ಬೆಂಗಳೂರು: ಇತ್ತೀಚಿಗೆ ಮನ್ ಕಿ ಬಾತ್ (Mann Ki Baat) ಕಾರ್ಯಕ್ರಮದಲ್ಲಿ ಮೋದಿ (Narendra Modi) ಮೆಚ್ಚಿದ ಬೆಂಗಳೂರಿನ ಬೀದಿ ಬದಿ ವ್ಯಾಪಾರಿ ನಿಂಗಮ್ಮನಿಗೆ (TS Ningamma) ಸಂಕಷ್ಟವೊಂದು ಎದುರಾಗಿದೆ. ಹೊಸಹಳ್ಳಿ ಮೆಟ್ರೋ ಸ್ಟೇಷನ್ ಬಳಿ ಫುಟ್‌ಪಾತ್‌ನಲ್ಲಿ ವ್ಯಾಪಾರ ಮಾಡುತ್ತಿರುವ ನಿಂಗಮ್ಮನಿಗೆ ಜಿಬಿಎ ಅಧಿಕಾರಿಗಳು ವ್ಯಾಪಾರ ಮಾಡದಂತೆ ಮೌಖಿಕವಾಗಿ ಸೂಚನೆ ನೀಡಿದ್ದು, ಇಂದು ಅಂಗಡಿ ಹಾಕದಂತೆ ಸೂಚನೆ ನೀಡಿದ್ದಾರೆ.
ಟಿ.ಎಸ್ ನಿಂಗಮ್ಮ ಹಾಸನ ಮೂಲದವರಾಗಿದ್ದು, ಸದ್ಯ ಬೆಂಗಳೂರಿನಲ್ಲೇ ನೆಲೆಸಿ, ಬೀದಿಬದಿ ವ್ಯಾಪಾರ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ಸ್ವ ನಿಧಿ ಯೋಜನೆ ಉಪಯೋಗದೊಂದಿಗೆ ಮಾಗಡಿ ರಸ್ತೆಯ ಹೊಸಹಳ್ಳಿ ಮೆಟ್ರೋ ನಿಲ್ದಾಣ ಬಳಿ ಬೀದಿಬದಿ ಹೋಟೆಲ್ ನಡೆಸಿ ಜೀವನ ಸಾಗಿಸುತ್ತಿದ್ದಾರೆ. ಇದರಿಂದ ಬರುವ ಲಾಭದಿಂದ ತಮ್ಮ ಮಕ್ಕಳಿಗೂ ಉತ್ತಮ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ. ಬೆಂಗಳೂರಿನ ನಿಂಗಮ್ಮ ಅವರ ಕಥೆಯನ್ನು ಪ್ರಧಾನಿಯವರು ಆಗಸ್ಟ್ 30 ರಂದು ಪ್ರಸಾರವಾದ ಮನ್ ಕಿ ಬಾತ್‌ನಲ್ಲಿ ಪ್ರಸ್ತಾಪಿಸಿದ್ದು, ಇದು ತುಂಬಾ ಸ್ಪೂರ್ತಿದಾಯಕ ಎಂದು ಶ್ಲಾಘಿಸಿದ್ದರು. ಇದನ್ನೂ ಓದಿ: ಚಿತ್ರದುರ್ಗಕ್ಕೆ ಭದ್ರಾ ನೀರು – ಸೆ.6ಕ್ಕೆ ಪ್ರಾಯೋಗಿಕವಾಗಿ ನೀರು ಹರಿವು
ಇದೀಗ ಜಿಬಿಎ (GBA) ಅಧಿಕಾರಿಗಳು ಬೀದಿ ಬದಿ ವ್ಯಾಪಾರ ನಡೆಸದಂತೆ ಸೂಚನೆ ನೀಡಿದ್ದು, ನಿಂಗಮ್ಮನಿಗೆ ಆತಂಕ ಎದುರಾಗಿದೆ. ಜಿಬಿಎ ಅಧಿಕಾರಿಗಳು ಶುಕ್ರವಾರ ಬಂದು ಹೋಟೆಲ್ ಎತ್ತಿಸಿ ಎಂದಿದ್ದಾರೆ. ಸುಮಾರು 20-25 ವರ್ಷದಿಂದ ವ್ಯಾಪಾರ ಮಾಡುತ್ತಿದ್ದೇನೆ. ಈಗ ಹೋಟೆಲ್ ಎತ್ತಿಸಿ ಅಂದ್ರೇ ಎಲ್ಲಿಗೆ ಹೋಗಬೇಕು? ವಿಷ ಕುಡಿಯಬೇಕು ಅಷ್ಟೇ. ಬೇರೆ ಕಡೆ ಜಾಗ ಗುರುತಿಸಿ ಕೊಡಿ ಅಲ್ಲಿ ಹೋಗಿ ಹೋಟೆಲ್ ಹಾಕಿಕೊಳ್ಳುತ್ತೇವೆ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ರಿಯಲ್ ಎಸ್ಟೇಟ್ ಗುಂಗಿನಿಂದ ಹೊರಬಂದು ಪ್ರಜಾಸೇವೆ ನೆನಪಿಸಿಕೊಂಡ ಸಿಎಂಗೆ ಧನ್ಯವಾದ – ನಿಖಿಲ್ ಲೇವಡಿ
ಕಳೆದ ಭಾನುವಾರ ಜಿಬಿಎ ಅಧಿಕಾರಿಗಳು ಸನ್ಮಾನ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನಿಂಗಮ್ಮ ಹೆಸರು ಹೇಳಿರುವ ಕಾರಣಕ್ಕೆ ಸನ್ಮಾನ ಮಾಡಿದ್ದರು. ಆಗ ವ್ಯಾಪಾರ ಎಂದಿನಂತೆ ನಡೆಸುವಂತೆ ಅಧಿಕಾರಿಗಳು ತಿಳಿಸಿದ್ದರು. ಹೊಟ್ಟೆಪಾಡಿಗಾಗಿ ಅಂಗಡಿ ಹಾಕಲೇಬೇಕು. ನನ್ನ ಯಾರೋ ಟಾರ್ಗೆಟ್ ಮಾಡಿದ್ದಾರೆ. ಹೋಟೆಲ್‌ನವರಿಗೆ ಕಷ್ಟ ಅಗುತ್ತೆ ಅನ್ನುತ್ತಾರೆ. ನನಗೆ ಕೂಡ ಕಷ್ಟ ಆಗುತ್ತೆ ಏನೂ ಮಾಡೋದು? ಯಾವ ಕಾರಣಕ್ಕೂ ನಾವು ನಿಯಮ ಮೀರುತ್ತಿಲ್ಲ. ನಾವು ಅಂಗಡಿ ಹೊಟ್ಟೆ ಪಾಡಿಗಾಗಿ ಹಾಕುತ್ತಿದ್ದೇವೆ. ಯಾರೇ ಬಂದ್ರೂ ನಾವು ಅಂಗಡಿ ಮುಚ್ಚುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ ನೀರು – ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್ ಸ್ಥಗಿತ
