ಉತ್ತರ ಕರ್ನಾಟಕದಲ್ಲಿ ಶ್ರಾವಣ ಮಾಸದ ಆಗಮನವೆಂದರೆ ಹಬ್ಬಗಳ ಸಾಲಿಗೆ ಮುನ್ನುಡಿ. ಆ ಸಂಭ್ರಮಕ್ಕೆ ನಾಂದಿ ಹಾಡುವುದೇ ನಾಗರ ಪಂಚಮಿ (Nagar Panchami) ಈ ಭಾಗದಲ್ಲಿ ಪಂಚಮಿ ಕೇವಲ ಒಂದು ಧಾರ್ಮಿಕ ಆಚರಣೆಯಷ್ಟೇ ಅಲ್ಲ. ಅದು ಮಣ್ಣಿನ ಸಂಸ್ಕೃತಿ, ಕೃಷಿ ಬದುಕು ಮತ್ತು ಅಣ್ಣ-ತಂಗಿಯರ ಅವಿನಾಭಾವ ಪ್ರೀತಿಯನ್ನು ಬೆಸೆಯುವ ಭಾವನಾತ್ಮಕ ಹಬ್ಬ.
ಕೃಷಿಕರ ಮಿತ್ರನಾದ ನಾಗಪ್ಪನಿಗೆ ಹಾಲೆರೆದು, ಭೂಮಿತಾಯಿಯ ಋಣ ತೀರಿಸುವ ಸಂಕಲ್ಪ ಇದರ ಹಿಂದಿದೆ. ಮಣ್ಣಿನ ನಾಗರ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ನಾನಾ ಬಗೆಯ ತಂಬಿಟ್ಟು, ಜೋಳದ ಅರಳು ಹಾಗೂ ಉಂಡೆಗಳನ್ನು ನೈವೇದ್ಯ ಮಾಡಿ ಶ್ರದ್ಧೆಯಿಂದ ಪೂಜಿಸಲಾಗುತ್ತದೆ.

ವಿಶೇಷವಾಗಿ, ಇದು ಹೆಣ್ಣುಮಕ್ಕಳ ಹಬ್ಬ. ತವರು ಮನೆಗೆ ಮರಳುವ ಹೆಣ್ಣುಮಕ್ಕಳು, ಊರ ತುಂಬೆಲ್ಲ ಮರಗಳಿಗೆ ಕಟ್ಟಿದ ಜೋಕಾಲಿಗಳಲ್ಲಿ ತೂಗುತ್ತಾ ಜಾನಪದ ಹಾಡುಗಳನ್ನು ಹಾಡುವ ದೃಶ್ಯ ಉತ್ತರ ಕರ್ನಾಟಕದ ಗ್ರಾಮೀಣ ಸೊಗಡನ್ನು ಅನಾವರಣಗೊಳಿಸುತ್ತದೆ. ಶ್ರಾವಣದ ಹಸಿರು ಮತ್ತು ಮಣ್ಣಿನ ಮಮತೆಯನ್ನು ಒಗ್ಗೂಡಿಸಿ ಆಚರಿಸುವ ನಾಗರ ಪಂಚಮಿ, ಈ ಭಾಗದ ಜನಪದ ಸಂಸ್ಕೃತಿಯ ಜೀವಂತ ಪ್ರತೀಕವಾಗಿದೆ.
ಉತ್ತರ ಕರ್ನಾಟಕದಲ್ಲಿ ನಾಗರ ಪಂಚಮಿಯಂದು ನಾಗಪ್ಪನಿಗೆ ಅಥವಾ ಹುತ್ತಕ್ಕೆ ಹಾಲೆರೆಯುವಾಗ ಮಹಿಳೆಯರು “ಹಾಲು ತುಪ್ಪಾ, ನೀರು ತುಪ್ಪಾ…ʼʼ ಎಂದು ಭಕ್ತಿ ಮತ್ತು ಭಾವದಿಂದ ಹೇಳುತ್ತಾರೆ. ಇದು ಈ ಭಾಗದ ವಿಶಿಷ್ಟ ಜಾನಪದ ಆಚರಣೆಯಾಗಿದ್ದು, ಇದರ ಹಿಂದೆ ಸುಂದರವಾದ ಭಾವಾರ್ಥವಿದೆ.

