ಇಡೀ ಜಗತ್ತಿನ ಕಣ್ಣು ಈಗ ಹಾರ್ಮುಜ್ ಜಲಸಂಧಿ (Strait of Hormuz) ಮೇಲಿದೆ. ಯುಎಸ್-ಇಸ್ರೇಲ್ ಮತ್ತು ಇರಾನ್ ನಡುವಿನ ಘೋರ ಯುದ್ಧದಲ್ಲಿ ‘ಹಾರ್ಮುಜ್’ ಪ್ರಮುಖ ಅಸ್ತ್ರವಾಗಿ ಬಳಕೆಯಾಗಿದೆ. ಇರಾನ್ ಬಳಸಿದ ಈ ಅಸ್ತ್ರಕ್ಕೆ ಅಮೆರಿಕ ತತ್ತರಿಸಿ ಹೋಗಿದೆ. ಅತ್ಯಂತ ನಿರ್ಣಾಯಕ ಅಂತರರಾಷ್ಟ್ರೀಯ ಜಲಮಾರ್ಗ ಬಂದ್ ಆಗಿದ್ದು, ಭಾರತ ಸೇರಿದಂತೆ ಅವಲಂಬಿತ ರಾಷ್ಟ್ರಗಳು ತೈಲ ಮತ್ತು ಅನಿಲ ಬಿಕ್ಕಟ್ಟು ಎದುರಿಸುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಅಮೆರಿಕ ಸದ್ದಿಲ್ಲದೇ ಮತ್ತೊಂದು ಹೆಜ್ಜೆಯಿಟ್ಟು, ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಭಾರತದ ಬುಡಕ್ಕೆ ಬಂದಿದ್ದು, ದೇಶಕ್ಕೆ ತೀರ ಹತ್ತಿರವಿರುವ ಮಲಕ್ಕಾ ಜಲಸಂಧಿ ಮೇಲೆ ಕಣ್ಣಿಟ್ಟಿದ್ದಾರೆ. ಇರಾನ್ ಮೇಲೆ ಯುದ್ಧ ನಡೆಸಿ ಹಾರ್ಮುಜ್ ಜಲಸಂಧಿಯ ಸುತ್ತ ಉದ್ವಿಗ್ನತೆ ಸೃಷ್ಟಿಸಿದ ಅಮೆರಿಕ (America) ಈಗ, ಜಾಗತಿಕ ವ್ಯಾಪಾರದ ಮತ್ತೊಂದು ನಿರ್ಣಾಯಕ ಅಪಧಮನಿಯಾದ ಮಲಕ್ಕಾ ಜಲಸಂಧಿ ಕಡೆಗೆ ವಕ್ರದೃಷ್ಟಿ ಬೀರಿರುವುದು ಮುಂದೇನಾಗುತ್ತೋ ಎಂಬ ದೊಡ್ಡ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಮಲಕ್ಕಾ ಜಲಸಂಧಿ ಬಗ್ಗೆ ನಿಮಗೆಷ್ಟು ಗೊತ್ತು?
