ಧಾರವಾಡ: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ (Siddaramaiah) ಅವರು ರಾಜೀನಾಮೆ ಬಗ್ಗೆ ಯುಗಾದಿ ಪಾಡ್ಯಮಿಯಂದೇ ನುಡಿದಿದ್ದ ಬೊಂಬೆ ಭವಿಷ್ಯ ಇದೀಗ ನಿಜವಾಗಿದೆ.
ಧಾರವಾಡ (Dharwad) ತಾಲೂಕಿನ ಉಪ್ಪಿನ ಬೆಟಗೇರಿಗೆ ಹೊಂದಿಕೊಂಡ ಹನುಮನಕೊಪ್ಪ (Hanumanakoppa) ಗ್ರಾಮದಲ್ಲಿ ಜನರು ಪ್ರತಿ ವರ್ಷ ಯುಗಾದಿ ಹಬ್ಬದ ಸಮಯದಲ್ಲಿ ಬೊಂಬೆ ಭವಿಷ್ಯ ಕೇಳುವುದು ಸಂಪ್ರದಾಯ. ಅದರಂತೆ ಈ ಬಾರಿ ಯುಗಾದಿ ಪಾಡ್ಯಮಿಯಂದು ಬೊಂಬೆಯು ಸಿದ್ದರಾಮಯ್ಯ (Siddaramaiah) ಅವರು ಸಿಎಂ ಸ್ಥಾನವನ್ನು ಪದತ್ಯಾಗ ಮಾಡಬಹುದು ಎಂದು ಭವಿಷ್ಯ ನುಡಿದಿತ್ತು. ಆ ಪ್ರಕಾರ ಇದೀಗ ಬೊಂಬೆ ನುಡಿದ ಭವಿಷ್ಯ ನಿಜವಾಗಿದ್ದು, ಸಿದ್ದರಾಮಯ್ಯ ಅವರು ಸಿಎಂ ಕುರ್ಚಿ ಬಿಟ್ಟು ಕೆಳಗಿಳಿದಿದ್ದಾರೆ. ಇದನ್ನೂ ಓದಿ: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ – ರಾಜ್ಯಪಾಲರ ಅನುಪಸ್ಥಿತಿಯಲ್ಲಿ ಕಾರ್ಯದರ್ಶಿಗೆ ಪತ್ರ ಹಸ್ತಾಂತರ
ಯುಗಾದಿ ಅಮವಾಸ್ಯೆಯಂದು ಪೂರ್ವಕ್ಕೆ ಹರಿಯುವ ಹಳ್ಳದಲ್ಲಿ ಹನುಮನಕೊಪ್ಪ ಗ್ರಾಮದ ಹಿರಿಯರು ಫಲ ಹಾಕಿ ಬರುತ್ತಾರೆ. ಮಣ್ಣಿನಿಂದ ಗದ್ದುಗೆ ನಿರ್ಮಾಣ ಮಾಡಿ, ನಾಲ್ಕೂ ದಿಕ್ಕಿಗೆ ರಾಜಕಾರಣಿಗಳ ಆಕೃತಿ, ಸೈನಿಕರ ಆಕೃತಿ, ರೈತರ ಆಕೃತಿ ಸೇರಿದಂತೆ ಮಳೆಯ ಹೆಸರಿನಲ್ಲಿ ಧಾನ್ಯ ಹಾಗೂ ಅನ್ನದ ಉಂಡೆಗಳನ್ನು ಇಟ್ಟು ಬರುತ್ತಾರೆ. ಮಾರನೇ ದಿನ ಬೆಳಿಗ್ಗೆ ಬಂದು ಫಲವನ್ನು ನೋಡುತ್ತಾರೆ ಯಾವ್ಯಾವ ಮೂರ್ತಿಗಳಿಗೆ ಪೆಟ್ಟಾಗಿದೆ? ಅನ್ನದ ಉಂಡೆ ಹೇಗಿದೆ? ಮಳೆ, ಬೆಳೆ ಹೇಗಿದೆ ಎಂಬುದನ್ನು ನೋಡಿ ಅದರ ಮೇಲೆ ಭವಿಷ್ಯ ನಿರ್ಧಾರ ಮಾಡುತ್ತಾರೆ.
ಈ ಹಿಂದೆ ಇಂದಿರಾ ಗಾಂಧಿ ಹತ್ಯೆಯಾದಾಗ ರಾಷ್ಟ್ರಮಟ್ಟದ ನಾಯಕರ ಬೊಂಬೆಗೆ ಪೆಟ್ಟಾಗಿತ್ತು. ಯಡಿಯೂರಪ್ಪ ಕುರ್ಚಿ ಬಿಟ್ಟು ಕೆಳಗಿಳಿಯುವಾಗ ಕರ್ನಾಟಕದ ದಿಕ್ಕಿನ ಬೊಂಬೆಗೆ ಪೆಟ್ಟಾಗಿತ್ತು. ಮಳೆ, ಬೆಳೆ ಸಹ ಈ ಬೊಂಬೆ ನುಡಿದ ಭವಿಷ್ಯದಂತೆಯೇ ಆಗಿತ್ತು. ಈ ವರ್ಷ ಕರ್ನಾಟಕದ ದಿಕ್ಕಿನ ಬೊಂಬೆಗೆ ಪೆಟ್ಟಾಗಿದ್ದು, ಆಗ ಸಿಎಂ ಸಿದ್ದರಾಮಯ್ಯ ಕುರ್ಚಿ ಬಿಟ್ಟು ಕೆಳಗಿಳಿಯುವ ಪರಿಸ್ಥಿತಿ ಬರುತ್ತದೆ ಎಂದು ಬೊಂಬೆ ಭವಿಷ್ಯ ನುಡಿದಿತ್ತು. ಆ ಪ್ರಕಾರ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಸಿಎಂ ಕುರ್ಚಿಯಿಂದ ಕೆಳಗಿಳಿದಿದ್ದಾರೆ.
ಪ್ರತಿ ವರ್ಷ ಹನುಮನಕೊಪ್ಪದ ಗ್ರಾಮಸ್ಥರು ಈ ಫಲ ಹಾಕುವ ಪದ್ಧತಿ ನಡೆಸಿಕೊಂಡು ಬಂದಿದ್ದು, ಈ ಬೊಂಬೆ ಭವಿಷ್ಯ ಭಾಗಶಃ ನಿಜವಾಗುತ್ತಲೇ ಬಂದಿದೆ.ಇದನ್ನೂ ಓದಿ: ನನಗೆ ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿ ಇಲ್ಲ, ರಾಜ್ಯ ರಾಜಕೀಯದಲ್ಲೇ ಮುಂದುವರಿಯುತ್ತೇನೆ: ಸಿದ್ದರಾಮಯ್ಯ ಸ್ಪಷ್ಟನೆ