ಹಾಲೆರೆಯುವ ಭಕ್ತರು, ಶ್ರೇಷ್ಠವಾದ ಮತ್ತು ಪೌಷ್ಟಿಕವಾದ ಹಾಲು ಹಾಗೂ ತುಪ್ಪವನ್ನು ದೇವರಿಗೆ (ನಾಗಪ್ಪನಿಗೆ) ಸಮರ್ಪಿಸುತ್ತಾರೆ. ನಾವು ಕೇವಲ ನೀರು ಹಾಗೂ ತುಪ್ಪದಂಥ ಸರಳ ಅಥವಾ ಅಲ್ಪ ಆಹಾರವನ್ನು ಸ್ವೀಕರಿಸಿದರೂ ಸಾಕು, ನೀನು ಸಂತೃಪ್ತನಾಗಿರು ಎಂಬ ವಿನಮ್ರ, ನಿಸ್ವಾರ್ಥ ಸಮರ್ಪಣಾ ಮನೋಭಾವ ಇದರ ಹಿಂದಿದೆ. ದೇವರಿಗೆ ಉತ್ತಮವಾದದ್ದನ್ನು ಕೊಟ್ಟು, ತಮಗೆ ಅಲ್ಪವಾದುದೇ ಸಾಕೆಂಬುದು ಭಕ್ತಿಯ ಪರಮಾವಧಿ.
ಹಾಲು ಮತ್ತು ತುಪ್ಪ ಸಮೃದ್ಧಿ, ಸೌಭಾಗ್ಯ ಹಾಗೂ ತಂಪಿನ ಸಂಕೇತ. ನಾಗಪ್ಪನಿಗೆ ಹಾಲು-ತುಪ್ಪವನ್ನು ಎರೆಯುವ ಮೂಲಕ ಆತನ ಕೋಪ ತಣಿದು, ಕುಟುಂಬಕ್ಕೆ, ವಿಶೇಷವಾಗಿ ತಮ್ಮ ತವರು ಮನೆ ಮತ್ತು ಒಡಹುಟ್ಟಿದವರಿಗೆ (ಅಣ್ಣ-ತಮ್ಮಂದಿರಿಗೆ) ಸುಖ, ಶಾಂತಿ ಹಾಗೂ ಸಮೃದ್ಧಿ ಸಿಗಲಿ ಎಂದು ಬೇಡಿಕೊಳ್ಳುತ್ತಾರೆ. ನಮ್ಮ ಬದುಕು ನೀರಿನಂತೆ ಸರಳವಾಗಿದ್ದರೂ, ನಾಗಪ್ಪನ ಕೃಪೆಯಿಂದ ತುಪ್ಪದಂತಹ ಸಮೃದ್ಧಿ ಇರಲಿ ಎಂಬ ಆಶಯವೂ ಇದರಲ್ಲಿದೆ.

ಉತ್ತರ ಕರ್ನಾಟಕದ ಹೆಣ್ಣುಮಕ್ಕಳು ಪೂಜೆ ಮಾಡುವಾಗ ಹೇಳುವ ಈ ಸಾಲು ಕೇವಲ ಮಂತ್ರವಲ್ಲ, ಅದು ಜನಪದದ ಬಾಯಿಂದ ಬಂದ ಕಾವ್ಯಾತ್ಮಕ ಪ್ರಾರ್ಥನೆ. ಹಾಲೆರೆಯುವಾಗ ನಾಗಪ್ಪನನ್ನು ತನ್ನ ಅಣ್ಣ-ತಮ್ಮನಂತೆ, ಮನೆಯ ರಕ್ಷಕನಂತೆ ಭಾವಿಸಿ, ಮುಗ್ಧ ಪ್ರೀತಿಯಿಂದ “ನಿನಗೆ ಉತ್ತಮವಾದ ಹಾಲು-ತುಪ್ಪ, ನಮಗೆ ಸಾಮಾನ್ಯವಾದ ನೀರು-ತುಪ್ಪ” ಎಂದು ಮುದ್ದು ಮಾಡುತ್ತಾ ಹೇಳುವ ಸಂಪ್ರದಾಯ ಇದಾಗಿದೆ.
