ಗುವಾಹಟಿ: ಅಸ್ಸಾಂನ ನಗಾಂವ್ ಜಿಲ್ಲೆಯಲ್ಲಿರುವ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ (CRPF) ಕ್ಯಾಂಪ್‌ನಲ್ಲಿ ಮಂಗಳವಾರ ಬೆಳಿಗ್ಗೆ ಭೀಕರ ಗುಂಡಿನ ಚಕಮಕಿ ಘಟನೆಯಲ್ಲಿ ಇಬ್ಬರು ಸಿಬ್ಬಂದಿ ದುರಂತವಾಗಿ ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೃತ್ಯ ಎಸಗಿದ ಜವಾನ್ ಕೂಡ ನಂತರ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ(Suicide) ಶರಣಾಗಿದ್ದಾರೆ.
ನಗಾಂವ್ ಜಿಲ್ಲೆಯ ಕಾಟಿಮಾರಿ ಬಳಿ ಇರುವ 34ನೇ ಬೆಟಾಲಿಯನ್ ಕ್ಯಾಂಪ್‌ನಲ್ಲಿ(Assam Camp) ಬೆಳಿಗ್ಗೆ 7 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ಮುಖ್ಯ ದ್ವಾರದಲ್ಲಿ ಕರ್ತವ್ಯದಲ್ಲಿದ್ದ ಸಹಾಯಕ ಸಬ್‌ಇನ್‌ಸ್ಪೆಕ್ಟರ್ (ASI) ಬಲ್ಲಾನಿ ಪ್ರೇಮಾಬರಂ ಎಂಬ ಸಿಬ್ಬಂದಿ ತಮ್ಮ ಸಹೋದ್ಯೋಗಿಗಳ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ.
ಪ್ರೇಮಾಬರಂ ನಡೆಸಿದ ಗುಂಡಿನ ದಾಳಿಯಲ್ಲಿ ಜವಾನರಾದ ವಿಷ್ಣು ಪ್ರಸಾದ್ ಬಘೇಲ್ ಮತ್ತು ರಾಮನವಲ್ ಸಿಂಗ್ ಯಾದವ್ ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಎಎಸ್‌ಐ ಮಾನೆ ಗೋವಿಂದ್ ಶ್ರೀಪುಲ್ ಎಂಬ ಮತ್ತೊಬ್ಬ ಸಿಬ್ಬಂದಿ ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಗೌಹಾಟಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸೇರಿಸಲಾಗಿದೆ. ಇದನ್ನೂ ಓದಿ: ಪಾಕ್‌ನಲ್ಲಿ ಅನಾಮಿಕ ವ್ಯಕ್ತಿಯ ಗುಂಡೇಟಿಗೆ 30ಕ್ಕೂ ಹೆಚ್ಚು ಉಗ್ರರ ಹತ್ಯೆ – ಒಪ್ಪಿಕೊಂಡ ಲಷ್ಕರ್ ಉಗ್ರ
ನಗಾಂವ್ ಹಿರಿಯ ಪೊಲೀಸ್ ಸೂಪರಿಂಟೆಂಡೆಂಟ್ (SSP) ಪಾರ್ಥ ಪ್ರೊತಿಮ್ ದಾಸ್ ಅವರ ಹೇಳಿಕೆಯ ಪ್ರಕಾರ, ಆಂಧ್ರಪ್ರದೇಶ ಮೂಲದ ಪ್ರೇಮಾಬರಂ ಮುಖ್ಯ ದ್ವಾರದಲ್ಲಿ ಕರ್ತವ್ಯದಲ್ಲಿದ್ದಾಗ ಸೇವಾ ರೈಫಲ್ ಹೊಂದಿರಲಿಲ್ಲ. ಅವರು ಗಾರ್ಡ್ ರೂಮ್‌ಗೆ ತೆರಳಿ INSAS ರೈಫಲ್ ತೆಗೆದುಕೊಂಡು, ಕ್ಯಾಂಪ್‌ನ ಹಿಂಭಾಗಕ್ಕೆ ಹೋಗಿ ವಿಷ್ಣು ಪ್ರಸಾದ್ ಮೇಲೆ ಗುಂಡು ಹಾರಿಸಿದರು. ನಂತರ ದಾಖಲೆ ಪರಿಶೀಲನೆಗೆ ಬಂದಿದ್ದ ರಾಮನವಲ್ ಸಿಂಗ್ ಮೇಲೆಯೂ ದಾಳಿ ನಡೆಸಿದರು.
ಮಾನೆ ಗೋವಿಂದ್ ಅವರ ಮೇಲೆಯೂ ಗುಂಡು ಹಾರಿಸಿ, ತದನಂತರ ಬ್ಯಾರಾಕ್ ಒಂದರ ಒಳಗೆ ತೆರಳಿ ತಮಗೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಆರ್‌ಪಿಎಫ್ ಆಡಳಿತಾಧಿಕಾರಿಗಳು ಭೇಟಿ ನೀಡಿದ್ದು, ಈ ಕೃತ್ಯಕ್ಕೆ ನಿಖರ ಕಾರಣವೇನು ಎಂಬ ಕುರಿತು ವಿಸ್ತೃತ ತನಿಖೆ ಆರಂಭಿಸಲಾಗಿದೆ.
