– ಇರಾನ್ ಜೊತೆ ಶೀಘ್ರದಲ್ಲೇ ಒಪ್ಪಂದ
ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮುಂದುವರಿದಿರುವ ನಡುವೆಯೇ ಅಮೆರಿಕ ಸೇನೆಗೆ ಸೇರಿದ ಅಪಾಚೆ ಗನ್‌ಶಿಪ್ (AH-64 Apache) ಹೆಲಿಕಾಪ್ಟರ್ ಹಾರ್ಮುಜ್ (Hormuz) ಜಲಸಂಧಿ ಸಮೀಪ ಪತನಗೊಂಡಿದೆ. ಆದರೆ ಹೆಲಿಕಾಪ್ಟರ್‌ನಲ್ಲಿದ್ದ ಇಬ್ಬರು ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.
ಈ ಬಗ್ಗೆ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇಬ್ಬರೂ ಸಿಬ್ಬಂದಿ ಸುರಕ್ಷಿತರಾಗಿದ್ದಾರೆ. ಅವರ ಆರೋಗ್ಯವೂ ಚೆನ್ನಾಗಿದೆ ಎಂದು ತಿಳಿಸಿದ್ದಾರೆ.
ಪತನಕ್ಕೆ ಕಾರಣ ಏನು?
ಹೆಲಿಕಾಪ್ಟರ್ ಪತನಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಇದು ಇರಾನ್ ದಾಳಿಯಿಂದ ಸಂಭವಿಸಿದೆಯೇ ಅಥವಾ ತಾಂತ್ರಿಕ ದೋಷದಿಂದ ಕೆಳಗೆ ಬಿದ್ದಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆ ಹೆಚ್ಚಾಗಿರುವ ಸಮಯದಲ್ಲೇ ಈ ಘಟನೆ ನಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.ಇದನ್ನೂ ಓದಿ:ಬ್ಲಡ್ ಕ್ಯಾನ್ಸರ್‌ಗಿಂತಲೂ ಡೇಂಜರಸ್ ಕ್ಯಾನ್ಸರ್‌ಗೆ ಸಿಕ್ಕಿದೆ ಹೊಸ ಔಷಧ – ಶೀಘ್ರವೇ ಭಾರತಕ್ಕೂ ಸಂಜೀವಿನಿ
ಅಮೆರಿಕದ ಪ್ರಮುಖ ಅಸ್ತ್ರ
AH-64 ಅಪಾಚೆ ಹೆಲಿಕಾಪ್ಟರ್ ಅಮೆರಿಕ ಸೇನೆಯ ಪ್ರಮುಖ ಯುದ್ಧ ಅಸ್ತ್ರಗಳಲ್ಲಿ ಒಂದಾಗಿದೆ. ಹೆಲ್‌ಫೈರ್ ಕ್ಷಿಪಣಿಗಳಿಂದ ಸಜ್ಜುಗೊಂಡಿರುವ ಈ ಹೆಲಿಕಾಪ್ಟರ್ ಅನ್ನು ಅಮೆರಿಕ ಹಲವು ಸೇನಾ ಕಾರ್ಯಾಚರಣೆಗಳಲ್ಲಿ ಬಳಸುತ್ತಿದೆ.
ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ವಿರುದ್ಧ ಅಮೆರಿಕ ನಡೆಸುತ್ತಿರುವ ಕಾರ್ಯಾಚರಣೆಯಲ್ಲೂ ಅಪಾಚೆ ಹೆಲಿಕಾಪ್ಟರ್ ಪ್ರಮುಖ ಪಾತ್ರ ವಹಿಸುತ್ತಿದೆ. ಈ ಸಂಘರ್ಷದಲ್ಲಿ ಕಳೆದುಕೊಂಡ ಮೊದಲ ಅಪಾಚೆ ಹೆಲಿಕಾಪ್ಟರ್ ಇದಾಗಿರಬಹುದು ಎನ್ನಲಾಗಿದೆ.
ವರದಿ ಬಿಡುಗಡೆಗೆ ಟ್ರಂಪ್ ಸೂಚನೆ
ಘಟನೆ ಕುರಿತು ಶೀಘ್ರದಲ್ಲೇ ಅಧಿಕೃತ ವರದಿ ಬಿಡುಗಡೆ ಮಾಡಲಾಗುವುದು ಎಂದು ಟ್ರಂಪ್ ತಿಳಿಸಿದ್ದಾರೆ. ಜೊತೆಗೆ ಇರಾನ್ ಜೊತೆಗಿನ ಮಾತುಕತೆ ಬಗ್ಗೆ ಆಶಾವಾದ ವ್ಯಕ್ತಪಡಿಸಿದ್ದಾರೆ.