ಜನಪದ ಕಥೆಯ ಪ್ರಕಾರ, ರೈತನ ಕುಟುಂಬದ ರಕ್ಷಣೆಗಾಗಿ ನಾಗಪ್ಪನಿಗೆ ಮೊರೆಹೋದ ತಂಗಿ, ಆತನನ್ನು ತನ್ನ ಒಡಹುಟ್ಟಿದ ಅಣ್ಣನೆಂದು ಭಾವಿಸಿ ತನಗಿರುವ ಅತಿ ಶ್ರೇಷ್ಠವಾದ ಹಾಲನ್ನು ಅರ್ಪಿಸುತ್ತಾಳೆ. ನಾಗಪ್ಪ ಸಂತೃಪ್ತನಾಗಿ ತನ್ನ ತವರು ಮನೆ ಹಾಗೂ ಅಣ್ಣ-ತಮ್ಮಂದಿರನ್ನು ಕಾಪಾಡಲಿ ಎಂಬುದು ಈ ಸಾಲಿನ ಹಿಂದಿನ ಮುಖ್ಯ ಆಶಯ.

ಪೌರಾಣಿಕ-ಐತಿಹಾಸಿಕ ನಂಬಿಕೆಯಂತೆ, ಜನಮೇಜಯ ರಾಜನು ನಡೆಸಿದ ಸರ್ಪಯಾಗದಲ್ಲಿ ಅಗ್ನಿಯ ತಾಪಕ್ಕೆ ಬೆಂದು ಬಸವಳಿದಿದ್ದ ಸರ್ಪಕುಲವನ್ನು ಆಸ್ತಿಕ ಮುನಿ ರಕ್ಷಿಸುತ್ತಾನೆ. ಆ ಬೆಂಕಿಯ ಝಳದಿಂದ ಉರಿಯುತ್ತಿದ್ದ ಸರ್ಪಗಳ ಶರೀರವನ್ನು ತಂಪಾಗಿಸಲು ಹಾಲು, ತುಪ್ಪ ಮತ್ತು ಜೇನುತುಪ್ಪದಿಂದ ಅಭಿಷೇಕ ಮಾಡಲಾಯಿತು. ಆ ದಿನವೇ ಶ್ರಾವಣ ಶುಕ್ಲ ಪಂಚಮಿ. ಆ ಪರಂಪರೆಯ ಮುಂದುವರಿಕೆಯಾಗಿ ಇಂದಿಗೂ “ಉರಿ ತಣಿದು ತಂಪಾಗಲಿ” ಎಂಬ ಭಾವನೆಯಿಂದ ಹಾಲು-ತುಪ್ಪವನ್ನು ಎರೆಯಲಾಗುತ್ತದೆ.
ಕಲ್ಯಾಣ ಚಾಲುಕ್ಯರು ಮತ್ತು ರಾಷ್ಟ್ರಕೂಟರ ಕಾಲದಿಂದಲೂ ಉತ್ತರ ಕರ್ನಾಟಕದ ಗ್ರಾಮ ದೇವತೆಗಳು ಹಾಗೂ ಶಿವನ ಆರಾಧನೆಯಲ್ಲಿ ಹಾಲು-ತುಪ್ಪದ ಅಭಿಷೇಕಕ್ಕೆ ಅಗ್ರಸ್ಥಾನವಿದೆ. ಶಿವನ ಕಂಠಾಭರಣವಾದ ನಾಗಪ್ಪನನ್ನು ಶಾಂತಗೊಳಿಸಲು ಹಾಗೂ ಊರಿನ ಶಾಂತಿಗಾಗಿ ಹಾಲೆರೆಯುವ ಪದ್ಧತಿ ಶಾಸನ ಕಾಲದಿಂದಲೂ ಆಚರಣೆಯಲ್ಲಿದೆ.