ಮಲಕ್ಕಾ ಜಲಸಂಧಿಯು (Strait of Malacca) ಆಗ್ನೇಯ ಏಷ್ಯಾದಲ್ಲಿ ಅತ್ಯಂತ ಕಿರಿದಾದ ಜಲಮಾರ್ಗ. ಸುಮಾತ್ರಾ (ಇಂಡೋನೇಷ್ಯಾ) ಮತ್ತು ಮಲಯ ಪರ್ಯಾಯ ದ್ವೀಪದ ನಡುವೆ ಭಾರತೀಯ ಮತ್ತು ಪೆಸಿಫಿಕ್ ಸಾಗರಗಳನ್ನು ಇದು ಸಂಪರ್ಕಿಸುತ್ತದೆ. ಇದು ಸುಮಾರು 800-ಕಿಮೀ (550-ಮೈಲಿ) ಉದ್ದವನ್ನು ಹೊಂದಿದೆ. ವಿಶ್ವದ ಅತ್ಯಂತ ನಿರ್ಣಾಯಕ ಹಡಗು ಮಾರ್ಗಗಳಲ್ಲಿ ಇದು ಕೂಡ ಒಂದಾಗಿದೆ. ಜಾಗತಿಕ ವ್ಯಾಪಾರದ ಸರಿಸುಮಾರು 40% ಪಾಲನ್ನು ಈ ಮಾರ್ಗ ಹೊಂದಿದೆ. ಏಷ್ಯಾಕ್ಕೆ ಪ್ರಮುಖ ಇಂಧನ ಸಾಗಣೆ ಮಾರ್ಗವಾಗಿಯೂ ಕಾರ್ಯನಿರ್ವಹಿಸುತ್ತದೆ. ಪ್ರತಿದಿನ ಸುಮಾರು 2 ಕೋಟಿ ಬ್ಯಾರೆಲ್‌ಗಳಿಗೂ ಹೆಚ್ಚು ತೈಲ ಮಲಕ್ಕಾ ಜಲಸಂಧಿ ಮೂಲಕ ಹಾದುಹೋಗುತ್ತದೆ. ಹಿಂದೂ ಮಹಾಸಾಗರ ಮತ್ತು ದಕ್ಷಿಣ ಚೀನಾ ಸಮುದ್ರ/ಪೆಸಿಫಿಕ್ ಮಹಾಸಾಗರದ ನಡುವಿನ ಅತ್ಯಂತ ಕಿರಿದಾದ ಸಮುದ್ರ ಮಾರ್ಗವಾಗಿದೆ. ಚೀನಾ, ಜಪಾನ್ ಮತ್ತು ಭಾರತದಂತಹ ಪ್ರಮುಖ ಆರ್ಥಿಕತೆಗಳನ್ನು ಸಂಪರ್ಕಿಸುತ್ತದೆ. ವಾರ್ಷಿಕವಾಗಿ 80,000 ಕ್ಕೂ ಹೆಚ್ಚು ಹಡಗುಗಳು ಈ ಜಲಸಂಧಿಯ ಮೂಲಕ ಹಾದು ಹೋಗುತ್ತವೆ. ಹೀಗಾಗಿ, ಇಲ್ಲಿ ಹೆಚ್ಚು ಹಡುಗುಗಳ ಟ್ರಾಫಿಕ್ ಕಂಡುಬರುತ್ತದೆ. ಇದನ್ನೂ ಓದಿ: ಹಾರ್ಮುಜ್ ಜಲಸಂಧಿ ಮತ್ತೆ ಬಂದ್ – ಭಾರತಕ್ಕೆ ತೆರಳುತ್ತಿದ್ದ 14 ಹಡಗುಗಳಿಗೆ ಇರಾನ್ ತಡೆ
ಜಾಗತಿಕವಾಗಿ ಮಲಕ್ಕಾ ಪ್ರಾಮುಖ್ಯತೆ ಏನು?
ಮಲಕ್ಕಾ ಜಲಸಂಧಿಯು ವಿಶ್ವ ವ್ಯಾಪಾರದಲ್ಲಿ ಅತ್ಯಂತ ಮಹತ್ವದ ಮಾರ್ಗಗಳಲ್ಲಿ ಒಂದಾಗಿದೆ. ಇದು ಜಾಗತಿಕವಾಗಿ ಅತ್ಯಂತ ಜನನಿಬಿಡ ಹಡಗು ಮಾರ್ಗಗಳಲ್ಲಿ ಒಂದಾಗಿದೆ. ಎಲ್ಲಾ ಅಂತರರಾಷ್ಟ್ರೀಯ ಸಮುದ್ರ ವ್ಯಾಪಾರದ ಸುಮಾರು ಮೂರನೇ ಒಂದು ಭಾಗವು ಇದರ ಮೂಲಕ ಹಾದುಹೋಗುತ್ತದೆ. ವಿಶ್ವದ ತೈಲ ಸಾಗಣೆಗೂ ಈ ಮಾರ್ಗ ಗಮನಾರ್ಹ ಕೊಡುಗೆ ನೀಡಿದೆ. ವಿಶೇಷವಾಗಿ ಪರ್ಷಿಯನ್ ಕೊಲ್ಲಿಯಿಂದ ಚೀನಾ, ಜಪಾನ್ ಮತ್ತು ದಕ್ಷಿಣ ಕೊರಿಯಾದಂತಹ ಪ್ರಮುಖ ಏಷ್ಯಾದ ಆರ್ಥಿಕತೆಗಳಿಗೆ ಈ ಮಾರ್ಗದ ಮೂಲಕವೇ ತೈಲ ಸಾಗುತ್ತದೆ. ಅಮೆರಿಕವು ಮಲಕ್ಕಾ ಮೇಲೆ ಆರ್ಥಿಕವಾಗಿ ಕಡಿಮೆ ಅವಲಂಬಿತವಾಗಿದ್ದರೂ, ಈ ಮಾರ್ಗವು ಕಾರ್ಯತಂತ್ರ ಮತ್ತು ಮಿಲಿಟರಿ ದೃಷ್ಟಿಕೋನದಿಂದ ಅದಕ್ಕೆ ಬಹಳ ಮುಖ್ಯವಾಗಿದೆ.