ಇರಾನ್ ಜೊತೆ ಉತ್ತಮ ಒಪ್ಪಂದಕ್ಕೆ ಬರುವ ಸಾಧ್ಯತೆ ಇದೆ. ಮುಂದಿನ ಎರಡು ಅಥವಾ ಮೂರು ದಿನಗಳಲ್ಲಿ ಮಹತ್ವದ ಬೆಳವಣಿಗೆ ಆಗಬಹುದು ಎಂದು ಟ್ರಂಪ್ ಹೇಳಿದ್ದಾರೆ.
ನಾವು ಇನ್ನೆರಡು ವಾರ ಬಾಂಬ್ ದಾಳಿ ಮಾಡಿದರೆ ಇರಾನ್ ಬಳಿ ಏನು ಉಳಿಯುವುದಿಲ್ಲ. ನಾವೇ ಗೆದ್ದಂತಾಗುತ್ತದೆ. ಆದರೆ ಈ ಯುದ್ಧದಲ್ಲಿ ಹಲವರು ಜೀವ ಕಳೆದುಕೊಳ್ಳುತ್ತಾರೆ ಅದು ನನಗೆ ಇಷ್ಟವಿಲ್ಲ. ಆದ್ದರಿಂದ ಶೀಘ್ರವೇ ಉತ್ತಮ ಒಪ್ಪಂದ ತೆಗೆದುಕೊಳ್ಳುತ್ತೇವೆ ಎಂದು ಡೊನಾಲ್ಡ್ ಟ್ರಂಪ್ ತಿಳಿಸಿದರು. ಇದನ್ನೂ ಓದಿ: ಟ್ರಂಪ್ ಸೂಚನೆಯ ಬೆನ್ನಲ್ಲೇ ಇರಾನ್ ಮೇಲಿನ ದಾಳಿ ನಿಲ್ಲಿಸಿದ ಇಸ್ರೇಲ್
ಇರಾನ್ ಜೊತೆಗಿನ ಭಿನ್ನಾಭಿಪ್ರಾಯ
ಇರಾನ್ ತನ್ನ ಬಳಿ ಇರುವ ಹೆಚ್ಚು ಶುದ್ಧೀಕರಿಸಿದ ಯುರೇನಿಯಂ ಸಂಗ್ರಹವನ್ನು ತ್ಯಜಿಸಬೇಕು ಎಂಬುದು ಅಮೆರಿಕದ ಬೇಡಿಕೆಯಾಗಿದೆ. ಆದರೆ ಇರಾನ್ ಇದನ್ನು ಒಪ್ಪುತ್ತಿಲ್ಲ. ಇದರ ಜೊತೆಗೆ ನಿರ್ಬಂಧಗಳನ್ನು ತೆಗೆದುಹಾಕಬೇಕು ಹಾಗೂ ಸ್ಥಗಿತಗೊಂಡಿರುವ ಆಸ್ತಿಗಳನ್ನು ಬಿಡುಗಡೆ ಮಾಡಬೇಕು ಎಂದು ಇರಾನ್ ಒತ್ತಾಯಿಸುತ್ತಿದೆ. ಈ ಬೇಡಿಕೆಗಳನ್ನು ಅಮೆರಿಕ ತಿರಸ್ಕರಿಸಿದೆ. ಈ ಎರಡು ದೇಶಗಳ ನಡುವೆ ಸಂಧಾನ ಮಾಡಿಸಲು ಪಾಕಿಸ್ತಾನ ಪ್ರಯತ್ನ ಪಡುತ್ತಲೇ ಇದೆ. ಆದರೆ ಪದೇ ಪದೇ ವಿಫಲವಾಗುತ್ತಿದೆ. ಇವೆಲ್ಲ ಬೆಳವಣಿಗೆಗಳ ನಡುವೆ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮುಂದುವರಿದಿದೆ. ಇದೇ ಸಂದರ್ಭದಲ್ಲಿ ಅಪಾಚೆ ಹೆಲಿಕಾಪ್ಟರ್ ಪತನ ಹೊಸ ಚರ್ಚೆಗೆ ಕಾರಣವಾಗಿದೆ.
