ವಾಷಿಂಗ್ಟನ್: ಅಮೆರಿಕದ ಮಹತ್ವದ ಮಧ್ಯಂತರ ಚುನಾವಣೆಯಲ್ಲಿ ಭಾರತೀಯ ಮೂಲದ ರಿಪಬ್ಲಿಕನ್ ನಾಯಕ ವಿವೇಕ್ ರಾಮಸ್ವಾಮಿ (Vivek Ramaswamy) ಅವರಿಗೆ ಭಾರೀ ಮುಖಭಂಗವಾಗಿದೆ. ತೀವ್ರ ಕುತೂಹಲ ಕೆರಳಿಸಿದ್ದ ಓಹಿಯೋ ರಾಜ್ಯದ ಗವರ್ನರ್ ಚುನಾವಣಾ(Ohio Governor Election) ಕಣದಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಡಾ. ಆಮಿ ಆಕ್ಟನ್(Amy Acton) ವಿರುದ್ಧ ರಾಮಸ್ವಾಮಿ ಪರಾಭವಗೊಂಡಿದ್ದಾರೆ.
ಚುನಾವಣಾ ಫಲಿತಾಂಶದ ಪ್ರಕಾರ, ಡೆಮಾಕ್ರಟಿಕ್ ಪಕ್ಷದ ಆಮಿ ಆಕ್ಟನ್ ಅವರು ಶೇ. 50.92 ರಷ್ಟು ಮತಗಳನ್ನು ಪಡೆದು ಜಯಭೇರಿ ಬಾರಿಸಿದರೆ, ಪ್ರತಿಸ್ಪರ್ಧಿ ವಿವೇಕ್ ರಾಮಸ್ವಾಮಿ ಶೇ. 45.73 ರಷ್ಟು ಮತಗಳನ್ನಷ್ಟೇ ಗಳಿಸಲು ಶಕ್ತರಾದರು. ಈ ಐತಿಹಾಸಿಕ ವಿಜಯದೊಂದಿಗೆ ಆಮಿ ಆಕ್ಟನ್ ಓಹಿಯೋ ರಾಜ್ಯದ ಮೊದಲ ಮಹಿಳಾ ಗವರ್ನರ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಜೊತೆಗೆ 2006ರ ನಂತರ ಈ ಕ್ಷೇತ್ರದಲ್ಲಿ ಡೆಮಾಕ್ರಟ್ ಪಕ್ಷಕ್ಕೆ ಸಿಕ್ಕ ಮೊದಲ ಗವರ್ನರ್ ಗೆಲುವು ಇದಾಗಿದ್ದು, ರಿಪಬ್ಲಿಕನ್ ಭದ್ರಕೋಟೆಯನ್ನು ಡೆಮಾಕ್ರಟ್ಗಳು ಛಿದ್ರಮಾಡಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅವರು ವಿವೇಕ್ ರಾಮಸ್ವಾಮಿ ಪರ ಬಹಿರಂಗವಾಗಿ ಬ್ಯಾಟ್ ಬೀಸಿ ಭರ್ಜರಿ ಪ್ರಚಾರ ನಡೆಸಿದ್ದರು. ಅಷ್ಟೇ ಅಲ್ಲದೆ, ಮಾಜಿ ಫಾರ್ಮಾಸ್ಯುಟಿಕಲ್ ಉದ್ಯಮಿಯಾದ ರಾಮಸ್ವಾಮಿ ತಮ್ಮ ವೈಯಕ್ತಿಕ ಸಂಪತ್ತಿನಿಂದಲೇ ಬರೋಬ್ಬರಿ 36 ಮಿಲಿಯನ್ ಡಾಲರ್ಗೂ ಅಧಿಕ ಹಣವನ್ನು ಪ್ರಚಾರಕ್ಕೆ ಸುರಿದಿದ್ದರು. ಆದರೆ ಟ್ರಂಪ್ ಬೆಂಬಲವಾಗಲಿ ಅಥವಾ ರಾಮಸ್ವಾಮಿಯವರ ಆರ್ಥಿಕ ಬಲವಾಗಲಿ ಮತದಾರರ ಮೇಲೆ ನಿರೀಕ್ಷಿತ ಪ್ರಭಾವ ಬೀರಲಿಲ್ಲ. ಆಮಿ ಆಕ್ಟನ್ ಅವರ ಜನಪ್ರಿಯತೆ ಹಾಗೂ ವ್ಯವಸ್ಥಿತ ಪ್ರಚಾರದ ಮುಂದೆ ಇವೆಲ್ಲವೂ ಮಂಕಾದವು.