ಅಮೆರಿಕ-ಇಂಡೋನೇಷ್ಯಾ ಒಪ್ಪಂದ
ಯುಎಸ್ ಮತ್ತು ಇಂಡೋನೇಷ್ಯಾ ನಡುವೆ ಬಹುದೊಡ್ಡ ರಕ್ಷಣಾ ಒಪ್ಪಂದಕ್ಕೆ ಸಹಿ ಬಿದ್ದಿದೆ. ಇಂಡೋನೇಷ್ಯಾದ ವಾಯುಪ್ರದೇಶದಲ್ಲಿ ಅಮೆರಿಕದ ಮಿಲಿಟರಿ ವಿಮಾನಗಳಿಗೆ ವಿಸ್ತೃತ ಕಾರ್ಯಾಚರಣೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಮೇಲ್ನೋಟಕ್ಕೆ ಇದು ರಕ್ಷಣಾ ಸಹಕಾರದ ಒಪ್ಪಂದವಾಗಿದೆ. ಆದರೆ, ನಿಜಾರ್ಥದಲ್ಲಿ ಹಿಂದೂ ಮಹಾಸಾಗರವನ್ನು ಪೂರ್ವ ಏಷ್ಯಾದೊಂದಿಗೆ ಸಂಪರ್ಕಿಸುವ ಮಲಕ್ಕಾ ಜಲಸಂಧಿಯ ಮೇಲೆ ಅಮೆರಿಕ ಕಣ್ಗಾವಲು ಮತ್ತು ಕಾರ್ಯಾಚರಣೆ ವ್ಯಾಪ್ತಿಯನ್ನು ಹೆಚ್ಚಿಸುವುದು ಉದ್ದೇಶವಾಗಿದೆ. ಮಲಕ್ಕಾ ಜಲಸಂಧಿ ಮೇಲೆ ಇಂಡೋನೇಷ್ಯಾ, ಮಲೇಷ್ಯಾ, ಸಿಂಗಾಪುರ ನಿಯಂತ್ರಣ ಹೊಂದಿವೆ. ಈಗ ಇಂಡೋ-ಪೆಸಿಫಿಕ್‌ನ ಅತ್ಯಂತ ನಿರ್ಣಾಯಕ ವ್ಯಾಪಾರ ಕಾರಿಡಾರ್ ಮೇಲೆ ಬಿಗಿಹಿಡಿತ ಸಾಧಿಸಲು ಟ್ರಂಪ್ ಮುಂದಾಗಿದ್ದಾರೆ.
ಹಾರ್ಮುಜ್‌ಗಿಂತ ಮಲಕ್ಕಾ ಜಲಸಂಧಿ ಹೇಗೆ ಭಿನ್ನ?
