ವಾಷಿಂಗ್ಟನ್: “ನಾನು ಚುನಾವಣಾ ಕಣದಲ್ಲಿ ಇರಲಿಲ್ಲ; ಒಂದು ವೇಳೆ ನಾನೇ ಸ್ಪರ್ಧೆಯಲ್ಲಿದ್ದಿದ್ದರೆ ನಮ್ಮ ಪಕ್ಷ ಭರ್ಜರಿ ಬಹುಮತದೊಂದಿಗೆ (Landslide) ಗೆಲ್ಲುತ್ತಿತ್ತು” ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಹೇಳಿದ್ದಾರೆ.
ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ(US Midterm Election) ರಿಪಬ್ಲಿಕನ್ ಪಕ್ಷಕ್ಕೆ ಸೋಲಾದ ಬೆನ್ನಲ್ಲೇ ಟ್ರೂಥ್ ಸಾಮಾಜಿಕ ಜಾಲತಾಣದಲ್ಲಿ(Social Media) ಡೊನಾಲ್ಡ್ ಟ್ರಂಪ್ ಪೋಸ್ಟ್ ಮಾಡಿದ್ದಾರೆ.
ಜೀವನ ವೆಚ್ಚ ಏರಿಕೆ, ಆಮದು ಸುಂಕಗಳು ಹಾಗೂ ಇಂಧನ ಬೆಲೆ ಏರಿಕೆಗೆ ಕಾರಣವಾದ ಇರಾನ್ ವಿರುದ್ಧದ ಯುದ್ಧದ ಹಿನ್ನೆಲೆಯಲ್ಲಿ ದೇಶಾದ್ಯಂತ ಟ್ರಂಪ್ ಜನಪ್ರಿಯತೆ ತಳಕಚ್ಚಿದ್ದು, ಮತದಾರರು ರಿಪಬ್ಲಿಕನ್ ಪಕ್ಷದ(Republican Party) ವಿರುದ್ಧ ತೀರ್ಪು ನೀಡಿದ್ದಾರೆ.
ತೀವ್ರ ಕನ್ಸರ್ವೇಟಿವ್ ಭದ್ರಕೋಟೆಯಾದ ಸೌತ್ ಕೆರೊಲಿನಾದಲ್ಲಿ 1998ರ ನಂತರ ಇದೇ ಮೊದಲ ಬಾರಿಗೆ ಡೆಮಾಕ್ರಟ್ಗಳು ಸೆನೆಟ್ ಸ್ಥಾನ ಗೆದ್ದಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಮಕ್ಕಳ ತಜ್ಞೆ ಆ್ಯನಿ ಆಂಡ್ರ್ಯೂಸ್ ಅವರು, ದಿವಂಗತ ಲಿಂಡ್ಸೆ ಗ್ರಹಾಂ ಅವರ ಸಹೋದರಿ ಹಾಗೂ ಟ್ರಂಪ್ ಬೆಂಬಲಿತ ಅಭ್ಯರ್ಥಿ ಡಾರ್ಲಿನ್ ಗ್ರಹಾಂ ಅವರನ್ನು ಸೋಲಿಸಿ ಸಂಚಲನ ಮೂಡಿಸಿದ್ದಾರೆ.
ನಾರ್ತ್ ಕೆರೊಲಿನಾದಲ್ಲಿ ಮಾಜಿ ಗವರ್ನರ್ ರಾಯ್ ಕೂಪರ್ ಅವರು ಟ್ರಂಪ್ ಆಯ್ದುಕೊಂಡಿದ್ದ ಅಭ್ಯರ್ಥಿಯನ್ನು ಮಣಿಸಿ ಸೆನೆಟ್ ಸೀಟನ್ನು ಡೆಮಾಕ್ರಟ್ಗಳ ತೆಕ್ಕೆಗೆ ಹಾಕಿದ್ದಾರೆ.
ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರ ತವರು ರಾಜ್ಯವಾದ ಓಹಿಯೋದಲ್ಲಿ, ಟ್ರಂಪ್ ಪರಮಾಪ್ತ ಹಾಗೂ ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ ಅವರು ಡೆಮಾಕ್ರಟ್ ಅಭ್ಯರ್ಥಿ ಆಮಿ ಆಕ್ಟನ್ ವಿರುದ್ಧ ಸೋಲನುಭವಿಸಿದ್ದಾರೆ. ಇದನ್ನೂ ಓದಿ: US Midterm Elections : ಗವರ್ನರ್ ಚುನಾವಣೆಯಲ್ಲಿ ವಿವೇಕ್ ರಾಮಸ್ವಾಮಿಗೆ ಸೋಲು, ಇತಿಹಾಸ ನಿರ್ಮಿಸಿದ ಆಮಿ ಆಕ್ಟನ್
ಜಾರ್ಜಿಯಾದಲ್ಲಿ ಡೆಮಾಕ್ರಟಿಕ್ ಪಕ್ಷದ ಮುಂಚೂಣಿ ನಾಯಕ ಜಾನ್ ಒಸಾಫ್ ಮರುಆಯ್ಕೆಯಾಗಿದ್ದರೆ, ನ್ಯೂ ಹ್ಯಾಂಪ್ಶೈರ್ನಲ್ಲಿ ಕ್ರಿಸ್ ಪಪ್ಪಾಸ್ ಗೆಲುವು ಸಾಧಿಸುವ ಮೂಲಕ ಸೆನೆಟ್ಗೆ ಆಯ್ಕೆಯಾದ ಮೊದಲ ಸಲಿಂಗಕಾಮಿ (Gay) ಎಂಬ ಇತಿಹಾಸ ನಿರ್ಮಿಸಿದ್ದಾರೆ. ಅಲ್ಲದೆ, ಜಾರ್ಜಿಯಾದ ಗವರ್ನರ್ ಸ್ಥಾನವನ್ನೂ ಡೆಮಾಕ್ರಟ್ಗಳು ಕಸಿದುಕೊಂಡಿದ್ದಾರೆ.
ಚುನಾವಣೆಗೂ ಮುನ್ನ ಸೆನೆಟ್ನಲ್ಲಿ ರಿಪಬ್ಲಿಕನ್ನರು 53-47 ಸ್ಥಾನಗಳ ಮುನ್ನಡೆ ಹೊಂದಿದ್ದರು. ಅಧಿಕಾರ ಹಿಡಿಯಲು ಡೆಮಾಕ್ರಟ್ಗಳಿಗೆ 4 ಸೀಟುಗಳ ಹೆಚ್ಚುವರಿ ಅಗತ್ಯವಿದ್ದು, ಈಗಾಗಲೇ ಎರಡು ಮಹತ್ವದ ರಿಪಬ್ಲಿಕನ್ ಸೀಟುಗಳನ್ನು ತಮ್ಮದಾಗಿಸಿಕೊಂಡಿರುವ ಕಾರಣ ಮೇಲ್ಮನೆಯ ನಿಯಂತ್ರಣಕ್ಕಾಗಿ ತೀವ್ರ ಪೈಪೋಟಿ ಮುಂದುವರಿದಿದೆ.
