
ಸಂಬಂಧಪಟ್ಟ ಕಂಪನಿಗಳಲ್ಲಿ ನಿರ್ದೇಶಕ ಹುದ್ದೆಯಿಂದ ನನ್ನನ್ನು ತೆಗೆದುಹಾಕಲಾಗಿದೆ ಎಂದು ತೋರಿಸಲು, ಗಿರಿಧಾರಿ ಲಾಲ್ ಸಾಹು ನಕಲಿ ಸಹಿಗಳನ್ನು ಮತ್ತು ನಕಲಿ ದಾಖಲೆಗಳನ್ನು ಬಳಸಿದ್ದಾನೆ. ಆ ಜಾಗಕ್ಕೆ ಆರೋಪಿ ಸತೇಂದ್ರ ಠಾಕೂರ್ನನ್ನು ನಿರ್ದೇಶಕರನ್ನಾಗಿ ನೇಮಿಸಲು ಮುಂದಾಗಿದ್ದ ಎಂಬ ವಿಷಯ ತಿಳಿದುಬಂದಿದೆ. ಆದರೆ ಅಂತಹ ಯಾವುದೇ ದಾಖಲೆಗಳಿಗೆ ನಾನು ಸಹಿ ಹಾಕಿಲ್ಲ. ಯಾವುದೇ ರಾಜೀನಾಮೆಯನ್ನೂ ಸಲ್ಲಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇನ್ನೂ ನಕಲಿ ದಾಖಲೆ ಸೃಷ್ಟಿಸಿರುವುದನ್ನು ಪೊಲೀಸರು ದೃಢಪಡಿಸಿದ್ದಾರೆ. ಇದನ್ನೂ ಓದಿ: ಫ್ಯಾಮಿಲಿಯ ಮದುವೆಗಾಗಿ ಸಿಂಗಾಪುರದಿಂದ ಬಂದಿದ್ದ ಟೆಕ್ ಮಹೀಂದ್ರಾ ಏಷ್ಯಾ ಹೆಡ್ ಗುಂಡಿನ ದಾಳಿಗೆ ಬಲಿ