ಜಾಗತಿಕ ತೈಲ ಸಾಗಣೆಗೆ ಕೇಂದ್ರಬಿಂದುವಾಗಿರುವ ಹಾರ್ಮುಜ್‌ಗಿಂತ ಮಲಕ್ಕಾ ಜಲಸಂಧಿ ಭಿನ್ನವಾಗಿದೆ. ಇದು ವಿಶಾಲವಾದ ವಾಣಿಜ್ಯ ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತದೆ. ಇಂಧನ ಅಷ್ಟೇ ಅಲ್ಲ, ಸರಕುಗಳು, ಎಲೆಕ್ಟ್ರಾನಿಕ್ಸ್ ಮತ್ತು ಕೈಗಾರಿಕಾ ಘಟಕಗಳ ಚಲನೆಯನ್ನು ಸುಗಮಗೊಳಿಸುತ್ತದೆ. ಜಾಗತಿಕ ತೈಲ ಸಾಗಣೆಯಲ್ಲೂ ಇದು ಪ್ರಮುಖ ಪಾತ್ರ ವಹಿಸುತ್ತದೆ. ಜೊತೆಗೆ ವ್ಯಾಪಾರದ ದೃಷ್ಟಿಕೋನದಿಂದಲೂ ಮಹತ್ವದ್ದಾಗಿದೆ. ಪೂರ್ವ ಏಷ್ಯಾದ ರಾಷ್ಟ್ರಗಳಿಗೆ ಈ ಕಾರಿಡಾರ್ ನಿರ್ಣಾಯಕವಾಗಿದೆ. ಮುಖ್ಯವಾಗಿ ಚೀನಾ ತನ್ನ ಇಂಧನ ಆಮದುಗಳಿಗಾಗಿ ಈ ಮಾರ್ಗವನ್ನೇ ಹೆಚ್ಚು ಅವಲಂಬಿಸಿದೆ. ಯುನೈಟೆಡ್ ಸ್ಟೇಟ್ಸ್ ಈ ಜಲಸಂಧಿಯನ್ನು ಕಾರ್ಯತಂತ್ರ ಮತ್ತು ಮಿಲಿಟರಿ ದೃಷ್ಟಿಕೋನದಿಂದ ನೋಡುತ್ತದೆ. ಇದನ್ನೂ ಓದಿ: ವಿಶ್ವದ ಎಲ್ಲಾ ರಾಷ್ಟ್ರಗಳಿಗೆ ಹಾರ್ಮುಜ್ ಜಲಸಂಧಿ ಓಪನ್ – ಧನ್ಯವಾದ ಹೇಳಿದ ಟ್ರಂಪ್
ಮಲಕ್ಕಾ ಮೇಲೆ ಅಮೆರಿಕ ಕಣ್ಣು ಬಿದ್ದಿದ್ದೇಕೆ?
ಚೀನಾಕ್ಕೆ ಮಲಕ್ಕಾದ ಪ್ರಾಮುಖ್ಯತೆ ಹೆಚ್ಚುದೆ. ಹೀಗಾಗಿ, ಅಮೆರಿಕವು ಅದರ ಬಗ್ಗೆ ಆಸಕ್ತಿ ಹೊಂದಿದೆ. 2003 ರಲ್ಲಿ ಆಗಿನ ಚೀನಾದ ಅಧ್ಯಕ್ಷ ಹು ಜಿಂಟಾವೊ ಅವರು ಬೀಜಿಂಗ್‌ಗೆ ಅದರ ಅಗತ್ಯವನ್ನು ಗುರುತಿಸುವ ಕೆಲಸ ಮಾಡಿದ್ದರು. ಚೀನಾದ ತೈಲ ಆಮದುಗಳಲ್ಲಿ ಸುಮಾರು ಶೇ.62 ರಷ್ಟು ಮಲಕ್ಕಾ ಮತ್ತು ಪೆಸಿಫಿಕ್ (ದಕ್ಷಿಣ ಚೀನಾ ಸಮುದ್ರ) ಮೂಲಕ ಹಾದು ಹೋಗುತ್ತದೆ. ಅದರ ತೈಲ ಪೂರೈಕೆಯ ಅರ್ಧದಷ್ಟು ಪ್ರತಿದಿನ ಈ ಸಮುದ್ರ ಮಾರ್ಗದ ಮೂಲಕ ಸಾಗುತ್ತದೆ. 2024 ರಲ್ಲಿ ಚೀನಾದ 390 ಶತಕೋಟಿ ಡಾಲರ್ (ಸುಮಾರು 32.5 ಲಕ್ಷ ಕೋಟಿ ರೂಪಾಯಿ) ಇಂಧನ ಆಮದುಗಳಲ್ಲಿ 80% ಮಲಕ್ಕಾ ಜಲಸಂಧಿಯ ಮೂಲಕ ಬಂದಿದೆ ಎಂದು ಅಂದಾಜಿಸಲಾಗಿದೆ. ಮ್ಯಾನ್ಮಾರ್ ಮೂಲಕ ಪೈಪ್‌ಲೈನ್‌ಗಳು, ಮಧ್ಯ ಏಷ್ಯಾದ ಮೂಲಕ ಇಂಧನ ಕಾರಿಡಾರ್‌ಗಳನ್ನು ವಿಸ್ತರಿಸುವುದು ಮತ್ತು ರಷ್ಯಾದಿಂದ ಆಮದುಗಳನ್ನು ಹೆಚ್ಚಿಸುವ ಪರ್ಯಾಯ ಮಾರ್ಗಗಳನ್ನು ಚೀನಾ ಕಂಡುಕೊಂಡಿದೆ. ಆದರೂ, ತನ್ನ ಇಂಧನ ಅಗತ್ಯಗಳಿಗಾಗಿ ಹೆಚ್ಚಾಗಿ ಮಲಕ್ಕಾ ಮತ್ತು ಹಾರ್ಮುಜ್ ಅನ್ನೇ ಚೀನಾ ಹೆಚ್ಚು ಅವಲಂಬಿಸಿದೆ.