LIVE: Vivek Ramaswamy Remarks after losing Ohio governor’s race https://t.co/xoR6a7Xcs4
— ANI (@ANI) November 4, 2026
ಚುನಾವಣೆಯ ಅಂತಿಮ ಹಂತದಲ್ಲಿ ರಾಮಸ್ವಾಮಿ ಅವರ ಪ್ರಚಾರ ತಂಡ ಬಿಡುಗಡೆ ಮಾಡಿದ ಟಿವಿ ಜಾಹೀರಾತು ಅವರ ಸೋಲಿಗೆ ಪ್ರಮುಖ ಕಾರಣವಾಯಿತು ಎಂದು ವಿಶ್ಲೇಷಿಸಲಾಗುತ್ತಿದೆ. ಸುಮಾರು 4 ಮಿಲಿಯನ್ ಡಾಲರ್ ವೆಚ್ಚದಲ್ಲಿ ತಯಾರಿಸಲಾದ ಈ ಜಾಹೀರಾತಿನಲ್ಲಿ ಆಮಿ ಆಕ್ಟನ್ ಅವರ ತಾಯಿಯನ್ನು ಬಳಸಿಕೊಂಡು, ಆಮಿ ಸುಳ್ಳುಗಾರ್ತಿ ಎಂದು ಬಿಂಬಿಸಲು ಯತ್ನಿಸಲಾಗಿತ್ತು.ಬಾಲ್ಯದಲ್ಲಿ ಆಮಿ ಎದುರಿಸಿದ್ದ ಕೌಟುಂಬಿಕ ಲೈಂಗಿಕ ದೌರ್ಜನ್ಯದ ಕಹಿ ಘಟನೆಗಳನ್ನು ರಾಜಕೀಯ ಲಾಭಕ್ಕಾಗಿ ಎಳೆದು ತಂದಿದ್ದಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾಯಿತು. ಕೇವಲ ಡೆಮಾಕ್ರಟ್ಗಳಷ್ಟೇ ಅಲ್ಲದೆ, ರಿಪಬ್ಲಿಕನ್ ಪಕ್ಷದ ಪ್ರಮುಖ ನಾಯಕರು ಕೂಡ ಈ ತಂತ್ರವನ್ನು ತೀವ್ರವಾಗಿ ಖಂಡಿಸಿದರು. ಈ ವಿವಾದವು ರಾಮಸ್ವಾಮಿ ವಿರುದ್ಧ ಮತದಾರರಲ್ಲಿ ನಕಾರಾತ್ಮಕ ಅಲೆ ಎಬ್ಬಿಸಿತು.
2024ರ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್ ಪ್ರೈಮರಿಯಲ್ಲಿ ಸ್ಪರ್ಧಿಸಿ ಜನಪ್ರಿಯತೆ ಗಳಿಸಿದ್ದ ರಾಮಸ್ವಾಮಿ, ನಂತರ ಟ್ರಂಪ್ ಆಡಳಿತದ ಮಹತ್ವಾಕಾಂಕ್ಷೆಯ ಸರ್ಕಾರಿ ದಕ್ಷತೆ ಇಲಾಖೆ (DOGE) ಜವಾಬ್ದಾರಿಯನ್ನೂ ಹೊತ್ತಿದ್ದರು. ಅಧ್ಯಕ್ಷೀಯ ಆಕಾಂಕ್ಷೆಯುಳ್ಳ ಪ್ರಮುಖ ನಾಯಕರಾಗಿ ಬೆಳೆಯುತ್ತಿದ್ದ ರಾಮಸ್ವಾಮಿ ಅವರಿಗೆ ಈ ನೇರ ಚುನಾವಣಾ ಸೋಲು ರಾಜಕೀಯವಾಗಿ ಭಾರೀ ಹಿನ್ನಡೆ ತಂದಿಟ್ಟಿದೆ.
ಕಳೆದ ಒಂದು ದಶಕದಿಂದ ಸಂಪೂರ್ಣವಾಗಿ ರಿಪಬ್ಲಿಕನ್ ಕೋಟೆಯಾಗಿದ್ದ ಓಹಿಯೋ ರಾಜ್ಯವು, ಈಗ ಮತ್ತೆ Swing State ಮುಖ ಮಾಡುತ್ತಿರುವ ಮುನ್ಸೂಚನೆಯನ್ನು ಈ ಫಲಿತಾಂಶ ನೀಡಿದೆ.
ಟ್ರಂಪ್ ಅವರ ತೀವ್ರ ಬೆಂಬಲವಿದ್ದರೂ, ಹೆಚ್ಚುತ್ತಿರುವ ಜೀವನ ವೆಚ್ಚ ಹಾಗೂ ಅಗತ್ಯ ವಸ್ತುಗಳ ಬೆಲೆಯನ್ನು ನಿಯಂತ್ರಿಸಲು ರಿಪಬ್ಲಿಕನ್ನರು ವಿಫಲರಾಗಿದ್ದಾರೆ ಎಂಬ ಸಾಮಾನ್ಯ ದುಡಿಯುವ ವರ್ಗದ ಮತದಾರರ ಅಸಮಾಧಾನವೂ ರಾಮಸ್ವಾಮಿ ಅವರ ಹಿನ್ನಡೆಗೆ ಮುಖ್ಯ ಕಾರಣವಾಗಿದೆ ಎಂಬ ವಿಶ್ಲೇಷಣೆ ಕೇಳಿ ಬಂದಿದೆ.
