ಚೆನ್ನೈ: ಇಲ್ಲಿನ ಚೆಪಾಕ್ ಮೈದಾನದಲ್ಲಿ ಪೂರ್ವ ವಲಯ ಮತ್ತು ದಕ್ಷಿಣ ವಲಯ ತಂಡಗಳ ನಡುವಿನ ದುಲೀಪ್ ಟ್ರೋಫಿ (Duleep Trophy) ಫೈನಲ್ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿತು. ಈ ಹಿನ್ನೆಲೆ ನಿಯಮದಂತೆ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಕಾಯ್ದುಕೊಂಡಿದ್ದ ಇಶಾನ್ ಕಿಶನ್ (Ishan Kishan) ನಾಯಕತ್ವದ ಪೂರ್ವ ವಲಯ ಗೆಲುವು ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು.
ಇದರೊಂದಿಗೆ ಪೂರ್ವ ವಲಯ (East Zone) ಬರೋಬ್ಬರಿ 13 ವರ್ಷಗಳ ಬಳಿಕ ದುಲೀಪ್ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿತು. ಇದು ಪೂರ್ವ ವಲಯದ 3ನೇ ದುಲೀಪ್ ಟ್ರೋಫಿ ಪ್ರಶಸ್ತಿಯಾಗಿದೆ. ಹಿಂದಿನ ಎರಡು ಪ್ರಶಸ್ತಿಗಳನ್ನು 2011 ಮತ್ತು 2012 ರಲ್ಲಿ ಸತತವಾಗಿ ಗೆದ್ದುಕೊಂಡಿತ್ತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಪೂರ್ವ ವಲಯ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಬರೋಬ್ಬರಿ 708 ರನ್ ಪೇರಿಸಿತ್ತು. ಇಶಾನ್ ಕಿಶನ್ ಅಮೋಘ 270 ರನ್ (30 ಬೌಂಡರಿ, 7 ಸಿಕ್ಸರ್) ಚಚ್ಚಿದ್ರೆ, ಕುಮಾರ್ ಕುಶ್ಗಾರ್ 101 ರನ್ (8 ಬೌಂಡರಿ, 5 ಸಿಕ್ಸರ್), ಅಭಿಮನ್ಯು ಈಸ್ವರನ್ 72 ರನ್, ಶಿಖರ್ ಮೋಹನ್ 85 ರನ್, ವೈಭವ್ ಸೂರ್ಯವಂಶಿ 44 ರನ್, ಅನುಕೂಲ್ ರಾಯ್ 45 ರನ್, ಕೊನಿಯನ್ ಕುರೇಶಿ 40 ರನ್ ಶಮಿ 28 ರನ್‌ಗಳ ಕೊಡುಗೆ ನೀಡಿದ್ರು. ಆದ್ರೆ ತನ್ನ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ದಕ್ಷಿಣ ವಲಯ ಅಗ್ರ ಕ್ರಮಾಂಕದ ಬ್ಯಾಟರ್‌ಗಳ ಕಳಪೆ ಪ್ರದರ್ಶನದಿಂದಾಗಿ 336 ರನ್‌ಗಳಿಗೆ ಆಲೌಟ್ ಆಯಿತು.

ಬಳಿಕ 372 ರನ್‌ಗಳ ಭರ್ಜರಿ ಮುನ್ನಡೆಯೊಂದಿಗೆ ತನ್ನ 2ನೇ ಇನ್ನಿಂಗ್ಸ್ ಆರಂಭಿಸಿದ ಪೂರ್ವ ವಲಯ ಕೊನೆಯದಿನದ ವರೆಗೆ ಬ್ಯಾಟಿಂಗ್ ಮಾಡಿ 7 ವಿಕೆಟ್‌ಗೆ 388 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಕೊನೆಗೆ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡ ಹಿನ್ನೆಲೆ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಕಾಯ್ದುಕೊಂಡಿದ್ದ ಪೂರ್ವ ವಲಯ ಟ್ರೋಫಿಗೆ ಮುತ್ತಿಟ್ಟಿತು.