ಭಾರತಕ್ಕೆ ಇದು ಎಷ್ಟು ಮುಖ್ಯ?
ಭಾರತದ (India) ಆರ್ಥಿಕತೆಗೂ ಮಲಕ್ಕಾ ಮುಖ್ಯವಾಗಿದೆ. ಭಾರತ ವ್ಯಾಪಾರದ ಸುಮಾರು 55% ರಷ್ಟು ಮಲಕ್ಕಾ ಜಲಸಂಧಿ ಮತ್ತು ಸಿಂಗಾಪುರ ಪ್ರದೇಶದ ಮೂಲಕ ಹಾದುಹೋಗುತ್ತದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಭಾರತಕ್ಕೆ ಪ್ರಮುಖ ನೆಲೆಯಾಗಿದ್ದು, ಮಲಕ್ಕಾ ಜಲಸಂಧಿಗೆ ಹತ್ತಿರದಲ್ಲಿವೆ. ಭಾರತವು ಮಿಲಿಟರಿ ಮೂಲಸೌಕರ್ಯವನ್ನು ಸಹ ಹೊಂದಿದೆ. ಅದರಲ್ಲಿ ಕ್ಯಾಂಪ್‌ಬೆಲ್ ಕೊಲ್ಲಿಯಲ್ಲಿರುವ ಅದರ ದಕ್ಷಿಣದ ವಾಯುನೆಲೆಯಾದ ಐಎನ್‌ಎಸ್ ಬಾಜ್, ನಿರ್ಣಾಯಕ ಸಮುದ್ರ ಮಾರ್ಗಗಳನ್ನು ಮೇಲ್ವಿಚಾರಣೆ ಮಾಡಲು ಅನುವು ಮಾಡಿಕೊಡುತ್ತದೆ. ಗ್ರೇಟ್ ನಿಕೋಬಾರ್ ಯೋಜನೆ ಮತ್ತು ಗಲಾಥಿಯಾ ಕೊಲ್ಲಿಯಲ್ಲಿ ಪ್ರಸ್ತಾವಿತ ಅಭಿವೃದ್ಧಿ ಸೇರಿದಂತೆ ಈ ಪ್ರದೇಶದಲ್ಲಿನ ಪ್ರಮುಖ ಮೂಲಸೌಕರ್ಯ ಉಪಕ್ರಮಗಳ ಮೂಲಕ ಭಾರತವು ತನ್ನ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳುತ್ತಿದೆ. ಹೀಗಾಗಿ, ಈ ಪ್ರದೇಶದಲ್ಲಿ ಚೀನಾ ವಿರುದ್ಧ ಸಮತೋಲನ ಸಾಧಿಸಲು ಅಮೆರಿಕವು ಭಾರತದೊಂದಿಗೆ ಸಂಬಂಧವನ್ನು ಬೆಳೆಸಲು ಬಹಳ ಹಿಂದಿನಿಂದಲೂ ಪ್ರಯತ್ನಿಸುತ್ತಿದೆ.

